ದಿಪ್ಕೆ, ರಂಕಾ, ದಾಸ್ ಬಂಧನ.. ಜಿರಳೆ ಟೀಂ ಹೋರಾಟದ ನೇತೃತ್ವ ವಹಿಸಿಕೊಂಡ "ಅಜಿಂಕ್ಯ ಶಿಂಧೆ" ಯಾರು ಗೊತ್ತೆ?
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಹೋರಾಟಕ್ಕೆ ದಿಲ್ಲಿಗೆ ಬಂದಿದ್ದ 'ಕಾಕ್ರೋಚ್ ಜನತಾ ಪಾರ್ಟಿ' ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ.. ವಿಮಾನದೊಳಗೆ ದಿಪ್ಕೆ, ರಂಕಾ, ದಾಸ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಾಗಾದರೆ, ಪ್ರತಿಭಟನೆಯ ಸಾರಥ್ಯವನ್ನು ಈಗ ವಹಿಸಿಕೊಂಡಿರುವ ಅಜಿಂಕ್ಯ ಶಿಂಧೆ ಯಾರು.. ಪೂರ್ತಿ ವಿವರ ಇಲ್ಲಿದೆ ನೋಡಿ..
ಹೊಸದಿಲ್ಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ದೆಹಲಿಯ ಜಂತರ್ ಮಂತರ್ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯು ತೀವ್ರ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಗಿದೆ. 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಚಾಲಕ ಅಭಿಜಿತ್ ದಿಪ್ಕೆ ಹಾಗೂ ಪ್ರಮುಖ ಸಹ-ಸಂಚಾಲಕರನ್ನು ದೆಹಲಿ ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಕ್ಕೆ ಪಡೆದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರತಿಭಟನೆಯ ನೇತೃತ್ವ ವಹಿಸಲು ದಿಲ್ಲಿಗೆ ಆಗಮಿಸುತ್ತಿದ್ದಂತೆಯೇ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕರು ವಿಮಾನದಿಂದ ಕೆಳಗಿಳಿಯುವ ಮುನ್ನವೇ ವಿಮಾನದೊಳಗೆ ಪೊಲೀಸರು ಪ್ರವೇಶಿಸಿರುವ ದೃಶ್ಯಗಳನ್ನು ಸಂಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಿಜೆಪಿಯ ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ಅವರನ್ನು ಸಹ ಶನಿವಾರದ ಆರಂಭದಲ್ಲಿ ವಶಕ್ಕೆ ಪಡೆಯಲಾಗಿತ್ತು.
ಅಜಿಂಕ್ಯ ಶಿಂಧೆಗೆ ನಾಯಕತ್ವ ಜವಾಬ್ದಾರಿ
ತಮ್ಮ ಸಂಭವ್ಯ ಬಂಧನದ ಬಗ್ಗೆ ಮುಂಚಿತವಾಗಿ ಅರಿತಿದ್ದ ಅಭಿಜಿತ್ ದಿಪ್ಕೆ, ಬಂಧನಕ್ಕೂ ಮುನ್ನವೇ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ ಬಿಡುಗಡೆ ಮಾಡಿದ್ದರು. ತಾವಾಗಲೀ ಅಥವಾ ಸಹ-ಸಂಚಾಲಕರಾಗಲೀ ಬಂಧನಕ್ಕೊಳಗಾದರೆ, ಜಂತರ್ ಮಂತರ್ ಪ್ರತಿಭಟನೆಯ ಮುಂದಿನ ನೇತೃತ್ವವನ್ನು ಸಂಘಟನೆಯ ರಾಷ್ಟ್ರೀಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ ವಹಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದರು. ಅದರಂತೆ ಇದೀಗ ಅಜಿಂಕ್ಯ ಶಿಂಧೆ ಅವರು ಈ ರಾಷ್ಟ್ರಮಟ್ಟದ ಚಳವಳಿಯ ಸಾರಥ್ಯ ವಹಿಸಿದ್ದಾರೆ.
ಯಾರು ಈ ಅಜಿಂಕ್ಯ ಶಿಂಧೆ?
ಮಹಾರಾಷ್ಟ್ರದ ಲಾತೂರ್ ಮೂಲದ 35 ವರ್ಷ ವಯಸ್ಸಿನ ಅಜಿಂಕ್ಯ ಶಿಂಧೆ ಅವರು ರಾಯಗಡದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ತಾಂತ್ರಿಕ ವಿಶ್ವವಿದ್ಯಾಲಯದಿಂದ (DBATU) ಬಿ.ಟೆಕ್ (BTech) ಪದವಿ ಪಡೆದಿದ್ದಾರೆ. ಕಳೆದ ಆಗಸ್ಟ್ನಲ್ಲಿ ಇವರನ್ನು ಸಿಜೆಪಿ ರಾಷ್ಟ್ರೀಯ ಸಂಘಟನಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ಇತ್ತೀಚೆಗೆ ಮುಂಬೈನಲ್ಲಿ ನಡೆದ ಪ್ರೆಶರ್ ಗ್ರೂಪ್ನ ಆಂದೋಲನದ ಪ್ರಮುಖ ಸಂಘಟಕರಾಗಿ ಗುರುತಿಸಿಕೊಂಡಿದ್ದ ಇವರು, ಗಾಂಧಿ ಜಯಂತಿಯಂದು ದಾದರ್ನಲ್ಲಿ ಕಾನೂನುಬಾಹಿರವಾಗಿ ಗುಂಪುಗೂಡಿ ಘೋಷಣೆ ಕೂಗಿದ ಆರೋಪದ ಮೇರೆಗೆ ದಾಖಲಾದ ಪ್ರಕರಣದಲ್ಲೂ ಇತರ ನಾಯಕರೊಂದಿಗೆ ಹೆಸರಿಸಲ್ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಶಿಂಧೆ ಗಮನಾರ್ಹ ಅನುಯಾಯಿಗಳನ್ನು ಹೊಂದಿದ್ದಾರೆ. ಅಲ್ಲದೆ, ಭಾರತದಾದ್ಯಂತ ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಿಸುವ ಗುರಿ ಹೊಂದಿರುವ ಸಿಜೆಪಿಯ 'ಸ್ಕೂಲ್ ಥಿಕ್ ಕರೋ' ಅಭಿಯಾನದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಪ್ರತಿಭಟನೆಗೆ ಬ್ರೇಕ್ ಹಾಕಲು ಪೊಲೀಸ್ ಯತ್ನ
ವಿಮಾನ ನಿಲ್ದಾಣದಲ್ಲೇ ನಾಯಕ ಬಂಧನವನ್ನು 'ನಿರಂಕುಶ' ಎಂದು ಬಲವಾಗಿ ಖಂಡಿಸಿರುವ ಕಾಕ್ರೋಚ್ ಜನತಾ ಪಾರ್ಟಿ, ಇದು ನಾಗರಿಕರ ಸಂಚಾರ ಸ್ವಾತಂತ್ರ್ಯದ ಸ್ಪಷ್ಟ ಉಲ್ಲಂಘನೆ ಎಂದು ಆರೋಪಿಸಿದೆ. ಮತ್ತೊಂದೆಡೆ, ಗುರುಗ್ರಾಮ್ನ ತಮ್ಮ ನಿವಾಸದಲ್ಲಿದ್ದ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನೂ ಪೊಲೀಸರು ವಶಕ್ಕೆ ಪಡೆದಿರುವುದು ಈ ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ದಿಲ್ಲಿ ಪೊಲೀಸರು ನೈಋತ್ಯ ಜಿಲ್ಲಾ ಪೊಲೀಸ್ ತಂಡಗಳನ್ನು ವಿಮಾನ ನಿಲ್ದಾಣದ ಸುತ್ತಮುತ್ತ ನಿಯೋಜಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.