SOCIAL MEDIA

Newsletter

PARTNER SITES
Select Language Select State

ಹೃದಯಾಘಾತದ ನಡುವೆಯೂ ಮಕ್ಕಳ ಜೀವ ಉಳಿಸಿ ಬಸ್ ಚಾಲಕ ಸಾ*ವು!

ತನಗೆ ತೀವ್ರ ಹೃದಯಾಘಾತವಾಗುತ್ತಿದ್ದರೂ, ಕೊನೆಯ ಕ್ಷಣದಲ್ಲೂ ಸಮಯಪ್ರಜ್ಞೆ ಮೆರೆದ ಶಾಲಾ ಬಸ್ ಚಾಲಕನೊಬ್ಬ ಹಲವು ಮಕ್ಕಳ ಪ್ರಾಣ ಉಳಿಸಿ ತಾನು ಮೃತಪಟ್ಟ ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 20, 2026, 20:20 IST | Updated: Nov 20, 2026, 21:09 IST
Image Credit: Koppa chikkamagaluru
Join

ಚಿಕ್ಕಮಗಳೂರು (ಕೊಪ್ಪ): ತೀವ್ರ ಹೃದಯಾಘಾತವಾಗುತ್ತಿದ್ದರೂ, ಸಾವಿನ ಅಂಚಿನಲ್ಲೂ ಸಮಯಪ್ರಜ್ಞೆ ಮೆರೆದ ಶಾಲಾ ಬಸ್ ಚಾಲಕನೊಬ್ಬ ಹತ್ತಾರು ಪುಟ್ಟ ಮಕ್ಕಳ ಪ್ರಾಣ ಉಳಿಸಿ ತಾನು ಪ್ರಾಣಬಿಟ್ಟ ಮನಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಹೌದು.. ತೀರ್ಥಹಳ್ಳಿ ತಾಲ್ಲೂಕಿನ ಬಸವಾನಿ ಗ್ರಾಮದ ನಿವಾಸಿ ಲಕ್ಷ್ಮಣ (65) ಮೃತಪಟ್ಟ ದುರ್ದೈವಿ ಚಾಲಕ. ಎಂದಿನಂತೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಲಕ್ಷ್ಮಣ ಅವರಿಗೆ ಕೊಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ಅಮ್ಮಡಿ ಗ್ರಾಮದ ಬಳಿ ಬಸ್ ಚಲಾಯಿಸುತ್ತಿರುವಾಗಲೇ ಏಕಾಏಕಿ ತೀವ್ರ ಎದೆ ನೋವು ಕಾಣಿಸಿಕೊಂಡಿದೆ.

ಹೃದಯಾಘಾತದ ತೀವ್ರತೆ ಹೆಚ್ಚಾಗುತ್ತಿದ್ದಂತೆ ತಾನು ಇನ್ನು ಹೆಚ್ಚು ಹೊತ್ತು ಬಸ್ ಚಲಾಯಿಸಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರಿವಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಲಕ್ಷ್ಮಣ ಅವರು, ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳುವುದನ್ನೋ ಅಥವಾ ಬೇರೆ ವಾಹನಗಳಿಗೆ ಡಿಕ್ಕಿಯಾಗುವುದನ್ನೋ ತಪ್ಪಿಸಲು ಮುಂದಾಗಿದ್ದಾರೆ. ತೀವ್ರ ನೋವಿನ ನಡುವೆಯೂ ಬಸ್ಸನ್ನು ರಸ್ತೆ ಬದಿಯ ಮರವೊಂದಕ್ಕೆ ತಾಗಿಸಿ ನಿಲ್ಲಿಸುವ ಮೂಲಕ ಸಂಭವಿಸಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಅಪಘಾತದ ರಭಸಕ್ಕೆ ಬಸ್‌ನ ಮುಂಭಾಗ ಜಖಂಗೊಂಡಿದ್ದು, ಚಾಲಕ ಲಕ್ಷ್ಮಣ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದರೆ, ಅವರ ಸಮಯಪ್ರಜ್ಞೆ ಮತ್ತು ಮುಂಜಾಗ್ರತೆಯಿಂದಾಗಿ ಬಸ್‌ನಲ್ಲಿದ್ದ ಎಲ್ಲಾ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಮಕ್ಕಳನ್ನು ಕೊಪ್ಪ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಕ್ಕಳೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ತನ್ನ ಪ್ರಾಣ ಹೋಗುವ ಕೊನೆಯ ಕ್ಷಣದಲ್ಲೂ ಮಕ್ಕಳ ಸುರಕ್ಷತೆಯ ಬಗ್ಗೆ ಯೋಚಿಸಿದ ಚಾಲಕ ಲಕ್ಷ್ಮಣ ಅವರ ಕರ್ತವ್ಯ ನಿಷ್ಠೆಗೆ ಸ್ಥಳೀಯರು ಹಾಗೂ ಪೋಷಕರು ಕಂಬನಿ ಮಿಡಿದಿದ್ದಾರೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳಪೆ ರಸ್ತೆ ಪ್ಯಾಚ್ ವರ್ಕ್: ಗುತ್ತಿಗೆದಾರರಿಗೆ ಸ್ಥಳೀಯರಿಂದ ಫುಲ್ ಕ್ಲಾಸ್

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಆಲ್ದೂರು ಗ್ರಾಮದಲ್ಲಿ ಕಳಪೆ ಮಟ್ಟದ ರಸ್ತೆ ಪ್ಯಾಚ್ ವರ್ಕ್ (ಗುಂಡಿ ಮುಚ್ಚುವ ಕಾಮಗಾರಿ) ನಡೆಸುತ್ತಿದ್ದ ಗುತ್ತಿಗೆದಾರರನ್ನು ಸ್ಥಳೀಯರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ರಸ್ತೆ ಗುಂಡಿಗಳಿಗೆ ಸರಿಯಾಗಿ ಟಾರ್ (ಡಾಂಬರು) ಹಾಕದೆ, ಕೇವಲ ಜಲ್ಲಿ ಸುರಿದು ಮೇಲೆ ಅಲ್ಪಸ್ವಲ್ಪ ಡಾಂಬರ್ ಹಾಕಿ ಕಣ್ಣೊರೆಸುವ ತಂತ್ರ ಮಾಡುತ್ತಿದ್ದ ಕಾಮಗಾರಿಯನ್ನು ಗ್ರಾಮಸ್ಥರು ಸ್ಥಳದಲ್ಲೇ ಕೆರೆದು ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು. "ದುಡ್ಡು ಸರ್ಕಾರದ್ದು, ನಿಮ್ಮ ಅಪ್ಪನ ಮನೆಯದ್ದಲ್ಲ; ಮಾಡುವ ಕೆಲಸವನ್ನು ಸರಿಯಾಗಿ ಮಾಡಿ. ಕಳಪೆ ಕೆಲಸ ಮಾಡಿ ನಿಮ್ಮ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸಬೇಕಾ?" ಎಂದು ಸ್ಥಳೀಯರು ಗುತ್ತಿಗೆದಾರರನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ.

"ಕೆಳಗೆ ಟಾರ್ ಹಾಕಿ, ನಂತರ ಜಲ್ಲಿ ಹಾಕಿ, ಮತ್ತೆ ಮೇಲೆ ಟಾರ್ ಹಾಕಿ ಸರಿಯಾಗಿ ಪ್ಯಾಚ್ ವರ್ಕ್ ಮಾಡಬೇಕು. ಸುಮ್ಮನೆ ಜಲ್ಲಿ ಸುರಿದು ಮೇಲೆ ಡಾಂಬರ್ ಸುರಿದು ಹೋದರೆ ಎರಡೇ ದಿನಕ್ಕೆ ಕಿತ್ತುಹೋಗುತ್ತದೆ. ಈಗ ಹೇಗೆ ಪ್ಯಾಚ್ ಹಾಕ್ತೀರಾ ಹಾಕಿ ತೋರಿಸಿ" ಎಂದು ಸ್ಥಳೀಯರು ಗುತ್ತಿಗೆದಾರರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಪಟ್ಟು ಹಿಡಿದಿದ್ದಾರೆ.

ಕಾಡುಕೋಣದ ದಾಳಿಗೆ ಕಾರ್ಮಿಕ ಗಂಭೀರ ಗಾಯ: ಜಿಲ್ಲಾಸ್ಪತ್ರೆಗೆ ದಾಖಲು

ಚಿಕ್ಕಮಗಳೂರು ಮೂಡಿಗೆರೆ ತಾಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಕಾಡುಕೋಣ ಏಕಾಏಕಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಗಾಯಗೊಂಡ ಕೂಲಿ ಕಾರ್ಮಿಕನನ್ನು ಸತ್ಯ ಎಂದು ಗುರುತಿಸಲಾಗಿದೆ. ಮೂಡಿಗೆರೆ ಅರಣ್ಯ ವಲಯದ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಗಂಭೀರವಾಗಿ ಗಾಯಗೊಂಡ ಸತ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕಾಡುಕೋಣ ದಾಳಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಸ್ಥಳೀಯ ಕಾರ್ಮಿಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES