ಮೀರತ್ "ಬ್ಲೂ ಡ್ರಮ್" ಮರ್ಡರ್ ಕೇಸ್: ಪತ್ನಿ, ಪ್ರಿಯಕರನಿಗೆ ಗಲ್ಲು ಶಿಕ್ಷೆ!
2025ರ ಮಾರ್ಚ್ 4ರಂದು ಮೀರತ್ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಹ*ತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು.
Meerut Blue Drum Murder Case: ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಉತ್ತರ ಪ್ರದೇಶದ ಮೀರತ್ನ ‘ಬ್ಲೂ ಡ್ರಮ್’ ಕೊ*ಲೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಅವರನ್ನ ಬರ್ಬರವಾಗಿ ಹ*ತ್ಯೆ ಮಾಡಿ, ಮೃತದೇಹದ ತುಂಡುಗಳನ್ನ ನೀಲಿ ಬಣ್ಣದ ಡ್ರಮ್ನಲ್ಲಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದ ಪ್ರಕರಣದಲ್ಲಿ ಪತ್ನಿ ಮುಸ್ಕಾನ್ ರಸ್ತೋಗಿ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾಗೆ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಬುಧವಾರ ನಡೆದ ನ್ಯಾಯಾಲಯದ ಕಲಾಪದಲ್ಲಿ ಇಬ್ಬರೂ ಅಪರಾಧಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು. ಆರೋಪಿಗಳ ಕುಟುಂಬ ಸದಸ್ಯರು ನ್ಯಾಯಾಲಯದ ಕೊಠಡಿಯಲ್ಲಿ ಉಪಸ್ಥಿತರಿದ್ದರು. ಪ್ರಕರಣದ ಭೀಕರತೆ ಹಾಗೂ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯಾಧಾರಗಳನ್ನ ಪರಿಗಣಿಸಿದ ನ್ಯಾಯಾಲಯ ಕಠಿಣ ಶಿಕ್ಷೆ ಪ್ರಕಟಿಸಿದೆ.
13 ತಿಂಗಳ ವಿಚಾರಣೆ, 126 ಕಲಾಪಗಳ ಬಳಿಕ ತೀರ್ಪು
ಈ ಪ್ರಕರಣದ ವಿಚಾರಣೆ ಸುಮಾರು 13 ತಿಂಗಳುಗಳ ಕಾಲ ನಡೆದಿದ್ದು, ಒಟ್ಟು 126 ವಿಚಾರಣೆಗಳ ಬಳಿಕ ಮಹತ್ವದ ತೀರ್ಪು ಹೊರಬಿದ್ದಿದೆ. ಸೆಪ್ಟೆಂಬರ್ 30ರಂದು ನ್ಯಾಯಾಲಯ ಮುಸ್ಕಾನ್ ರಸ್ತೋಗಿ ಮತ್ತು ಸಾಹಿಲ್ ಶುಕ್ಲಾನನ್ನ ದೋಷಿಗಳು ಎಂದು ಘೋಷಿಸಿತ್ತು. ಬಳಿಕ ಶಿಕ್ಷೆಯ ಪ್ರಮಾಣ ನಿರ್ಧರಿಸಲು ವಾದ ಮಂಡನೆಗೆ ಕಾಲಾವಕಾಶ ನೀಡಲಾಗಿತ್ತು. ಪ್ರಾಸಿಕ್ಯೂಷನ್ ಪರ ವಕೀಲರು ಕೃತ್ಯದ ಕ್ರೌರ್ಯವನ್ನ ನ್ಯಾಯಾಲಯದ ಗಮನಕ್ಕೆ ತಂದು, ಆರೋಪಿಗಳಿಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದರು. ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳು ಹಾಗೂ ಅಪರಾಧದ ಸ್ವರೂಪವನ್ನ ಆಧರಿಸಿ ನ್ಯಾಯಾಲಯ ಮರಣದಂಡನೆ ಶಿಕ್ಷೆ ಪ್ರಕಟಿಸಿದೆ.
ಏನಿದು ಮೀರತ್ ಬ್ಲೂ ಡ್ರಮ್ ಕೊ*ಲೆ ಪ್ರಕರಣ?
2025ರ ಮಾರ್ಚ್ 4ರಂದು ಮೀರತ್ನಲ್ಲಿ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಅವರನ್ನ ಅವರ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಹ*ತ್ಯೆ ಮಾಡಿರುವ ಆರೋಪ ಕೇಳಿಬಂದಿತ್ತು. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನ ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಹಾಕಿ ಸಿಮೆಂಟ್ ಸುರಿದು ಮುಚ್ಚಿಟ್ಟಿದ್ದರು ಎಂಬುದು ಪ್ರಕರಣದ ಪ್ರಮುಖ ಆರೋಪವಾಗಿತ್ತು.
ಮೀರತ್ನ ಬ್ರಹ್ಮಪುರಿ ಪ್ರದೇಶದಲ್ಲಿರುವ ದಂಪತಿಯ ಮನೆಯಲ್ಲಿ ನೀಲಿ ಡ್ರಮ್ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಪ್ರಕರಣದ ಭೀಕರ ವಿವರಗಳು ಬಹಿರಂಗವಾಗುತ್ತಿದ್ದಂತೆ ದೇಶದಾದ್ಯಂತ ತೀವ್ರ ಚರ್ಚೆ ನಡೆದಿತ್ತು. ಪೊಲೀಸರು ತನಿಖೆ ನಡೆಸಿ ಮುಸ್ಕಾನ್ ಮತ್ತು ಸಾಹಿಲ್ನನ್ನ ಬಂಧಿಸಿದ್ದರು. ಮೃತದೇಹವನ್ನ ಬಚ್ಚಿಡಲು ಬಳಸಿದ್ದ ನೀಲಿ ಡ್ರಮ್ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದರಿಂದ ಈ ಹ*ತ್ಯೆ ಪ್ರಕರಣಕ್ಕೆ ‘ಬ್ಲೂ ಡ್ರಮ್ ಮರ್ಡರ್ ಕೇಸ್’ ಎಂಬ ಹೆಸರು ಪ್ರಸಿದ್ಧಿಯಾಯಿತು.
22 ಸಾಕ್ಷಿಗಳ ವಿಚಾರಣೆ, ಹಲವು ಸಾಕ್ಷ್ಯಗಳ ಪರಿಶೀಲನೆ
ಪ್ರಕರಣದ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ಒಟ್ಟು 22 ಪ್ರಮುಖ ಸಾಕ್ಷಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಕೃತ್ಯಕ್ಕೆ ಸಂಬಂಧಿಸಿದ ನೀಲಿ ಡ್ರಮ್, ಸಿಮೆಂಟ್, ಚಾಕು ಹಾಗೂ ಪಾತ್ರೆಗಳನ್ನ ಖರೀದಿಸಿದ್ದ ಅಂಗಡಿಗಳ ಮಾಲೀಕರ ಹೇಳಿಕೆಗಳನ್ನ ದಾಖಲಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ಆರೋಪಿಗಳು ತಂಗಿದ್ದ ಹೋಟೆಲ್ಗಳ ವ್ಯವಸ್ಥಾಪಕರು, ಸಂಬಂಧಿತ ದಾಖಲೆಗಳು ಹಾಗೂ ಆರೋಪಿಗಳನ್ನ ವಿವಿಧ ಸ್ಥಳಗಳಿಗೆ ಕರೆದೊಯ್ದಿದ್ದ ಕ್ಯಾಬ್ ಚಾಲಕರ ಹೇಳಿಕೆಗಳನ್ನೂ ಪರಿಶೀಲಿಸಲಾಗಿತ್ತು. ಈ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಷನ್ ನ್ಯಾಯಾಲಯದ ಮುಂದೆ ಮಂಡಿಸಿತ್ತು. ಪ್ರಕರಣದ ವಿಚಾರಣೆ ವೇಳೆ ಸಂಗ್ರಹಿಸಲಾದ ಸಾಕ್ಷ್ಯಗಳು ಮತ್ತು ಆರೋಪಗಳ ಸ್ವರೂಪ ಶಿಕ್ಷೆಯ ಪ್ರಮಾಣ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಸೌರಭ್ ಕುಟುಂಬಕ್ಕೆ ನ್ಯಾಯ ಸಿಕ್ಕಿತೇ?
ಮೃತ ಸೌರಭ್ ರಜಪೂತ್ ಅವರ ತಾಯಿ ರೇಣು ದೇವಿ ಮತ್ತು ಸಹೋದರ ರಾಹುಲ್ ಆರಂಭದಿಂದಲೂ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದರು. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದರು. ಇದೀಗ ಜಿಲ್ಲಾ ನ್ಯಾಯಾಲಯ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿರುವುದರಿಂದ ಸಂತ್ರಸ್ತ ಕುಟುಂಬಕ್ಕೆ ಮಹತ್ವದ ಕಾನೂನು ತೀರ್ಪು ದೊರೆತಿದೆ. ದೇಶದಾದ್ಯಂತ ಗಮನ ಸೆಳೆದಿದ್ದ ಮೀರತ್ ಬ್ಲೂ ಡ್ರಮ್ ಕೊ*ಲೆ ಪ್ರಕರಣದ ಈ ಮಹತ್ವದ ತೀರ್ಪು ಮತ್ತೊಮ್ಮೆ ಕ್ರೂರ ಅಪರಾಧಗಳು ಮತ್ತು ನ್ಯಾಯಾಂಗ ಪ್ರಕ್ರಿಯೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.