ನವದೆಹಲಿ: ಮಧುರೈ ಸಮೀಪದ ತಿರುಪರಂಕುಂದ್ರಂ ಬೆಟ್ಟದ 'ದೀಪ ಥೂನ್' (ಕಲ್ಲಿನ ಕಂಬ) ವಿವಾದಕ್ಕೆ ಸಂಬಂಧಿಸಿದಂತೆ ಹಿಂದಿನ ಆದೇಶಗಳನ್ನು ಪಾಲಿಸದಿರುವುದಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನ್ಯಾಯಾಲಯದ ಆದೇಶಗಳನ್ನು ನಿರ್ಲಕ್ಷಿಸುವುದನ್ನು ಉದ್ದೇಶಪೂರ್ವಕ ನ್ಯಾಯಾಂಗ ನಿಂದನೆ ಎಂದು ಕಟುವಾಗಿ ಬಣ್ಣಿಸಿದ ಪೀಠ, ಉಚ್ಚಿಪಿಳ್ಳ್ಯಾರ್ ದೇವಸ್ಥಾನ ಟ್ರಸ್ಟ್ ಬೋರ್ಡ್ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ. ಅಲ್ಲದೆ, ಬಿಗಿ ಭದ್ರತೆಯ ನಡುವೆ ನಾಳೆ ಬೆಟ್ಟದ ಮೇಲಿನ ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಬೇಕು ಎಂದು ಮಹತ್ವದ ಆದೇಶ ಹೊರಡಿಸಿದೆ.
ನವೆಂಬರ್ 20 ರಂದು ನೀಡಿದ್ದ ಮಧ್ಯಂತರ ಆದೇಶದ ಉಲ್ಲಂಘನೆಯ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಂಸ್ಥೆಗಳ ಧೋರಣೆಯನ್ನು ತೀವ್ರವಾಗಿ ಖಂಡಿಸಿತು. ನ್ಯಾಯಾಲಯದ ಆದೇಶಗಳನ್ನು ಜಾರಿಗೆ ತರುವುದನ್ನು ಕಡೆಗಣಿಸುವ ಪ್ರವೃತ್ತಿಯನ್ನು ಕಬ್ಬಿಣದ ಮುಷ್ಟಿಯಿಂದ ನಿಭಾಯಿಸದಿದ್ದರೆ, ಮುಂದೊಂದು ದಿನ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಬಹುದು ಎಂದು ನ್ಯಾಯಪೀಠ ಗಂಭೀರ ಎಚ್ಚರಿಕೆ ನೀಡಿತು.
ನ್ಯಾಯಾಲಯದ ಆದೇಶಗಳು ಯಾವುದೇ ಚರ್ಚೆ ಅಥವಾ ಸಂವಾದಕ್ಕೆ ಆಹ್ವಾನವಲ್ಲ. ತಮಿಳುನಾಡು ಸರ್ಕಾರ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಕಡ್ಡಾಯವಾಗಿ ಮತ್ತು ತಕ್ಷಣವೇ ಅವುಗಳನ್ನು ಪಾಲಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.
ಸಿಆರ್‌ಪಿಎಫ್‌ಗೆ ಭದ್ರತೆ
ವಿವಾದದ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಸುಪ್ರೀಂ ಕೋರ್ಟ್, ಉಚ್ಚಿಪಿಳ್ಳ್ಯಾರ್ ದೇವಸ್ಥಾನದ ಟ್ರಸ್ಟ್ ಬೋರ್ಡ್ ಅನ್ನು ಅಮಾನತುಗೊಳಿಸಿ, ದೇವಸ್ಥಾನದ ಆಡಳಿತ ಜವಾಬ್ದಾರಿಯನ್ನು ಇಬ್ಬರು ಮಾಜಿ ಹೈಕೋರ್ಟ್ ನ್ಯಾಯಾಧೀಶರಿಗೆ ವಹಿಸಿದೆ. ಇದರ ಜೊತೆಗೆ ದೇವಸ್ಥಾನ ಮತ್ತು ಬೆಟ್ಟದ ಪ್ರದೇಶದ ಭದ್ರತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ (CRPF) ಹಸ್ತಾಂತರಿಸಲು ಆದೇಶಿಸಿದೆ. ನಾಳೆ ಬೆಟ್ಟದ ಮೇಲಿನ ಕಲ್ಲಿನ ಕಂಬದಲ್ಲಿ ಕಡ್ಡಾಯವಾಗಿ ದೀಪ ಬೆಳಗಿಸಬೇಕು ಹಾಗೂ ಎಲ್ಲಾ ಭಕ್ತರಿಗೂ ದೀಪ ಬೆಳಗಲು ಅವಕಾಶ ನೀಡಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಉನ್ನತ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್
ತಮಿಳುನಾಡಿನಲ್ಲಿ, ಅದರಲ್ಲೂ ವಿಶೇಷವಾಗಿ ಮಧುರೈ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ವೈಫಲ್ಯ ಮತ್ತು ಅರಾಜಕತೆ ಕಂಡುಬರುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಅಧಿಕಾರಿಗಳ ವರ್ತನೆಯಿಂದಾಗಿ ಮುಖ್ಯ ಕಾರ್ಯದರ್ಶಿ (ಸಿಎಸ್), ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಮತ್ತು ಮಧುರೈ ಜಿಲ್ಲಾ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಏಕೆ ಕೈಗೊಳ್ಳಬಾರದು ಎಂಬುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿತು.
ನ್ಯಾಯಾಲಯದ ಆದೇಶಗಳನ್ನು ಜಾರಿಗೊಳಿಸುವುದಿಲ್ಲ ಎಂಬ ಟ್ರಸ್ಟಿಗಳ ಸಾರ್ವಜನಿಕ ಹೇಳಿಕೆ ಗಂಭೀರ ಉಲ್ಲಂಘನೆಯಾಗಿದ್ದು, ಕೆಲವು ಅಧಿಕಾರಿಗಳು ಇದಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಮಧುರೈ ಜಿಲ್ಲಾಧಿಕಾರಿ, ಟ್ರಸ್ಟ್ ಬೋರ್ಡ್ ಮತ್ತು ದತ್ತಿ ಇಲಾಖೆಯ ಅಧ್ಯಕ್ಷರ ವಿರುದ್ಧ ಪ್ರಾಥಮಿಕವಾಗಿ ಸಾಕ್ಷ್ಯಾಧಾರಗಳಿವೆ ಎಂದೂ ತಿಳಿಸಿತು. ರಾಜಕೀಯ ನಾಯಕರ ಮೌಖಿಕ ಅಥವಾ ಲಿಖಿತ ಆದೇಶದ ಮೇರೆಗೆ ಅಧಿಕಾರಿಗಳು ನಡೆದುಕೊಂಡಿದ್ದಾರೆ ಎಂಬ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಘೋಷಿಸಿದ ಪೀಠ, ಸಿಎಸ್, ಡಿಜಿಪಿ ಮತ್ತು ಮಧುರೈ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಅಫಿಡವಿಟ್ ಸಲ್ಲಿಕೆಗೆ ಸೂಚನೆ, ಮುಂದಿನ ವಿಚಾರಣೆಗೆ ಖುದ್ದು ಹಾಜರಾತಿ
ನವೆಂಬರ್ 20 ರ ಆದೇಶದ ಅನುಷ್ಠಾನದ ಮೇಲೆ ಪ್ರಭಾವ ಬೀರುವಂತಹ ಯಾವುದೇ ಸೂಚನೆಗಳು ಮೇಲಿನಿಂದ ಬಂದಿವೆಯೇ ಎಂಬುದನ್ನು ಪರಿಶೀಲಿಸಲು, ಅಧಿಕಾರಿಗಳ ನಡುವಿನ ಎಲ್ಲಾ ಸಂವಹನಗಳ ಸಂಪೂರ್ಣ ವಿವರಗಳನ್ನು ಅಫಿಡವಿಟ್ ರೂಪದಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಇದರಲ್ಲಿ ಅಧಿಕೃತ ಹಾಗೂ ಅನಧಿಕೃತ ಸಂದೇಶಗಳು, ಇಮೇಲ್‌ಗಳು ಮತ್ತು ಫೋನ್ ಕರೆಗಳ ವಿವರಗಳನ್ನು ಒಳಗೊಂಡಿರಬೇಕು ಎಂದು ಸ್ಪಷ್ಟಪಡಿಸಿದೆ.
ನ್ಯಾಯಾಂಗದ ಘನತೆ ಮತ್ತು ಖ್ಯಾತಿಗೆ ಕಳಂಕ ತರುವ ಯಾವುದೇ ಪ್ರಯತ್ನವನ್ನು ಸಹಿಸಲಾಗುವುದಿಲ್ಲ ಎಂದು ಕಡ್ಡಿಮುರಿದಂತೆ ಹೇಳಿದ ಸುಪ್ರೀಂ ಕೋರ್ಟ್, ಮುಂದಿನ ವಿಚಾರಣೆಗೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಪ್ರಮುಖ ಅಧಿಕಾರಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.
ವಿವಾದದ ಹಿನ್ನೆಲೆ
ಮಧುರೈ ಬಳಿಯ ತಿರುಪರಂಕುಂದ್ರಂ ಬೆಟ್ಟದ ಕಲ್ಲಿನ ಕಂಬದಲ್ಲಿ (ದೀಪಥೂನ್) ಕಾರ್ತಿಕ ದೀಪ ಬೆಳಗಿಸುವ ವಿಚಾರವಾಗಿ ದೀರ್ಘಕಾಲದಿಂದ ವಿವಾದ ನಡೆಯುತ್ತಿದೆ. ನವೆಂಬರ್ 20 ರಂದು ಮಧ್ಯಂತರ ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ದೇವಾಲಯದ ಅಧಿಕಾರಿಗಳು ಅನುಮತಿಸಿದ ತಂಡವು ಕಲ್ಲಿನ ಕಂಬದಲ್ಲಿ ದೀಪ ಬೆಳಗಿಸಬಹುದು ಎಂದು ತಿಳಿಸಿತ್ತು. ಆದರೆ, ನವೆಂಬರ್ 24 ರಂದು ಪೊಲೀಸ್ ಬಂದೋಬಸ್ತ್ ನಡುವೆಯೂ ದೇವಾಲಯದ ತಂಡವು ಬೆಟ್ಟದ ಮೇಲಿನ ಕಲ್ಲಿನ ಕಂಬದ ಬದಲಿಗೆ, ಸಾಂಪ್ರದಾಯಿಕ ಹಳೆಯ ಪದ್ಧತಿಯಂತೆ ಉಚ್ಚಿಪಿಳ್ಳಯಾರ್ ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ದೀಪ ಬೆಳಗಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ನಾಳೆ ಕಲ್ಲಿನ ಕಂಬದಲ್ಲೇ ದೀಪ ಬೆಳಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡುವ ಮೂಲಕ ಈ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.