SOCIAL MEDIA

Newsletter

PARTNER SITES
Select Language Select State

ಗೋಧ್ರಾ ರೈಲು ಹ*ತ್ಯಾಕಾಂಡ: 17 ವರ್ಷಕ್ಕೂ ಹೆಚ್ಚು ಜೈಲುವಾಸ, ಅಪರಾಧಿಗೆ ಜಾಮೀನು ಮಂಜೂರು!

2002ರ ಗೋಧ್ರಾ ರೈಲು ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಇರ್ಫಾನ್ ಸಿರಾಜ್ ಪಡಾಗೆ ಸುಪ್ರೀಂಕೋರ್ಟ್ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ನೀಡಿದೆ. ಗಂಭೀರ ಹೃದಯ ಕಾಯಿಲೆಯಿಂದ ಬಳಲುತ್ತಿರುವುದು ಹಾಗೂ 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿರುವುದನ್ನ ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಆತನ ಜೀವಾವಧಿ ಶಿಕ್ಷೆಯನ್ನ ಅಮಾನತುಗೊಳಿಸಲಾಗಿದ್ದು, ಶಿಕ್ಷೆ ವಿರುದ್ಧದ ಮೇಲ್ಮನವಿ ವಿಚಾರಣೆ ಇನ್ನೂ ಬಾಕಿಯಿದೆ.

Written By Puttaraj K Alur
Published: Nov 23, 2026, 15:24 IST | Updated: Nov 23, 2026, 16:07 IST
Image Credit: Godhra Train Case
Join

Godhra Train Burning Case: 2002ರ ಗೋಧ್ರಾ ರೈಲು ದಹನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಅಪರಾಧಿಯೊಬ್ಬನಿಗೆ ಸುಪ್ರೀಂಕೋರ್ಟ್ ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದು ಮತ್ತು 17 ವರ್ಷಕ್ಕೂ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿರುವುದನ್ನ ಪರಿಗಣಿಸಿ ನ್ಯಾಯಾಲಯ ಈ ನಿರ್ಧಾರ ಕೈಗೊಂಡಿದೆ. ಇರ್ಫಾನ್ ಸಿರಾಜ್ ಪಡಾ ಎಂಬಾತನ ಜೀವಾವಧಿ ಶಿಕ್ಷೆಯನ್ನ ಅಮಾನತುಗೊಳಿಸಿ ಸುಪ್ರೀಂಕೋರ್ಟ್ ಸೋಮವಾರ (ನವೆಂಬರ್ 23) ಆದೇಶ ಹೊರಡಿಸಿದೆ.

ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಪಿ.ಬಿ.ವರಾಲೆ ಅವರನ್ನೊಳಗೊಂಡ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿತು. ವೈದ್ಯಕೀಯ ಕಾರಣಗಳನ್ನ ಮುಂದಿಟ್ಟುಕೊಂಡು ತನ್ನ ಶಿಕ್ಷೆಯನ್ನ ಅಮಾನತುಗೊಳಿಸುವಂತೆ ಇರ್ಫಾನ್ ಸಿರಾಜ್ ಪಡಾ ನ್ಯಾಯಾಲಯದ ಮೊರೆ ಹೋಗಿದ್ದ. ವಿಚಾರಣೆ ವೇಳೆ ಆತನ ಪರ ವಕೀಲರು ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದನ್ನ ಮತ್ತು ದೀರ್ಘಕಾಲದಿಂದ ಜೈಲಿನಲ್ಲಿರುವುದನ್ನ ನ್ಯಾಯಪೀಠದ ಗಮನಕ್ಕೆ ತಂದಿದ್ದರು.

ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದ ವೈದ್ಯಕೀಯ ಸ್ಥಿತಿಯನ್ನ ಗುಜರಾತ್ ರಾಜ್ಯ ಸರ್ಕಾರ ಪ್ರಶ್ನಿಸಲಿಲ್ಲ. ರಾಜ್ಯ ಸರ್ಕಾರದ ಪರ ವಕೀಲರು ಅಪರಾಧದ ಗಂಭೀರತೆಯನ್ನ ಪ್ರಸ್ತಾಪಿಸಿದರೂ, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಮಾತ್ರ ಶಿಕ್ಷೆ ಅಮಾನತುಗೊಳಿಸುವುದಕ್ಕೆ ಆಕ್ಷೇಪವಿಲ್ಲವೆಂದು ತಿಳಿಸಿದರು. ಈ ಅಂಶಗಳನ್ನ ಪರಿಗಣಿಸಿದ ನ್ಯಾಯಪೀಠ, ವೈದ್ಯಕೀಯ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಶಿಕ್ಷೆಯನ್ನ ಅಮಾನತುಗೊಳಿಸಲು ನಿರ್ಧರಿಸಿತು. ಅದರಂತೆ ಪಡಾಗೆ ಜಾಮೀನು ಮಂಜೂರು ಮಾಡಲಾಗಿದೆ.

ಏನಿದು 2002ರ ಗೋಧ್ರಾ ರೈಲು ದಹನ ಪ್ರಕರಣ?

2002ರ ಫೆಬ್ರವರಿ 27ರಂದು ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದ ಸಮೀಪ ಸಬರಮತಿ ಎಕ್ಸ್‌ಪ್ರೆಸ್ ರೈಲಿನ S-6 ಬೋಗಿಗೆ ಬೆಂಕಿ ಹಚ್ಚಲಾಗಿತ್ತು. ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಕರಸೇವಕರು ಸೇರಿದಂತೆ ಪ್ರಯಾಣಿಕರು ಈ ರೈಲಿನಲ್ಲಿದ್ದರು. ಈ ದುರಂತದಲ್ಲಿ 58 ಮಂದಿ ಮೃತಪಟ್ಟಿದ್ದರು. ಘಟನೆ ಬಳಿಕ ಗುಜರಾತ್‌ನ ವಿವಿಧ ಭಾಗಗಳಲ್ಲಿ ಕೋಮು ಗಲಭೆಗಳು ನಡೆದಿದ್ದವು. ದೇಶದ ಗಮನ ಸೆಳೆದ ಈ ಪ್ರಕರಣ ಹಲವು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಒಳಪಟ್ಟಿತ್ತು.

2011ರಲ್ಲಿ 31 ಮಂದಿಗೆ ಶಿಕ್ಷೆ

ಈ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು 2011ರ ಮಾರ್ಚ್‌ನಲ್ಲಿ ಒಟ್ಟು 31 ಮಂದಿಯನ್ನ ಅಪರಾಧಿಗಳೆಂದು ಘೋಷಿಸಿತ್ತು. ಅವರಲ್ಲಿ 11 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು. ಉಳಿದ 20 ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿತ್ತು. ಇದೇ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರ 63 ಮಂದಿಯನ್ನ ನ್ಯಾಯಾಲಯ ದೋಷಮುಕ್ತಗೊಳಿಸಿತ್ತು. ನಂತರ 2017ರಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ವಿಶೇಷ ನ್ಯಾಯಾಲಯ ಮರಣದಂಡನೆ ವಿಧಿಸಿದ್ದ 11 ಮಂದಿಯ ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತು. ಉಳಿದ 20 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನ ಹೈಕೋರ್ಟ್ ಎತ್ತಿಹಿಡಿಯಿತು.

2018ರಿಂದ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿಗಳು ಬಾಕಿ

ತಮ್ಮ ವಿರುದ್ಧದ ಶಿಕ್ಷೆಯನ್ನ ಪ್ರಶ್ನಿಸಿ ಪ್ರಕರಣದ ಅಪರಾಧಿಗಳು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಗಳು 2018ರಿಂದ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಇದೇ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಇತರ ಕೆಲವರಿಗೂ ಕಳೆದ ವರ್ಷಗಳಲ್ಲಿ ಸುಪ್ರೀಂಕೋರ್ಟ್ ಜಾಮೀನು ನೀಡಿದೆ. ಇದೀಗ ಗಂಭೀರ ಹೃದಯ ಸಂಬಂಧಿ ಕಾಯಿಲೆ ಮತ್ತು ದೀರ್ಘಕಾಲದ ಜೈಲುವಾಸವನ್ನ ಪರಿಗಣಿಸಿ ಇರ್ಫಾನ್ ಸಿರಾಜ್ ಪಡಾನ ಜೀವಾವಧಿ ಶಿಕ್ಷೆಯನ್ನ ಸುಪ್ರೀಂಕೋರ್ಟ್ ಅಮಾನತುಗೊಳಿಸಿದೆ. ವೈದ್ಯಕೀಯ ಕಾರಣಗಳ ಆಧಾರದ ಮೇಲೆ ನೀಡಿರುವ ಈ ಪರಿಹಾರವು ಪ್ರಕರಣದ ಮೂಲ ಅಪರಾಧ ನಿರ್ಣಯವನ್ನ ರದ್ದುಗೊಳಿಸುವುದಿಲ್ಲ. ಆತನ ಶಿಕ್ಷೆ ವಿರುದ್ಧದ ಮೇಲ್ಮನವಿಯ ಅಂತಿಮ ತೀರ್ಪು ಇನ್ನೂ ಬಾಕಿ ಇದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES