ದಕ್ಷಿಣ ಕನ್ನಡ ತನ್ನ ಪ್ರಾಕೃತಿಕ ಸೌಂದರ್ಯದ ಜೊತೆ ಹಲವಾರು ಪೌರಾಣಿಕ ಹಾಗೂ ಆಧ್ಯಾತ್ಮಿಕ ಕೇಂದ್ರಗಳನ್ನು ಒಡಲಿನಲ್ಲಿ ಅಡಗಿಸಿಕೊಂಡಿದೆ. ಸಮುದ್ರದ ಸದ್ದಿನ ನಡುವೆ, ಭಕ್ತಿಸಾರುವ ದೇಗುಲಗಳ ಘಂಟೆ ಸದ್ದು ಪ್ರವಾಸಿಗರನ್ನು ಆರ್ಷಿಸುತ್ತಿದೆ. ಬನ್ನಿ ಇಂದು ಕರಾವಳಿಯ ಸುತ್ತಲೂ ಇರುವ, ಭೇಟಿ ನೀಡಲೇಬೇಕಾದ ಪವಿತ್ರ ಪ್ರಸಿದ್ಧ ದೇವಸ್ಥಾನಗಳ ಬಗ್ಗೆ ತಿಳಿಯೋಣ..
Dakshina Kannada Temples list : ದಕ್ಷಿಣ ಕನ್ನಡ ಮತ್ತು ಕರಾವಳಿ ಕರ್ನಾಟಕವು ಕೇವಲ ನೈಸರ್ಗಿಕ ಸೌಂದರ್ಯಕ್ಕೆ ಮಾತ್ರವಲ್ಲದೆ, ತನ್ನ ಅಪಾರ ಪೌರಾಣಿಕ ಹಿನ್ನೆಲೆ ಹಾಗೂ ಆಧ್ಯಾತ್ಮಿಕ ವೈಭವಕ್ಕೂ ಹೆಸರಾಗಿದೆ. ಅರೇಬಿಯನ್ ಸಮುದ್ರದ ಅಲೆಗಳ ಸದ್ದಿನ ನಡುವೆ ಮೊಳಗುವ ದೇಗುಲಗಳ ಘಂಟಾನಾದವು ಪ್ರವಾಸಿಗರನ್ನು ಹಾಗೂ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿವೆ. ಕರಾವಳಿ ಪ್ರದೇಶದಲ್ಲಿ ನೀವು ಖಂಡಿತವಾಗಿಯೂ ಭೇಟಿ ನೀಡಲೇಬೇಕಾದ ಕೆಲವು ಪವಿತ್ರ ಹಾಗೂ ಇತಿಹಾಸ ಪ್ರಸಿದ್ಧ ದೇವಸ್ಥಾನಗಳ ವಿವರ ಇಲ್ಲಿದೆ.
1/11
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ
ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ : ಮಂಗಳೂರಿನಿಂದ ಸುಮಾರು 75 ಕಿ.ಮೀ ದೂರದಲ್ಲಿ ನೇತ್ರಾವತಿ ನದಿಯ ದಡದಲ್ಲಿರುವ ಧರ್ಮಸ್ಥಳವು 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಶೈವ ಕ್ಷೇತ್ರ. ಇಲ್ಲಿ ಹೆಗ್ಗಡೆ ಪರಿವಾರದ ಆಡಳಿತ, ಜೈನ ಧರ್ಮಾಧಿಕಾರಿಗಳ ನೇತೃತ್ವ ಹಾಗೂ ಅನ್ನದಾನ, ಅಭಯದಾನ, ಔಷಧದಾನ, ವಿದ್ಯಾದಾನ ಎಂಬ ಚತುರ್ವಿಧ ದಾನಗಳು ಜಗತ್ತಿಗೆ ಮಾದರಿಯಾಗಿವೆ.
2/11
ಶೃಂಗೇರಿ ಶ್ರೀ ಶಾರದಾ ಪೀಠ
ಶೃಂಗೇರಿ ಶ್ರೀ ಶಾರದಾ ಪೀಠ : ಚಿಕ್ಕಮಗಳೂರು ಜಿಲ್ಲೆಯಲ್ಲಿದ್ದರೂ ಕರಾವಳಿ ಪ್ರವಾಸದ ಪ್ರಮುಖ ಭಾಗವಾಗಿರುವ ಶೃಂಗೇರಿಯು ತುಂಗಾ ನದಿಯ ದಡದಲ್ಲಿದೆ. 8ನೇ ಶತಮಾನದಲ್ಲಿ ಶ್ರೀ ಆದಿ ಶಂಕರಚಾರ್ಯರು ಸ್ಥಾಪಿಸಿದ ನಾಲ್ಕು ಆಮ್ನಾಯ ಪೀಠಗಳಲ್ಲಿ ಪ್ರಥಮ ಪೀಠವಾದ ಶಾರದಾ ಪೀಠವು ವಿದ್ಯೆ ಮತ್ತು ಜ್ಞಾನದ ಅಧಿದೇವತೆಯಾದ ಶಾರದಾಂಬೆಯ ಸನ್ನಿಧಿಯಾಗಿದೆ.
3/11
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯ : ಉಡುಪಿ ಜಿಲ್ಲೆಯ ಸೌಪರ್ಣಿಕಾ ನದಿಯ ತೀರದಲ್ಲಿ, ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಾಲಯವು ಪರಶುರಾಮ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀ ಆದಿ ಶಂಕರಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಈ ಕ್ಷೇತ್ರದಲ್ಲಿ ಜ್ಯೋತಿರ್ಲಿಂಗ ಹಾಗೂ ಶಕ್ತಿ ದೇವಿಯ ಏಕೀಕೃತ ರೂಪವನ್ನು ಆರಾಧಿಸಲಾಗುತ್ತದೆ.
4/11
ಉಡುಪಿ ಶ್ರೀ ಕೃಷ್ಣ ಮಠ
ಉಡುಪಿ ಶ್ರೀ ಕೃಷ್ಣ ಮಠ : ದಕ್ಷಿಣ ಕನ್ನಡಕ್ಕೆ ಹತ್ತಿರವಿರುವ ಉಡುಪಿಯು ಶ್ರೀ ಕೃಷ್ಣ ಮಠವು ಜಗತ್ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಜಗದ್ಗುರು ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಈ ಕ್ಷೇತ್ರದಲ್ಲಿ ಶ್ರೀಕೃಷ್ಣನ ಸುಂದರ ವಿಗ್ರಹವನ್ನು 'ಕನಕನ ಕಿಂಡಿ'ಯ ಮೂಲಕ ದರ್ಶನ ಪಡೆಯುವುದು ಇಲ್ಲಿನ ವಿಶಿಷ್ಟ ಸಂಪ್ರದಾಯ.
5/11
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯ : ಪವಿತ್ರ ನಂದಿನಿ ನದಿಯ ನಡುಗಡ್ಡೆಯಲ್ಲಿ (ದ್ವೀಪದಲ್ಲಿ) ಪ್ರಕೃತಿಯ ಮಡಿಲಿನಲ್ಲಿ ನೆಲೆಸಿರುವ ಕಟೀಲು ದುರ್ಗಾಪರಮೇಶ್ವರಿ ದೇವಾಲಯವು ಅತ್ಯಂತ ಸುಂದರ ಹಾಗೂ ಪ್ರಸಿದ್ಧ ಶಕ್ತಿಪೀಠವಾಗಿದೆ. ಇಲ್ಲಿ ದೇವಿಗೆ ಅರ್ಪಿಸುವ ಯಕ್ಷಗಾನ ಸೇವೆ ಹಾಗೂ ಅನ್ನದಾನವು ಅತ್ಯಂತ ವಿಶೇಷವಾದುದು.
6/11
ಶ್ರೀ ವೆಂಕಟರಮಣ ದೇವಾಲಯ
ಶ್ರೀ ವೆಂಕಟರಮಣ ದೇವಾಲಯ : ಮಂಗಳೂರು ನಗರದ ಮಧ್ಯಭಾಗದಲ್ಲಿರುವ ಈ ದೇವಾಲಯದಲ್ಲಿ ಶ್ರೀ ವೀರ ವೆಂಕಟೇಶ ದೇವರನ್ನು ಪೂಜಿಸಲಾಗುತ್ತದೆ. 300 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ದೇವಾಲಯವು ಪ್ರತಿವರ್ಷ ವಿಜೃಂಭಣೆಯಿಂದ ನಡೆಯುವ 5 ದಿನಗಳ 'ಕೊಡಿಯಾಲ್ ತೇರು' (ಕಾರು ಹಬ್ಬ) ಉತ್ಸವಕ್ಕೆ ಹೆಸರುವಾಸಿಯಾಗಿದೆ.
7/11
ಶ್ರೀ ಮಾರಿಯಮ್ಮ ದೇವಾಲಯ, ಉರ್ವ
ಶ್ರೀ ಮಾರಿಯಮ್ಮ ದೇವಾಲಯ, ಉರ್ವ : ಮಂಗಳಾದೇವಿ ದೇವಾಲಯದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಈ ದೇವಾಲಯದಲ್ಲಿ ಮಾರಿಯಮ್ಮ ದೇವಿಯನ್ನು ಮುಖ್ಯ ಆರಾಧ್ಯ ದೈವವಾಗಿ ಪೂಜಿಸಲಾಗುತ್ತದೆ. ಸುಮಾರು 800 ವರ್ಷಗಳ ಹಿಂದೆ ಮೊಗವೀರ ಸಮುದಾಯದವರಿಂದ ಸ್ಥಾಪಿತಗೊಂಡ ಈ ದೇವಾಲಯವು ತನ್ನದೇ ಆದ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.
8/11
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯ : 1912 ರಲ್ಲಿ ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯವು ಮಂಗಳೂರಿನ ಪ್ರಮುಖ ಆಕರ್ಷಣೆ. 1991 ರಲ್ಲಿ ಈ ದೇವಾಲಯವನ್ನು ಚೋಳ ಶೈಲಿಯ ವಾಸ್ತುಶಿಲ್ಪದಲ್ಲಿ ನವೀಕರಿಸಲಾಯಿತು. ಇಲ್ಲಿ ಪ್ರತಿವರ್ಷ ನಡೆಯುವ 'ಮಂಗಳೂರು ದಸರಾ' ಉತ್ಸವವು ಜಗದ್ವಿಖ್ಯಾತವಾಗಿದೆ.
9/11
ಶ್ರೀ ಶರವು ಮಹಾಗಣಪತಿ ದೇವಾಲಯ
ಶ್ರೀ ಶರವು ಮಹಾಗಣಪತಿ ದೇವಾಲಯ : ಮಂಗಳೂರು ನಗರದ ಹೃದಯಭಾಗದಲ್ಲಿರುವ ಶರವು ಮಹಾಗಣಪತಿ ದೇವಾಲಯವು ಸುಮಾರು ೮೦೦ ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಭಕ್ತರ ಕಷ್ಟಗಳನ್ನು ನಿವಾರಿಸುವ ಕಾರಣೀಕದ ಕ್ಷೇತ್ರವಾಗಿ ಇದು ಹೆಸರಾಗಿದ್ದು, ಪ್ರತಿದಿನ ನೂರಾರು ಭಕ್ತಾದಿಗಳು ಇಲ್ಲಿಗೆ ಆಗಮಿಸುತ್ತಾರೆ.
10/11
ಕದ್ರಿ ಮಂಜುನಾಥ ದೇವಸ್ಥಾನ
ಕದ್ರಿ ಮಂಜುನಾಥೇಶ್ವರ ದೇವಾಲಯ : ಕದ್ರಿ ಬೆಟ್ಟದ ಮೇಲೆ ನೆಲೆಸಿರುವ ಕದ್ರಿ ಮಂಜುನಾಥೇಶ್ವರ ದೇವಾಲಯವು 10 ಅಥವಾ 11ನೇ ಶತಮಾನದಲ್ಲಿ ನಿರ್ಮಾಣಗೊಂಡ ಸುಂದರ ಪಾರಂಪರಿಕ ಕ್ಷೇತ್ರವಾಗಿದೆ. ಪರಶುರಾಮನ ತಪಸ್ಸಿಗೆ ಒಲಿದು ಶಿವನು ಇಲ್ಲಿ ಲಿಂಗರೂಪಿಯಾಗಿ ನೆಲೆಸಿದನೆಂಬ ಪೌರಾಣಿಕ ಪ್ರತೀತಿ ಇದೆ. ಇಲ್ಲಿರುವ ಮಂಜುನಾಥನ ಲೋಹದ ಮೂರ್ತಿಯು ದಕ್ಷಿಣ ಭಾರತದಲ್ಲೇ ಅತ್ಯಂತ ಪುರಾತನವಾದುದೆಂದು ಪರಿಗಣಿಸಲಾಗಿದೆ.
11/11
ಮಂಗಳಾದೇವಿ ದೇವಸ್ಥಾನ
ಮಂಗಳಾದೇವಿ ದೇವಾಲಯ : ಮಂಗಳೂರು ನಗರಕ್ಕೆ ಈ ಹೆಸರು ಬರಲು ಮೂಲ ಕಾರಣಕರ್ತೃವೇ ಈ ಶ್ರೀ ಮಂಗಳಾದೇವಿ ದೇವಾಲಯ. ಮಂಗಳಾದೇವಿಯು ಶಕ್ತಿ ಅಥವಾ ದುರ್ಗಾ ದೇವಿಯ ಅವತಾರವಾಗಿದ್ದಾಳೆ. 9ನೇ ಶತಮಾನದಲ್ಲಿ ಆಳುಪ ರಾಜವಂಶದ ಕುಂದವರ್ಮ ಈ ದೇವಾಲಯವನ್ನು ನಿರ್ಮಿಸಿದನೆಂಬ ಇತಿಹಾಸವಿದೆ. ನವರಾತ್ರಿ ಮಹೋತ್ಸವವು ಇಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ.