Uttar Pradesh Viral Video: ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಸಿದ್ಧ ದೋಸೆ ಅಂಗಡಿಯೊಂದರಲ್ಲಿ ಇಬ್ಬರು ಯುವತಿಯರು ದಾಂಧಲೆ ನಡೆಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಮಹ್ಮೂರ್ಗಂಜ್ ಪ್ರದೇಶದಲ್ಲಿರುವ ಲೀಲಾರಾಮ್ ದೋಸೆ ಕಾರ್ನರ್‌ನಲ್ಲಿ ನವೆಂಬರ್ 14ರಂದು ಈ ಘಟನೆ ನಡೆದಿದ್ದು, ಅಂಗಡಿಯೊಳಗೆ ನಡೆದ ಗಲಾಟೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ವರದಿಯ ಪ್ರಕಾರ, ಇಬ್ಬರು ಯುವತಿಯರು ಅಂಗಡಿಗೆ ಆಗಮಿಸಿ ಗಲಾಟೆ ಆರಂಭಿಸಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಆಹಾರ ಪದಾರ್ಥಗಳನ್ನ ರಸ್ತೆಗೆ ಎಸೆದು, ಸಿಬ್ಬಂದಿ ಹಾಗೂ ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರಲ್ಲಿ ಮಗುವೂ ಸೇರಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂಬ ಆರೋಪವೂ ಕೇಳಿಬಂದಿದೆ.
ಅಂಗಡಿ ಮಾಲೀಕರ ದೂರಿನ ಪ್ರಕಾರ, ಯುವತಿಯರು ಅಂಗಡಿಯಲ್ಲಿ ಗಲಾಟೆ ನಡೆಸಿದ್ದಲ್ಲದೆ, ಸಿಬ್ಬಂದಿ ಮತ್ತು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅವರನ್ನ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಸ್ತುಗಳನ್ನ ಎಸೆದು ಹಲ್ಲೆ ನಡೆಸಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ. ಅಲ್ಲದೆ ಅಂಗಡಿಯ ಹಣದ ಕೌಂಟರ್ ಬಳಿಗೂ ಹೋಗಲು ಯತ್ನಿಸಿದ್ದಾರೆ ಎಂದು ಮಾಲೀಕರು ದೂರಿದ್ದಾರೆ.
ಆದರೆ ಈ ಘಟನೆಯ ಹಿಂದೆ ಮತ್ತೊಂದು ಕಾರಣವಿದೆ ಎಂದು ಯುವತಿಯರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ತಂದೆ ಮತ್ತು ಸಹೋದರರ ಮೇಲೆ ಅಂಗಡಿಯಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದರು. ಹೀಗಾಗಿ ಅದೇ ಕೋಪದಲ್ಲಿ ನಾವು ಅಂಗಡಿ ನುಗ್ಗಿ ದಾಂಧಲೆ ನಡೆಸಬೇಕಾಯಿತು ಎಂದಿದ್ದಾರೆ. ಈ ಪ್ರಕರಣದಲ್ಲಿ ಎರಡೂ ಕಡೆಯಿಂದ ಪರಸ್ಪರ ಆರೋಪಗಳು ಕೇಳಿಬಂದಿವೆ.
Two girls in Varanasi vandalised a dosa shop after their father was allegedly brutally beaten by the shop's employees. With no police action for nearly two weeks, their frustration turned into anger. https://t.co/hQFlA6UCM6
— Ghar Ke Kalesh (@gharkekalesh) November 16, 2026
ಇನ್ನೊಂದೆಡೆ ಅಂಗಡಿ ಮಾಲೀಕರು ಯುವತಿಯರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನ ಕೊ*ಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಎಚ್ಚರಿಕೆ ನೀಡಿದ್ದಾರೆಂದು ಅವರು ದೂರಿದ್ದಾರೆ. ಘಟನೆ ವೇಳೆ ಅಂಗಡಿಯ ಸಿಬ್ಬಂದಿ ಮತ್ತು ಗ್ರಾಹಕರ ಮೇಲೂ ಹಲ್ಲೆ ನಡೆದಿರುವುದಾಗಿ ಮಾಲೀಕರು ಆರೋಪಿಸಿದ್ದಾರೆ.
ಈ ಘಟನೆ ಭೇಲುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಅಂಗಡಿ ಮಾಲೀಕರ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಅಪರಿಚಿತ ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳ ನೆರವಿನಿಂದ ಯುವತಿಯರ ಗುರುತು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.
ಒಟ್ನಲ್ಲಿ ತಂದೆ ಮತ್ತು ಸಹೋದರರ ಮೇಲೆ ಹಲ್ಲೆಯಾಗಿದೆ ಎಂಬ ಯುವತಿಯರ ಆರೋಪ ಹಾಗೂ ಅಂಗಡಿ ಮಾಲೀಕರು ಮಾಡಿರುವ ಪ್ರತ್ಯಾರೋಪಗಳು ಪ್ರಕರಣವನ್ನ ಮತ್ತಷ್ಟು ಕುತೂಹಲಕ್ಕೆ ತಳ್ಳಿವೆ. ಸದ್ಯ ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಾರಾಣಸಿಯ ದೋಸೆ ಅಂಗಡಿಯಲ್ಲಿನ ಗಲಾಟೆ ಸಾರ್ವಜನಿಕರ ಗಮನ ಸೆಳೆದಿದೆ. ತನಿಖೆಯ ಬಳಿಕವೇ ಈ ಘಟನೆಯ ಸಂಪೂರ್ಣ ಮಾಹಿತಿ ತಿಳಿದುಬರಬೇಕಿದೆ.