SOCIAL MEDIA

Newsletter

PARTNER SITES
Select Language Select State

ಹಾಸನಾಂಬೆ ದರ್ಶನ ಪಡೆದ ಗಣ್ಯರು.. ವಿಶೇಷ ಪೂಜೆ ಸಲ್ಲಿಸಿದ ರಾಜಕೀಯ ನಾಯಕರು, ನಟಿಯರು!

ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ದಿನದಿಂದ ದಿನಕ್ಕೆ ಗಣ್ಯರ ದಂಡೇ ಹರಿದುಬರುತ್ತಿದೆ. ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ವಿವಿಧ ಮಠಗಳ ಮಠಾಧೀಶರು ದೇವಿಯ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Written By Ramya. R. Gowda
Published: Nov 03, 2026, 01:45 PM IST | Updated: Nov 03, 2026, 01:57 PM IST
Join

 

ಹಾಸನಾಂಬೆ ದರ್ಶನ ಪಡೆಯಲು ಗಣ್ಯರು ಸರತಿ ಸಾಲಿನಲ್ಲಿ ಬರುತ್ತಿದ್ದಾರೆ. ಎಂಎಲ್‌ಸಿ ಗಾಯತ್ರಿ ಶಾಂತೇಗೌಡ, ಶಾಸಕಿ ನಯನಾ ಮೋಟಮ್ಮ, ವಿನಯ್ ಗುರೂಜಿ ಹಾಗೂ ಮಾಜಿ ಎಂಎಲ್‌ಸಿ ಎಂ.ಎ. ಗೋಪಾಲಸ್ವಾಮಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.ಇನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ಹಿರಿಯ ನಟಿ ಪ್ರೇಮಾ ಹಾಗೂ ನಟಿ ಕಾರುಣ್ಯ ರಾಮ್ ಕೂಡ ಹಾಸನಾಂಬೆಯ ದರ್ಶನ ಪಡೆದು ದೇವಿಯ ಆಶೀರ್ವಾದ ಪಡೆದಿದ್ದಾರೆ.

ಇವರ ಜೊತೆಗೆ ವಿವಿಧ ಮಠಗಳ ಸ್ವಾಮೀಜಿಗಳು ಕೂಡ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಒಟ್ಟಿನಲ್ಲಿ ಹಾಸನಾಂಬೆಯ ದರ್ಶನಕ್ಕೆ ಗಣ್ಯರ ಆಗಮನ ಮುಂದುವರಿದಿದ್ದು, ದೇವಿಯ ಸನ್ನಿಧಿಯಲ್ಲಿ ಭಕ್ತಿಭಾವ ಮನೆಮಾಡಿದೆ.

ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ.. 8.5 ಲಕ್ಷ ಭಕ್ತರಿಂದ ದರ್ಶನ, 8 ಕೋಟಿ ರೂ. ಆದಾಯ!
 

ಹಾಸನದ ಅಧಿದೇವತೆ ಹಾಸನಾಂಬೆ ತಾಯಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಧರ್ಮದರ್ಶನದ ಸರತಿ ಸಾಲು ಕಿಲೋಮೀಟರ್‌ಗಟ್ಟಲೆ ವಿಸ್ತರಣೆಯಾಗಿದೆ. ರಾತ್ರೋರಾತ್ರಿ ಎಲ್ಲೆಲ್ಲಿಂದಲೋ ಭಕ್ತರು ಆಗಮಿಸುತ್ತಿದ್ದು, ತಾಯಿಯ ದರ್ಶನಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಇನ್ನು ಈ ಬಾರಿಯ ದರ್ಶನ ವ್ಯವಸ್ಥೆ ಐತಿಹಾಸಿಕವಾಗಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

ಹಾಸನಾಂಬೆ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ. ಪ್ರತಿದಿನವೂ ಪವಾಡದ ರೀತಿಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಧರ್ಮದರ್ಶನದ ಕ್ಯೂ ಕಿಲೋಮೀಟರ್‌ಗಟ್ಟಲೆ ವಿಸ್ತರಣೆಯಾಗಿದೆ. ರಾತ್ರೋರಾತ್ರಿ ಎಲ್ಲಿಂದ ಭಕ್ತರು ಬರುತ್ತಿದ್ದಾರೆ ಎಂಬುದೇ ತಿಳಿಯದಂತಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರೂ, ಅರ್ಚಕರು ಅತ್ಯಂತ ಸಮಾಧಾನದಿಂದ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ.

ಇನ್ನು ದರ್ಶನದ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯುತ್ತಿರುವುದಕ್ಕೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ಕಾರ್ಯವೈಖರಿಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ಇಡೀ ರಾತ್ರಿ ನಿದ್ದೆ ಮಾಡದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಇದು ಇತಿಹಾಸದಲ್ಲಿ ಉಳಿಯುವಂತಹ ವ್ಯವಸ್ಥೆ. ತಾಯಿಯ ದರ್ಶನದ ಭಾಗ್ಯ ಅಂತರಾಷ್ಟ್ರೀಯ ಮಟ್ಟಕ್ಕೂ ತಲುಪಿದ್ದು, ಎಲ್ಲರೂ ಈ ವ್ಯವಸ್ಥೆಯನ್ನು ಕೊಂಡಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನು ಈವರೆಗೆ ಬರೋಬ್ಬರಿ 8.5 ಲಕ್ಷ ಭಕ್ತರು ಹಾಸನಾಂಬೆ ತಾಯಿಯ ದರ್ಶನ ಪಡೆದಿದ್ದಾರೆ. ದೇವಾಲಯಕ್ಕೆ ಸುಮಾರು 8 ಕೋಟಿ ರೂಪಾಯಿ ಆದಾಯ ಬಂದಿದೆ. ಎಲ್ಲರ ಸಹಕಾರದಿಂದ ದರ್ಶನ ವ್ಯವಸ್ಥೆ ಯಾವುದೇ ಗೊಂದಲಗಳಿಲ್ಲದೆ ಸುಗಮವಾಗಿ ನಡೆಯುತ್ತಿದೆ. ನವೆಂಬರ್ 6ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನವೆಂಬರ್ 8ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಾಯಿಯ ದರ್ಶನಕ್ಕೆ ಆಗಮಿಸಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇನ್ನು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರಿಗೆ ಆಹ್ವಾನ ನೀಡುವ ವಿಚಾರವಾಗಿಯೂ ಸಚಿವ ಕೆ.ಎಂ.ಶಿವಲಿಂಗೇಗೌಡ ಸ್ಪಷ್ಟನೆ ನೀಡಿದ್ದಾರೆ. ಪ್ರೋಟೋಕಾಲ್ ಪ್ರಕಾರ ಅಧಿಕಾರಿಗಳನ್ನು ಕಳುಹಿಸಿ ಆಹ್ವಾನ ನೀಡಲಾಗಿದೆ. ತಹಶೀಲ್ದಾರ್ ಖುದ್ದಾಗಿ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಪಾಸ್ ವಿತರಣೆ ಸಂದರ್ಭದಲ್ಲಿ ತಹಶೀಲ್ದಾರ್ ಇಲ್ಲದ ಕಾರಣ ಬೇರೆ ಅಧಿಕಾರಿಯನ್ನು ಕಳುಹಿಸಲಾಗಿತ್ತು. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.

 ಹಾಸನಾಂಬೆ ದರ್ಶನೋತ್ಸವಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತದಿಂದ ವ್ಯವಸ್ಥೆ ಕಲ್ಪಿಸಲಾಗಿದೆ. ಖುದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರು ಸ್ಥಳದಲ್ಲಿದ್ದು, ದರ್ಶನೋತ್ಸವದ ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಭಕ್ತರಿಗೆ ಸುಗಮ ದರ್ಶನ, ಸರತಿ ಸಾಲುಗಳ ನಿರ್ವಹಣೆ ಹಾಗೂ ಅಗತ್ಯ ಸೌಲಭ್ಯಗಳ ಕಲ್ಪಿಸುವಿಕೆಗೆ ಒತ್ತು ನೀಡಲಾಗಿದೆ. ಮತ್ತೊಂದೆಡೆ, ಹಾಸನಾಂಬೆಯ ಸನ್ನಿಧಿಗೆ ಸಿನಿಮಾ ತಾರೆಯರ ಆಗಮನವೂ ವಿಶೇಷ ಆಕರ್ಷಣೆಯಾಗಿದೆ. ನಿನ್ನೆ ಚಿತ್ರನಟಿ ಸುಧಾ ಬೆಳವಾಡಿ, ನಟಿ ದೀಪಿಕಾ ದಾಸ್ ಹಾಗೂ ನಟ ದರ್ಶನ್ ಅವರ ಅತ್ತೆಯ ಮಗ ಚಂದ್ರಕುಮಾರ್ ಸೇರಿದಂತೆ ಹಲವು ಗಣ್ಯರು ತಾಯಿಯ ದರ್ಶನ ಪಡೆದಿದ್ದಾರೆ. ದೇವಿಯ ಸನ್ನಿಧಿಯಲ್ಲಿ ಕೈಮುಗಿದು ಪ್ರಾರ್ಥಿಸಿದ ನಟಿಯರು ಭಕ್ತಿಭಾವ ಮೆರೆದಿದ್ದಾರೆ. ಸಾಮಾನ್ಯ ಭಕ್ತರಿಂದ ಹಿಡಿದು ಗಣ್ಯರು, ಸಿನಿಮಾ ತಾರೆಯರವರೆಗೆ ಎಲ್ಲರನ್ನೂ ಒಂದೇ ಭಕ್ತಿಭಾವದಲ್ಲಿ ಬೆಸೆಯುತ್ತಿರುವುದು ಹಾಸನಾಂಬೆ ದರ್ಶನೋತ್ಸವದ ವಿಶೇಷವಾಗಿದೆ.

ಇನ್ನು ಹಾಸನಾಂಬೆ ದರ್ಶನೋತ್ಸವ ಭಕ್ತಿಯ ಜೊತೆಗೆ ಆದಾಯದ ದೃಷ್ಟಿಯಿಂದಲೂ ಗಮನ ಸೆಳೆಯುತ್ತಿದೆ. ಕೇವಲ ಮೂರು ದಿನಗಳಲ್ಲೇ ಐದು ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಆನ್‌ಲೈನ್ ಟಿಕೆಟ್ ಬುಕ್ಕಿಂಗ್, ನೇರವಾಗಿ ಮಾರಾಟ ಮಾಡಲಾಗುತ್ತಿರುವ ಸಾವಿರ ರೂಪಾಯಿ ಹಾಗೂ ಮುನ್ನೂರು ರೂಪಾಯಿಯ ವಿಶೇಷ ದರ್ಶನದ ಟಿಕೆಟ್‌ಗಳು ಮತ್ತು ಲಾಡು ಪ್ರಸಾದ ಮಾರಾಟದಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ತಾಯಿ ಹಾಸನಾಂಬೆಯ ದರ್ಶನ ಪಡೆಯಲು ಸಾವಿರಾರು ಭಕ್ತರು ಮುಗಿಬೀಳುತ್ತಿದ್ದಾರೆ. ದರ್ಶನಕ್ಕೆ ತಡವಾದರೂ ತಾಳ್ಮೆಯಿಂದ ಕಾಯುತ್ತಿರುವ ಭಕ್ತರು, ತಾಯಿಯ ದರ್ಶನದ ಬಳಿಕ ಸಾರ್ಥಕತೆಯ ಭಾವದೊಂದಿಗೆ ಮರಳುತ್ತಿದ್ದಾರೆ.
 

ತಾಯಿ ಹಾಸನಾಂಬೆಯ ದರ್ಶನಕ್ಕಾಗಿ ಭಕ್ತರ ದಂಡೇ ಹರಿದುಬರುತ್ತಿದೆ. ದರ್ಶನೋತ್ಸವದ ನಾಲ್ಕನೇ ದಿನವಾದರೂ ಭಕ್ತರ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ಧರ್ಮದರ್ಶನದ ಸಾಲುಗಳು, ಸಾವಿರ ರೂಪಾಯಿ ಹಾಗೂ ಮುನ್ನೂರು ರೂಪಾಯಿಯ ವಿಶೇಷ ದರ್ಶನದ ಸಾಲುಗಳು ಭಕ್ತರಿಂದ ತುಂಬಿ ತುಳುಕುತ್ತಿವೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು, ತಾಯಿಯ ದರ್ಶನ ಪಡೆದು ಭಕ್ತರು ಪುನೀತರಾಗುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದಷ್ಟೇ ಅಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ಗಣ್ಯರ ದಂಡೇ ಹಾಸನಾಂಬೆಯ ಸನ್ನಿಧಿಗೆ ಭೇಟಿ ನೀಡಿದೆ. 

ನಿನ್ನೆ  ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕುಟುಂಬ ಸಮೇತರಾಗಿ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಕೂಡ ತಾಯಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ದರ್ಶನದ ಬಳಿಕ ಮಾತನಾಡಿದ ವಿ. ಸೋಮಣ್ಣ, ಜಿಲ್ಲಾಡಳಿತವು ಹಾಸನಾಂಬೆ ಜಾತ್ರೆಯನ್ನು ವ್ಯವಸ್ಥಿತವಾಗಿ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಹಾಸನಾಂಬೆ ಜಾತ್ರೆಯ ಪ್ರಸಿದ್ಧಿ ಹೆಚ್ಚುತ್ತಿದ್ದು, ರಾಜ್ಯ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಭಾರತೀಯರ ನಂಬಿಕೆ ಮತ್ತು ಭಕ್ತಿ ಆಳವಾಗಿ ಬೇರೂರಿದ್ದು, ತಾಯಿಯ ದರ್ಶನ ಪಡೆದು ಕೃಪೆಗೆ ಪಾತ್ರರಾಗಿರುವುದು ಸಂತಸ ತಂದಿದೆ ಎಂದಿದ್ದಾರೆ. ಇತ್ತ ಮಾಜಿ ಸಚಿವ ಈಶ್ವರಪ್ಪ ಕೂಡ ಹಾಸನಾಂಬೆಯ ದರ್ಶನ ಪಡೆದು ದೇವಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದ್ದಾರೆ.
 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES