Manipur Liquor Tragedy: ಕಲುಷಿತ ಮದ್ಯ ಸೇವನೆಯಿಂದ ಮಣಿಪುರದಲ್ಲಿ ಭೀಕರ ದುರಂತ ಸಂಭವಿಸಿದೆ. ರಾಜ್ಯದ ಚಾಂಡೆಲ್ ಜಿಲ್ಲೆಯಲ್ಲಿ ಮದ್ಯ ಸೇವಿಸಿದ ಬಳಿಕ ಹಲವರು ಅಸ್ವಸ್ಥರಾಗಿದ್ದು, ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ. 300ಕ್ಕೂ ಹೆಚ್ಚು ಜನರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ಯದಲ್ಲಿದ್ದಿರಬಹುದಾದ ಮೆಥನಾಲ್ ವಿಷಕಾರಿ ಅಂಶದಿಂದ ಈ ಘಟನೆ ಸಂಭವಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ನವೆಂಬರ್ 18ರಿಂದ ಸಾ*ವುಗಳು ವರದಿಯಾಗುತ್ತಿದ್ದು, ಹೆಚ್ಚಿನ ಬಾಧಿತರು ಚಕ್ಪಿಕರಾಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ.
ಮದ್ಯ ಸೇವಿಸಿದ ಬಳಿಕ ಹಲವರಿಗೆ ಆರೋಗ್ಯ ಸಮಸ್ಯೆ
ಚಾಂಡೆಲ್ ಜಿಲ್ಲೆಯ ಚಕ್ಪಿಕರಾಂಗ್ ಮತ್ತು ನೆರೆಯ ಪ್ರದೇಶಗಳ ನಿವಾಸಿಗಳು ಮದ್ಯ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಕೆಲವರು ತಲೆಸುತ್ತು, ಹೊಟ್ಟೆನೋವು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಸ್ವಸ್ಥರಾದವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಇಂಫಾಲ್‌ನ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಶಿಜಾ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಚೇತನ್ ಕೆ. ಅವರು ತಿಳಿಸಿರುವಂತೆ, ಆಸ್ಪತ್ರೆಗೆ ದಾಖಲಾಗಿರುವ ಹಲವರು ತಲೆಸುತ್ತು, ಹೊಟ್ಟೆನೋವು ಸೇರಿದಂತೆ ವಿವಿಧ ಲಕ್ಷಣಗಳನ್ನ ಹೊಂದಿದ್ದಾರೆ. ಕೆಲವರಿಗೆ ಹಿಮೋಡಯಾಲಿಸಿಸ್ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಮೆಥನಾಲ್ ವಿಷಬಾಧೆಯ ಶಂಕೆಯ ಹಿನ್ನೆಲೆಯಲ್ಲಿ ವೈದ್ಯರು ರೋಗಿಗಳ ಆರೋಗ್ಯ ಸ್ಥಿತಿಯನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ.
ಇಂಫಾಲ್‌ನ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಅಸ್ವಸ್ಥಗೊಂಡವರನ್ನ ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ (JNIMS), ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (RIMS), ಶಿಜಾ ಆಸ್ಪತ್ರೆ ಮತ್ತು ಬಬಿನಾ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಅವರು ಶುಕ್ರವಾರ ಶಿಜಾ ಮತ್ತು ಬಬಿನಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಶಿಜಾ ಆಸ್ಪತ್ರೆಯಲ್ಲಿ 140ಕ್ಕೂ ಹೆಚ್ಚು ಮಂದಿ ಹಾಗೂ ಬಬಿನಾ ಆಸ್ಪತ್ರೆಯಲ್ಲಿ 41ಕ್ಕೂ ಹೆಚ್ಚು ಮಂದಿ ದಾಖಲಾಗಿರುವುದಾಗಿ ಅವರು ಮಾಹಿತಿ ನೀಡಿದ್ದರು. ಕಳೆದ 48 ಗಂಟೆಗಳಲ್ಲಿ ಸಾ*ವಿನ ಸಂಖ್ಯೆ 15ಕ್ಕೆ ತಲುಪಿದೆ ಎಂದು ತಿಳಿಸಿದ್ದರು. ಶಿಜಾ ಆಸ್ಪತ್ರೆಯ ಮಾಹಿತಿ ಪ್ರಕಾರ, ಮೆಥನಾಲ್ ವಿಷಬಾಧೆ ಶಂಕೆಯೊಂದಿಗೆ 312ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸಾ ಪ್ರಕ್ರಿಯೆ ಮುಂದುವರಿದಿದೆ.
ನೆರೆಯ ಜಿಲ್ಲೆಯಿಂದ ಮದ್ಯ ಖರೀದಿ ಮಾಡಿರುವ ಶಂಕೆ
ಪ್ರಾಥಮಿಕ ವರದಿಗಳ ಪ್ರಕಾರ, ಕಲುಷಿತವಾಗಿರಬಹುದಾದ ಮದ್ಯವನ್ನ ನೆರೆಯ ಕಾಕ್ಚಿಂಗ್ ಜಿಲ್ಲೆಯ ಸುಗ್ನು ಪ್ರದೇಶದಿಂದ ಖರೀದಿಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಮದ್ಯದ ಮೂಲ ಮತ್ತು ಅದರಲ್ಲಿರುವ ವಿಷಕಾರಿ ಅಂಶಗಳ ಕುರಿತು ತನಿಖೆ ನಡೆಯುತ್ತಿದೆ. ಘಟನೆಯಿಂದ ಚಾಂಡೆಲ್ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಸ್ವಸ್ಥಗೊಂಡವರನ್ನ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯ ಮಟ್ಟದಲ್ಲಿಯೂ ವ್ಯವಸ್ಥೆ ಮಾಡಲಾಗುತ್ತಿದೆ. ಚಾಂಡೆಲ್ ಕ್ಷೇತ್ರದ ಶಾಸಕಿ ಎಸ್.ಎಸ್.ಒಲಿಶ್ ಅವರು ಬಾಧಿತ ಪ್ರದೇಶಗಳಿಂದ ಹೆಚ್ಚಿನ ರೋಗಿಗಳನ್ನ ಇಂಫಾಲ್‌ಗೆ ಸಾಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದು, ಪರಿಸ್ಥಿತಿಯನ್ನ ನಿಭಾಯಿಸುವ ಭರವಸೆ ನೀಡಿದ್ದಾರೆ ಎಂದೂ ಹೇಳಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ, ತನಿಖೆಗೆ ಆದೇಶ
ಘಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯುಮ್ನಾಮ್ ಖೇಮಚಂದ್ ಸಿಂಗ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ವೈದ್ಯರು ಮತ್ತು ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಅಗತ್ಯ ನೆರವು ಒದಗಿಸುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದಾರೆ. ಚಾಂಡೆಲ್ ಜಿಲ್ಲೆಯಲ್ಲಿ ವೈದ್ಯಕೀಯ ಸೇವೆಗಳನ್ನ ಬಲಪಡಿಸುವ ಉದ್ದೇಶದಿಂದ ಸಾಮಾನ್ಯ ವೈದ್ಯಕೀಯ ತಜ್ಞರ ನೇತೃತ್ವದ ವೈದ್ಯಕೀಯ ತಂಡವನ್ನ ಅಗತ್ಯ ಔಷಧಗಳೊಂದಿಗೆ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಘಟನೆಯ ಕುರಿತು ಸರ್ಕಾರ ತನಿಖೆ ನಡೆಸಲಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಮುಂದುವರಿದ ತನಿಖೆ
ಮಣಿಪುರದ ಈ ದುರಂತಕ್ಕೆ ಮೆಥನಾಲ್ ವಿಷಬಾಧೆ ಕಾರಣವಾಗಿರಬಹುದು ಎಂಬ ಶಂಕೆ ಇದ್ದರೂ, ನಿಖರ ಕಾರಣವನ್ನ ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಇನ್ನೂ ದೃಢಪಡಿಸಬೇಕಿದೆ. ಮದ್ಯದ ಮೂಲ, ಅದರ ಗುಣಮಟ್ಟ ಮತ್ತು ಜನರು ಅಸ್ವಸ್ಥರಾಗಲು ಕಾರಣವಾದ ಅಂಶಗಳ ಕುರಿತು ತನಿಖೆ ಮುಂದುವರಿದಿದೆ. ಒಟ್ನಲ್ಲಿ ಕಲುಷಿತ ಮದ್ಯ ಸೇವನೆಯ ಶಂಕಿತ ಪ್ರಕರಣದಲ್ಲಿ 15 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳ ಆರೋಗ್ಯ ಸ್ಥಿತಿಯ ಮೇಲೆ ವೈದ್ಯರು ನಿಗಾ ಇರಿಸಿದ್ದು, ಘಟನೆಗೆ ಕಾರಣರಾದವರನ್ನ ಪತ್ತೆಹಚ್ಚಲು ಸರ್ಕಾರ ತನಿಖೆಗೆ ಮುಂದಾಗಿದೆ.