Vande Bharat Express: ಕೇವಲ ತಮ್ಮ ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದ್ದ 12 ಮಂದಿ, ಕೊನೆಗೆ ಸುಮಾರು 150 ಕಿಲೋಮೀಟರ್ ದೂರ ಅನಿರೀಕ್ಷಿತ ಪ್ರಯಾಣ ಮಾಡಬೇಕಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿದ್ದ ಈ ಪ್ರಯಾಣಿಕರು, ರೈಲಿನಿಂದ ಕೆಳಗಿಳಿಯುವ ಮೊದಲೇ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿದ್ದರಿಂದ ಒಳಗೇ ಸಿಲುಕಿಕೊಂಡಿದ್ದಾರೆ. ಪರಿಣಾಮ ಅವರು ಅನಿರ್ವಾಯ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಸಾಮಾನ್ಯವಾಗಿ ರೈಲು ನಿಲ್ದಾಣಕ್ಕೆ ಬಂದಾಗ ಸಂಬಂಧಿಕರು ಅಥವಾ ಸ್ನೇಹಿತರನ್ನ ಬೀಳ್ಕೊಡಲು ಕೆಲವರು ರೈಲಿನೊಳಗೆ ಸ್ವಲ್ಪ ದೂರ ಪ್ರವೇಶಿಸುವುದುಂಟು. ಆದರೆ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಇಂತಹ ನಿರ್ಲಕ್ಷ್ಯ ದುಬಾರಿ ಅನುಭವಕ್ಕೆ ಕಾರಣವಾಗಿದೆ. ಕಾನ್ಪುರ ನಿಲ್ದಾಣದಲ್ಲಿ ತಮ್ಮ ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದ್ದ 12 ಜನರು, ರೈಲು ಹೊರಡುವ ಮೊದಲು ಕೆಳಗಿಳಿಯಲು ಸಾಧ್ಯವಾಗಿಲ್ಲ. ಅವರು ಇಳಿಯುವಷ್ಟರಲ್ಲಿ ರೈಲಿನ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿವೆ.
ವಂದೇ ಭಾರತ್ ರೈಲಿನ ಬಾಗಿಲುಗಳು ಸಾಮಾನ್ಯ ರೈಲುಗಳಂತೆ ಪ್ರಯಾಣಿಕರು ತಮಗೆ ಬೇಕಾದಾಗ ತೆರೆಯಲು ಸಾಧ್ಯವಾಗುವ ವ್ಯವಸ್ಥೆಯನ್ನ ಹೊಂದಿಲ್ಲ. ಈ ರೈಲಿನಲ್ಲಿ ಬಾಗಿಲುಗಳನ್ನ ಕೇಂದ್ರ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ. ನಿಗದಿತ ನಿಲ್ದಾಣಗಳಲ್ಲಿ ಮಾತ್ರ ಅವು ತೆರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಕಾನ್ಪುರದಲ್ಲಿ ರೈಲು ಹತ್ತಿದ್ದ 12 ಮಂದಿಗೆ ತಕ್ಷಣವೇ ಕೆಳಗಿಳಿಯಲು ಸಾಧ್ಯವಾಗಿಲ್ಲ.
ರೈಲು ತನ್ನ ನಿಗದಿತ ಸಂಚಾರವನ್ನ ಮುಂದುವರಿಸಿದ್ದು, ಪ್ರಯಾಣಿಕರು ಅನಿವಾರ್ಯವಾಗಿ ಅದರೊಳಗೇ ಉಳಿಯಬೇಕಾಯಿತು. ಕಾನ್ಪುರದಿಂದ ಹೊರಟ ರೈಲು ಸುಮಾರು 150 ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ಇಟಾವಾ ನಿಲ್ದಾಣದಲ್ಲಿ ನಿಂತಿದೆ. ಅಲ್ಲಿ ಈ 12 ಮಂದಿಗೆ ರೈಲಿನಿಂದ ಕೆಳಗಿಳಿಯಲು ಅವಕಾಶ ನೀಡಲಾಗಿದೆ. ಸಂಬಂಧಿಕರನ್ನ ಬೀಳ್ಕೊಡಲು ಕೆಲವೇ ಕ್ಷಣಗಳಿಗಾಗಿ ರೈಲು ಹತ್ತಿದ್ದವರಿಗೆ, ಕೊನೆಗೆ ದೀರ್ಘ ಪ್ರಯಾಣವೇ ಎದುರಾಗಿದೆ.
ಆದರೆ ಈ ಅನಿರೀಕ್ಷಿತ ಪ್ರಯಾಣದ ಜೊತೆಗೆ ಅವರಿಗೆ ಮತ್ತೊಂದು ಆಘಾತವೂ ಎದುರಾಗಿದೆ. ರೈಲಿನಲ್ಲಿ ಸೂಕ್ತ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಹಿನ್ನೆಲೆಯಲ್ಲಿ 12 ಮಂದಿಗೂ ತಲಾ 3,000 ರೂಪಾಯಿ ದಂಡ ವಿಧಿಸಲಾಗಿದೆ ಎಂದು ವರದಿಯಾಗಿದೆ. ಹೀಗೆ ಒಟ್ಟು 36,000 ರೂಪಾಯಿ ದಂಡ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಯೊಬ್ಬರಿಗೂ 3,000 ರೂಪಾಯಿಯಂತೆ ಒಟ್ಟು 12 ಮಂದಿಗೆ 36,000 ರೂಪಾಯಿ ದಂಡ ವಿಧಿಸಿರುವುದು ಈ ಘಟನೆಯ ಪ್ರಮುಖ ಸಂಗತಿಯಾಗಿದೆ. ಸಂಬಂಧಿಕರನ್ನ ಬೀಳ್ಕೊಡಲು ರೈಲು ಹತ್ತಿದವರು, ಕೊನೆಗೆ ಹಣದ ದಂಡದೊಂದಿಗೆ ರೈಲಿನಿಂದ ಇಳಿಯಬೇಕಾಯಿತು.
ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಬಾಗಿಲುಗಳು ಕೇಂದ್ರ ನಿಯಂತ್ರಣ ವ್ಯವಸ್ಥೆಯಲ್ಲಿದ್ದು, ನಿಗದಿತ ನಿಲ್ದಾಣಗಳಲ್ಲಿ ಮಾತ್ರ ತೆರೆಯುತ್ತವೆ. ಆದ್ದರಿಂದ ರೈಲಿನೊಳಗೆ ಪ್ರವೇಶಿಸುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಉದ್ದೇಶ ಮತ್ತು ಟಿಕೆಟ್ ವ್ಯವಸ್ಥೆಯ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಕಾನ್ಪುರದಲ್ಲಿ ನಡೆದ ಈ ಘಟನೆ, ರೈಲಿನಲ್ಲಿ ಸಂಬಂಧಿಕರನ್ನ ಬೀಳ್ಕೊಡಲು ಹೋದ 12 ಮಂದಿಗೆ ಮರೆಯಲಾಗದ ಅನುಭವವಾಗಿ ಪರಿಣಮಿಸಿದೆ.