ಪಾನ್ ತಿಂದರೆ ಏನೋ ಒಂಥರಾ ಮನದಲ್ಲಿ ಉಲ್ಲಾಸದ ಅನುಭವ ಆಗುತ್ತದೆ. ಪಾನ್‌ನಲ್ಲಿ ಹಾಕಿರುವ ಒಂದೊಂದು ತಿನಿಸು ರುಚಿಯನ್ನು ಅದ್ಭುತವಾಗಿ ಮಾಡಿಬಿಡುತ್ತವೆ. 10 ರಿಂದ 15 ತಿನಿಸುಗಳು ಇರುವ ಈ ಪಾನ್ ತಿನ್ನುವಾಗಲೇ ಆಹ್ಲಾದಕರವಾದ ಖುಷಿ ನೀಡುತ್ತದೆ. ಹೀಗಾಗಿಯೇ ಕೆಲವೊಬ್ಬರು ಇದನ್ನು ತಿನ್ನುವುದು ಅಭ್ಯಾಸ ಮಾಡಿಕೊಂಡು ಬಿಟ್ಟಿದ್ದಾರೆ. ಇನ್ನು ಕೆಲವರು ಸಾಮಾನ್ಯವಾಗಿ ಹೊರಗೆ ಬಂದಾಗ ಅಥವಾ ಊಟ ಆದ ಮೇಲೆ ಹಾಕಿಕೊಳ್ಳುವುದು ರೂಢಿ. ಇದೇನು ಬಿಡು ಪಾನ್ ಕೇವಲ ಐದು, ಹತ್ತು ರೂಪಾಯಿ ಕೊಟ್ಟರೇ ಎಲ್ಲ ಕಡೆಯೂ ಸಿಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ ಇದರ ವ್ಯಾಪಾರ, ವ್ಯವಹಾರ ನೋಡಿದರೆ ನಿಮಗೆ ಒಮ್ಮೆ ತಲೆ ಗಿರ್ ಅನ್ನುತ್ತದೆ. ಏಕೆಂದರೆ ಪಾನ್ ಮಾಡುವುದು ಒಮ್ಮೆ ಕಲಿತರೆ ನೀವು ಸಾಕಷ್ಟ ಹಣ ಗಳಿಕೆ ಮಾಡಬಹುದು ಎಂದು ಹೇಳಬಹುದು. ಅದು ಕೇವಲ ಜೀವನಕ್ಕೆ ಅಗುವಷ್ಟು ಅಲ್ಲ, ಕೋಟಿ ಲೆಕ್ಕದಲ್ಲಿ ಪಾನ್ ವ್ಯಾಪಾರ ಮಾಡುವುದರಿಂದ ಸಂಪಾದನೆ ಮಾಡಬಹುದು. ವ್ಯಾಪಾರದ ಗುಟ್ಟು ಎಂದರೆ ಒಬ್ಬರು ಇನ್ನೊಬ್ಬರು ಹೇಳಿಕೊಡದೇ ಇರುವುದು ಆಗಿದೆ. ಹೀಗಾಗಿ ಒಬ್ಬರ ವ್ಯವಹಾರ ಇನ್ನೊಬ್ಬರಿಗೆ ಗೊತ್ತಾಗಲು ವರ್ಷಗಳೇ ಬೇಕಾಗುತ್ತವೆ. ಇಲ್ಲೊಬ್ಬ ರೈತನ ಮಗ ಪಾನ್‌ನಿಂದ 50 ಕೋಟಿ ರೂಪಾಯಿಗಳ ವ್ಯವಹಾರ ಮಾಡುತ್ತಿದ್ದಾರೆ.
ಪಾನ್ ಅಂಗಡಿಗಳು ರಸ್ತೆ ಪಕ್ಕದಲ್ಲಿ, ಬೀದಿಗಳ ಯಾವುದೋ ಮೂಲೆಗಳಲ್ಲಿ ಅಥವಾ ನೆರೆಹೊರೆಯಲ್ಲಿ ಒಂದು ಸಣ್ಣ ಅಂಗಡಿಯನ್ನು ನಾವು ಕಾಣಬಹುದು. ಆದರೆ ಇಲ್ಲೊಬ್ಬ ರೈತನ ಮಗನ ಪಾನ್ ಅಂಗಡಿಯೂ ಸಾಂಪ್ರದಾಯಿಕ ಪಾನ್ ವ್ಯವಹಾರವು ಆಧುನಿಕ ಕೆಫೆ ಬ್ರ್ಯಾಂಡ್ ಆಗಿ ರೂಪಾಂತರಗೊಂಡು 50 ಕೋಟಿ ರೂಪಾಯಿಗಳ ವಹಿವಾಟು ಹೊಂದಿದೆ. ಇದೊಂದು ದೊಡ್ಡ ಸಾಧನೆಯೇ ಎನ್ನಬಹುದು. ಏಕೆಂದರೆ ನೀವು ಕೂಡ ಎಷ್ಟೋ ಕಡೆಗಳಲ್ಲಿ ಪಾನ್ ಅಂಗಡಿಗೆ ವಿಸಿಟ್ ಕೊಟ್ಟಿರುತ್ತೀರಿ, ಅಲ್ಲಿ ಪಾನ್ ಕೂಡ ತಿಂದಿರುತ್ತೀರಿ, ಆದರೆ ಅಲ್ಲಿ ಆಗುವ ವ್ಯಾಪಾರದ ಬಗ್ಗೆ ಮಾತ್ರ ನಿಮ್ಮ ತಲೆಗೆ ಹೋಗಿರಲ್ಲ. ಪಾನ್ ಅಂಗಡಿಯಲ್ಲೂ ಕೋಟಿ ಕೋಟಿ ಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಬಿಹಾರದ ವ್ಯಕ್ತಿ.
ಬಿಹಾರದ ಬಕ್ಸಾರ್ ಜಿಲ್ಲೆಯ ನಿವಾಸಿ ಪಿಎನ್ ಠಾಕೂರ್ ಅನ್ನುವರೇ ಈ ಸಾಧನೆಯನ್ನು ಮಾಡಿದವರು ಅಗಿದ್ದಾರೆ. ಪಿಎನ್ ಠಾಕೂರ್ ಅವರು ತಮ್ಮ ಪಾನ್ ವ್ಯವಹಾರವನ್ನು ಕೇವಲ 2 ಲಕ್ಷ ರೂಪಾಯಿಗಳೊಂದಿಗೆ ಮೊದಲು ಪ್ರಾರಂಭ ಮಾಡಿದರು. ಆದರೆ ಇಂದು ಇದು ಯಾವ ಮಟ್ಟದಲ್ಲಿ ಬೆಳೆದಿದೆ ಎಂದರೆ ನಿಮಗೆ ಊಹೆಗೂ ನಿಲುಕದ ರೀತಿಯಲ್ಲಿ ಅಭಿವೃದ್ಧಿ ಹೊಂದಿದೆ. ಒಂದರ ನಂತರ ಒಂದು ಎನ್ನುವಂತೆ ಬ್ರ್ಯಾಂಚ್‌ಗಳು ಶುರು ಮಾಡುತ್ತ ಹೋದಿದ್ದಾರೆ. ಇದೇ ರೀತಿ ಮಳಿಗೆಗಳನ್ನು ತೆರೆದು.. ತೆರೆದು ಇವತ್ತು ಪಿಎನ್ ಠಾಕೂರ್ ಅವರು ಬರೋಬ್ಬರಿ 400ಕ್ಕೂ ಅಧಿಕ ಪಾನ್ ಬ್ರ್ಯಾಂಚ್‌ಗಳನ್ನು ಹೊಂದಿದ್ದಾರೆ. ಇದು ಕೇಳಿ ನೀವು ಅಚ್ಚರಿ ಪಟ್ಟರೇ ಸತ್ಯದ ವಿಷಯ.
ಸಾಮಾನ್ಯ ರೈತ ಕುಟುಂಬದ ಬಂದಿರುವ ಪಿ.ಎನ್. ಠಾಕೂರ್ ಅವರು ಸರಳ ಬದುಕು ಸಾಗಿಸುವರು ಆಗಿದ್ದಾರೆ. ಪಿ.ಎನ್. ಠಾಕೂರ್ ಅವರಿಗೆ ಬಲವಾದ ಕುಟುಂಬ ವ್ಯವಹಾರ ಅಥವಾ ಆರ್ಥಿಕ ಹಿನ್ನೆಲೆ ಇಲ್ಲವೇ ಇರಲಿಲ್ಲ. ಪಿ.ಎನ್. ಠಾಕೂರ್ ಅವರು ಪ್ರಸಿದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪೂರ್ಣಗೊಳಿಸಿದ್ದರು. ಡಿಗ್ರಿ ಪಡೆದ ಪಿ.ಎನ್. ಠಾಕೂರ್ ಅವರು ಉತ್ತಮ ಸಂಬಳದಲ್ಲಿ ಕಾರ್ಪೊರೇಟ್ ವಲಯದಲ್ಲಿಯೂ ಕೆಲಸ ಮಾಡಿದರು. ಆದರೆ ಅವರಿಗೆ ಯಾವಾಗಲೂ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವ ಉತ್ಸಾಹವಿತ್ತು. ಪಿ.ಎನ್. ಠಾಕೂರ್ ಅವರು ಸಾಕಷ್ಟು ಅವಕಾಶಗಳನ್ನು ನೀಡುವ ಅಸಂಘಟಿತ ವಲಯವನ್ನು ಆಯ್ಕೆ ಮಾಡಲು ಬಯಸಿದ್ದರು.
ಪಿ.ಎನ್. ಠಾಕೂರ್ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವಾಗಲೇ ಭಾರತದಲ್ಲಿ ಪಾನ್ ಅತ್ಯಂತ ಜನಪ್ರಿಯವಾಗಿದೆ ಎಂದು ಗಮನಿಸಿದರು. ಅದು ಎಲ್ಲ ಕಡೆಯೂ ಉತ್ತಮ ವ್ಯವಹಾರ ಹೊಂದಿದೆ ಎಂದು ಅರಿತುಕೊಂಡರು. ಆದರೆ ಅದರ ಮಾರುಕಟ್ಟೆ ವಿಭಜಿತ ಮತ್ತು ಅಸಂಘಟಿತವಾಗಿತ್ತು. ಸಾಮಾನ್ಯವಾಗಿ ಮಹಿಳೆಯರು ಅಥವಾ ಮಕ್ಕಳೊಂದಿಗೆ ಪಾನ್ ಅಂಗಡಿಗಳಿಗೆ ಹೋಗಲು ಹಿಂಜರಿಯುತ್ತಿದ್ದರು. ಈ ಸಾಂಪ್ರದಾಯಿಕ ವ್ಯವಹಾರಕ್ಕೆ ಸ್ವಚ್ಛತೆ, ಉತ್ತಮ ನೋಟ, ಬ್ರ್ಯಾಂಡಿಂಗ್ ಮತ್ತು ಕುಟುಂಬ ಸ್ನೇಹಿ ವಾತಾವರಣವನ್ನು ಸೇರಿಸುವುದರಿಂದ ಪಾನ್‌ನಲ್ಲಿ ಉತ್ತಮ ಬ್ಯುಸಿನೆಸ್ ಮಾಡಬಹುದು ಎಂದು ಠಾಕೂರ್ ಅವರು ಭಾವಿಸಿದ್ದರು. ಈ ದೃಷ್ಟಿಕೋನದಿಂದ, ಪಿ.ಎನ್. ಠಾಕೂರ್ ಅವರು ಸಾಂಪ್ರದಾಯಿಕ ಅಂಗಡಿಯನ್ನು ಆಧುನಿಕ ಪಾನ್ ಕೆಫೆಯಾಗಿ ಪರಿವರ್ತಿಸಲು ಬಿಗ್ ಪ್ಲಾನ್ ಮಾಡಿದರು.
ಪಿ.ಎನ್. ಠಾಕೂರ್ ತಮ್ಮ ಬ್ರ್ಯಾಂಡ್ ಮಸ್ತ್ ಬನಾರಸಿ ಪಾನ್ ಅನ್ನು 2016 ರಲ್ಲಿ ಸ್ಥಾಪಿಸಿದರು. ಪಿ.ಎನ್. ಠಾಕೂರ್ ಅವರ ಬಳಿ ಕೇವಲ 2 ಲಕ್ಷ ರೂಪಾಯಿಗಳಿದ್ದವು. ಪಿ.ಎನ್. ಠಾಕೂರ್ ಅವರ ಪತ್ನಿ ಮಾಯಾ ಕುಮಾರಿ ಈ ಕಷ್ಟಕರ ಪ್ರಯಾಣದಲ್ಲಿ ಗಂಡನನ್ನು ಬೆಂಬಲಿಸಿದರು. ಕೆಲವೊಂದು ಸೂಚನೆಗಳನ್ನು ಕೊಟ್ಟರು. ಮಾಯಾ ತನ್ನ ಕೆಲಸವನ್ನು ತೊರೆದು ತನ್ನ ಉಳಿತಾಯ ವ್ಯವಹಾರದಲ್ಲಿ ಹೂಡಿಕೆ ಮಾಡಿದರು. ಆರಂಭದಲ್ಲಿ ಪಾನ್ ವ್ಯವಹಾರವನ್ನು ಬಹಳ ಚಿಕ್ಕದಾಗಿ ಪರಿಗಣಿಸುತ್ತಿದ್ದ ಜನರ ಗ್ರಹಿಕೆಗಳನ್ನು ಬರುತ್ತಾ ಬರುತ್ತಾ ಪಾನ್ ಅಂಗಡಿ ಕಡೆಗೆ ಒಲವು ತೋರಿದರು. ಪಾನ್ ತಿನ್ನಲೆಂದೇ ಜನರು ಮಳಿಗೆಗಳ ಕಡೆಗೆ ಬರಲು ಶುರು ಮಾಡಿದರು.
ಪಾನ್‌ನಲ್ಲಿ ತಂಬಾಕು ಹಾಕಲಾಗುತ್ತದೆ, ಅದನ್ನು ಗುಟ್ಕ ತಿನ್ನುವರು ಮಾತ್ರ ಇಷ್ಟ ಪಡುತ್ತಾರೆ ಎಂದು ಈ ಮೊದಲು ಎಲ್ಲರು ಭಾವಿಸಿದ್ದರು. ಆದರೆ ಈ ಆಲೋಚನೆಯನ್ನೇ ಪಿ.ಎನ್. ಠಾಕೂರ್ ಅವರು ಬದಲಾಯಿಸಿದರು. ಪಿ.ಎನ್. ಠಾಕೂರ್ ತಮ್ಮ ಕೆಫೆಯನ್ನು ಸಂಪೂರ್ಣವಾಗಿ ತಂಬಾಕು ಉಪಯೋಗಸದಂತೆ ಪಾನ್ ಸಿದ್ಧ ಪಡಿಸುತ್ತಿದ್ದರು. ಇದರಿಂದಾಗಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಹಿಂಜರಿಕೆಯಿಲ್ಲದೆ ಪಾನ್ ತಿನ್ನುವುದು ಒಳ್ಳೆಯದು ಎಂದು ತೋರಿತು. ಇದಲ್ಲದೆ, ಅವರು ಸಾಂಪ್ರದಾಯಿಕ ಬನಾರಸಿ ಪಾನ್ ಜೊತೆಗೆ ಮೆನುವಿನಲ್ಲಿ ಅನೇಕ ಹೊಸ ಮತ್ತು ನವೀನ ರುಚಿಗಳು ಒಳಗೊಂಡ ಪಾನ್‌ಗಳನ್ನು ಸೇರಿಸಿದರು. ಈ ಪಾನ್‌ಗಳಿಂದ ಗ್ರಾಹಕರು ಶುದ್ಧ ಪರಿಸರ, ಶುದ್ಧ ಸೇವೆ ಮತ್ತು ವಿಶಿಷ್ಟ ಅನುಭವವನ್ನು ಪಡೆಯಲು ಪ್ರಾರಂಭಿಸಿದರು. ಇದು ಅವರ ಔಟ್‌ಲೆಟ್‌ನಲ್ಲಿ ಬೇಗನೆ ಜನರು ಬಂದು ಪಾನ್ ಖರೀದಿಗೆ ಕಾರಣವಾಯಿತು.
ಒಂದು ಔಟ್‌ಲೆಟ್ ಯಶಸ್ವಿಯಾದ ನಂತರ ಪಿ.ಎನ್ ಠಾಕೂರ್ ತಮ್ಮ ವ್ಯವಹಾರವನ್ನು ಫ್ರಾಂಚೈಸ್ ಮಾದರಿಯ ಮೂಲಕ ವಿಸ್ತರಿಸಲು ಪ್ರಾರಂಭಿಸಿದರು. ಈ ಮಾದರಿಯು ದೇಶಾದ್ಯಂತ ಅನೇಕ ಯುವ ಉದ್ಯಮಿಗಳು ಅವರೊಂದಿಗೆ ಸೇರಲು ಸಹಾಯ ಮಾಡಿದೆ. ಇಂದು, ಮಸ್ತ್ ಬನಾರಸಿ ಪಾನ್ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಲಭ್ಯ ಇದೆ. ದೇಶಾದ್ಯಂತ 320 ನಗರಗಳಲ್ಲಿ 400ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ಹೊಂದಿದೆ. ಅತ್ಯಂತ ಗಮನಾರ್ಹವಾದ ವಿಷಯವೆಂದರೆ ಪಿ.ಎನ್ ಠಾಕೂರ್ ಅವರು ಯಾವುದೇ ಬಾಹ್ಯ ಹೂಡಿಕೆ ಎಕ್ಸಟ್ರನಲ್ ಇನ್ವೆಸ್ಟ್‌ಮೆಂಟ್ ಇಲ್ಲದೇ ವಿಶಾಲ ಸಾಮ್ರಾಜ್ಯವನ್ನು ನಿರ್ಮಾಣ ಮಾಡಿದ್ದಾರೆ.
ದಿನ 1 ಲಕ್ಷಕ್ಕೂ ಹೆಚ್ಚು ಪಾನ್ ಎಲೆಗಳು ಮಾರಾಟ; ಕಂಪನಿಯ ಮಾಹಿತಿಯ ಪ್ರಕಾರ ಒಂದಿನಕ್ಕೆ ಪಿ.ಎನ್ ಠಾಕೂರ್ ಅವರ ಎಲ್ಲಾ ಮಳಿಗೆಗಳು ಒಟ್ಟಾಗಿ ಪ್ರತಿದಿನ ಸುಮಾರು 100,000 ಪಾನ್ ಮಾರಾಟ ಮಾಡುತ್ತವೆ. ಕೇವಲ 2 ಲಕ್ಷ ರೂಪಾಯಿಗಳ ಅಲ್ಪ ಹೂಡಿಕೆಯಿಂದ ಪ್ರಾರಂಭವಾದ ಕಂಪನಿಯು ಈಗ ಸುಮಾರು 50 ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ಹೊಂದಿದೆ. ದೇಶದಲ್ಲಿಯೇ 400 ಮಳಿಗೆಗಳನ್ನು ದಾಟಿದ ಕಂಪನಿಯು ನಿಲ್ಲಿಸುವ ಮನಸ್ಥಿತಿಯಲ್ಲಿಲ್ಲ. ಮುಂದಿನ 2 ವರ್ಷಗಳಲ್ಲಿ ತನ್ನ ಬ್ರ್ಯಾಂಡ್ ಅನ್ನು 600 ಮಳಿಗೆಗಳಿಗೆ ವಿಸ್ತರಿಸುವುದು ಮಸ್ತ್ ಬನಾರಸಿ ಪಾನ್‌ನ ಮುಂದಿನ ಟಾರ್ಗೆಟ್ ಆಗಿದೆ. ಪಿ.ಎನ್. ಠಾಕೂರ್ ಅವರ ದೊಡ್ಡ ಕನಸು ಎಂದರೆ, ಬನಾರಸಿ ಪಾನ್ ಅನ್ನು ಭಾರತದ ಬೃಹತ್ ಮತ್ತು ಅತ್ಯಂತ ಗೌರವಾನ್ವಿತ ಬ್ರಾಂಡ್ ಆಗಿ ಮಾಡುವುದು ಆಗಿದೆ.