SOCIAL MEDIA

Newsletter

PARTNER SITES
Select Language Select State

ತಂದೆಯ ಮೇಲಿನ ಹಲ್ಲೆಗೆ ಪ್ರತೀಕಾರ? ದೋಸೆ ಅಂಗಡಿಯನ್ನೇ ಧ್ವಂಸ ಮಾಡಿದ ಯುವತಿಯರು! ‌

ಉತ್ತರ ಪ್ರದೇಶದ ವಾರಾಣಸಿಯ ಮಹ್ಮೂರ್ಗಂಜ್‌ನಲ್ಲಿರುವ ಪ್ರಸಿದ್ಧ ದೋಸೆ ಅಂಗಡಿಯಲ್ಲಿ ಇಬ್ಬರು ಯುವತಿಯರು ದಾಂಧಲೆ ನಡೆಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿ, ಅಂಗಡಿಯ ವಸ್ತುಗಳನ್ನ ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ತಮ್ಮ ತಂದೆ ಮತ್ತು ಸಹೋದರರ ಮೇಲೆ ಹಲ್ಲೆಯಾಗಿದ್ದಕ್ಕೆ ಪ್ರತಿಯಾಗಿ ಈ ಕೃತ್ಯ ಎಸಗಿದ್ದೇವೆ ಎಂದು ಯುವತಿಯರು ಹೇಳಿಕೊಂಡಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Written By Puttaraj K Alur
Published: Nov 17, 2026, 18:55 IST | Updated: Nov 17, 2026, 19:09 IST
Image Credit: Varanasi News
Join

Uttar Pradesh Viral Video: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಸಿದ್ಧ ದೋಸೆ ಅಂಗಡಿಯೊಂದರಲ್ಲಿ ಇಬ್ಬರು ಯುವತಿಯರು ದಾಂಧಲೆ ನಡೆಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಮಹ್ಮೂರ್ಗಂಜ್ ಪ್ರದೇಶದಲ್ಲಿರುವ ಲೀಲಾರಾಮ್ ದೋಸೆ ಕಾರ್ನರ್‌ನಲ್ಲಿ ನವೆಂಬರ್ 14ರಂದು ಈ ಘಟನೆ ನಡೆದಿದ್ದು, ಅಂಗಡಿಯೊಳಗೆ ನಡೆದ ಗಲಾಟೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವರದಿಯ ಪ್ರಕಾರ, ಇಬ್ಬರು ಯುವತಿಯರು ಅಂಗಡಿಗೆ ಆಗಮಿಸಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಆಹಾರ ಪದಾರ್ಥಗಳನ್ನ ರಸ್ತೆಗೆ ಎಸೆದು, ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರಲ್ಲಿ ಮಗುವೂ ಸೇರಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂಬ ಆರೋಪವೂ ಕೇಳಿಬಂದಿದೆ.

ಅಂಗಡಿ ಮಾಲೀಕರ ದೂರಿನ ಪ್ರಕಾರ, ಯುವತಿಯರು ಅಂಗಡಿಯಲ್ಲಿ ಗಲಾಟೆ ನಡೆಸಿದ್ದಲ್ಲದೆ, ಸಿಬ್ಬಂದಿ ಮತ್ತು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರನ್ನ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಸ್ತುಗಳನ್ನ ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಅಲ್ಲದೆ ಅಂಗಡಿಯ ಹಣದ ಕೌಂಟರ್‌ ಬಳಿಗೂ ಹೋಗಲು ಯತ್ನಿಸಿದ್ದಾರೆ ಎಂದು ಮಾಲೀಕರು ದೂರಿದ್ದಾರೆ.

ಆದರೆ ಈ ಘಟನೆಯ ಹಿಂದೆ ಮತ್ತೊಂದು ಕಾರಣವಿದೆ ಎಂದು ಯುವತಿಯರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ತಂದೆ ಮತ್ತು ಸಹೋದರರ ಮೇಲೆ ಅಂಗಡಿಯಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರು. ಹೀಗಾಗಿ ಅದೇ ಕೋಪದಲ್ಲಿ ನಾವು ಅಂಗಡಿ ನುಗ್ಗಿ ದಾಂಧಲೆ ನಡೆಸಬೇಕಾಯಿತು ಎಂದಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆಯಿಂದ ಪರಸ್ಪರ ಆರೋಪಗಳು ಕೇಳಿಬಂದಿವೆ.

ಇನ್ನೊಂದೆಡೆ ಅಂಗಡಿ ಮಾಲೀಕರು ಯುವತಿಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನ ಕೊ*ಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಅವರು ದೂರಿದ್ದಾರೆ. ಘಟನೆ ವೇಳೆ ಅಂಗಡಿಯ ಸಿಬ್ಬಂದಿ ಮತ್ತು ಗ್ರಾಹಕರ ಮೇಲೂ ಹಲ್ಲೆ ನಡೆದಿರುವುದಾಗಿ ಮಾಲೀಕರು ಆರೋಪಿಸಿದ್ದಾರೆ.

ಈ ಘಟನೆ ಭೇಲುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಂಗಡಿ ಮಾಲೀಕರ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳ ನೆರವಿನಿಂದ ಯುವತಿಯರ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ಒಟ್ನಲ್ಲಿ ತಂದೆ ಮತ್ತು ಸಹೋದರರ ಮೇಲೆ ಹಲ್ಲೆಯಾಗಿದೆ ಎಂಬ ಯುವತಿಯರ ಆರೋಪ ಹಾಗೂ ಅಂಗಡಿ ಮಾಲೀಕರು ಮಾಡಿರುವ ಪ್ರತ್ಯಾರೋಪಗಳು ಪ್ರಕರಣವನ್ನ ಮತ್ತಷ್ಟು ಕುತೂಹಲಕ್ಕೆ ತಳ್ಳಿವೆ. ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಾರಾಣಸಿಯ ದೋಸೆ ಅಂಗಡಿಯಲ್ಲಿನ ಗಲಾಟೆ ಸಾರ್ವಜನಿಕರ ಗಮನ ಸೆಳೆದಿದೆ. ತನಿಖೆಯ ಬಳಿಕವೇ ಈ ಘಟನೆಯ ಸಂಪೂರ್ಣ ಮಾಹಿತಿ ತಿಳಿದುಬರಬೇಕಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES