SOCIAL MEDIA

Newsletter

PARTNER SITES
Select Language Select State

ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ: ಬಿ.ವೈ.ವಿಜಯೇಂದ್ರ ಸ್ಫೋಟಕ ಹೇಳಿಕೆ

ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಸಂಘರ್ಷ ನಡೆಯುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕರ್ನಾಟಕದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ ಎಂದಿದ್ದಾರೆ. ಚುನಾವಣೆ ಘೋಷಣೆಯಾದರೆ 20ರಿಂದ 25 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದೂ ಅವರು ಹೇಳಿದ್ದು, ಕಾಂಗ್ರೆಸ್ ನಾಯಕರು ಆಂತರಿಕ ಬೆಳವಣಿಗೆಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Written By Puttaraj K Alur
Published: Oct 14, 2026, 04:24 PM IST | Updated: Oct 14, 2026, 04:33 PM IST
Image Credit: BY Vijayendra
Join

BY Vijayendra on Sting Operation: ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಸಂಘರ್ಷ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಮೂಲೆಗುಂಪು ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿನ ಬೆಳವಣಿಗೆಗಳನ್ನ ಗಮನಿಸಿದರೆ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ. ಹೊಸನಗರದಲ್ಲಿ ನಡೆದ ಬಿಜೆಪಿ ಸೇವಾ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ವಿಜಯೇಂದ್ರ, ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರದ ಪೈಪೋಟಿ, ಸ್ಟಿಂಗ್ ಆಪರೇಷನ್ ಕುರಿತ ಆರೋಪಗಳು ಹಾಗೂ ಶಾಸಕರ ಅಸಮಾಧಾನದ ವಿಚಾರವಾಗಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯರನ್ನ ಮೂಲೆಗುಂಪು ಮಾಡುವ ಪ್ರಯತ್ನ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣರಾದ ಸಿದ್ದರಾಮಯ್ಯರನ್ನೇ ಈಗ ಪಕ್ಷದೊಳಗೆ ಮೂಲೆಗುಂಪು ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಅಧಿಕಾರಕ್ಕಾಗಿ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳು ಸಾಮಾನ್ಯ ವಿಚಾರಗಳಲ್ಲ. ಪಕ್ಷದೊಳಗಿನ ಸಂಘರ್ಷ ಯಾವ ಹಂತಕ್ಕೆ ಬೇಕಾದರೂ ತಲುಪುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಸಿದ್ದರಾಮಯ್ಯರ ನಾಯಕತ್ವದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಈಗ ಅವರ ವಿರುದ್ಧವೇ ಪಕ್ಷದೊಳಗೆ ಪ್ರಯತ್ನಗಳು ನಡೆಯುತ್ತಿವೆ ಎಂಬುದು ವಿಜಯೇಂದ್ರ ಅವರ ಆರೋಪವಾಗಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ ಮತ್ತೆ ಮುನ್ನೆಲೆಗೆ ಬರಬಹುದು ಎಂದು ಅವರು ಸೂಚಿಸಿದರು.

ಸ್ಟಿಂಗ್ ಆಪರೇಷನ್ ಹಿಂದೆ ಯಾರಿದ್ದಾರೆ?

ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಸ್ಟಿಂಗ್ ಆಪರೇಷನ್‌ಗಳನ್ನ ನಡೆಸಲಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು. ಯಾವ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆದಿದೆ ಎಂಬ ಆತಂಕದಿಂದ ಸಚಿವರು ಮತ್ತು ಶಾಸಕರು ಭಯಭೀತರಾಗಿದ್ದಾರೆ. ಪಕ್ಷದೊಳಗೆ ಪರಸ್ಪರ ವಿಶ್ವಾಸದ ಕೊರತೆ ಉಂಟಾಗಿದೆ ಎಂದು ಟೀಕಿಸಿದರು. ಮಾಜಿ ಸಚಿವ ರಾಜಣ್ಣ ಅವರು ನೀಡಿರುವ ಹೇಳಿಕೆಗಳನ್ನ ಉಲ್ಲೇಖಿಸಿದ ವಿಜಯೇಂದ್ರ, ಕಾಂಗ್ರೆಸ್‌ನ ಶಾಸಕರು, ಸಚಿವರು ಹಾಗೂ ಮಾಜಿ ಸಚಿವರು ಈ ವಿಚಾರವಾಗಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು. ಸ್ಟಿಂಗ್ ಆಪರೇಷನ್‌ಗಳ ಹಿಂದೆ ಯಾರು ಇದ್ದಾರೆ? ಅವುಗಳ ನಿರ್ಮಾಪಕರು ಮತ್ತು ನಿರ್ದೇಶಕರು ಯಾರು? ಎಂಬ ಪ್ರಶ್ನೆಗಳನ್ನ ಅವರು ಎತ್ತಿದರು. ಈ ಬೆಳವಣಿಗೆಗಳ ಕುರಿತು ಕಾಂಗ್ರೆಸ್ ನಾಯಕರೇ ಸತ್ಯಾಂಶವನ್ನ ಬಹಿರಂಗಪಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಹಿಂದಿನ ವಿಚಾರಗಳು ಹೊರಬರಲಿವೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ

ಕಾಂಗ್ರೆಸ್‌ನ ಆಂತರಿಕ ಸಂಘರ್ಷದ ಪರಿಣಾಮ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ತೆರಳಿ ತಡೆಯಾಜ್ಞೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು. ಪಕ್ಷದೊಳಗೆ ಅಧಿಕಾರಕ್ಕಾಗಿ ನಡೆಯುತ್ತಿರುವ ಪೈಪೋಟಿ ಮತ್ತು ಪರಸ್ಪರ ಆರೋಪಗಳು ರಾಜಕೀಯ ವಾತಾವರಣವನ್ನ ಮತ್ತಷ್ಟು ಗೊಂದಲಮಯಗೊಳಿಸಿವೆ ಎಂದು ಹೇಳಿದರು. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷದೊಳಗಿನ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಹೀಗಾಗಿ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಮತ್ತೊಂದು ಬೆಳವಣಿಗೆ ನಡೆದರೂ ಆಶ್ಚರ್ಯಪಡಬೇಕಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

25 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಬಹುದು!

ಇದೇ ವೇಳೆ ರಾಜ್ಯದಲ್ಲಿ ನಾಳೆಯೇ ಚುನಾವಣೆ ಘೋಷಣೆಯಾದರೂ ಆಡಳಿತ ಪಕ್ಷದ ಕನಿಷ್ಠ 20ರಿಂದ 25 ಶಾಸಕರು ಬಿಜೆಪಿಗೆ ಸೇರುವ ಸಾಧ್ಯತೆಯಿದೆ ಎಂದು ವಿಜಯೇಂದ್ರ ಹೇಳಿಕೆ ನೀಡಿದರು. ಕಾಂಗ್ರೆಸ್‌ನ ಹಲವು ಶಾಸಕರು ಪಕ್ಷದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂಬುದು ಅವರ ವಾದವಾಗಿತ್ತು. ಆಡಳಿತ ಪಕ್ಷದೊಳಗೆ ಅಸಮಾಧಾನ ಹೆಚ್ಚಾಗಿದ್ದು, ಚುನಾವಣೆಯ ಘೋಷಣೆಯಾದರೆ ಕೆಲವು ಶಾಸಕರು ಬಿಜೆಪಿ ಸೇರುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದರು. ಆದರೆ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ ಎಂಬ ಅರ್ಥ ಇದಲ್ಲವೆಂದು ಸ್ಪಷ್ಟಪಡಿಸಿದರು.

ಇನ್ನೂ ಒಂದೂವರೆ ವರ್ಷ ಸರ್ಕಾರ ನಡೆಸಲಿ ಎಂದ ವಿಜಯೇಂದ್ರ

ಕಾಂಗ್ರೆಸ್ ಸರ್ಕಾರವನ್ನ ಕೆಡವಿ ಅಧಿಕಾರಕ್ಕೆ ಬರುತ್ತೇವೆಂದು ಬಿಜೆಪಿ ಹೇಳುತ್ತಿಲ್ಲ. ಬದಲಾಗಿ ಕಾಂಗ್ರೆಸ್ ಸರ್ಕಾರವೇ ಇನ್ನೂ ಒಂದೂವರೆ ವರ್ಷ ಅಧಿಕಾರ ನಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ವಿಜಯೇಂದ್ರ ಹೇಳಿದರು. ಕಾಂಗ್ರೆಸ್‌ನ ಆಂತರಿಕ ಸಂಘರ್ಷ, ಸ್ಟಿಂಗ್ ಆಪರೇಷನ್ ಕುರಿತ ಆರೋಪಗಳು ಮತ್ತು ಶಾಸಕರ ಅಸಮಾಧಾನದ ವಿಚಾರಗಳಿಗೆ ಪಕ್ಷದ ಹಿರಿಯ ನಾಯಕರು ಉತ್ತರ ನೀಡಬೇಕೆಂದು ಅವರು ಒತ್ತಾಯಿಸಿದರು.

ಒಟ್ನಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರದ ಪೈಪೋಟಿಯನ್ನ ಮುಂದಿಟ್ಟುಕೊಂಡು ವಿಜಯೇಂದ್ರ ಮಾಡಿರುವ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ. ಆದರೆ ಮೂರನೇ ಮುಖ್ಯಮಂತ್ರಿ ಅಥವಾ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರುವ ಕುರಿತ ಅವರ ಹೇಳಿಕೆಗಳು ರಾಜಕೀಯ ಆರೋಪಗಳಾಗಿದ್ದು, ಅವುಗಳ ಸತ್ಯಾಸತ್ಯತೆ ಮುಂದಿನ ಬೆಳವಣಿಗೆಗಳಿಂದ ಸ್ಪಷ್ಟವಾಗಬೇಕಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES