Cyclone Arnab: ಬಂಗಾಳಕೊಲ್ಲಿಯಲ್ಲಿ ರೂಪುಗೊಂಡಿರುವ ‘ಅರ್ನಬ್’ ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯತ್ತ ವೇಗವಾಗಿ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಉಭಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಚಂಡಮಾರುತದ ಪರಿಣಾಮ ಭಾರೀ ಮಳೆ ಮತ್ತು ಬಿರುಗಾಳಿ ಬೀಸುವ ಆತಂಕ ಎದುರಾಗಿದ್ದು, ಅಪಾಯದ ಪ್ರದೇಶಗಳಲ್ಲಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಕನಿಷ್ಠ 50 ರೈಲುಗಳ ಸಂಚಾರ ಹಾಗೂ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಬುಧವಾರ (ಅಕ್ಟೋಬರ್ 28) ನಸುಕಿನ ವೇಳೆಗೆ ವಿಶಾಖಪಟ್ಟಣಂ ಸಮೀಪ ಚಂಡಮಾರುತ ಕರಾವಳಿಯನ್ನ ದಾಟುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.
50 ರೈಲುಗಳ ಸಂಚಾರ ರದ್ದು, ವಿಮಾನ ಸೇವೆಗೂ ಅಡ್ಡಿ
ಚಂಡಮಾರುತದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕನಿಷ್ಠ 50 ರೈಲುಗಳ ಸಂಚಾರವನ್ನ ರದ್ದುಗೊಳಿಸಿದೆ. ಮಂಗಳವಾರ ವಿಜಯವಾಡ ಮತ್ತು ವಿಶಾಖಪಟ್ಟಣಂ ವಿಮಾನ ನಿಲ್ದಾಣಗಳಲ್ಲಿ ಕನಿಷ್ಠ 21 ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ಚೆನ್ನೈ, ಬೆಂಗಳೂರು, ವಿಶಾಖಪಟ್ಟಣಂ ಮತ್ತು ಕಡಪ ಮಾರ್ಗಗಳ ವಿಮಾನ ಸೇವೆಗಳ ಮೇಲೂ ಪರಿಣಾಮ ಬೀರಿದೆ. ಬುಧವಾರ ವಿಜಯವಾಡ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ 15 ವಿಮಾನಗಳ ಹಾರಾಟವನ್ನ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಂಧ್ರದಲ್ಲಿ 2,131 ಆಶ್ರಯ ಕೇಂದ್ರಗಳ ಸಿದ್ಧತೆ
ಚಂಡಮಾರುತ ಎದುರಿಸಲು ಆಂಧ್ರಪ್ರದೇಶ ಸರ್ಕಾರ ವ್ಯಾಪಕ ಸಿದ್ಧತೆ ಕೈಗೊಂಡಿದೆ. ರಾಜ್ಯದ 20 ಜಿಲ್ಲೆಗಳಲ್ಲಿ ಒಟ್ಟು 2,131 ಚಂಡಮಾರುತ ಆಶ್ರಯ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ಒದಗಿಸಲು 1,087 ವೈದ್ಯಕೀಯ ತಂಡಗಳನ್ನ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ. ಇದಲ್ಲದೆ 8,281 ತುರ್ತು ಹಾಸಿಗೆಗಳು ಹಾಗೂ 1,274 ಆಂಬುಲೆನ್ಸ್‌ಗಳನ್ನ ಸಿದ್ಧಪಡಿಸಲಾಗಿದೆ. ಅಪಾಯದ ಪ್ರದೇಶಗಳಲ್ಲಿರುವ ಜನರನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 1,351 ಗರ್ಭಿಣಿಯರನ್ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಗತ್ಯ ವಸ್ತುಗಳ ಕೊರತೆ ಎದುರಾಗದಂತೆ ರಾಜ್ಯದ 14,686 ಪಡಿತರ ಅಂಗಡಿಗಳಲ್ಲಿ ಎರಡು ತಿಂಗಳಿಗೆ ಸಾಕಾಗುವಷ್ಟು ಸಾಮಗ್ರಿಗಳನ್ನ ದಾಸ್ತಾನು ಮಾಡಲಾಗಿದೆ.
2.70 ಕೋಟಿ ಜನರಿಗೆ ಮುನ್ನೆಚ್ಚರಿಕೆ ಸಂದೇಶ
ಚಂಡಮಾರುತದ ಅಪಾಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಆಂಧ್ರಪ್ರದೇಶ ಸರ್ಕಾರ ಕ್ರಮ ಕೈಗೊಂಡಿದೆ. ರಾಜ್ಯದ ಸುಮಾರು 2.70 ಕೋಟಿ ಜನರ ಮೊಬೈಲ್ ಫೋನ್‌ಗಳಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನ ರವಾನಿಸಲಾಗುತ್ತಿದೆ. ಶ್ರೀಕಾಕುಳಂ ಜಿಲ್ಲೆಯಲ್ಲಿ ಭಾರೀ ಮಳೆಯೊಂದಿಗೆ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ವಿಶಾಖಪಟ್ಟಣಂ ಮತ್ತು ಕಾಕಿನಾಡ ಪ್ರದೇಶಗಳಲ್ಲಿ ಈಗಾಗಲೇ ಗಾಳಿಯ ವೇಗ ಹೆಚ್ಚಾಗಿದೆ ಎಂದು ಆಂಧ್ರಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪರಿಹಾರ ಶಿಬಿರಗಳಲ್ಲಿ ಅಗತ್ಯ ವಸ್ತುಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಚಂಡಮಾರುತದಿಂದ ಸಂಭವಿಸಬಹುದಾದ ಹಾನಿಯನ್ನ ಸಾಧ್ಯವಾದಷ್ಟು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಒಡಿಶಾದಲ್ಲಿ 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
ಮತ್ತೊಂದೆಡೆ ಒಡಿಶಾದಲ್ಲಿಯೂ ಚಂಡಮಾರುತದ ಆತಂಕ ಹೆಚ್ಚಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಆರಂಭವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 30 ಜಿಲ್ಲೆಗಳ ಪೈಕಿ 16 ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಅಪಾಯದ ಪ್ರದೇಶಗಳಿಂದ ಒಟ್ಟು 48 ಸಾವಿರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಗುರಿ ಹೊಂದಲಾಗಿದೆ. ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರನ್ನ ಚಂಡಮಾರುತ ಆಶ್ರಯ ಕೇಂದ್ರಗಳಿಗೆ ಕರೆದೊಯ್ಯಲಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸಮುದ್ರ ತೀರಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ.
1,735 ಆಶ್ರಯ ಕೇಂದ್ರಗಳು, 294 ರಕ್ಷಣಾ ತಂಡಗಳ ನಿಯೋಜನೆ
ಒಡಿಶಾದ ವಿಶೇಷ ಪರಿಹಾರ ಆಯುಕ್ತ ರಾಜೇಶ್ ಪಿ.ಪಾಟೀಲ್ ಅವರ ಪ್ರಕಾರ, ಅಪಾಯದ ಪ್ರದೇಶಗಳ ಜನರಿಗೆ ಆಶ್ರಯ ಒದಗಿಸಲು 135 ಶಾಶ್ವತ ಚಂಡಮಾರುತ ಕೇಂದ್ರಗಳು ಹಾಗೂ ಸುಮಾರು 1,600 ತಾತ್ಕಾಲಿಕ ಆಶ್ರಯ ಕೇಂದ್ರಗಳನ್ನ ಸಿದ್ಧಪಡಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF)ಯ 9 ತಂಡಗಳು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF)ಯ 60 ತಂಡಗಳು ಮತ್ತು ಅಗ್ನಿಶಾಮಕ ಸೇವೆಯ 225 ತಂಡಗಳನ್ನ ನಿಯೋಜಿಸಲಾಗಿದೆ. ಒಟ್ಟು 294 ತಂಡಗಳು ರಕ್ಷಣಾ ಕಾರ್ಯಕ್ಕೆ ಸಜ್ಜಾಗಿವೆ. ಚಂಡಮಾರುತದಿಂದ ಯಾವುದೇ ಜೀವಹಾನಿ ಸಂಭವಿಸದಂತೆ ‘ಶೂನ್ಯ ಸಾವು’ ಗುರಿಯೊಂದಿಗೆ ಕಾರ್ಯನಿರ್ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ರಾಜೇಶ್ ಪಿ.ಪಾಟೀಲ್ ತಿಳಿಸಿದ್ದಾರೆ.
ದಿಢೀರ್ ಪ್ರವಾಹದ ಆತಂಕ, ಬಂದರುಗಳಲ್ಲಿ ಕಟ್ಟೆಚ್ಚರ
ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ನದಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾದರೆ ಪಶ್ಚಿಮ ಹಾಗೂ ಉತ್ತರ ಒಡಿಶಾದಲ್ಲಿ ದಿಢೀರ್ ಪ್ರವಾಹ ಮತ್ತು ಜಲಾವೃತ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ ಎಂದು ಒಡಿಶಾದ ವಿಪತ್ತು ನಿರ್ವಹಣಾ ಸಚಿವ ಸುರೇಶ್ ಪೂಜಾರಿ ಎಚ್ಚರಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪಾರಾದೀಪ್, ಧಮ್ರಾ ಮತ್ತು ಗೋಪಾಲಪುರ ಸೇರಿದಂತೆ ಪ್ರಮುಖ ಬಂದರುಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನ ಕೈಗೊಳ್ಳಲಾಗಿದೆ. ಚಂಡಮಾರುತದ ಪರಿಣಾಮ ಎದುರಿಸಲು ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ರಕ್ಷಣಾ ತಂಡಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಪರಿಹಾರ ಕೇಂದ್ರಗಳನ್ನ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.