ದೆಹಲಿ : ಎನ್‌ಬಿಸಿಸಿ (NBCC) ಸಂಸ್ಥೆಯು ದೆಹಲಿಯ ಸರೋಜಿನಿ ನಗರದಲ್ಲಿ ನಿರ್ಮಿಸುತ್ತಿರುವ ಐಷಾರಾಮಿ 'ಅವೆನ್ಯೂ ಟವರ್ಸ್' (Avenue Towers) ವಸತಿ ಯೋಜನೆಯ ಹರಾಜು ಪ್ರಕ್ರಿಯೆಯು ಭಾರೀ ವಿವಾದಕ್ಕೆ ಸಿಲುಕಿದೆ. ಸುಮಾರು 15 ಕೋಟಿ ರೂಪಾಯಿಗಳಷ್ಟು ಬೆಲೆಬಾಳುವ ಈ ಹೈ-ಪ್ರೊಫೈಲ್ ಫ್ಲ್ಯಾಟ್‌ಗಳ ಮಾರಾಟದಲ್ಲಿ ಭಾರೀ ಅಕ್ರಮ ಹಾಗೂ ಗೋಲ್‌ಮಾಲ್ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಅತ್ಯಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿ ವಿಜೇತರಾಗಿದ್ದವರ 49 ಫ್ಲ್ಯಾಟ್‌ಗಳ ಬಿಡ್‌ಗಳನ್ನು ಯಾವುದೇ ಸರಿಯಾದ ಕಾರಣವಿಲ್ಲದೆ ಏಕಾಏಕಿ ರದ್ದುಪಡಿಸಿರುವುದು ಇದೀಗ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ನ್ಯಾಯಾಲಯವು ಎನ್‌ಬಿಸಿಸಿ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳ ಒಳಗಾಗಿ ಸ್ಪಷ್ಟನೆ ನೀಡುವಂತೆ ತಾಕೀತು ಮಾಡಿದೆ.
ಹೌದು.. ಜುಲೈ ತಿಂಗಳಲ್ಲಿ ಮೊದಲ ಬಾರಿಗೆ ಒಟ್ಟು 262 ವಸತಿ ಘಟಕಗಳನ್ನು ಮಾರಾಟಕ್ಕಾಗಿ ಮುಕ್ತಗೊಳಿಸಲಾಗಿತ್ತು. ಸೂಪರ್ ಬಿಲ್ಟ್-ಅಪ್ ಏರಿಯಾದ ಮೀಸಲು ಬೆಲೆಯನ್ನು ಪ್ರತಿ ಚದರ ಅಡಿಗೆ 37,161 ರೂಪಾಯಿ ಎಂದು ನಿಗದಿಪಡಿಸಲಾಗಿತ್ತು. ಈ ಹರಾಜಿನಲ್ಲಿ ಕೆಲವರು ದೊಡ್ಡ ಮಟ್ಟದಲ್ಲಿ ಬಿಡ್ ಮಾಡಿದ್ದು, ಬಹುತೇಕ ಯಶಸ್ವಿ ಖರೀದಿದಾರರ ಹೆಸರುಗಳನ್ನು ಕೂಡ ಅಧಿಕೃತವಾಗಿ ಘೋಷಿಸಲಾಗಿತ್ತು. ಆದರೆ ಆ ಬಳಿಕ ಆಡಳಿತಾತ್ಮಕ ಕಾರಣಗಳನ್ನು ಮುಂದಿಟ್ಟುಕೊಂಡು ಆಗಸ್ಟ್ 19ರಂದು ಮೊದಲ ಹರಾಜು ಪ್ರಕ್ರಿಯೆಯನ್ನು ಇದ್ದಕ್ಕಿದ್ದಂತೆ ರದ್ದುಗೊಳಿಸಲಾಯಿತು.
ನಂತರ ಅಕ್ಟೋಬರ್ 3ರಂದು ಎನ್‌ಬಿಸಿಸಿ ಮತ್ತೆ 262 ಯುನಿಟ್‌ಗಳ ಬಿಡ್‌ಗಾಗಿ ಆಹ್ವಾನ ನೀಡಿತ್ತು. ಆದರೆ ಪುನಃ ಆಡಳಿತಾತ್ಮಕ ಕಾರಣಗಳ ನೆಪವೊಡ್ಡಿ 17 ಫ್ಲ್ಯಾಟ್‌ಗಳ ಹರಾಜನ್ನು ರದ್ದುಪಡಿಸಲಾಯಿತು. ಅಕ್ಟೋಬರ್ 28ರಂದು ಮತ್ತೊಮ್ಮೆ ಅತಿ ಹೆಚ್ಚು ಬಿಡ್ ಮಾಡಿದ್ದ ಯಶಸ್ವಿ ಖರೀದಿದಾರರ ಆಯ್ಕೆಯನ್ನು ರದ್ದುಪಡಿಸುವ ಮೂಲಕ ಬಿಡ್‌ದಾರರಿಗೆ ಬಿಗ್ ಶಾಕ್ ನೀಡಲಾಯಿತು. ಇದರಿಂದ ಕಂಗಾಲಾದ ಖರೀದಿದಾರರು, "ಮೀಸಲು ಬೆಲೆಗಿಂತಲೂ ಹೆಚ್ಚಿನ ಮೊತ್ತಕ್ಕೆ ಬಿಡ್ ಮಾಡಿ ಗೆದ್ದ ಬಳಿಕ, ಮತ್ತು ವಿಜೇತರ ಪಟ್ಟಿಯನ್ನು ಪ್ರಕಟಿಸಿದ ಮೇಲೂ ದಿಢೀರ್ ಎಂದು ಬಿಡ್ ರದ್ದುಪಡಿಸಲು ಅಸಲಿ ಕಾರಣವೇನು?" ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕ ಸ್ವಾಮ್ಯದ ಕಂಪನಿಯ ಈ ಆಯ್ಕೆ ರದ್ದತಿ ಪ್ರಕ್ರಿಯೆಯು ಇಡೀ ಹರಾಜಿನ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತದ ಮೇಲೆಯೇ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೂಡಿಕೆದಾರರು ಮತ್ತು ಖರೀದಿದಾರರು ದೂರಿದ್ದಾರೆ.
ಖರೀದಿದಾರರ ಪರವಾಗಿ ಕೆಲವರು ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಸ್ವಾಮ್ಯದ ಎನ್‌ಬಿಸಿಸಿಗೆ ತರಾಟೆಗೆ ತೆಗೆದುಕೊಂಡಿರುವ ಕೋರ್ಟ್, ಈ ಸಂಪೂರ್ಣ ವಿವಾದದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಜನವರಿ 12ಕ್ಕೆ ನಿಗದಿಪಡಿಸಲಾಗಿದೆ.
ದೆಹಲಿಯ ಅತ್ಯಂತ ಪಾಶ್ ಪ್ರದೇಶವಾದ ಸರೋಜಿನಿ ನಗರದಲ್ಲಿ ರೂಪುಗೊಳ್ಳುತ್ತಿರುವ ಈ ಎವೆನ್ಯೂ ಟವರ್ಸ್ ಯೋಜನೆಯು ಅತ್ಯಂತ ಐಷಾರಾಮಿಯಾಗಿದೆ. ಇಲ್ಲಿನ ಪ್ರತಿಯೊಂದು ಫ್ಲ್ಯಾಟ್‌ನ ಬೆಲೆಯೂ ಬರೋಬ್ಬರಿ 15 ಕೋಟಿ ರೂಪಾಯಿಗೂ ಅಧಿಕವಾಗಿದೆ. ಒಟ್ಟು 8.89 ಎಕರೆ ವಿಸ್ತೀರ್ಣದಲ್ಲಿ ಹತ್ತು ಮಹಡಿಗಳನ್ನು ಹೊಂದಿರುವ ಈ 9 ಅತ್ಯಾಧುನಿಕ ಕಟ್ಟಡಗಳಲ್ಲಿ ಒಟ್ಟು 262 ಯುನಿಟ್‌ಗಳಿವೆ. ಎಲ್ಲಾ ಅಪಾರ್ಟ್‌ಮೆಂಟ್‌ಗಳು 4-BHK ವಿನ್ಯಾಸದ್ದಾಗಿದ್ದು, 2,518 ರಿಂದ 2,598 ಚದರ ಅಡಿಯ ಕಾರ್ಪೆಟ್ ಏರಿಯಾವನ್ನು ಹೊಂದಿವೆ. ಇದರೊಂದಿಗೆ ಮೂರು ಕವರ್ಡ್ ಕಾರ್ ಪಾರ್ಕಿಂಗ್ ಸೌಲಭ್ಯ ಮತ್ತು ಸುಮಾರು 50,000 ಚದರ ಅಡಿಯ ಬೃಹತ್ ಕ್ಲಬ್ ಹೌಸ್ ಸೇರಿದಂತೆ ಹತ್ತಾರು ಹೈ-ಎಂಡ್ ಸೌಕರ್ಯಗಳನ್ನು ಈ ಪ್ರಾಜೆಕ್ಟ್ ಒಳಗೊಂಡಿದೆ. ಆದರೆ ಕೋಟ್ಯಂತರ ರೂಪಾಯಿ ಬೆಲೆಯ ಈ ಸ್ವತ್ತುಗಳ ಹರಾಜಿನಲ್ಲಿ ನಡೆದಿರುವ ಈ ಕಾನೂನು ಹೋರಾಟವು ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.