SOCIAL MEDIA

Newsletter

PARTNER SITES
Select Language Select State

ಗಲ್ಲಿಯಿಂದ ದಿಲ್ಲಿ ಸಿಂಹಾಸನದವರೆಗೆ : ಪ್ರಧಾನಿ ಮೋದಿ ಅವರ ಸ್ಪೂರ್ತಿದಾಯಕ ರಾಜಕೀಯ ಪಥ

ಬಡ ಕುಟುಂಬದಲ್ಲಿ ಜನಿಸಿದ ನರೇಂದ್ರ ಮೋದಿ ಅವರು ಪ್ರಸ್ತುತ ಅಖಂಡ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇಷ್ಟೋ ಜನರಿಗೆ ಮೋದಿಯವರ ರಾಜಕೀಯ ಜೀವನದ ಹಾದಿಯ ಬಗ್ಗೆ ತಿಳಿದಿಲ್ಲ. ಬನ್ನಿ ನಮ್ಮ ಹೆಮ್ಮೆಯ ಪ್ರಧಾನಿಯ ಕುರಿತ ಮಹತ್ವದ ಸಂಗತಿಗಳನ್ನು ಅರಿಯೋಣ..

Reported By Krishna NK Written By Krishna NK
Published: Sep 16, 2026, 06:56 PM IST | Updated: Sep 16, 2026, 07:04 PM IST
Image Credit: PM Narendra Modi life story in Kannada
Join

Narendra Modi life story :  ಸಾಮಾನ್ಯ ಕುಟುಂಬದಿಂದ ಬಂದು, ಕಠಿಣ ಶ್ರಮ, ದೃಢ ಸಂಕಲ್ಪ ಹಾಗೂ ಅಪಾರ ದೇಶಸೇವೆಯ ಮೌಲ್ಯಗಳ ಮೂಲಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ನರೇಂದ್ರ ದಾಮೋದರದಾಸ್ ಮೋದಿ ಅವರ ಜೀವನ ಪಯಣ ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾಗಿದೆ. ಕಷ್ಟಪಟ್ಟು ಬೆಳೆದ ಬಾಲ್ಯದಿಂದ ಹಿಡಿದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಧ್ವನಿಯಾಗಿ ಹೊರಹೊಮ್ಮುವವರೆಗಿನ ಅವರ ಈ ಸುದೀರ್ಘ ಪಯಣವು ಸಂಘಟನೆ ಮತ್ತು ಆಡಳಿತದ ತಂತ್ರಗಾರಿಕೆಗೆ ಅತ್ಯುತ್ತಮ ಉದಾಹರಣೆಯಾಗಿದೆ.  

ಬಡತನದಲ್ಲಿ ಬೆಳೆದ ಬಾಲ್ಯ ಮತ್ತು ತಾಯಿಯ ಸಂಸ್ಕಾರ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 1950 ರಂದು ಪ್ರಸ್ತುತ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್‌ನಗರ ಎಂಬ ಸಣ್ಣ ಪಟ್ಟಣದಲ್ಲಿ ಬಡ ಕುಟುಂಬದಲ್ಲಿ ಜನಿಸಿದರು. ತಂದೆ ದಾಮೋದರದಾಸ್ ಮೋದಿ ಮತ್ತು ತಾಯಿ ಹಿರಾಬೆನ್ ಅವರ ಆರು ಮಕ್ಕಳಲ್ಲಿ ಮೋದಿ ಮೂರನೆಯವರಾಗಿ ಬೆಳೆದರು. ವಡ್‌ನಗರದ ರೈಲ್ವೆ ನಿಲ್ದಾಣದಲ್ಲಿ ತಮ್ಮ ತಂದೆಗೆ ಚಹಾ ಮಾರಾಟದಲ್ಲಿ ನೆರವಾಗುತ್ತಿದ್ದ ಮೋದಿ, ಬಾಲ್ಯದಲ್ಲೇ ಬಡತನ ಹಾಗೂ ಕಠಿಣ ಶ್ರಮದ ಅನುಭವ ಪಡೆದರು. ಈ ದಿನಗಳಲ್ಲಿ ಕಂಡ ಸಮಾಜದ ವಿವಿಧ ವರ್ಗಗಳ ಜನರ ಕಷ್ಟ-ನಷ್ಟಗಳು ಅವರಲ್ಲಿ ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿ ಮತ್ತು ಸಂವೇದನೆಯನ್ನು ಮೂಡಿಸಿದವು. ಶಾಲಾ ದಿನಗಳಲ್ಲೇ ನಾಟಕ ಹಾಗೂ ಭಾಷಣ ಸ್ಪರ್ಧೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಅವರಲ್ಲಿದ್ದ ವಾಗ್ಮಿ ಮತ್ತು ನಾಯಕತ್ವದ ಗುಣಗಳು ಬಾಲ್ಯದಲ್ಲೇ ಚಿಗುರೊಡೆದವು.

ಆರ್‌ಎಸ್‌ಎಸ್ ಒಡನಾಟ ಮತ್ತು ತುರ್ತು ಪರಿಸ್ಥಿತಿಯ ಹೋರಾಟ
ತಮ್ಮ ಎಂಟನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಳೀಯ ಶಾಖೆಗಳಿಗೆ ತೆರಳಲು ಪ್ರಾರಂಭಿಸಿದ ಮೋದಿ, ಲಕ್ಷ್ಮಣರಾವ್ ಇನಾಮದಾರ್ ಅವರ ಮಾರ್ಗದರ್ಶನದಲ್ಲಿ ಬೆಳೆದರು. ಆರ್‌ಎಸ್‌ಎಸ್ ವಾತಾವರಣವು ಅವರಲ್ಲಿ ಶಿಸ್ತು, ಸಂಘಟನಾತ್ಮಕ ಕೌಶಲ ಮತ್ತು ದೇಶಸೇವೆಯ ಮೌಲ್ಯಗಳನ್ನು ಗಟ್ಟಿಗೊಳಿಸಿತು. 1971ರ ಭಾರತ-ಪಾಕ್ ಯುದ್ಧದ ನಂತರ ತಮ್ಮ ಕುಟುಂಬದ ವ್ಯಾಪಾರವನ್ನು ತೊರೆದು ಪೂರ್ಣಾವಧಿ ಪ್ರಚಾರಕರಾಗಿ ಸೇರಿಕೊಂಡರು.

1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಹೇರಿದ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಸರ್ಕಾರಿ ಬಂಧನದಿಂದ ತಪ್ಪಿಸಿಕೊಳ್ಳಲು 'ಗುಜರಾತ್ ಲೋಕ ಸಂಘರ್ಷ ಸಮಿತಿ'ಯ ಸಂಘಟಕರಾಗಿ ರಹಸ್ಯವಾಗಿ ಕೆಲಸ ಮಾಡಿದರು. ಸಾಧುವಿನ ಹಾಗೂ ಸಿಖ್ಖರ ವೇಷ ಮರೆಸಿಕೊಂಡು ಸರ್ಕಾರದ ವಿರುದ್ಧ ಕರಪತ್ರಗಳನ್ನು ಹಂಚುವುದು ಮತ್ತು ಪ್ರತಿಭಟನೆಗಳನ್ನು ಸಂಘಟಿಸುವುದು ಅವರಲ್ಲಿ ರಾಜಕೀಯ ತಂತ್ರಗಾರಿಕೆಯನ್ನು ಬೆಳೆಸಿತು.

ಆಧ್ಯಾತ್ಮಿಕ ಶೋಧನೆ ಮತ್ತು ಹಿಮಾಲಯದ ದಿನಗಳು
ಹದಿಹರೆಯದ ಕೊನೆಯಲ್ಲಿ ಜೀವನದ ನೈಜ ಅರ್ಥ ಮತ್ತು ದೇಶಸೇವೆಯ ಮಾರ್ಗವನ್ನು ಹುಡುಕ ಹೊರಟ ಮೋದಿ, ಕೆಲ ಕಾಲ ಮನೆ ತೊರೆದು ದೇಶಾದ್ಯಂತ ಪ್ರವಾಸ ಬೆಳೆಸಿದರು. ಕೋಲ್ಕತ್ತಾದ ಬೆಲೂರು ಮಠ, ಆಲ್ಮೋರಾದ ಅದ್ವೈತ ಆಶ್ರಮ ಮತ್ತು ರಾಜಕೋಟ್‌ನ ರಾಮಕೃಷ್ಣ ಮಿಷನ್ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದರು. ಸ್ವಾಮಿ ವಿವೇಕಾನಂದರ ಚಿಂತನೆಗಳಿಂದ ತೀವ್ರವಾಗಿ ಪ್ರಭಾವಿತರಾದ ಈ ಹಿಮಾಲಯದ ದಿನಗಳು ಮೋದಿ ಅವರಿಗೆ ಮಾನಸಿಕ ಧೈರ್ಯ, ಕಠಿಣ ಪರಿಸ್ಥಿತಿಗಳಲ್ಲಿ ಸ್ಥಿರವಾಗಿರುವ ಮನಸ್ಥಿತಿ ಮತ್ತು ದೃಢಸಂಕಲ್ಪವನ್ನು ಒದಗಿಸಿದವು.

ರಾಷ್ಟ್ರೀಯ ರಾಜಕೀಯ ಪ್ರವೇಶ ಮತ್ತು ಬಿಜೆಪಿ ಸಂಘಟನೆ
1985ರಲ್ಲಿ ಆರ್‌ಎಸ್‌ಎಸ್‌ನಿಂದ ಭಾರತೀಯ ಜನತಾ ಪಾರ್ಟಿಗೆ (BJP) ನೇಮಕಗೊಂಡ ಮೋದಿ, 1987ರಲ್ಲಿ ಗುಜರಾತ್ ಬಿಜೆಪಿ ಘಟಕದ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡರು. 1990ರ ದಶಕದಲ್ಲಿ ಎಲ್.ಕೆ. ಅಡ್ವಾಣಿ ಅವರ 'ರಾಮ್ ರಥಯಾತ್ರೆ' ಮತ್ತು ಮುರಳಿ ಮನೋಹರ್ ಜೋಶಿ ಅವರ 'ಏಕತಾ ಯಾತ್ರೆ'ಗಳನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ತಳಮಟ್ಟದಿಂದ ಕಾರ್ಯಕರ್ತರ ಜಾಲವನ್ನು ನಿರ್ಮಿಸುವಲ್ಲಿ ಹಾಗೂ ರಾಜಕೀಯ ತಂತ್ರಗಳನ್ನು ರೂಪಿಸುವಲ್ಲಿ ಮೋದಿ ಅದ್ಭುತ ನೈಪುಣ್ಯ ತೋರಿದರು.

ಗುಜರಾತ್ ಮುಖ್ಯಮಂತ್ರಿಯಾಗಿ 'ಗುಜರಾತ್ ಮಾದರಿ' ಆಡಳಿತ
2001ರಲ್ಲಿ ಗುಜರಾತ್‌ನ ಭುಜ್ ಭೂಕಂಪದ ಸಂಕಷ್ಟದ ಸಮಯದಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸುದೀರ್ಘ 13 ವರ್ಷಗಳ ಕಾಲ ಗುಜರಾತ್ ಸಿಎಂ ಆಗಿ ಕಾರ್ಯನಿರ್ವಹಿಸಿ, ರಾಜ್ಯವನ್ನು ಮೂಲಸೌಕರ್ಯ, ವಿದ್ಯುತ್ ಶಕ್ತಿ ಹಾಗೂ ಕೈಗಾರಿಕಾ ಅಭಿವೃದ್ಧಿಯತ್ತ ಕೊಂಡೊಯ್ದರು. ಈ 'ಗುಜರಾತ್ ಮಾದರಿ' ಆಡಳಿತವೇ 2014ರಲ್ಲಿ ಅವರನ್ನು ದೇಶದ ಪ್ರಧಾನಮಂತ್ರಿಯಾಗಿ ತಂದುನಿಲ್ಲಿಸಿತು.

ಪ್ರಧಾನಿಯಾಗಿ ಜಾಗತಿಕ ಮಟ್ಟದಲ್ಲಿ ಭಾರತದ ಹೊಸ ಅಧ್ಯಾಯ
2014ರಲ್ಲಿ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೋದಿ, ತದನಂತರ 2019 ಮತ್ತು 2024ರ ಸಾರ್ವತ್ರಿಕ ಚುನಾವಣೆಗಳಲ್ಲೂ ಐತಿಹಾಸಿಕ ಜಯಗಳಿಸಿ ಮೂರನೇ ಬಾರಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಿಜಿಟಲ್ ಇಂಡಿಯಾ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳ ಮೂಲಕ ದೇಶದ ಮೂಲಸೌಕರ್ಯ ಮತ್ತು ಆರ್ಥಿಕತೆಯನ್ನು ಬಲಪಡಿಸಿದ್ದಾರೆ. ಪ್ರಸ್ತುತ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವಿ ಶಕ್ತಿಯಾಗಿ ಮುನ್ನಡೆಸುತ್ತಿದ್ದಾರೆ.

ಪ್ರಮುಖ ದಿನಾಂಕಗಳ ಒಂದು ನೋಟ
ಮೋದಿಯವರು 17 ಸೆಪ್ಟೆಂಬರ್ 1950 ಗುಜರಾತ್‌ನ ವಡ್‌ನಗರದಲ್ಲಿ ಜನಿಸಿದರು. 1971ರಲ್ಲಿ ಆರ್‌ಎಸ್‌ಎಸ್‌ನ ಪೂರ್ಣಾವಧಿ ಪ್ರಚಾರಕರಾಗಿ ಕಾರ್ಯನಿರ್ವಹಣೆ ಪ್ರಾರಂಭಿಸಿದರು. 1987 ಬಿಜೆಪಿ ಸಂಘಟನೆಯಲ್ಲಿ ಸಕ್ರಿಯ ಪಾತ್ರ ವಹಿಸಲು ಪ್ರಾರಂಭಿಸಿದರು. 2001 ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 2014 ರಿಂದ ಪ್ರಸ್ತುತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಒಟ್ಟಾರೆಯಾಗಿ.. ವಡ್‌ನಗರದ ಸಣ್ಣ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಒಬ್ಬ ಸಾಮಾನ್ಯ ಬಾಲಕ, ತನ್ನ ಅಚಲ ದೇಶಪ್ರೇಮ, ಕಠಿಣ ಪರಿಶ್ರಮ ಮತ್ತು ಸ್ಥಿರ ಚಿಂತನೆಯಿಂದ ಭಾರತದ ಪ್ರಧಾನಮಂತ್ರಿಯಾಗಿ ಬೆಳೆದುನಿಂತ ಪರಿ ನಿಜಕ್ಕೂ ಅಭೂತಪೂರ್ವ. ನರೇಂದ್ರ ಮೋದಿ ಅವರ ಜೀವನವು ಕೇವಲ ಒಬ್ಬ ವ್ಯಕ್ತಿಯ ರಾಜಕೀಯ ಪಯಣವಲ್ಲ, ಬದಲಿಗೆ ಕಷ್ಟದಲ್ಲಿದ್ದಾಗಲೂ ಧೈರ್ಯಗೆಡದೆ ಕನಸು ಕಂಡು, ಅದನ್ನು ನನಸು ಮಾಡಲು ಶ್ರಮಿಸುವ ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸದ ಸಂಕೇತ.

'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್' ಎಂಬ ತತ್ತ್ವದೊಂದಿಗೆ ‘ವಿಕಸಿತ ಭಾರತ 2047’ರ ಭವ್ಯ ದೃಷ್ಟಿಕೋನದತ್ತ ದೇಶವನ್ನು ಮುನ್ನಡೆಸುತ್ತಿರುವ ಅವರ ಜೀವನ, "ಶೂನ್ಯದಿಂದಲೂ ಅದ್ಭುತವನ್ನು ಸೃಷ್ಟಿಸಬಹುದು" ಎಂಬ ಸತ್ಯವನ್ನು ಸಾರುತ್ತದೆ. ನಿರಂತರ ಪರಿಶ್ರಮ ಮತ್ತು ದೇಶಸೇವೆಯ ಸಂಕಲ್ಪವಿದ್ದರೆ ಯಾವುದೇ ಗುರಿಯನ್ನು ತಲುಪಲು ಸಾಧ್ಯ ಎಂಬ ಸಂದೇಶವನ್ನು ಅವರ ಈ ಸುದೀರ್ಘ ಪಯಣವು ಮುಂದಿನ ಪೀಳಿಗೆಗೆ ನೀಡುತ್ತದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES