ಧ್ರುವ್ ರಾಠಿ ಕಿಡ್ನಾಪ್..! ಮನೆಗೆ ನುಗ್ಗಿ ತಾಯಿಯನ್ನು ದೂಡಿ ಅಪಹರಣ ಮಾಡಿದ್ರು ಎಂದ ಯೂಟ್ಯೂಬರ್
ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಅವರನ್ನು ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೂ ಮುನ್ನ ದೆಹಲಿ ಪೊಲೀಸರು ನಿವಾಸದಿಂದ ಬಲವಂತವಾಗಿ ವಶಕ್ಕೆ ಪಡೆದು, ಶನಿವಾರ ತಡರಾತ್ರಿ ಬಿಡುಗಡೆಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಧ್ರುವ್ ನೀಡಿರುವ ಹೇಳಿಕೆ ಒಂದು ಸಂಚಲನ ಸೃಷ್ಟಿಸಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ನವದೆಹಲಿ: ಖ್ಯಾತ ಯೂಟ್ಯೂಬರ್ ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿ ಧ್ರುವ್ ರಾಠಿ ಅವರನ್ನು ದೆಹಲಿ ಪೊಲೀಸರು ನಿವಾಸದಿಂದ ಬಲವಂತವಾಗಿ ವಶಕ್ಕೆ ಪಡೆದು, ಶನಿವಾರ ತಡರಾತ್ರಿ ಬಿಡುಗಡೆಗೊಳಿಸಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಚರ್ಚೆಗೆ ಹಾಗೂ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಜಂತರ್ ಮಂತರ್‌ನಲ್ಲಿ ನಿಗದಿಯಾಗಿದ್ದ ಪ್ರತಿಭಟನೆಗೂ ಮುನ್ನ ಈ ನಾಟಕೀಯ ಬೆಳವಣಿಗೆ ನಡೆದಿದೆ.
ಮನೆಗೆ ನುಗ್ಗಿ ಎಳೆದಾಡಿದ ಪೊಲೀಸರು - ರಾಠಿ ಗಂಭೀರ ಆರೋಪ
ತಮ್ಮ ಬಂಧನದ ಬಗ್ಗೆ ಸ್ವತಃ ಧ್ರುವ್ ರಾಠಿ ವಿಡಿಯೋ ಬಿಡುಗಡೆ ಮಾಡಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನನ್ನು ಕಾನೂನುಬದ್ಧವಾಗಿ ಬಂಧಿಸಲಾಗಿಲ್ಲ, ಬದಲಿಗೆ ಅಪಹರಿಸಲಾಗಿದೆ" ಎಂದು ಅವರು ಆರೋಪಿಸಿದ್ದಾರೆ.
"ಬೆಳಗ್ಗಿನ ಜಾವ ಸುಮಾರು 7 ಗಂಟೆಗೆ ನಾನು ಬೆಡ್‌ರೂಂನಲ್ಲಿ ಮಲಗಿದ್ದೆ. ನಾಗರಿಕ ಉಡುಪಿನಲ್ಲಿದ್ದ ಸುಮಾರು 20 ಮಂದಿ ಗೂಂಡಾಗಳಂತೆ ಮನೆಗೆ ನುಗ್ಗಿ, ಬಾಗಿಲು ತೆರೆದ ನನ್ನ ತಾಯಿಯನ್ನು ದೂಡಿದರು. ಯಾವುದೇ ಪೂರ್ವಸೂಚನೆ ಅಥವಾ ಸಮರ್ಪಕ ಕಾರಣ ನೀಡದೆ ನನ್ನನ್ನು ಬಲವಂತವಾಗಿ ಎಳೆದಾಡಿಕೊಂಡು ಹೋದರು. ಪ್ರತಿಭಟನಾ ಸ್ಥಳದಲ್ಲಿ ವಶಕ್ಕೆ ಪಡೆದಿದ್ದರೆ ಅದನ್ನು ಬಂಧನ ಎನ್ನಬಹುದಿತ್ತು, ಆದರೆ ಮಲಗಿದ್ದ ನನ್ನನ್ನು ಮನೆಯಿಂದ ಹಠಾತ್ತನೆ ಕರೆದೊಯ್ದಿರುವುದು ಸ್ಪಷ್ಟ ಅಪಹರಣ" ಎಂದು ಅವರು ಕಿಡಿಕಾರಿದ್ದಾರೆ. ಗುರುಗ್ರಾಮ್‌ನ ಸೆಕ್ಟರ್ 56ರಲ್ಲಿರುವ ಅವರ ನಿವಾಸದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಪೌರತ್ವದ ಬಗ್ಗೆ ಸುಳ್ಳು ವದಂತಿ
ತಮ್ಮ ಪೌರತ್ವದ ಕುರಿತು ಹಬ್ಬಿರುವ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ರಾಠಿ, ತಮ್ಮ ಭಾರತೀಯ ಪಾಸ್‌ಪೋರ್ಟ್ ಅನ್ನು ಪ್ರದರ್ಶಿಸಿದ್ದಾರೆ. "ನಾನು ಅಂದೂ ಭಾರತೀಯ ಪ್ರಜೆ, ಇಂದೂ ಭಾರತೀಯ, ಮುಂದೆಯೂ ಭಾರತೀಯನಾಗಿಯೇ ಇರುತ್ತೇನೆ. ಆದರೆ ಕೆಲವರು ನನ್ನ ನಾಗರಿಕತೆಯ ಕುರಿತು ಉದ್ದೇಶಪೂರ್ವಕವಾಗಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ" ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ತಡೆಯಲು ವ್ಯಾಪಕ ಬಂದೋಬಸ್ತ್
ಜಂತರ್ ಮಂತರ್‌ನಲ್ಲಿ 'ಕಾಕ್ರೋಚ್ ಜನತಾ ಪಕ್ಷ' (ಸಿಜೆಪಿ) ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಧ್ರುವ್ ರಾಠಿ ಭಾಗವಹಿಸುವುದನ್ನು ತಡೆಯಲು ಪೊಲೀಸರು ಈ ಕ್ರಮ ಕೈಗೊಂಡಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಕೈಗೊಂಡಿದ್ದು, ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನಾ ಸ್ಥಳಕ್ಕೆ ತೆರಳಲು ಯತ್ನಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿಯ ವಿವಿಧೆಡೆಗಳಲ್ಲಿ ಒಟ್ಟು 7,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯಲಾಗಿದೆ.