ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು, ಕೊಡಲಿಯಿಂದ ಹೊಡೆದಿದ್ದ ದುಷ್ಕರ್ಮಿ.. ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪೈಲಟ್ ಸ್ಮಿತ್ ಮಚ್ಚರ್
ಪೈಲಟ್ ಸ್ಮಿತ್ ಮಚ್ಚರ್ ಮೇಲೆ ಸಹ ಪೈಲಟ್ ಭೀಕರವಾಗಿ ದಾಳಿ ನಡೆಸಿದ್ದನು. ಇದರ ಹೊರತಾಗಿಯೂ ಎಂಟೆದೆ ಧೈರ್ಯದಿಂದ ಹೋರಾಡಿದ್ದ ಸ್ಮಿತ್ ಮಚ್ಚರ್, 174 ವಿಮಾನ ಪ್ರಯಾಣಿಕರು, ಇಡೀ ವಿಮಾನವನ್ನು ಅಪಾಯದಿಂದ ಕಾಪಾಡಿದ್ದರು.
Pilot Smith Machar described the incident in the cockpit: ದುಬೈಯಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ್ದ ಭೀಕರ ಕಾಕ್‌ಪಿಟ್ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ವಿಮಾನದಲ್ಲಿದ್ದ ನೂರಾರು ಪ್ರಯಾಣಿಕರು ಸಾವಿನ ಸಮೀಪಕ್ಕೆ ಹೋಗಿದ್ದರು. ಆಗಸದಲ್ಲಿ ವಿಮಾನ ಹಾರಾಟದಲ್ಲಿರುವಾಗಲೇ ಪೈಲಟ್ ಸ್ಮಿತ್ ಮಚ್ಚರ್ ಮೇಲೆ ಸಹ ಪೈಲಟ್ ಭೀಕರವಾಗಿ ದಾಳಿ ನಡೆಸಿದ್ದನು. ಇದರ ಹೊರತಾಗಿಯೂ ಎಂಟೆದೆ ಧೈರ್ಯದಿಂದ ಹೋರಾಡಿದ್ದ ಸ್ಮಿತ್ ಮಚ್ಚರ್, 174 ವಿಮಾನ ಪ್ರಯಾಣಿಕರು, ಇಡೀ ವಿಮಾನವನ್ನು ಅಪಾಯದಿಂದ ಕಾಪಾಡಿದ್ದರು. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ಮಿತ್ ಮಚ್ಚರ್ ಘಟನೆಯಲ್ಲಿ ಏನೇನು ಆಯಿತು ಸಂಪೂರ್ಣವಾಗಿ ಹೇಳಿದ್ದಾರೆ.
ಫ್ಲೈದುಬೈ ವಿಮಾನದಲ್ಲಿ ಪೈಲಟ್ ಸ್ಮಿತ್ ಮಚ್ಚರ್ ಜೊತೆ ಸಹ ಪೈಲಟ್ ಆಗಿದ್ದಂತಹ ಕಿರಾತಕ ಇಮಾನ್ ದೇಶದ ಪ್ರಜೆ ಹಮಾಮ್ ಅಲ್ ಹಮಾಮಿ ಆಗಿದ್ದಾನೆ. ಪೈಲಟ್ ಹಮಾಮ್ ಅಲ್ ಹಮಾಮಿ ಫೈದುಬೈ ವಿಮಾನಯಾನ ಸಂಸ್ಥೆಯಲ್ಲಿ ಸಹ ಪೈಲಟ್ ಆಗಿ ಕೆಲಸ ಮಾಡುತ್ತಿದ್ದನು. 2026 ಸೆಪ್ಟೆಂಬರ್ 30 ರಂದು ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫೈದುಬೈ ಫ್ಲೈಟ್ 1073 -FZ 1073 ವಿಮಾನವನ್ನು ಅಪಹರಿಸಲು ಪ್ರಯತ್ನ ಮಾಡಿದ್ದನು.
ವಿಮಾನ ಅಪಘಾತ ಮಾಡಲು ಯತ್ನಿಸಿದ ಪೈಲಟ್ ಹಮಾಮ್ ಅಲ್ ಹಮಾಮಿ, ಯುಕೆ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾನೆ. ಒಮಾನಿ ಪ್ರಜೆ ಹಮಾಮ್ ಅಲ್ ಹಮಾಮಿ ಎಂದು ಗುರುತಿಸಲ್ಪಟ್ಟ ಸಹ ಪೈಲಟ್, ವಿಮಾನದ ಒಳಗೆ ಭಯೋತ್ಪಾದಕ ದಾಳಿ ನಡೆಸಲು ಕಾಕ್‌ಪಿಟ್‌ನಲ್ಲಿದ್ದ ಉಪಕರಣದಿಂದ ಪೈಲಟ್ ಮಚ್ಚರ್ ಮೇಲೆ ದಾಳಿ ಮಾಡಿದ್ದನು. ವಿಮಾನದ ನಿಯಂತ್ರಣವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದನು. ಆದರೆ ಸ್ಮಿತ್ ಮಚ್ಚರ್ ಧೈರ್ಯಶಾಲಿ ಹೋರಾಟ ಎಲ್ಲವನ್ನು ತಲೆಕೆಳಗೆ ಮಾಡಿತು.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಪೈಲಟ್ ಮಚ್ಚರ್ ಮಾತನಾಡಿ, ವಿಮಾನವು ಸಾಮಾನ್ಯವಾಗಿ ಎಂದಿನಂತೆ ಟೇಕ್ ಆಫ್ ಆಗಿ ಮುಂದೆ ಚಲಿಸುತ್ತಿತ್ತು. ಸಹ ಪೈಲಟ್ ಹಮಾಮ್ ಅಲ್ ಹಮಾಮಿ ಪ್ರಾರ್ಥಿಸುತ್ತಿದ್ದನು. ಇದೆಲ್ಲ ಸಾಮಾನ್ಯವಾದುದು ಎಂದು ಅಷ್ಟೊಂದು ನಾನು ಗಮನಿಸಲಿಲ್ಲ. ಟೇಕ್ ಆಫ್ ಸಮಯದಲ್ಲಿ ಅನೇಕ ಪೈಲಟ್‌ಗಳು ಮತ್ತು ಪ್ರಯಾಣಿಕರು ಪ್ರಾರ್ಥಿಸುತ್ತಿದ್ದರು. ಪ್ರಾರ್ಥನೆಯ ಸಮಯದಲ್ಲಿ ನಾನು ಮುಂದೆ ಅಷ್ಟೇ ನೋಡುತ್ತಿದ್ದೆ. ಅವನು ಜೊತೆಯಲ್ಲಿಯೇ ಇರುವುದರಿಂದ ಅನುಮಾನದಿಂದ ನೋಡುವ ಅವಶ್ಯತೆ ಇರಲಿಲ್ಲ. ಸಹೋದ್ಯೋಗಿ ಎಂದ ಮೇಲೆ ಎಲ್ಲ ನಂಬಿಕೆ ಇರುತ್ತೆ. ಆದರೆ ಐದು ನಿಮಿಷಗಳ ಬಳಿಕ ನನ್ನ ತಲೆಯ ಹಿಂಭಾಗಕ್ಕೆ ಬಲವಾದ ಹೊಡೆತ ಬಿತ್ತು. ಆ ಏಟಿನಿಂದ ನಾನು ನೆಲಕ್ಕೆ ಬಿದ್ದೆ ಎಂದು ಹೇಳಿದ್ದಾರೆ.
ಸಹ ಪೈಲಟ್ ನನಗೆ ಹೊಡೆದಿದ್ದಾನೆ ಎಂದು ನನಗೆ ಗೊತ್ತಾಯಿತು. ಕೂಡಲೇ ನಾನು ಅವನನ್ನು ತಡೆಯಲು ಪ್ರಯತ್ನಿಸಿದೆ. ಎಲ್ಲವೂ ಅಸ್ಪಷ್ಟವಾಗಿ ಗೋತ್ತಾಗುತ್ತಿತ್ತು. ಈ ವೇಳೆ ವಿಮಾನ ಕೆಳಗೆ ಬೀಳುತ್ತಿರುವುದು ನನಗೆ ಅರ್ಥವಾಯಿತು. ದೊಡ್ಡ ದುರಂತವೊಂದು ಸಂಭವಿಸುತ್ತಿದೆ ಎಂದು ನಾನು ಅರಿತುಕೊಂಡೆ. ವಿಮಾನ ಪ್ರಯಾಣಿಕರು ಹಿಂದೆ ಜೋರಾಗಿ ಕಿರುಚುತ್ತಿದ್ದರು. ನನ್ನ ಮೇಲೆ ಎಲ್ಲ ರೀತಿಯಿಂದಲೂ ಹಲ್ಲೆ ಮಾಡಿದ್ದನು. ಕಾಕ್‌ಪಿಟ್ ರಕ್ತಸಿಕ್ತವಾಗಿತ್ತು. ನಾನು ಸಾಯುತ್ತಿದ್ದೇ ಎಂದು ಅನಿಸಿತ್ತು. ಆದರೆ ಆ ವೇಳೆ ಇಡೀ ಶಕ್ತಿಯನ್ನು ಪ್ರಯೋಗಿಸಿ ಮೇಲೆದ್ದು ಕಾಕ್‌ಪಿಟ್ ಬಾಗಿಲು ಓಪನ್ ಮಾಡಿದೆ ಎಂದು ಹೇಳಿದ್ದಾರೆ.
ನಾನು ಬಾಗಿಲು ಓಪನ್ ಮಾಡದಿದ್ದರೆ, ನಾನು ಸಾಯುತ್ತಿದ್ದೆ. ಜೊತೆಗೆ ಇಡೀ ವಿಮಾನ ಪತನವಾಗುತ್ತಿತ್ತು. ಹಾಗಾಗಿ ನಾನು ನನ್ನ ಎಲ್ಲಾ ಶಕ್ತಿಯಿಂದ ಪ್ರಯತ್ನಿಸಿದೆ. ಬರೀ ಬಾಗಿಲನ್ನು ತೆರೆಯಲು ನನ್ನ ಬಳಿ ಇರುವ ಎಲ್ಲಾ ಶಕ್ತಿಯನ್ನು ಬಳಸಿದೆ. ಬಾಗಿಲು ತೆರೆದ ಕೂಡಲೇ ಹೊರಗೆ ನಿಂತಿದ್ದ ಜನರು ಅವನನ್ನು ತಡೆಯಲು ಮುಂದಾದರು. ಇಬ್ಬರು ಆಫ್-ಡ್ಯೂಟಿ ಪೈಲಟ್‌ಗಳು ಕೂಡ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಸರಾಗವಾಗಿ ಹಾರಾಟ ಮಾಡಲು ಸಹಾಯ ಮಾಡಿದರು. ವಿಮಾನ ನಿಯಂತ್ರಣವನ್ನು ಪುನಃಸ್ಥಾಪಿಸಲಾಯಿತು. ಇದರಿಂದ ಎಲ್ಲರ ಪ್ರಾಣವನ್ನು ಕಾಪಾಡಲಾಯಿತು ಎಂದು ಸ್ಮಿತ್ ಮಚ್ಚರ್ ಅವರು ಹೇಳಿದ್ದಾರೆ.
ವಿಮಾನವು ಸುಮಾರು ಒಂದು ನಿಮಿಷದಲ್ಲಿ 33,000 ಅಡಿಗಳಿಂದ 17,000 ಅಡಿಗಳ ಕೆಳಗೆ ಇಳಿದಿತ್ತು. ಸಹ ಪೈಲಟ್ ಹಮಾಮ್ ಅಲ್ ಹಮಾಮಿ, ಸ್ಮಿತ್ ಮಚ್ಚರ್ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ್ದರಿಂದ ಗಂಭೀರವಾದ ಗಾಯಗಳು ಆಗಿದ್ದವು. ಇಡೀ ವಿಮಾನವನ್ನು ಕ್ರ್ಯಾಶ್ ಮಾಡಲು ಹಮಾಮ್ ಅಲ್ ಹಮಾಮಿ ಮುಂದಾಗಿದ್ದನು ಎನ್ನುವುದು ಇದರಿಂದ ಗೊತ್ತಾಗುತ್ತದೆ. ಆಫ್ ಡ್ಯೂಟಿಯಲ್ಲಿದ್ದ ಇತರೆ ಪೈಲಟ್‌ಗಳು ವಿಮಾನವನ್ನು ನಿಯಂತ್ರಣ ಮಾಡಿ ಸುರಕ್ಷಿತವಾಗಿ ಸೌದಿ ಅರೇಬಿಯಾದ ತಬೂಕ್‌ನಲ್ಲಿ ಲ್ಯಾಂಡ್ ಮಾಡಿದರು. ಇದರಿಂದ ಎಲ್ಲರೂ ಸುರಕ್ಷಿತವಾಗಿ ಇಳಿದರು. ಕೂಡಲೇ ಸ್ಮಿತ್ ಮಚ್ಚರ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು.
ಕ್ರ್ಯಾಶ್ ಆಕ್ಸ್ ಅಥವಾ ಕೊಡಲಿ ಎಂದು ಕರೆಯಲ್ಪಡುವ ಈ ವಿಶೇಷವಾದ ಆಯುಧವನ್ನು ವಿಮಾನದಲ್ಲಿ ತುರ್ತು ಸಮಯಕ್ಕೆ ಎಂದು ಇರಿಸಲಾಗಿರುತ್ತದೆ. ಈ ಕೊಡಲಿಯು ನಂಬಲಾಗದಷ್ಟು ಬಲಶಾಲಿಯಾಗಿದ್ದು, ಕಷ್ಟದ ಸಮಯದಲ್ಲಿ ವಿಮಾನಗಳನ್ನು ನ್ಯಾವಿಗೇಟ್ ಮಾಡಲು ಮತ್ತು ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ಸಿಬ್ಬಂದಿಗೆ ಸಹಾಯ ಮಾಡಲು ಮೂಲತಃ ವಿನ್ಯಾಸಗೊಳಿಸಲಾಗಿರುತ್ತದೆ. ಯುಎಸ್ ವಾಯುಯಾನ ಉದ್ಯಮದ ವರದಿಗಳ ಪ್ರಕಾರ, ಇದು 1955 ರಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಮಾಣಿತ ಅವಶ್ಯಕತೆ ಆಗಿದೆ ಎನ್ನಲಾಗಿದೆ.
ತುರ್ತು ಬಳಕೆಗಾಗಿ ಕಾಕ್‌ಪಿಟ್‌ನಲ್ಲಿ ಇರಿಸಲಾಗಿದ್ದ ವಸ್ತುವೇ ಕ್ಯಾಪ್ಟನ್ ಮಚ್ಚರ್ ಮೇಲೆ ದಾಳಿ ಮಾಡಲು ಬಳಸಿದ ಆಯುಧವಾಗಿದೆ. ಬಸ್, ರೈಲು ಮತ್ತು ಮೆಟ್ರೋ ಕಿಟಕಿಗಳು ಮತ್ತು ಅಗ್ನಿಶಾಮಕ ಸಿಲಿಂಡರ್‌ಗಳ ಬಳಿ ಸಾಮಾನ್ಯವಾಗಿ ಕಂಡುಬರುವ ಸಣ್ಣ ಸುತ್ತಿಗೆ ಅಥವಾ ಸ್ಲೆಡ್ಜ್ ಹ್ಯಾಮರ್, ಗಾಜನ್ನು ಸುಲಭವಾಗಿ ಒಡೆಯುವುದಕ್ಕೆ ಇಡಲಾಗಿರುತ್ತದೆ. ಇದರರ್ಥ ಸುತ್ತಿಗೆ ಎಷ್ಟು ಶಕ್ತಿಶಾಲಿಯಾಗಿದೆ ಎಂದರೆ ಗಾಜು ಒಡೆಯುತ್ತದೆ. ಮನುಷ್ಯನ ತಲೆಗೆ, ದೇಹಕ್ಕೆ ಇದರ ಪೆಟ್ಟು ಬಿದ್ದರೆ ಸಾವು ಕೂಡ ಸಂಭವಿಸುವ ಸಾಧ್ಯತೆ ಇರುತ್ತದೆ. ಇಂತಹ ಕೊಡಲಿಯಿಂದ ಆರೋಪಿ ದಾಳಿ ಮಾಡಿದ್ದನು. ಆದರೂ ಸ್ಮಿತ್ ಮಚ್ಚರ್ ಬದುಕುಳಿದಿದ್ದಾರೆ.