SOCIAL MEDIA

Newsletter

PARTNER SITES
Select Language Select State

‘ಪ್ರಧಾನಿ ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ’: ರಾಹುಲ್ ಗಾಂಧಿ ಗಂಭೀರ ಆರೋಪ!

ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಫೋನ್‌ನಲ್ಲೇ ಇದಕ್ಕೆ ಸಂಬಂಧಿಸಿದ ಪುರಾವೆಗಳಿವೆ ಎಂದು ಹೇಳಿರುವ ಅವರು, ಹಲವು ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ನೇರ ಬಹಿರಂಗ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿದ್ದಾರೆ.

Written By Puttaraj K Alur
Published: Nov 13, 2026, 16:17 IST | Updated: Nov 13, 2026, 16:46 IST
Image Credit: Rahul Gandhi
Join

Phone Tapping Allegation: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ತಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹೇಳಿರುವ ಅವರು, ತಮ್ಮ ಆರೋಪಗಳಿಗೆ ಸಂಬಂಧಿಸಿದ ಪುರಾವೆಗಳು ಫೋನ್‌ನಲ್ಲಿವೆ ಎಂದು ಪ್ರತಿಪಾದಿಸಿದ್ದಾರೆ. ಇದೇ ವೇಳೆ ಹಲವು ಪ್ರಮುಖ ವಿಚಾರಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ನೇರ ಹಾಗೂ ಬಹಿರಂಗ ಚರ್ಚೆ ನಡೆಸಲು ಮತ್ತೊಮ್ಮೆ ಸವಾಲು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ‘ಆಸ್ಕ್ ಮೀ’ (Ask Me) ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ತಮ್ಮ ಫೋನ್‌ ಅನ್ನ ಎತ್ತಿ ತೋರಿಸಿ ಆರೋಪ ಮಾಡಿದ್ದಾರೆ. “ಈ ಫೋನ್‌ನಲ್ಲಿ ಎಲ್ಲಾ ಪುರಾವೆಗಳಿವೆ. ಪ್ರಧಾನಿ ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದರಿಂದ ಅವರಿಗೆ ಈ ವಿಚಾರ ತಿಳಿದಿದೆ” ಎಂದು ಹೇಳಿದ್ದಾರೆ. ಆದರೆ ಫೋನ್ ಕದ್ದಾಲಿಕೆ ಆರೋಪವನ್ನ ಸಾಬೀತುಪಡಿಸುವ ಯಾವುದೇ ಪರಿಶೀಲಿಸಬಹುದಾದ ತಾಂತ್ರಿಕ ದಾಖಲೆ ಅಥವಾ ಸಾಕ್ಷ್ಯವನ್ನ ಅವರು ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಒದಗಿಸಿಲ್ಲ.

ಬಹಿರಂಗ ಚರ್ಚೆಗೆ ಮತ್ತೊಮ್ಮೆ ಆಹ್ವಾನ

ಪ್ರಧಾನಿ ಮೋದಿ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನ ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ. ವಿದೇಶಿ ಶಕ್ತಿಗಳ ಪ್ರಭಾವ, ರಾಷ್ಟ್ರೀಯ ಭದ್ರತೆ, ಚುನಾವಣಾ ಪ್ರಕ್ರಿಯೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನೇರ ಚರ್ಚೆ ನಡೆಯಬೇಕು ಎಂಬುದು ಅವರ ನಿಲುವಾಗಿದೆ. ಈ ಚರ್ಚೆಯ ಮೂಲಕ ಯಾರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿದ್ದಾರೆ ಮತ್ತು ಯಾರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದು ಬಹಿರಂಗವಾಗಲಿದೆ ಎಂದು ಅವರು ಹೇಳಿದ್ದಾರೆ.

ಸಂಸತ್ತಿನಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂಬುದು ರಾಹುಲ್ ಗಾಂಧಿ ಅವರ ಮತ್ತೊಂದು ಆರೋಪ. ಕೃಷಿ ಕಾಯ್ದೆಗಳು, ಮತ ಕಳವು ಆರೋಪ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR), ಚೀನಾ, ಜನರಲ್ ನರವಣೆ ಅವರ ಪುಸ್ತಕ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳನ್ನ ಪ್ರಸ್ತಾಪಿಸಲು ಪ್ರಯತ್ನಿಸಿದಾಗ ತಮ್ಮ ಮಾತಿಗೆ ಅಡ್ಡಿಪಡಿಸಲಾಗಿದೆ ಮತ್ತು ಮೈಕ್ ಸ್ಥಗಿತಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ.

ದೀರ್ಘ ಭಾಷಣಗಳ ರೂಪದಲ್ಲಿ ನಡೆಯುವ ಚರ್ಚೆಗಿಂತ ಪ್ರಧಾನಿ ಮತ್ತು ತಾವು ಮುಖಾಮುಖಿಯಾಗಿ ಕುಳಿತು ಪರಸ್ಪರ ಪ್ರಶ್ನೆಗಳನ್ನ ಕೇಳಿ ಉತ್ತರಿಸುವ ರೀತಿಯ ಸಂವಾದ ಬೇಕೆಂದು ರಾಹುಲ್ ಹೇಳಿದ್ದಾರೆ. ಈ ಚರ್ಚೆಗೆ ಉದ್ಯಮಿ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನ ನಿರ್ಣಾಯಕರಾಗಿ ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದಿದ್ದಾರೆ. ಅಲ್ಲದೆ ಪ್ರಧಾನಿ ತಮ್ಮ ಸವಾಲನ್ನ ಸ್ವೀಕರಿಸಿದರೆ ಚರ್ಚೆಯ ಬಳಿಕ ಅವರು ಪ್ರಧಾನಿಯಾಗಿ ಮುಂದುವರಿಯುವುದಿಲ್ಲವೆಂದು ಕುಟುಕಿದ್ದಾರೆ.

ಬಿಜೆಪಿ ನಾಯಕರ ಆಕ್ಷೇಪ

ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಆಹ್ವಾನಕ್ಕೆ ಬಿಜೆಪಿ ನಾಯಕರು ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಚರ್ಚೆಗೆ ಸಂಸತ್ತೇ ಸೂಕ್ತ ವೇದಿಕೆಯಾಗಿದ್ದು, ಅಲ್ಲಿ ವಿಷಯಗಳ ಕುರಿತು ಚರ್ಚಿಸಬಹುದು ಎಂಬುದು ಬಿಜೆಪಿ ನಾಯಕರ ನಿಲುವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ನಾಯಕರು, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವಿರುವಾಗ ಪ್ರಧಾನಿ ಚರ್ಚೆಗೆ ಸ್ಥಳ ನಿಗದಿಪಡಿಸಬೇಕೆಂದು ಕೇಳುವುದು ಸರಿಯಲ್ಲವೆಂದು ಪ್ರತಿಕ್ರಿಯಿಸಿದ್ದರು.

ಹಿಂದೆಯೂ ಪೆಗಾಸಸ್ ಆರೋಪ ಮಾಡಿದ್ದ ರಾಹುಲ್

ಫೋನ್ ಕದ್ದಾಲಿಕೆ ಕುರಿತು ರಾಹುಲ್ ಗಾಂಧಿ ಈ ಹಿಂದೆಯೂ ಆರೋಪ ಮಾಡಿದ್ದರು. 2023ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಮಾತನಾಡುವಾಗ ತಮ್ಮ ಫೋನ್‌ನಲ್ಲಿ ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆ ಅಭಿವೃದ್ಧಿಪಡಿಸಿದ ಪೆಗಾಸಸ್ ಸ್ಪೈವೇರ್ ಅಳವಡಿಸಲಾಗಿತ್ತು ಎಂದು ಹೇಳಿದ್ದರು. ತಮ್ಮ ಫೋನ್ ಮಾತ್ರವಲ್ಲದೆ ಹಲವು ರಾಜಕಾರಣಿಗಳ ಫೋನ್‌ಗಳ ಮೇಲೂ ನಿಗಾ ಇರಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು. ಫೋನ್‌ನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸುವಂತೆ ಗುಪ್ತಚರ ಅಧಿಕಾರಿಗಳು ಸೂಚಿಸಿದ್ದರು ಎಂದೂ ಹೇಳಿದ್ದರು.

ಆದರೆ ಈ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಪೆಗಾಸಸ್ ಪ್ರಕರಣದ ಕುರಿತು ಸುಪ್ರೀಂಕೋರ್ಟ್ ನೇಮಿಸಿದ್ದ ತಾಂತ್ರಿಕ ಸಮಿತಿಯು ಪರಿಶೀಲಿಸಿದ 29 ಫೋನ್‌ಗಳಲ್ಲಿ ಪೆಗಾಸಸ್ ಪತ್ತೆಯಾಗಿರಲಿಲ್ಲವೆಂದು ವರದಿಯಾಗಿತ್ತು. ಕೆಲವು ಫೋನ್‌ಗಳಲ್ಲಿ ಮಾಲ್‌ವೇರ್ ಕಂಡುಬಂದಿತ್ತು ಎಂಬ ಮಾಹಿತಿಯೂ ವರದಿಯಲ್ಲಿ ಉಲ್ಲೇಖವಾಗಿತ್ತು.

ಒಟ್ನಲ್ಲಿ ಪ್ರಧಾನಿ ಮೋದಿ ವಿರುದ್ಧ ಫೋನ್ ಕದ್ದಾಲಿಕೆ ಆರೋಪ ಮಾಡಿರುವ ರಾಹುಲ್ ಗಾಂಧಿ, ತಮ್ಮ ಬಳಿ ಪುರಾವೆಗಳಿವೆ ಎಂದು ಹೇಳುವುದರ ಜೊತೆಗೆ ನೇರ ಚರ್ಚೆಗೆ ಮತ್ತೊಮ್ಮೆ ಆಹ್ವಾನಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿದಂತೆ ಅವರು ಸಾರ್ವಜನಿಕವಾಗಿ ಪರಿಶೀಲಿಸಬಹುದಾದ ತಾಂತ್ರಿಕ ಸಾಕ್ಷ್ಯ ನೀಡಿಲ್ಲ ಎಂಬ ಅಂಶವೂ ವರದಿಯಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES