SOCIAL MEDIA

Newsletter

PARTNER SITES
Select Language Select State

ಮೋದಿ "ಡಿಲಿಮಿಟೇಶನ್" ತಂತ್ರ, ಕರ್ನಾಟಕಕ್ಕೆ ಇದು ಒಳ್ಳೆಯದಾ ಅಥವಾ ಕೆಟ್ಟದ್ದಾ..?

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಶೇ. 50ರಷ್ಟು ಹೆಚ್ಚಿಸುವ ಕೇಂದ್ರದ ಪ್ರಸ್ತಾವನೆಯಿಂದ ಕರ್ನಾಟಕದ ಸಂಸದೀಯ ಕ್ಷೇತ್ರಗಳು 28ರಿಂದ 42ಕ್ಕೆ ಏರಬಹುದು. ತಮಿಳುನಾಡು 39ರಿಂದ 59ಕ್ಕೆ, ಕೇರಳ 20ರಿಂದ 30ಕ್ಕೆ ಹೆಚ್ಚಳವಾಗುವ ಲೆಕ್ಕಾಚಾರವಿದೆ. ಆದರೆ ಉತ್ತರ ಪ್ರದೇಶವೂ 80ರಿಂದ 120ಕ್ಕೆ ಏರಲಿದೆ. ಅಂದರೆ ದಕ್ಷಿಣದ ಸಂಖ್ಯೆ ಹೆಚ್ಚಾದರೂ ಉತ್ತರದ ರಾಜಕೀಯ ಅಂತರವೂ ಹೆಚ್ಚಾಗಲಿದೆ. ಹಾಗಾದರೆ ಈ ಲೆಕ್ಕದ ಹಿಂದಿರುವ ನಿಜವಾದ ರಾಜಕೀಯ ಚಿತ್ರಣವೇನು? ಇಲ್ಲಿದೆ ನೋಡಿ..

Written By Krishna NK
Published: Nov 29, 2026, 22:06 IST | Updated: Nov 29, 2026, 22:08 IST
Image Credit: delimitation
Join

ಬೆಂಗಳೂರು : ಕರ್ನಾಟಕದ ಪಾಲಿಗೆ ಈ ಪ್ರಸ್ತಾವನೆಯಲ್ಲಿ ಮೊದಲ ನೋಟಕ್ಕೆ ದೊಡ್ಡ ಲಾಭ ಕಾಣಿಸುತ್ತದೆ. ಈಗಿರುವ 28 ಲೋಕಸಭಾ ಕ್ಷೇತ್ರಗಳು 42ಕ್ಕೆ ಏರಲಿವೆ ಎಂಬುದು ಕೇಂದ್ರದ ಲೆಕ್ಕಾಚಾರ. ಆಂಧ್ರಪ್ರದೇಶದ ಕ್ಷೇತ್ರಗಳು 25ರಿಂದ 38ಕ್ಕೆ, ತೆಲಂಗಾಣದವು 17ರಿಂದ 26ಕ್ಕೆ, ತಮಿಳುನಾಡಿನವು 39ರಿಂದ 59ಕ್ಕೆ ಮತ್ತು ಕೇರಳ 20ರಿಂದ 30ಕ್ಕೆ ಹೆಚ್ಚಾಗಬಹುದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್‌ನಲ್ಲಿಯೇ ಮಂಡಿಸಿದ್ದ ಶೇ. 50ರಷ್ಟು ಹೆಚ್ಚಳದ ಮಾದರಿಯ ಪ್ರಕಾರ ದಕ್ಷಿಣದ ಐದು ರಾಜ್ಯಗಳ ಒಟ್ಟು ಕ್ಷೇತ್ರಗಳು 129ರಿಂದ 195ಕ್ಕೆ ಏರಲಿವೆ. ಲೋಕಸಭೆಯಲ್ಲಿ ದಕ್ಷಿಣದ ಒಟ್ಟು ಪಾಲು ಸುಮಾರು ಶೇ. 24ರಷ್ಟೇ ಉಳಿಯಲಿದೆ ಎಂಬುದು ಕೇಂದ್ರದ ಸಮರ್ಥನೆ.

ಕರ್ನಾಟಕದ ಪ್ರಸ್ತುತ 28 ಲೋಕಸಭಾ ಕ್ಷೇತ್ರಗಳು 42ಕ್ಕೆ ಏರಿದರೆ ರಾಜ್ಯದ ಸಂಸದರ ಸಂಖ್ಯೆ 14ರಷ್ಟು ಹೆಚ್ಚಾಗಲಿದೆ. ಈಗ ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ ಕರ್ನಾಟಕದ ಪಾಲು ಶೇ. 5.15ರಷ್ಟಿದೆ. 816 ಸದಸ್ಯರ ಪ್ರಸ್ತಾವಿತ ಲೋಕಸಭೆಯಲ್ಲಿ 42 ಸ್ಥಾನಗಳಾದರೆ ಈ ಪ್ರಮಾಣ ಶೇ. 5.14ರಷ್ಟು ಇರಲಿದೆ. ಅಂದರೆ ಒಟ್ಟು ಸದನದಲ್ಲಿ ಕರ್ನಾಟಕದ ಸಾಪೇಕ್ಷ ಪಾಲು ಬಹುತೇಕ ಬದಲಾಗುವುದಿಲ್ಲ. ಇದೇ ರೀತಿ ತಮಿಳುನಾಡಿನ 39 ಕ್ಷೇತ್ರಗಳು 59ಕ್ಕೆ, ಕೇರಳದ 20 ಕ್ಷೇತ್ರಗಳು 30ಕ್ಕೆ ಏರಬಹುದು. ಕೇಂದ್ರದ ಪ್ರಕಾರ ದಕ್ಷಿಣದ ರಾಜ್ಯಗಳ ಒಟ್ಟು ಪ್ರಾತಿನಿಧ್ಯವೂ ಸುಮಾರು ಶೇ. 24ರ ಆಸುಪಾಸಿನಲ್ಲೇ ಮುಂದುವರಿಯಲಿದೆ. ಹೀಗಾಗಿ ಸೀಟುಗಳ ಸಂಖ್ಯೆ ಹೆಚ್ಚುವುದು ನಿಜವಾದರೂ, ಸಂಸತ್ತಿನಲ್ಲಿ ದಕ್ಷಿಣದ ಸಾಪೇಕ್ಷ ರಾಜಕೀಯ ತೂಕದಲ್ಲಿ ದೊಡ್ಡ ಬದಲಾವಣೆ ಆಗುವುದಿಲ್ಲ ಎಂಬುದು ಸರ್ಕಾರದ ಲೆಕ್ಕಾಚಾರ.

ಆದರೆ ಇಲ್ಲಿಯೇ ಕರ್ನಾಟಕದ ರಾಜಕೀಯ ಆತಂಕ ಆರಂಭವಾಗುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ವಾದದ ಪ್ರಕಾರ, ಕರ್ನಾಟಕದ ಕ್ಷೇತ್ರಗಳು 28ರಿಂದ 42ಕ್ಕೆ ಏರಿದರೆ ಉತ್ತರ ಪ್ರದೇಶದ ಕ್ಷೇತ್ರಗಳು 80ರಿಂದ 120ಕ್ಕೆ ಏರಲಿವೆ. ಅಂದರೆ ಎರಡೂ ರಾಜ್ಯಗಳ ನಡುವಿನ ಅಂತರ ಈಗಿರುವ 52ರಿಂದ 78ಕ್ಕೆ ಹೆಚ್ಚಾಗುತ್ತದೆ. ಕರ್ನಾಟಕಕ್ಕೆ ಸಂಖ್ಯೆಯಲ್ಲಿ ಲಾಭವಾದರೂ ಉತ್ತರ ಪ್ರದೇಶಕ್ಕೆ ಸಿಗುವ ಹೆಚ್ಚುವರಿ ರಾಜಕೀಯ ಶಕ್ತಿ ಇನ್ನೂ ದೊಡ್ಡದಾಗಿರುತ್ತದೆ. ಕೇಂದ್ರದ ನೀತಿ ನಿರ್ಧಾರಗಳು, ಹಣಕಾಸು ಹಂಚಿಕೆ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ಉತ್ತರದ ರಾಜ್ಯಗಳ ಪ್ರಭಾವ ಹೆಚ್ಚಾಗುವ ಸಾಧ್ಯತೆಯನ್ನು ಡಿಕೆಶಿ ಪ್ರಶ್ನಿಸಿದ್ದಾರೆ. ಹೀಗಾಗಿ ಕೇವಲ ಕ್ಷೇತ್ರಗಳ ಸಂಖ್ಯೆ ಹೆಚ್ಚಳವನ್ನು ರಾಜ್ಯದ ಹಿತಾಸಕ್ತಿಯ ಅಳತೆಗೋಲಾಗಿ ಪರಿಗಣಿಸಲಾಗದು ಎಂಬುದು ಕರ್ನಾಟಕದ ವಾದ.

ಈ ವಿವಾದದ ಮೂಲದಲ್ಲಿ ಎರಡು ವಿಭಿನ್ನ ನ್ಯಾಯದ ಪರಿಕಲ್ಪನೆಗಳಿವೆ. ಮೊದಲನೇಯದು ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ನೀಡಬೇಕು ಎಂಬ ಪ್ರಜಾಪ್ರಭುತ್ವದ ತತ್ವ. ಎರಡನೇಯದು ಜನಸಂಖ್ಯೆ ನಿಯಂತ್ರಣ, ಶಿಕ್ಷಣ, ಆರೋಗ್ಯ ಮತ್ತು ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳು ರಾಜಕೀಯವಾಗಿ ಹಿಂದುಳಿಯಬಾರದು ಎಂಬ ಒಕ್ಕೂಟ ವ್ಯವಸ್ಥೆಯ ತತ್ವ. ಉದಾಹರಣೆಗೆ, ಜನಸಂಖ್ಯೆ ವೇಗವಾಗಿ ಹೆಚ್ಚಿದ ರಾಜ್ಯಕ್ಕೆ ಜನಪ್ರತಿನಿಧಿಗಳ ಸಂಖ್ಯೆಯೂ ಹೆಚ್ಚಬೇಕು ಎಂಬುದು ಒಂದು ವಾದ. ಆದರೆ ಜನಸಂಖ್ಯೆ ನಿಯಂತ್ರಿಸಲು ದಶಕಗಳಿಂದ ಶ್ರಮಿಸಿದ ಕರ್ನಾಟಕ, ತಮಿಳುನಾಡು ಮತ್ತು ಕೇರಳದಂತಹ ರಾಜ್ಯಗಳ ಪ್ರಾತಿನಿಧ್ಯವನ್ನು ಕೇವಲ ಜನಸಂಖ್ಯೆಯ ಆಧಾರದಲ್ಲಿ ನಿರ್ಧರಿಸಿದರೆ ಅವುಗಳಿಗೆ ಪರೋಕ್ಷ ಶಿಕ್ಷೆಯಾಗುತ್ತದೆ ಎಂಬುದು ಮತ್ತೊಂದು ವಾದ. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಸರ್ಕಾರದ ನಿಜವಾದ ಸವಾಲು.

ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಈ ಪ್ರಸ್ತಾವನೆ ಲೋಕಸಭೆಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ವಿಧಾನಸಭೆಗಳ ಕ್ಷೇತ್ರಗಳ ಸಂಖ್ಯೆಯನ್ನೂ ಶೇ. 50ರಷ್ಟು ಹೆಚ್ಚಿಸುವ ಯೋಜನೆ ಇದೆ. ಕರ್ನಾಟಕದ ವಿಧಾನಸಭಾ ಕ್ಷೇತ್ರಗಳು 224ರಿಂದ 336ಕ್ಕೆ ಏರಬಹುದು. ಇದರಿಂದ ಮಹಿಳೆಯರಿಗೆ ಮೀಸಲಾತಿಯಡಿ ಸುಮಾರು 112 ಸ್ಥಾನಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಪ್ರಸ್ತುತ 224 ಸದಸ್ಯರ ವಿಧಾನಸಭೆಯಲ್ಲಿ ಕೇವಲ 10 ಮಹಿಳೆಯರು ಆಯ್ಕೆಯಾಗಿದ್ದರು. ಹೀಗಾಗಿ ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಗೆ ಇದು ದೊಡ್ಡ ಅವಕಾಶ. ಆದರೆ ಕ್ಷೇತ್ರಗಳ ಗಡಿಗಳು ಬದಲಾದರೆ ಹಾಲಿ ಶಾಸಕರ ಕ್ಷೇತ್ರಗಳೇ ವಿಭಜನೆಯಾಗಬಹುದು. ನಗರ ಮತ್ತು ಗ್ರಾಮೀಣ ಕ್ಷೇತ್ರಗಳ ರಾಜಕೀಯ ಸಮೀಕರಣ ಬದಲಾಗಬಹುದು. ಮೀಸಲು ಕ್ಷೇತ್ರಗಳ ಸ್ಥಾನ ಬದಲಾವಣೆಯಿಂದ ಪಕ್ಷಗಳ ಅಭ್ಯರ್ಥಿ ಆಯ್ಕೆ ಮತ್ತು ಚುನಾವಣಾ ತಂತ್ರಗಳೂ ಸಂಪೂರ್ಣ ಬದಲಾಗಬಹುದು.

ಕರ್ನಾಟಕಕ್ಕೆ ಸಿಗುವ 14 ಹೆಚ್ಚುವರಿ ಲೋಕಸಭಾ ಸ್ಥಾನಗಳೇ ಸಂಪೂರ್ಣ ಚಿತ್ರಣವಲ್ಲ. ಹೊಸ ಕ್ಷೇತ್ರಗಳ ಗಡಿಗಳನ್ನು ಹೇಗೆ ರಚಿಸುತ್ತಾರೆ? ಬೆಂಗಳೂರು ಮತ್ತು ಇತರ ನಗರ ಪ್ರದೇಶಗಳಿಗೆ ಎಷ್ಟು ಪ್ರಾತಿನಿಧ್ಯ ಸಿಗುತ್ತದೆ? ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಮತ್ತು ಮಲೆನಾಡಿನ ಕ್ಷೇತ್ರಗಳ ಸಂಖ್ಯೆ ಹೇಗೆ ಬದಲಾಗುತ್ತದೆ? ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾದ ಕ್ಷೇತ್ರಗಳ ಮರುಹಂಚಿಕೆ ಹೇಗಿರುತ್ತದೆ? ಇವೆಲ್ಲವೂ ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಅಂಶಗಳು. ವಿಶೇಷವಾಗಿ 336 ಸದಸ್ಯರ ವಿಧಾನಸಭೆಯ ಕಲ್ಪನೆಯೇ ಕರ್ನಾಟಕದ ಮುಂದಿನ ಚುನಾವಣಾ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಬಹುದು.

ಹಾಗಾದರೆ ಈ ಕ್ಷೇತ್ರ ಮರುವಿಂಗಡಣೆ ಕೇವಲ ದಕ್ಷಿಣ ಮತ್ತು ಉತ್ತರದ ರಾಜ್ಯಗಳ ನಡುವಿನ ಸಂಖ್ಯೆಗಳ ಆಟವೇ? ಖಂಡಿತಾ ಅಲ್ಲ.. ಇದರ ಹಿಂದೆ ಸಂಸತ್ತಿನಲ್ಲಿನ ಬಹುಮತದ ದೊಡ್ಡ ರಾಜಕೀಯ ಲೆಕ್ಕಾಚಾರವೂ ಇದೆ. ಹಿಂದೆ ಇದೇ ರೀತಿಯ ಮಸೂದೆಗೆ ಸೋಲು ಕಂಡಿದ್ದ ಕೇಂದ್ರ ಸರ್ಕಾರ ಈಗ ಹೊಸ ತಂತ್ರದೊಂದಿಗೆ ಬಂದಿದೆ. ಅಚ್ಚರಿ ಎಂದರೆ ಕೆಲವು ವಿಪಕ್ಷಗಳ ನಿಲುವಿನಲ್ಲೂ ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES