ಹಿರಿಯೂರು ಉಪಚುನಾವಣೆ: ಬಿಜೆಪಿ–ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಕದನ! ಹೆಚ್‌ಡಿಕೆ ಜೊತೆ ಚರ್ಚೆಗೆ ಕಮಲ ನಾಯಕರು ಸಜ್ಜು
ಮೈತ್ರಿ ಧರ್ಮವನ್ನ ಪಾಲಿಸುವುದರ ಜೊತೆಗೆ ಪಕ್ಷದ ರಾಜಕೀಯ ನೆಲೆಯನ್ನ ಉಳಿಸಿಕೊಳ್ಳುವುದು ಕಮಲ ನಾಯಕರ ಮುಂದಿರುವ ಉದ್ದೇಶವಾಗಿದೆ. ಆದರೆ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನ ನಿಲ್ಲಿಸುವ ಪ್ರಯತ್ನದಲ್ಲಿರುವುದರಿಂದ ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿದೆ.
Hiriyur Bypoll: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಚಟುವಟಿಕೆಗಳಿಗೆ ವೇದಿಕೆಯಾಗುವ ಲಕ್ಷಣಗಳು ಕಾಣಿಸುತ್ತಿವೆ. ಶಾಸಕ ಡಿ.ಸುಧಾಕರ್ ಅವರ ನಿಧನದಿಂದ ತೆರವಾಗಿರುವ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ ಚರ್ಚೆ ತೀವ್ರಗೊಂಡಿದೆ. ಹಿರಿಯೂರು ಕ್ಷೇತ್ರವನ್ನ ತನ್ನಲ್ಲೇ ಉಳಿಸಿಕೊಳ್ಳಬೇಕು ಎಂಬುದು ಬಿಜೆಪಿ ನಾಯಕರ ಒತ್ತಾಸೆಯಾಗಿದ್ದರೆ, ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಆಸಕ್ತಿ ತೋರಿದೆ ಎನ್ನಲಾಗಿದೆ. ಹೀಗಾಗಿ ಮೈತ್ರಿಕೂಟದೊಳಗೆ ಟಿಕೆಟ್ ಹಂಚಿಕೆಯೇ ಪ್ರಮುಖ ರಾಜಕೀಯ ಸವಾಲಾಗಿ ಪರಿಣಮಿಸಿದೆ.
ಹಿರಿಯೂರು ಕ್ಷೇತ್ರದ ಮೇಲೆ ಬಿಜೆಪಿ ಕಣ್ಣು
ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯ ಪಕ್ಷದ ನಾಯಕರ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕ್ಷೇತ್ರದ ಟಿಕೆಟ್ ವಿಚಾರವಾಗಿ ಚರ್ಚೆ ನಡೆದಿದ್ದು, ಅಭ್ಯರ್ಥಿಯನ್ನ ಆಯ್ಕೆ ಮಾಡಿ ಹೈಕಮಾಂಡ್‌ಗೆ ನಾಲ್ಕು ಹೆಸರುಗಳನ್ನ ಶಿಫಾರಸು ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಕಣಕ್ಕಿಳಿಸುವ ನಿಲುವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಈ ವಿಚಾರದಲ್ಲಿ ಜೆಡಿಎಸ್ ನಾಯಕರ ವಿಶ್ವಾಸವನ್ನೂ ಪಡೆಯಲು ಬಿಜೆಪಿ ಮುಂದಾಗಿದೆ.
ಮೈತ್ರಿ ಧರ್ಮವನ್ನ ಪಾಲಿಸುವುದರ ಜೊತೆಗೆ ಪಕ್ಷದ ರಾಜಕೀಯ ನೆಲೆಯನ್ನ ಉಳಿಸಿಕೊಳ್ಳುವುದು ಕಮಲ ನಾಯಕರ ಮುಂದಿರುವ ಉದ್ದೇಶವಾಗಿದೆ. ಆದರೆ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನ ನಿಲ್ಲಿಸುವ ಪ್ರಯತ್ನದಲ್ಲಿರುವುದರಿಂದ ಅಂತಿಮವಾಗಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬ ಕುತೂಹಲ ಮೂಡಿದೆ. ಮೈತ್ರಿಕೂಟದಲ್ಲಿ ಒಮ್ಮತದ ಅಭ್ಯರ್ಥಿಯನ್ನ ಆಯ್ಕೆ ಮಾಡುವುದು ಈಗ ಎರಡೂ ಪಕ್ಷಗಳ ನಾಯಕರಿಗೆ ಮುಖ್ಯವಾಗಿದೆ.
ಬಿಜೆಪಿಯಿಂದ ನಾಲ್ಕು ಹೆಸರುಗಳ ಚರ್ಚೆ
ಹಿರಿಯೂರು ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಾಲ್ವರು ಆಕಾಂಕ್ಷಿಗಳ ಹೆಸರುಗಳು ಚರ್ಚೆಯಲ್ಲಿವೆ ಎನ್ನಲಾಗಿದೆ. ರಾಜಣ್ಣ, ಮುರಳಿ, ಲಕ್ಷ್ಮಿಕಾಂತ ಮತ್ತು ದ್ಯಾಮಗೌಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ರಾಜಣ್ಣ, ಮುರಳಿ ಮತ್ತು ಲಕ್ಷ್ಮಿಕಾಂತ ಅವರು ಗೊಲ್ಲ ಸಮುದಾಯಕ್ಕೆ ಸೇರಿದವರಾಗಿದ್ದು, ದ್ಯಾಮಗೌಡ ಅವರು ಒಕ್ಕಲಿಗ ಸಮುದಾಯವನ್ನ ಪ್ರತಿನಿಧಿಸುತ್ತಾರೆ. ಸಾಮಾಜಿಕ ಸಮೀಕರಣಗಳು ಹಾಗೂ ಕ್ಷೇತ್ರದಲ್ಲಿನ ರಾಜಕೀಯ ಪ್ರಭಾವವನ್ನ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯನ್ನ ಆಯ್ಕೆ ಮಾಡುವ ಸಾಧ್ಯತೆಯಿದೆ.
ಈ ನಾಲ್ಕು ಹೆಸರುಗಳ ಪೈಕಿ ರಾಜಣ್ಣ ಅವರ ಹೆಸರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಈ ಕುರಿತು ಪಕ್ಷದ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದು, ಸ್ಥಳೀಯ ಮುಖಂಡರ ಅಭಿಪ್ರಾಯ ಹಾಗೂ ಗೆಲುವಿನ ಸಾಧ್ಯತೆಗಳನ್ನ ಪರಿಗಣಿಸಿದ ಬಳಿಕವೇ ಅಂತಿಮ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ.
ಕುಮಾರಸ್ವಾಮಿ ಜೊತೆ ಚರ್ಚೆಗೆ ಬಿಜೆಪಿ ನಾಯಕರು ಸಿದ್ಧತೆ
ಇನ್ನೊಂದೆಡೆ ಹಿರಿಯೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಬಿಜೆಪಿ ನಾಯಕರಲ್ಲಿ ಕ್ಷೇತ್ರವನ್ನ ಮೈತ್ರಿ ಪಕ್ಷಕ್ಕೆ ಬಿಟ್ಟುಕೊಡಬೇಕೇ ಅಥವಾ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೇ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಸಹಕರಿಸುವಂತೆ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲು ಕಮಲ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಮೈತ್ರಿಕೂಟದೊಳಗೆ ಯಾವುದೇ ಗೊಂದಲ ಉಂಟಾಗದಂತೆ ಮಾತುಕತೆ ಮೂಲಕ ಸಮಸ್ಯೆಯನ್ನ ಬಗೆಹರಿಸುವುದು ನಾಯಕರ ಉದ್ದೇಶವಾಗಿದೆ. ಅಗತ್ಯವಿದ್ದರೆ ಬಿಜೆಪಿ ಹೈಕಮಾಂಡ್ ಮಟ್ಟದಿಂದಲೂ ಕುಮಾರಸ್ವಾಮಿ ಅವರೊಂದಿಗೆ ಈ ಕುರಿತು ಚರ್ಚೆ ನಡೆಸುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಉಪಚುನಾವಣೆಯ ಟಿಕೆಟ್ ಹಂಚಿಕೆ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆಗೆ ಪರೀಕ್ಷೆಯಾಗಲಿದೆ.
ಪೂರ್ಣಿಮಾ ಶ್ರೀನಿವಾಸ್ ರಾಜಕೀಯ ಬದಲಾವಣೆ ಕುತೂಹಲ
ಹಿರಿಯೂರು ಕ್ಷೇತ್ರದ ರಾಜಕೀಯ ಇತಿಹಾಸವೂ ಈ ಉಪಚುನಾವಣೆಗೆ ಮಹತ್ವ ನೀಡಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪೂರ್ಣಿಮಾ ಶ್ರೀನಿವಾಸ್ ಅವರು ಗೆಲುವು ಸಾಧಿಸಿದ್ದರು. ಆದರೆ, ಅವರು ಈಗ ಕಾಂಗ್ರೆಸ್ ಪಕ್ಷದಲ್ಲಿರುವುದು ಕ್ಷೇತ್ರದ ರಾಜಕೀಯ ಲೆಕ್ಕಾಚಾರಕ್ಕೆ ಮತ್ತೊಂದು ಆಯಾಮ ನೀಡಿದೆ. ಈ ಹಿಂದೆ ಬಿಜೆಪಿ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಈಗ ಯಾವ ಪಕ್ಷ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಲಿದೆ, ಯಾರಿಗೆ ಟಿಕೆಟ್ ಸಿಗಲಿದೆ ಮತ್ತು ಮೈತ್ರಿಕೂಟದ ನಾಯಕರು ಯಾವ ರೀತಿಯ ಒಮ್ಮತಕ್ಕೆ ಬರಲಿದ್ದಾರೆ ಎಂಬುದರ ಮೇಲೆ ಮುಂದಿನ ರಾಜಕೀಯ ಬೆಳವಣಿಗೆಗಳು ಅವಲಂಬಿತವಾಗಿವೆ.
ಒಟ್ನಲ್ಲಿ ಹಿರಿಯೂರು ಉಪಚುನಾವಣೆ ಇನ್ನೂ ಅಭ್ಯರ್ಥಿಗಳ ಆಯ್ಕೆಯ ಹಂತದಲ್ಲಿದ್ದರೂ ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್ ವಿಚಾರವಾಗಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಬಿಜೆಪಿ ತನ್ನ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರೊಂದಿಗಿನ ಮಾತುಕತೆ ನಿರ್ಣಾಯಕವಾಗುವ ಸಾಧ್ಯತೆಯಿದೆ. ಅಂತಿಮವಾಗಿ ಹಿರಿಯೂರು ಕ್ಷೇತ್ರ ಯಾರ ಪಾಲಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.