SOCIAL MEDIA

Newsletter

PARTNER SITES
Select Language Select State

'ಜೀ ನ್ಯೂಸ್' ಬಿಗ್‌ ಇಂಪ್ಯಾಕ್ಟ್: ದೆಹಲಿ ಫ್ಲಾಟ್ ಹರಾಜು ವಿವಾದದಲ್ಲಿ ತಪ್ಪೊಪ್ಪಿಕೊಂಡ NBCC

ದೆಹಲಿಯ ಸರೋಜಿನಿ ನಗರದ ಅವೆನ್ಯೂ ಟವರ್ಸ್‌ನ 49 ಫ್ಲಾಟ್‌ಗಳ ಹರಾಜು ರದ್ದತಿ ಪ್ರಕರಣಕ್ಕೆ ಸಂಬಂಧಿಸಿದಂತೆ 'ಜೀ ನ್ಯೂಸ್' ಪ್ರಸಾರ ಮಾಡಿದ ವರದಿಗೆ ಭರ್ಜರಿ ಇಂಪ್ಯಾಕ್ಟ್ ಸಿಕ್ಕಿದೆ. ಈ ಹಿಂದೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ಹೇಳಿಕೊಂಡಿದ್ದ ಸರ್ಕಾರಿ ಸಂಸ್ಥೆ NBCC, ಇದೀಗ ಹೊಸ ತಿದ್ದುಪಡಿ ಸೂಚನೆ (Corrigendum) ಹೊರಡಿಸುವ ಮೂಲಕ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 18, 2026, 22:21 IST | Updated: Nov 18, 2026, 22:25 IST
Image Credit: Kannada News
Join

ದೆಹಲಿ : ಸರೋಜಿನಿ ನಗರದ ಅವೆನ್ಯೂ ಟವರ್ಸ್‌ನ ಫ್ಲಾಟ್‌ಗಳ ಹರಾಜನ್ನು ರದ್ದುಪಡಿಸಿದ್ದ NBCC (ನ್ಯಾಷನಲ್ ಬಿಲ್ಡಿಂಗ್ಸ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್) ತನ್ನ ತಪ್ಪನ್ನು ತಿದ್ದಿಕೊಂಡಿದೆ. 'ಜೀ ನ್ಯೂಸ್' ವರದಿ ಬೆನ್ನಲ್ಲೇ ಎಚ್ಚೆತ್ತ ಸರಕಾರಿ ಸ್ವಾಮ್ಯದ NBCC, ಇದೀಗ ಹೊಸ ತಿದ್ದುಪಡಿ ಸೂಚನೆ (Corrigendum)ಯನ್ನು ಹೊರಡಿಸಿದೆ. ಈ ಮೂಲಕ ಹರಾಜು ಪ್ರಕ್ರಿಯೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿದೆ.

ಹಿಂದೆ, ಈ ಫ್ಲಾಟ್‌ಗಳ ಹರಾಜು ರದ್ದತಿಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಲಯದಲ್ಲಿ ವ್ಯಾಜ್ಯವಿಲ್ಲ ಎಂದು NBCC ಹೇಳಿಕೊಂಡಿತ್ತು. ಆದರೆ ಈಗ ಹೊಸ ಅಧಿಸೂಚನೆಯಲ್ಲಿ, ಕೆಲವು ಯುನಿಟ್‌ಗಳಿಗೆ ಸಂಬಂಧಿಸಿದ ಪ್ರಕರಣ ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂಬುದನ್ನು ಒಪ್ಪಿಕೊಂಡಿದೆ. ಅಲ್ಲದೆ, ಹೊಸ ಖರೀದಿದಾರರು ತಮ್ಮ ಸ್ವಂತ ಜವಾಬ್ದಾರಿ ಮತ್ತು ಮುನ್ನೆಚ್ಚರಿಕೆಯೊಂದಿಗೆ ಹರಾಜಿನಲ್ಲಿ ಭಾಗವಹಿಸಬೇಕು ಎಂದು ಎಚ್ಚರಿಕೆ ನೀಡಿದೆ.

NBCCಯ ಹೊಸ ಪ್ರಕಟಣೆಯಲ್ಲಿ ಏನಿದೆ?
ಕಳೆದ ಅಕ್ಟೋಬರ್ 28, 2026ರಂದು ಆಡಳಿತಾತ್ಮಕ ಕಾರಣಗಳಿಂದ 49 ಫ್ಲಾಟ್‌ಗಳ ಬಿಡ್‌ಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈಗ ಆ ಎಲ್ಲ 49 ಫ್ಲಾಟ್‌ಗಳನ್ನು ಹೊಸ ಹರಾಜಿಗೆ ಮರು ಸೇರ್ಪಡೆಗೊಳಿಸಲಾಗಿದೆ. ಈ ಪೈಕಿ ಕೆಲವು ಯುನಿಟ್‌ಗಳ ಮೂಲ ಬಿಡ್‌ದಾರರು ತಮ್ಮ ಬಿಡ್ ರದ್ದತಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ, ಈ ಎಲ್ಲ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಹೊಸ ಅರ್ಜಿದಾರರಿಗೆ NBCC ಸೂಚಿಸಿದೆ. ಒಂದು ವೇಳೆ ಯಾವುದೇ ನಷ್ಟ ಉಂಟಾದರೆ ಅಥವಾ ಹಕ್ಕುಬಾಧ್ಯತೆ ಎದುರಾದರೆ, ಅದಕ್ಕೆ ಕಂಪನಿಯು ಜವಾಬ್ದಾರನಲ್ಲ ಎಂದು ಸ್ಪಷ್ಟಪಡಿಸಿದೆ.

ಸತ್ಯ ಮುಚ್ಚಿಟ್ಟಿದ್ದ NBCC
ನವೆಂಬರ್ 6ರಂದು ಹೊಸದಾಗಿ ಹರಾಜು ಕರೆಯಲಾದ ಸಂದರ್ಭದಲ್ಲಿ, ನ್ಯಾಯಾಲಯದಲ್ಲಿ ಯಾವುದೇ ಪ್ರಕರಣ ಬಾಕಿ ಇಲ್ಲ ಎಂದು NBCC ಹೊಸ ಖರೀದಿದಾರರಿಂದ ಈ ಪ್ರಮುಖ ಮಾಹಿತಿಯನ್ನು ಮುಚ್ಚಿಟ್ಟಿತ್ತು. ಆದರೆ ವಾಸ್ತವವಾಗಿ, ಅದಕ್ಕೂ ಒಂದು ದಿನ ಮುಂಚಿತವಾಗಿ ಅಂದರೆ ನವೆಂಬರ್ 5ರಂದೇ ದೆಹಲಿ ಹೈಕೋರ್ಟ್ ಈ ಕುರಿತು NBCCಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೋರಿತ್ತು.

ಹೈಕೋರ್ಟ್ ಮೆಟ್ಟಿಲೇರಿದ ಬಿಡ್‌ದಾರರಿಗೆ ಅವಕಾಶ
ಆರಂಭದಲ್ಲಿ ಅತ್ಯಂತ ಹೆಚ್ಚು ಬಿಡ್ ಮಾಡಿದವರನ್ನು ಹೊಸ ಹರಾಜಿನಿಂದ ಹೊರಗಿಡಲು NBCC ನಿರ್ಧರಿಸಿತ್ತು. ಆದರೆ ಈಗ ಹೊರಡಿಸಿರುವ ಹೊಸ ತಿದ್ದುಪಡಿ ಪತ್ರದ ಪ್ರಕಾರ, ಹೈಕೋರ್ಟ್ ಮೊರೆ ಹೋಗಿರುವ ಮೂಲ ಗರಿಷ್ಠ ಬಿಡ್‌ದಾರರಿಗೂ ಹೊಸ ಹರಾಜಿನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ತಾವು ನಿಗದಿಪಡಿಸಿದ ರಿಸರ್ವ್ ಬೆಲೆಗಿಂತಲೂ ಅಧಿಕ ಮೊತ್ತಕ್ಕೆ ಅತ್ಯಂತ ಹೆಚ್ಚು ಬಿಡ್ ಮಾಡಿದ್ದರೂ ತಮ್ಮ ಹರಾಜನ್ನು ಯಾವುದೇ ಸಮಂಜಸ ಕಾರಣವಿಲ್ಲದೆ ರದ್ದುಗೊಳಿಸಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. 'ಜೀ ನ್ಯೂಸ್' ತನ್ನ ವರದಿಯಲ್ಲಿ ಸುಪ್ರೀಂ ಕೋರ್ಟ್‌ನ ಈ ಹಿಂದಿನ ತೀರ್ಪುಗಳ ಆಧಾರದ ಮೇಲೆ ಈ ಕ್ರಮವನ್ನು ಪ್ರಶ್ನಿಸಿತ್ತು.

ಮುಂದಿನ ವಿಚಾರಣೆ ನವೆಂಬರ್ 26ಕ್ಕೆ
ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದರೂ ಹೊಸ ಹರಾಜು ಪ್ರಕ್ರಿಯೆಯನ್ನು ಆರಂಭಿಸಿದ್ದು ಯಾಕೆ ಎಂಬ ಗಂಭೀರ ಪ್ರಶ್ನೆಗಳು ಈಗಲೂ ಎದ್ದಿವೆ. ಬುಧವಾರ ನಡೆದ ವಿಚಾರಣೆಯ ವೇಳೆ ಖರೀದಿದಾರರ ಪರ ವಕೀಲರು ಮಾತನಾಡಿ, ನವೆಂಬರ್ 5ರಂದು ನ್ಯಾಯಾಲಯವು NBCCಯ ನಿಲುವಿನ ಬಗ್ಗೆ ಪ್ರಶ್ನಿಸಿದರೂ, ಮರುದಿನವೇ ಅಂದರೆ ಕೇವಲ 24 ಗಂಟೆಗಳಲ್ಲಿ ಆ 49 ಫ್ಲಾಟ್‌ಗಳಿಗೆ ಮರು ಹರಾಜು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ದೂರಿದರು. ಅಲ್ಲದೆ, ಈ ಹೊಸ ಹರಾಜು ಪ್ರಕ್ರಿಯೆಗೆ ತಡೆ ನೀಡುವಂತೆಯೂ ಕೋರಿದರು.

ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸದಂತೆ NBCCಗೆ ಹೈಕೋರ್ಟ್ ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಅರ್ಜಿದಾರರ ಈ ವಾದಕ್ಕೆ ಸಂಬಂಧಿಸಿದಂತೆ ವಿವರವಾದ ಆಕ್ಷೇಪಣೆ ಸಲ್ಲಿಸುವುದಾಗಿ NBCC ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸದ್ಯ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 26ರಂದು ನಿಗದಿಯಾಗಿದ್ದು, ಅಂದು ಹೊಸ ಹರಾಜು ಪ್ರಕ್ರಿಯೆಗೆ ಕೋರ್ಟ್ ತಡೆ ನೀಡುತ್ತದೆಯೋ ಇಲ್ಲವೋ ಎಂಬುದು ನಿರ್ಧಾರವಾಗಲಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES