ಮಂಡ್ಯ: ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಸಂಭ್ರಮ ಕಳೆಗಟ್ಟಿದೆ. ಇಂದು ಮಧ್ಯಾಹ್ನ ನಡೆಯಲಿರುವ ಜಂಬೂಸವಾರಿ ಮೆರವಣಿಗೆಗೆ ಸಿದ್ಧತೆಗಳು ಪೂರ್ಣಗೊಂಡಿದ್ದು, ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಸಹ ಸಿದ್ಧವಾಗಿವೆ. ನಿನ್ನೆ ಧನಂಜಯ, ರೂಪ ಹಾಗೂ ಲಕ್ಷ್ಮಿ ಆನೆಗಳು ಶ್ರೀರಂಗಪಟ್ಟಣಕ್ಕೆ ಬಂದಿಳಿಯುತ್ತಿದ್ದಂತೆ ಅವುಗಳನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ಶ್ರೀರಂಗಪಟ್ಟಣದ ರಂಗನಾಥ ದೇವಾಲಯದ ಆವರಣದಲ್ಲಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಬಳಿಕ ದೇವಾಲಯದಲ್ಲಿ ಪೂಜೆ ಸಲ್ಲಿಸಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಯಿತು. ಆನೆಗಳ ಆಗಮನದಿಂದ ಪಟ್ಟಣದಲ್ಲಿ ದಸರಾ ಹಬ್ಬದ ವಾತಾವರಣ ಮತ್ತಷ್ಟು ಕಳೆಗಟ್ಟಿದ್ದು, ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಉತ್ಸಾಹ ಮನೆಮಾಡಿದೆ.
ಧನಂಜಯನ ಹೆಗಲೇರಲಿದೆ ಅಂಬಾರಿ:
ಇಂದು ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಧನಂಜಯ ಆನೆ ಅಂಬಾರಿ ಹೊತ್ತು ಸಾಗಲಿದೆ. ಧನಂಜಯನಿಗೆ ರೂಪ ಹಾಗೂ ಲಕ್ಷ್ಮಿ ಆನೆಗಳು ಸಾಥ್ ನೀಡಲಿವೆ. ದಸರಾ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವೈಭವ ಮತ್ತು ಉತ್ಸವದ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ.
ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಜಂಬೂಸವಾರಿ ಮೆರವಣಿಗೆಯೂ ಒಂದಾಗಿದೆ. ಅಲಂಕೃತ ಆನೆಗಳೊಂದಿಗೆ ನಡೆಯುವ ಈ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಪ್ರತಿ ವರ್ಷ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈ ಬಾರಿಯೂ ಮೆರವಣಿಗೆಯನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆಗಳು ನಡೆಯುತ್ತಿವೆ.
ನಟ ವಿ.ರವಿಚಂದ್ರನ್ ಅವರಿಂದ ಚಾಲನೆ:
ಅಕ್ಟೋಬರ್ 15 ರಿಂದ ಅಕ್ಟೋಬರ್ 18 ರವರೆಗೆ ಅದ್ಧೂರಿಯಾಗಿ ನಡೆಯಲಿದೆ. ಖ್ಯಾತ ನಟ ವಿ. ರವಿಚಂದ್ರನ್ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ನಂದಿ ಧ್ವಜದ ಪೂಜೆ ನಡೆಯಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಜಂಬೂ ಸವಾರಿ ಮೆರವಣಿಗೆಗೆ ನಟ ರವಿಚಂದ್ರನ್ ಚಾಲನೆ ನೀಡಲಿದ್ದಾರೆ. ಜಂಬೂ ಸವಾರಿ ಜೊತೆ 50 ಕ್ಕೂ ಹೆಚ್ಚು ಜಾನಪದ ಕಲಾ ತಂಡಗಳು ಮತ್ತು 30 ಸ್ತಬ್ಧ ಚಿತ್ರಗಳು ಸಾಗಲಿವೆ.
ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಶ್ರೀರಂಗಪಟ್ಟಣದ ಪ್ರಮುಖ ಬೀದಿಗಳು, ವೃತ್ತಗಳು ಮತ್ತು ಮರಗಳಿಗೆ ಸೆಸ್ಕ್ (CESC) ವತಿಯಿಂದ ಆಕರ್ಷಕ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಸಾವಿರಾರು ದೀಪಗಳಿಂದ ಶ್ರೀರಂಗಪಟ್ಟಣ ಕ ಗೊಳಿಸುತ್ತಿದೆ. ಅಕ್ಟೋಬರ್ 21 ರವರೆಗೆ ದೀಪಗಳ ಅಲಂಕಾರ ಇರಲಿದೆ.
ಐತಿಹಾಸಿಕ ಶ್ರೀರಂಗಪಟ್ಟಣದ ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ. ಆನೆಗಳ ಸಾಂಪ್ರದಾಯಿಕ ಸ್ವಾಗತದೊಂದಿಗೆ ಆರಂಭವಾಗಿರುವ ಸಂಭ್ರಮ, ನಾಳಿನ ಜಂಬೂಸವಾರಿ ಮೆರವಣಿಗೆಯೊಂದಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.