SOCIAL MEDIA

Newsletter

PARTNER SITES
Select Language Select State

ಕಾಶ್ಮೀರದಲ್ಲಿ ಮತ್ತೆ ಉ*ಗ್ರರ ಅಟ್ಟಹಾಸ..! ಆಪರೇಷನ್ ಸಿಂಧೂರ್ ಬಳಿಕ ಪಾಕ್ ಹೊಸ ತಂತ್ರ

ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ತನ್ನ ಭಯೋತ್ಪಾದನಾ ಕಾರ್ಯತಂತ್ರಕ್ಕೆ ಹೊಸ ರೂಪ ನೀಡುತ್ತಿದ್ದು, ಗಡಿಯಾಚೆಯಿಂದ ಉಗ್ರರನ್ನು ನುಸುಳಿಸುವ ಬದಲು ಸ್ಥಳೀಯ ಯುವಕರನ್ನೇ ಬಳಸಿಕೊಂಡು ಕಣಿವೆಯಲ್ಲಿ ಅಶಾಂತಿ ಸೃಷ್ಟಿಸಲು ಮುಂದಾಗಿದೆ ಎಂಬ ಆತಂಕಕಾರಿ ವರದಿ ಹೊರಬಿದ್ದಿದೆ. ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ದಾಳಿ ಮತ್ತು ಕಿಶ್ತ್ವಾರ್‌ನಲ್ಲಿ ಪೊಲೀಸ್ ಸಿಬ್ಬಂದಿಯ ಮೃತದೇಹಗಳು ಪತ್ತೆಯಾಗಿರುವ ಘಟನೆಗಳು ಈ ಹೊಸ ಸಂಚಿನ ಮುನ್ಸೂಚನೆಯಾಗಿವೆ.. ಈ ಕುರಿತ ರೋಚಕ ಸುದ್ದಿ ಇಲ್ಲಿದೆ..

Written By Krishna NK
Published: Nov 12, 2026, 22:44 IST | Updated: Nov 12, 2026, 22:45 IST
Image Credit: News
Join

ಜಮ್ಮು-ಕಾಶ್ಮೀರ : ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಶುರುವಾಗಿದೆ.. ಭದ್ರತಾ ಪಡೆಗಳನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ.. ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ದಾಳಿ ನಡೆದಿದ್ರೆ, ಕಿಶ್ತ್ವಾರ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯ ಗುಂಡೇಟಿನಿಂದ ಛಿದ್ರಗೊಂಡ ಮೃತದೇಹಗಳು ಪತ್ತೆಯಾಗಿವೆ.. ಈ ಘಟನೆಗಳ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.. ಆದರೆ ಈ ಬಾರಿ ಐಎಸ್‌ಐ ತಂತ್ರ ಬದಲಿಸಿದೆ.. ಗಡಿಯಾಚೆಯಿಂದ ಉಗ್ರರನ್ನು ನುಸುಳಿಸುವ ಬದಲು, ಸ್ಥಳೀಯ ಯುವಕರನ್ನೇ ಉಗ್ರ ಜಾಲಕ್ಕೆ ಸೇರಿಸಿಕೊಳ್ಳುತ್ತಿದೆ.. ಸಣ್ಣಪುಟ್ಟ ದಾಳಿಗಳ ಮೂಲಕ ಭದ್ರತಾ ಪಡೆಗಳ ಗಮನ ಬೇರೆಡೆ ಸೆಳೆದು, ದೊಡ್ಡ ದಾಳಿಗೆ ವೇದಿಕೆ ಸಿದ್ಧಪಡಿಸುತ್ತಿದೆ ಅನ್ನೋ ಆತಂಕ ಎದುರಾಗಿದೆ.. ಹಾಗಾದ್ರೆ ಕಾಶ್ಮೀರದಲ್ಲಿ ಐಎಸ್‌ಐ ರೂಪಿಸಿರುವ ಹೊಸ ಭಯೋತ್ಪಾದನಾ ಜಾಲ ಯಾವುದು..? ಸ್ಥಳೀಯರನ್ನೇ ಉಗ್ರರನ್ನಾಗಿ ಬಳಸಿಕೊಳ್ಳುತ್ತಿರುವುದೇಕೆ..? ಕಣಿವೆಯಲ್ಲಿ ಮತ್ತೊಂದು ದೊಡ್ಡ ದಾಳಿಗೆ ಪಾಕಿಸ್ತಾನ ಸಿದ್ಧತೆ ನಡೆಸುತ್ತಿದೆಯಾ..? ಸಂಪೂರ್ಣ ವರದಿ ಇಲ್ಲಿದೆ..

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುವ ಆತಂಕ ಎದುರಾಗಿದೆ. ಬುಧವಾರ ಕುಲ್ಗಾಮ್ ಜಿಲ್ಲೆಯ ಮಿರ್ ಬಜಾರ್ ಸಮೀಪದ ಅಖ್ರಾನ್‌ನಲ್ಲಿ ಭದ್ರತಾ ತಪಾಸಣಾ ಠಾಣೆಯನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಮೂವರು ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಗಾಯಗೊಂಡಿದ್ದಾರೆ. ಮತ್ತೊಂದೆಡೆ ಕಿಶ್ತ್ವಾರ್ ಜಿಲ್ಲೆಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ ಮೃತದೇಹಗಳು ಗುಂಡೇಟಿನ ಗಾಯಗಳೊಂದಿಗೆ ಪತ್ತೆಯಾಗಿವೆ. ಅವರ ಸೇವಾ ಶಸ್ತ್ರಾಸ್ತ್ರಗಳೂ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಹತ್ಯೆಗಳ ಹಿಂದೆ ಉಗ್ರರ ಕೈವಾಡ ಇರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚಿನ ಘಟನೆಗಳು ಕಣಿವೆಯಲ್ಲಿ ಮತ್ತೆ ಭಯೋತ್ಪಾದಕ ಚಟುವಟಿಕೆಗಳು ತಲೆ ಎತ್ತುತ್ತಿರುವ ಸೂಚನೆ ನೀಡಿವೆ.

ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಸಣ್ಣ ಪ್ರಮಾಣದ ದಾಳಿಗಳನ್ನು ನಿರ್ಲಕ್ಷಿಸುವಂತಿಲ್ಲ ಎನ್ನುತ್ತಾರೆ ಭದ್ರತಾ ವಿಶ್ಲೇಷಕರು. ಉದಯಪುರದ ಉಸಾನಾಸ್ ಫೌಂಡೇಶನ್‌ನ ಸಂಸ್ಥಾಪಕ ಡಾ. ಅಭಿನವ್ ಪಾಂಡ್ಯ ಅವರ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಇನ್ನೂ ಕಾಶ್ಮೀರದಲ್ಲಿ ತನ್ನ ಸಂಪರ್ಕ ಜಾಲವನ್ನು ಸಕ್ರಿಯವಾಗಿಟ್ಟುಕೊಂಡಿದೆ. ಲಷ್ಕರ್-ಎ-ತೊಯ್ಬಾದ ಪರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ಮೂಲಕ ಕಾರ್ಯಾಚರಣೆ ನಡೆಸುತ್ತಿದೆ. ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸುವ ಬದಲು, ಸಣ್ಣಪುಟ್ಟ ದಾಳಿಗಳ ಮೂಲಕ ತನ್ನ ಅಸ್ತಿತ್ವ ಮತ್ತು ಸಾಮರ್ಥ್ಯವನ್ನು ತೋರಿಸುವ ತಂತ್ರ ಅನುಸರಿಸುತ್ತಿದೆ. ಇದರ ಹಿಂದಿನ ಉದ್ದೇಶ ಸ್ಥಳೀಯ ಮಟ್ಟದಲ್ಲಿ ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಭವಿಷ್ಯದಲ್ಲಿ ದೊಡ್ಡ ದಾಳಿಗೆ ಬಲಿಷ್ಠ ಜಾಲ ನಿರ್ಮಿಸುವುದಾಗಿದೆ. ಆರ್ಟಿಕಲ್ 370 ರದ್ದಾದ ಬಳಿಕ ಇಂತಹ ಸಂಘಟನೆಗಳ ಚಟುವಟಿಕೆ ಹೆಚ್ಚಾಗಿದೆ ಎಂಬುದು ಅವರ ವಿಶ್ಲೇಷಣೆ.

ಐಎಸ್‌ಐ ಈಗ ತನ್ನ ಕಾರ್ಯತಂತ್ರವನ್ನೇ ಬದಲಾಯಿಸುತ್ತಿದೆ ಎಂಬ ಅನುಮಾನ ತನಿಖಾ ಸಂಸ್ಥೆಗಳಿಗೆ ಎದುರಾಗಿದೆ. ಪಾಕಿಸ್ತಾನದಿಂದ ಉಗ್ರರನ್ನು ನುಸುಳಿಸುವ ಬದಲು, ಕಾಶ್ಮೀರದ ಸ್ಥಳೀಯ ಯುವಕರನ್ನೇ ಬಳಸಿಕೊಂಡು ದಾಳಿ ನಡೆಸುವ ಪ್ರಯತ್ನ ನಡೆಯುತ್ತಿದೆ. ಇದರಿಂದ ದಾಳಿಯ ಹಿಂದಿನ ಪಾಕಿಸ್ತಾನದ ನಂಟನ್ನು ಪತ್ತೆಹಚ್ಚುವುದು ಕಷ್ಟವಾಗಬಹುದು ಎಂಬುದು ಐಎಸ್‌ಐ ಲೆಕ್ಕಾಚಾರ ಎನ್ನಲಾಗಿದೆ. ಕುಲ್ಗಾಮ್ ದಾಳಿ ತನಿಖೆಯಲ್ಲಿ ಟಿಆರ್‌ಎಫ್‌ನ ಸ್ಥಳೀಯ ಕಮಾಂಡರ್‌ಗಳ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ. 22 ವರ್ಷದ ಮೊಹಮ್ಮದ್ ಲತೀಫ್ ಭಟ್‌ಗಾಗಿ ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. ಇದರ ಜೊತೆಗೆ ಉತ್ತರ ಕಾಶ್ಮೀರದ ಬಾರಾಮುಲ್ಲಾ ನಿವಾಸಿಗಳಾದ ಬಿಲಾಲ್ ಅಹ್ಮದ್ ಮೀರ್, ಮೊಹಮ್ಮದ್ ಉಮರ್ ಮೀರ್ ಮತ್ತು ಅಬಿದ್ ಖಯೂಮ್‌ಗಾಗಿ ಹುಡುಕಾಟ ಮುಂದುವರಿದಿದೆ. ಸ್ಥಳೀಯ ಜಾಲದ ಮೂಲಕವೇ ಭಯೋತ್ಪಾದನೆಯನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಶಂಕೆ ಬಲವಾಗಿದೆ.

ಆರ್ಟಿಕಲ್ 370 ರದ್ದತಿ ಮತ್ತು ಆಪರೇಷನ್ ಸಿಂಧೂರ್ ಬಳಿಕ ಜಮ್ಮು-ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಹಿನ್ನಡೆ ಅನುಭವಿಸುತ್ತಿದೆ ಎಂಬುದು ಭದ್ರತಾ ಅಧಿಕಾರಿಗಳ ಅಭಿಪ್ರಾಯ. ಗಡಿಯಾಚೆಯಿಂದ ಉಗ್ರರನ್ನು ನುಸುಳಿಸುವ ಪ್ರಯತ್ನಗಳಿಗೆ ನಿರ್ಬಂಧ ಎದುರಾಗುತ್ತಿದೆ. ಪಾಕಿಸ್ತಾನದ ಉಗ್ರರ ಉಡಾವಣಾ ನೆಲೆಗಳಲ್ಲಿ ಸುಮಾರು ಸಾವಿರ ಉಗ್ರರು ನುಸುಳುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ. ಆದರೆ ನುಸುಳುವಿಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪಾಕಿಸ್ತಾನ ಈಗ ಸ್ಥಳೀಯ ಬಲಿಷ್ಠ ಪಡೆಯನ್ನು ಕಟ್ಟುವ ತಂತ್ರಕ್ಕೆ ಮುಂದಾಗಿದೆ. ಸ್ಥಳೀಯರ ಮೂಲಕ ದಾಳಿ ನಡೆಸಿದರೆ, ಅದರ ನಂಟು ನೇರವಾಗಿ ಇಸ್ಲಾಮಾಬಾದ್‌ಗೆ ತಲುಪುವುದಿಲ್ಲ ಎಂಬುದು ಐಎಸ್‌ಐ ಲೆಕ್ಕಾಚಾರ ಎನ್ನಲಾಗಿದೆ. ಆರಂಭದಲ್ಲಿ ಕೆಲವೇ ಸಣ್ಣ ದಾಳಿಗಳನ್ನು ನಡೆಸಿ, ನಂತರ ದೊಡ್ಡ ಪ್ರಮಾಣದ ದಾಳಿಗೆ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಸಂಪರ್ಕ ಜಾಲವನ್ನು ಸಿದ್ಧಪಡಿಸುವ ಯೋಜನೆ ರೂಪಿಸಲಾಗಿದೆ ಎಂಬ ಆತಂಕವಿದೆ.

ಐಎಸ್‌ಐ ಸ್ಥಳೀಯ ಮಟ್ಟದಲ್ಲಿ ತನ್ನ ನೆಲೆಯನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳ ಕಾರ್ಯತಂತ್ರದಲ್ಲೂ ಬದಲಾವಣೆ ಅಗತ್ಯವಿದೆ ಎಂದು ಡಾ. ಅಭಿನವ್ ಪಾಂಡ್ಯ ಅಭಿಪ್ರಾಯಪಟ್ಟಿದ್ದಾರೆ. ಕೇವಲ ತಾಂತ್ರಿಕ ಗುಪ್ತಚರ ಮಾಹಿತಿಯನ್ನೇ ಅವಲಂಬಿಸುವುದರಿಂದ ಈ ಜಾಲವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಮಾನವ ಗುಪ್ತಚರ ಮಾಹಿತಿ ಸಂಗ್ರಹಕ್ಕೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ. ಸ್ಥಳೀಯ ಸಂಪರ್ಕಗಳು, ಅನುಮಾನಾಸ್ಪದ ಚಟುವಟಿಕೆಗಳು ಮತ್ತು ಉಗ್ರರ ಜಾಲಕ್ಕೆ ನೆರವು ನೀಡುವವರ ಬಗ್ಗೆ ನಿಖರ ಮಾಹಿತಿ ಸಂಗ್ರಹಿಸುವುದು ಮುಖ್ಯವಾಗಿದೆ. ತಾಂತ್ರಿಕ ಗುಪ್ತಚರ ಮತ್ತು ಮಾನವ ಗುಪ್ತಚರ ವ್ಯವಸ್ಥೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಐಎಸ್‌ಐನ ಹೊಸ ತಂತ್ರವನ್ನು ವಿಫಲಗೊಳಿಸಲು ಸಾಧ್ಯ. ಕಾಶ್ಮೀರದಲ್ಲಿ ಉಗ್ರರ ನೆಲಮಟ್ಟದ ಜಾಲ ಬಲಗೊಳ್ಳುವ ಮೊದಲೇ ಅದನ್ನು ಪತ್ತೆಹಚ್ಚಿ ನಿಷ್ಕ್ರಿಯಗೊಳಿಸುವುದು ಭದ್ರತಾ ಪಡೆಗಳ ಮುಂದಿರುವ ಸವಾಲಾಗಿದೆ.

ಒಟ್ಟಿನಲ್ಲಿ, ಜಮ್ಮು-ಕಾಶ್ಮೀರದಲ್ಲಿ ಐಎಸ್‌ಐ ತನ್ನ ಭಯೋತ್ಪಾದನಾ ಕಾರ್ಯತಂತ್ರವನ್ನೇ ಬದಲಾಯಿಸುತ್ತಿರುವ ಆತಂಕ ಎದುರಾಗಿದೆ. ಗಡಿಯಾಚೆಯಿಂದ ಉಗ್ರರನ್ನು ಕಳುಹಿಸುವ ಬದಲು ಸ್ಥಳೀಯ ಯುವಕರನ್ನು ಬಳಸಿಕೊಂಡು ದಾಳಿ ನಡೆಸುವ ಮೂಲಕ ತನ್ನ ಪಾತ್ರವನ್ನು ಮರೆಮಾಚಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಅನುಮಾನವಿದೆ. ಸಣ್ಣಪುಟ್ಟ ದಾಳಿಗಳ ಮೂಲಕ ಭದ್ರತಾ ವ್ಯವಸ್ಥೆಯನ್ನು ಪರೀಕ್ಷಿಸಿ, ಸ್ಥಳೀಯ ಮಟ್ಟದಲ್ಲಿ ಬಲಿಷ್ಠ ಜಾಲ ಕಟ್ಟುವ ಸಂಚು ನಡೆಯುತ್ತಿದೆ ಎನ್ನಲಾಗಿದೆ. ಹೀಗಾಗಿ ಕುಲ್ಗಾಮ್ ಮತ್ತು ಕಿಶ್ತ್ವಾರ್ ಘಟನೆಗಳನ್ನು ಪ್ರತ್ಯೇಕ ಘಟನೆಗಳೆಂದು ಪರಿಗಣಿಸುವಂತಿಲ್ಲ. ತಾಂತ್ರಿಕ ಮಾಹಿತಿಯ ಜೊತೆಗೆ ಸ್ಥಳೀಯ ಗುಪ್ತಚರ ಜಾಲವನ್ನೂ ಬಲಪಡಿಸುವ ಅಗತ್ಯವಿದೆ. ಈಗ ಭಾರತೀಯ ಭದ್ರತಾ ಪಡೆಗಳ ಮುಂದಿರುವ ಸವಾಲು ಒಂದೇ.. ಐಎಸ್‌ಐ ರೂಪಿಸುತ್ತಿರುವ ಈ ಹೊಸ ಭಯೋತ್ಪಾದನಾ ಜಾಲವನ್ನು ಬೇರುಸಹಿತ ಕಿತ್ತೊಗೆಯುವುದು.. ಇಲ್ಲವಾದರೆ ಕಣಿವೆಯಲ್ಲಿ ಮತ್ತೊಂದು ಭೀಕರ ದಾಳಿಯ ಆತಂಕ ಎದುರಾಗಬಹುದು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES