ಹೆಡ್‌ಲೈಟ್ ಇಲ್ಲದೆ ಕತ್ತಲಲ್ಲಿ ವಾಹನ ಚಲಾಯಿಸುವುದು ಸಹ ಯಾವುದೇ ಸಾಹಸಕ್ಕಿಂತ ಕಡಿಮೆ ಇಲ್ಲ. ಆದರಿಲ್ಲಿ ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ಸುಮಾರು 60 ಕಿ.ಮೀ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹೆಡ್‌ಲೈಟ್ ಇಲ್ಲದೆಯೇ ರಾತ್ರಿ ವೇಳೆ ಬಸ್ ಡ್ರೈವ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಾಹಸಮಯ ದೃಶ್ಯವನ್ನು ಬೈಕ್ ಸವಾರರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಸಾಹಸಮಯ ಡ್ರೈವಿಂಗ್‌ಗೆ ಪ್ರಯಾಣಿಕರು ಫಿದಾ!
ಹೌದು, ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ರಸ್ತೆ ಹಲವು ತಿರುವುಗಳಿಂದ ಕೂಡಿದ್ದು ಇಂತಹ ದುರ್ಗಮ ರಸ್ತೆಯಲ್ಲೂ ಕೂಡ ಧೃತಿಗೆಡದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹೆಡ್‌ಲೈಟ್ ಇಲ್ಲದಿದ್ದರೂ ರಾತ್ರಿ ವೇಳೆ ಪ್ರಯಾಣಿಕರನ್ನು ಸುರಕ್ಷಿತವಾಗಿ ನಿಲ್ದಾಣ ತಲುಪಿಸಿದ್ದಾರೆ. ಸರ್ಕಾರಿ ಬಸ್ ಚಾಲಕನ ಈ ಸಾಹಸಕ್ಕೆ ಪ್ರಯಾಣಿಕರು ಶಹಬಾಸ್ ಎಂದಿದ್ದಾರೆ.
ಶೃಂಗೇರಿಯಿಂದ ಚಿಕ್ಕಮಗಳೂರಿಗೆ ಸಂಪರ್ಕಿಸುವ ಗುಂಡಿ-ಗೊಟರಿನ ರಸ್ತೆಯಲ್ಲಿ ಹೆಡ್ ಲೈಟ್ ಇಲ್ಲದಿದ್ದರೂ ಸರ್ಕಾರಿ ಬಸ್ಸನ್ನ 60 ಕಿ.ಮೀ. ಸುರಕ್ಷಿತವಾಗಿ ಚಾಲನೆ ಮಾಡಿರುವ ಕೆ.ಎಸ್.ಆರ್.ಟಿ.ಸಿ. ಚಾಲಕನ ಚಾಲನೆಗೆ ಹ್ಯಾಟ್ಸಾಫ್ ಹೇಳಲೇಬೇಕು ಎಂದು ಬಸ್ ಪ್ರಯಾಣಿಕರು ಚಾಲಕನ ಸಾಹಸವನ್ನು ಹಾಡಿ ಹೊಗಳಿದ್ದಾರೆ.
ರಾತ್ರಿ ಶೃಂಗೇರಿಯಿಂದ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್:
ಶೃಂಗೇರಿಯಿಂದ ರಾತ್ರಿ 10.30ಕ್ಕೆ ಹೊರಟು ಚಿಕ್ಕಮಗಳೂರಿಗೆ ಬಂದಿರೋ ಕೋಲಾರ ಡಿಪೋದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಾತ್ರಿ ವೇಳೆ ದಾರಿಯನ್ನು ನೋಡಲು ಅಗತ್ಯವಾಗಿ ಬೇಕಿರುವ ಹೆಡ್‌ಲೈಟ್ ಇರಲೇ ಇಲ್ಲ. ಈ ಸಾಹಸಮಯ ದೃಶ್ಯವನ್ನು ಬೈಕ್ ಸವಾರರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಡ್ರೈವಿಂಗ್ ವೇಳೆ ಚಾಲಕನ ಪರದಾಟದ ದೃಶ್ಯ ಸದ್ಯ ಸಖತ್ ವೈರಲ್ ಆಗಿದೆ.
ಸರ್ಕಾರಿ ಬಸ್ ಹೆಡ್‌ಲೈಟ್ ಅರ್ಧದಲ್ಲಿ ಕೈ ಕೊಡ್ತೋ ಅಥವಾ ದುರಸ್ಥಿ ಮಾಡಿಲ್ಲವೋ ಎಂಬ ಅನುಮಾನ ಸ್ಥಳೀಯರದ್ದಾಗಿದೆ. ಮತ್ತೊಂದೆಡೆ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳು ಶಕ್ತಿ ಯೋಜನೆ ಎಫೆಕ್ಟ್‌ನಿಂದಾಗಿ ಬಸ್ ನಿರ್ವಹಣೆಗೂ ಸರ್ಕಾರದ ಬಳಿ ಹಣ ಉಳಿದಿಲ್ಲ. ಹಾಗಾಗಿ ಸರ್ಕಾರಿ ಬಸ್‌ಗಳ ನಿರ್ವಹಣೆ ಸರಿಯಾಗಿ ನಡೆದಿಲ್ಲ ಅಂತ ಸ್ಥಳೀಯರು ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದಲ್ಲಿ ಹಗಲಲ್ಲೇ ಓಡಾಡೋದೆ ಸಾಹಸ, ಭಾರೀ ಪ್ರಮಾಣದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಹಗಲಲ್ಲೇ ಸಂಚಾರ ದುಸ್ಥರ. ಅರಣ್ಯ-ಕಾಫಿತೋಟದ ಮಧ್ಯದಲ್ಲೇ ಸಾಗಬೇಕಾದ 60 ಕಿ.ಮೀ. ಮಾರ್ಗದಲ್ಲಿ ಅಂತಹ ದುರ್ಗಮ ಹಾದಿಯಲ್ಲಿ ಹೆಡ್‌ಲೈಟ್ ಇಲ್ಲದೇ ಬಸ್ ಚಲಾಯಿಸಿದ ಸರ್ಕಾರಿ ಬಸ್ ಚಾಲಕನಿಗೆ ಮಲೆನಾಡಿಗರು ಅಭಿನಂದನೆ ಸಲ್ಲಿಸಿದ್ದಾರೆ.