ಸ್ಟಿಂಗ್ ಆಪರೇಷನ್ ಹೆಸರಲ್ಲಿ ಕಾಂಗ್ರೆಸ್ ನೈತಿಕವಾಗಿ ರಾಜ್ಯದ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಬೀದಿಗೆ ತಂದಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆಗೆ ಸ್ಟಿಂಗ್ ಮಾಡಬೇಕಿತ್ತಾ?
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ʼಸ್ಟಿಂಗ್ ಆಪರೇಷನ್ʼ ವಿಚಾರವಾಗಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮುಂದಿನ ಐದು ವರ್ಷ ನಾನೇ ಸಿಎಂ ಅಂದ ಸಿದ್ದರಾಮಯ್ಯ, ದೆಹಲಿಗೆ ಹೋಗಿ ಬರುತ್ತಿದಂತೆ ರಾಜೀನಾಮೆ ಕೊಟ್ಟರು. ಅಲ್ಲಿ ಪೋಟೋ, ವಿಡಿಯೋ ಆಡಿಯೋ ಏನ್ ತೋರಿಸಿದ್ರೋ ಗೊತ್ತಿಲ್ಲ. ದೆಹಲಿಯಿಂದ ಬಂದು ಹೈಕಮಾಂಡ್ ಹೇಳಿದಂತೆ ರಾಜೀನಾಮೆ ನೀಡ್ತೇನೆ ಅಂದ್ರು. ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸ್ಟಿಂಗ್ ಮಾಡಬೇಕಿತ್ತಾ? ಎಂದು ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದರು.
ರಾಜಕಾರಣಕ್ಕಾಗಿ ನೀವು ಇಡೀ ರಾಜ್ಯವನ್ನೇ ಅಡ ಇಡುತ್ತಿದ್ದೀರಾ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶದ ನುಡಿಗಳನ್ನಾಡಿದ ಕೆ.ಎಸ್. ಈಶ್ವರಪ್ಪ, ಸಂಪುಟ ಸಭೆಯಲ್ಲಿ ಹುಷಾರಾಗಿರಿ ಅಂತ ಸಿಎಂ ಹೇಳಿದ್ದಾರೆ. ಐದು ಜನ ಹಲ್ಕಟ್ ಗಿರಿ ಮಾಡ್ಕೊಂಡಿದ್ದಿರಾ ಸಿಕ್ಕಾಕೋಬೇಡಿ ಅಂದಿದ್ದಾರೆ. ಕ್ಯಾಬಿನೆಟ್ ನಿಂದ ಕಿತ್ತಾಕುತ್ತೇನೆ ಅಂದಿದ್ರೆ ಸಿಎಂಗೆ ಗಂಡಸ್ತನ ಅನ್ನುತ್ತಿದ್ದೆ ನಾನು ಎಂದರು.
ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯರನ್ನ ಸಿಎಂ ಸ್ಥಾನದಿಂದ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಣೆಬರಹ ಸರಿ ಇಲ್ಲ ಸ್ಟೇ ತಗೊಂಡಿದ್ದಾರೆ. ಸಿಎಂ ಇದ್ದಾಗ ಹೌದೋ ಹುಲಿಯಾ ಅಂದ್ರು ಎಲ್ಲಿದ್ದಾರೆ ಹುಲಿಯಾ ಅಂದವರು? ಸಿಎಂ ಬದಲಾವಣೆ ಮಾಡಲು ಸ್ಟಿಂಗ್ ಮಾಡುವ ಅವಶ್ಯಕತೆ ಇತ್ತಾ? ಸ್ಟಿಂಗ್ ಮಾಡಿ ರಾಜ್ಯದ ಮರ್ಯಾದೆ ಹರಾಜು ಹಾಕಿದ ಈ ಸರ್ಕಾರ ಒಂದು ದಿನವೂ ಇರಬಾರದು ಎಂದು ಹೇಳಿದರು.
ಯಾವ ಸರ್ಕಾರವೂ ಇಷ್ಟು ಕೆಳಮಟ್ಟಕ್ಕೆ ಬಂದಿಲ್ಲ:
ಸಂತ್ರಸ್ತ ಹೆಣ್ಣುಮಕ್ಕಳು ಜೀವನ ಪರ್ಯಂತ ನರಕ ಅನುಭವಿಸುತ್ತಾರೆ. ಹೆಣ್ಣುಮಕ್ಕಳ ಮಾನ ಹರಾಜು ಹಾಕಲು ಇಷ್ಟು ಕೆಳಮಟ್ಟಕ್ಕೆ ಯಾವ ಸರ್ಕಾರ ಬಂದಿಲ್ಲ ಎಂದು ಸರ್ಕಾರದ ನಡೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಸಿಎಂ ಉತ್ತರ ಕೊಡಲಿ:
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಗಂಡಸ್ತನ ಇದ್ರೆ ಕ್ರಮ ಕೈಗೊಳ್ಳಿ ಅಂತ ಹೇಳಿದ್ದಾರೆ. ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ಕೊಡಲಿ ಎಂದು ಆಗ್ರಹಿಸಿದ ಕೆ.ಎಸ್. ಈಶ್ವರಪ್ಪ, ಯಾರು ಸ್ಟಿಂಗ್ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಜ್ಯದ ಮರ್ಯಾದೆ ಉಳಿಯಬೇಕು. ಸ್ಟಿಂಗ್ ಪ್ರಕರಣವನ್ನ ಸಿಬಿಐಗೆ ನೀಡಬೇಕು. ರಾಜ್ಯದ ಪೊಲೀಸರಿಗೆ ಈ ಪ್ರಕರಣ ನೀಡಿದ್ರೆ ಮಂತ್ರಿಗಳು ಪ್ರಕರಣ ಮುಚ್ಚಿ ಹಾಕ್ತಾರೆ. ಸ್ಟಿಂಗ್ ಆಪರೇಷನ್ ಪ್ರಕರಣವನ್ನ ಸಿಬಿಐಗೆ ನೀಡಬೇಕು. ಇಲ್ಲ ರಾಜ್ಯದ ಮರ್ಯಾದೆ ದೇಶದ ಮಟ್ಟದಲ್ಲಿ ಹೋಗಿ ಬಿಡುತ್ತೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ!
ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೆಡಿಎಸ್ ಕಾರ್ಯಕರ್ತರನ್ನ ಅರೆಸ್ಟ್ ಮಾಡಿದ್ದಾರೆ. ಷಡ್ಯಂತ್ರ ಮಾಡಿದವರ ಪೊಟೋ, ವಿಡಿಯೋ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಈಗ ಯಾವ ಸಚಿವರು ಸಹ ಬಾಯಿ ಬಿಡುತ್ತಿಲ್ಲ. ಸ್ಟಿಂಗ್ ಆಪರೇಷನ್ ನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮ ಆಗಲಿದೆ ಎಂದವರು ಹೇಳಿದರು.
ಸಿದ್ದರಾಮಯ್ಯರನ್ನ ಈಗ ಒಬ್ಬಂಟಿ ಮಾಡಿದ್ದಾರೆ!
ಮನುಷ್ಯನಲ್ಲಿ ದೌರ್ಬಲ್ಯಗಳಿರುತ್ತೆ, ಈ ಮಾತನ್ನ ಸಿದ್ದರಾಮಯ್ಯನವರಿಗೆ ಹೇಳ್ತಿಲ್ಲ. ಗೊತ್ತಿರುವವರೇ ಈ ಸ್ಟಿಂಗ್ ಬದುಕನ್ನ ಮಾಡ್ತಾರೆ. ಸಿದ್ದರಾಮಯ್ಯರನ್ನ ಯಾಕೇ ಬಲಿ ಕೊಟ್ರಿ? ಸಿದ್ದರಾಮಯ್ಯರನ್ನ ಈಗ ಒಬ್ಬಂಟಿ ಮಾಡಿದ್ದಾರೆ. ಕೈ ಹಿಡಿದು ನಾವೆಲ್ಲ ಒಂದು ಎಂದಿದ್ದ ರಾಹುಲ್ ಗಾಂಧಿ ಎಲ್ಲಿ ಹೋದ್ರು ಈಗ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಇಲ್ಲದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಾ ಇರ್ಲಿಲ್ಲ:
ಸಿದ್ದರಾಮಯ್ಯ ಇಲ್ಲ ಎಂದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದ ಕೆ.ಎಸ್. ಈಶ್ವರಪ್ಪ, ಬರುವ ಚುನಾವಣೆ ಒಳಗಡೆ ಮೂರನೇ ಸಿಎಂ ಬರಬಹುದು ಗೊತ್ತಿಲ್ಲ? ಸಿದ್ದರಾಮಯ್ಯರನ್ನ ಹರಕೆ ಕುರಿ ಮಾಡಿ ಬಿಟ್ಟಿದ್ದಾರೆ. ರಾಜೀನಾಮೆ ಕೊಡುವ ಎರಡು ದಿನ ಮುಂಚೇಯೇ ಸಿಎಂ ಕುರ್ಚಿ ಖಾಲಿ ಇಲ್ಲ ಎಂದಿದ್ದರು ಅಪ್ಪ ಮಕ್ಕಳು ಎಂದು ಲೇವಡಿ ಮಾಡಿದರು.
ಇದೇ ವೇಳೆ, ಸಿಜೆಪಿ-ಕಾಂಗ್ರೆಸ್ ಎರಡೂ ಒಂದೆ ಎನ್ನುವ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎಸ್, ಈಶ್ವರಪ್ಪ, ಪ್ರಿಯಾಂಕ ಖರ್ಗೆ ಒಬ್ಬ ಬಫೂನ್ ಎಂದರು.