ಅಸಲಿ ಠಾಣೆ ಪಕ್ಕದಲ್ಲೇ ನಕಲಿ ಪೊಲೀಸ್ ಸ್ಟೇಷನ್: 8 ತಿಂಗಳು ಪೊಲೀಸರನ್ನೇ ಯಾಮಾರಿಸಿದ ಖತರ್ನಾಕ್ ಗ್ಯಾಂಗ್!
ಬಿಹಾರದ ಬಂಕಾ (Banka) ಜಿಲ್ಲೆಯ ಹೋಟೆಲ್ ಒಂದರಲ್ಲಿ ಈ ವಂಚಕರ ತಂಡ ನಕಲಿ ಪೊಲೀಸ್ ಠಾಣೆಯನ್ನ ಸ್ಥಾಪಿಸಿತ್ತು. ಕಳೆದ ಎಂಟು ತಿಂಗಳಿನಿಂದ ಇದೇ ಸ್ಥಳದಲ್ಲಿ ಯಾವುದೇ ಆತಂಕವಿಲ್ಲದೆ ತಮ್ಮ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು. ಸಾಮಾನ್ಯ ಪೊಲೀಸ್ ಠಾಣೆಯಂತೆ ಕಾಣುವ ರೀತಿಯಲ್ಲಿ ಕಚೇರಿಯನ್ನ ಸಿದ್ಧಪಡಿಸಿಕೊಂಡಿದ್ದ ತಂಡ, ಹೊರಗಿನವರಿಗೆ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.
Fake Police Station: ಸಾಮಾನ್ಯವಾಗಿ ಮನೆ, ಅಂಗಡಿ ಅಥವಾ ಹಣಕಾಸು ಸಂಸ್ಥೆಗಳನ್ನ ಗುರಿಯಾಗಿಸಿಕೊಂಡು ಕಳ್ಳತನ ಮತ್ತು ದರೋಡೆ ನಡೆಸುವ ಘಟನೆಗಳನ್ನ ನೋಡಿರುತ್ತೇವೆ. ಆದರೆ ಬಿಹಾರದಲ್ಲಿ ಕಳ್ಳರ ತಂಡವೊಂದು ಜನರನ್ನ ವಂಚಿಸಲು ನಕಲಿ ಪೊಲೀಸ್ ಠಾಣೆಯನ್ನೇ ತೆರೆದಿದ್ದ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ. ಬರೋಬ್ಬರಿ ಎಂಟು ತಿಂಗಳ ಕಾಲ ಯಾರಿಗೂ ಅನುಮಾನ ಬಾರದಂತೆ ಪೊಲೀಸ್ ಠಾಣೆಯನ್ನ ನಿರ್ವಹಿಸಿದ ಈ ಗ್ಯಾಂಗ್, ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದರ ಜೊತೆಗೆ ಸರ್ಕಾರಿ ಉದ್ಯೋಗದ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ವಂಚಿಸಿದೆ ಎಂದು ವರದಿಯಾಗಿದೆ.
ಹೋಟೆಲ್‌ನಲ್ಲೇ ಕಾರ್ಯಾರಂಭ ಮಾಡಿದ ನಕಲಿ ಠಾಣೆ!
ಬಿಹಾರದ ಬಂಕಾ (Banka) ಜಿಲ್ಲೆಯ ಹೋಟೆಲ್ ಒಂದರಲ್ಲಿ ಈ ವಂಚಕರ ತಂಡ ನಕಲಿ ಪೊಲೀಸ್ ಠಾಣೆಯನ್ನ ಸ್ಥಾಪಿಸಿತ್ತು. ಕಳೆದ ಎಂಟು ತಿಂಗಳಿನಿಂದ ಇದೇ ಸ್ಥಳದಲ್ಲಿ ಯಾವುದೇ ಆತಂಕವಿಲ್ಲದೆ ತಮ್ಮ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು. ಸಾಮಾನ್ಯ ಪೊಲೀಸ್ ಠಾಣೆಯಂತೆ ಕಾಣುವ ರೀತಿಯಲ್ಲಿ ಕಚೇರಿಯನ್ನ ಸಿದ್ಧಪಡಿಸಿಕೊಂಡಿದ್ದ ತಂಡ, ಹೊರಗಿನವರಿಗೆ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿತ್ತು.
ಈ ಪ್ರಕರಣದಲ್ಲಿ ಗಮನ ಸೆಳೆಯುವ ಸಂಗತಿಯೆಂದರೆ, ಕೇವಲ ಪೊಲೀಸ್ ವೇಷ ಧರಿಸಿದ ಒಂದೆರಡು ವ್ಯಕ್ತಿಗಳಷ್ಟೇ ಈ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ಬದಲಿಗೆ ಪೊಲೀಸ್ ಇಲಾಖೆಯಲ್ಲಿರುವ ಹುದ್ದೆಗಳನ್ನೇ ಅನುಕರಿಸುವ ಮೂಲಕ ಸಂಪೂರ್ಣ ತಂಡವನ್ನೇ ರೂಪಿಸಿಕೊಂಡಿದ್ದರು. ಡಿಎಸ್‌ಪಿ (DSP), ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ಗಳ ಪಾತ್ರದಲ್ಲಿ ಪ್ರತ್ಯೇಕ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿದ್ದರು. ಹೀಗಾಗಿ ಅಲ್ಲಿಗೆ ಬರುವವರಿಗೆ ಅದು ನಿಜವಾದ ಪೊಲೀಸ್ ಠಾಣೆಯೇ ಎಂಬ ಭಾವನೆ ಮೂಡುವಂತೆ ಮಾಡಿದ್ದರು.
ಖಾಕಿ ಸಮವಸ್ತ್ರದಿಂದ ಕಚೇರಿವರೆಗೆ ಎಲ್ಲವೂ ನಕಲಿ!
ಅಸಲಿ ಪೊಲೀಸ್ ಠಾಣೆಯಲ್ಲಿ ಕಂಡುಬರುವ ಹಲವು ವ್ಯವಸ್ಥೆಗಳನ್ನ ಈ ಗ್ಯಾಂಗ್ ತನ್ನ ನಕಲಿ ಕಚೇರಿಯಲ್ಲೂ ರೂಪಿಸಿಕೊಂಡಿತ್ತು. ಖಾಕಿ ಸಮವಸ್ತ್ರ, ಪೊಲೀಸ್ ಅಧಿಕಾರಿಗಳಿಗೆ ಪ್ರತ್ಯೇಕ ಕುರ್ಚಿಗಳು, ಕಚೇರಿ ವ್ಯವಸ್ಥೆ ಹಾಗೂ ಸಾರ್ವಜನಿಕರಿಂದ ದೂರುಗಳನ್ನ ಸ್ವೀಕರಿಸುವ ಸೌಲಭ್ಯವನ್ನೂ ಕಲ್ಪಿಸಲಾಗಿತ್ತು. ನೋಡಲು ಪೊಲೀಸ್ ಇಲಾಖೆಯ ಅಧಿಕೃತ ಕಚೇರಿಯಂತೆಯೇ ಭಾಸವಾಗುವಂತೆ ಎಲ್ಲವನ್ನೂ ಸಿದ್ಧಪಡಿಸಿದ್ದರು. ಠಾಣೆಗೆ ಬರುವ ಜನರೊಂದಿಗೆ ಪೊಲೀಸ್ ಸಿಬ್ಬಂದಿಯ ರೀತಿಯಲ್ಲೇ ವರ್ತಿಸುತ್ತಿದ್ದರು.
ಹೀಗಾಗಿ ಈ ಕಚೇರಿಯ ಅಸಲಿಯತ್ತಿನ ಬಗ್ಗೆ ಸಾರ್ವಜನಿಕರಿಗೆ ಅನುಮಾನ ಮೂಡದಂತೆ ನೋಡಿಕೊಂಡಿದ್ದರು. ಆದರೆ ಇಷ್ಟೆಲ್ಲಾ ವ್ಯವಸ್ಥೆ ರೂಪಿಸಿಕೊಂಡಿದ್ದರ ಹಿಂದೆ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶ ಇರಲಿಲ್ಲ. ಬದಲಾಗಿ ಪೊಲೀಸ್ ಠಾಣೆಯ ಹೆಸರಿನಲ್ಲಿ ಅಮಾಯಕ ಜನರನ್ನ ಗುರಿಯಾಗಿಸಿಕೊಂಡು ಹಣ ಸಂಪಾದಿಸುವುದೇ ಈ ತಂಡದ ಪ್ರಮುಖ ಉದ್ದೇಶವಾಗಿತ್ತು.
ಎಫ್‌ಐಆರ್ ದಾಖಲಿಸುವ ಹೆಸರಿನಲ್ಲಿ ಹಣ ವಸೂಲಿ
ತಮ್ಮ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲು ಹಾಗೂ ದೂರುಗಳನ್ನ ದಾಖಲಿಸಲು ಬರುವ ಸಾರ್ವಜನಿಕರನ್ನ ಈ ವಂಚಕರು ಸುಲಿಗೆ ಮಾಡುತ್ತಿದ್ದರು. ಪೊಲೀಸ್ ಠಾಣೆಗೆ ದೂರು ನೀಡಲು ಆಗಮಿಸುವವರಿಂದ ಎಫ್‌ಐಆರ್ (FIR) ದಾಖಲಿಸುವುದಾಗಿ ಹೇಳಿ ಹಣ ಪಡೆಯುತ್ತಿದ್ದರು. ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿ ಜನರಿಂದ ಹಣ ವಸೂಲಿ ಮಾಡುವುದು ಇವರ ವಂಚನೆಯ ಪ್ರಮುಖ ವಿಧಾನವಾಗಿತ್ತು.
ಇದಷ್ಟೇ ಅಲ್ಲದೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಲವರಿಗೆ ಆಮಿಷವೊಡ್ಡಿದ್ದರು. ಪೊಲೀಸ್ ಅಧಿಕಾರಿಗಳಂತೆ ಗುರುತಿಸಿಕೊಂಡು ವಿಶ್ವಾಸ ಗಳಿಸಿದ ಬಳಿಕ ಉದ್ಯೋಗದ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದರು. ಉದ್ಯೋಗದ ನಿರೀಕ್ಷೆಯಲ್ಲಿದ್ದ ಹಲವರು ಈ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡಿದ್ದರು.
ಅಸಲಿ ಪೊಲೀಸ್ ಠಾಣೆಯಿಂದ ಕೇವಲ 500 ಮೀಟರ್ ದೂರ!
ಈ ಪ್ರಕರಣದಲ್ಲಿನ ಮತ್ತೊಂದು ಅಚ್ಚರಿಯ ಅಂಶವೆಂದರೆ, ನಕಲಿ ಪೊಲೀಸ್ ಠಾಣೆ ಕಾರ್ಯನಿರ್ವಹಿಸುತ್ತಿದ್ದ ಸ್ಥಳವು ನಿಜವಾದ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ನಿವಾಸದಿಂದ ಕೇವಲ 500 ಮೀಟರ್ ಅಂತರದಲ್ಲಿತ್ತು. ಅಂದರೆ ಪೊಲೀಸ್ ಇಲಾಖೆಯ ಪ್ರಮುಖ ಕಚೇರಿಗಳ ಸಮೀಪದಲ್ಲೇ ಈ ವಂಚಕರ ತಂಡ ಎಂಟು ತಿಂಗಳ ಕಾಲ ತನ್ನ ಚಟುವಟಿಕೆಗಳನ್ನ ನಡೆಸಿಕೊಂಡು ಬಂದಿತ್ತು.
ಕೊನೆಗೆ ಅಸಲಿ ಪೊಲೀಸರಿಗೆ ಈ ನಕಲಿ ಠಾಣೆಯ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿದೆ. ಬಳಿಕ ಈ ಕುರಿತು ತನಿಖೆ ನಡೆಸಿದಾಗ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ಅಸಲಿ ಸ್ವರೂಪ ಬಯಲಾಗಿದೆ. ಪೊಲೀಸ್ ಅಧಿಕಾರಿಗಳ ವೇಷ ಧರಿಸಿ ಜನರನ್ನ ವಂಚಿಸುತ್ತಿದ್ದ ತಂಡದ ಕೃತ್ಯಗಳು ತನಿಖೆಯಿಂದ ಬೆಳಕಿಗೆ ಬಂದಿವೆ.
ಒಟ್ನಲ್ಲಿ ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡು ಎಂಟು ತಿಂಗಳ ಕಾಲ ಸಾರ್ವಜನಿಕರನ್ನ ವಂಚಿಸಿದ ಈ ಘಟನೆ ಬಿಹಾರದಲ್ಲಿ ಅಚ್ಚರಿ ಮೂಡಿಸಿದೆ. ಅಸಲಿ ಪೊಲೀಸ್ ಠಾಣೆ ಮತ್ತು ಎಸ್‌ಪಿ ನಿವಾಸದ ಸಮೀಪದಲ್ಲೇ ನಕಲಿ ಠಾಣೆ ಕಾರ್ಯನಿರ್ವಹಿಸುತ್ತಿದ್ದ ವಿಚಾರ ಈ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಚರ್ಚೆ ಕೂಡ ನಡೆಯುತ್ತಿದೆ.