SOCIAL MEDIA

Newsletter

PARTNER SITES
Select Language Select State

ಸಿದ್ದರಾಮಯ್ಯರಿಗೆ ಅಧಿಕಾರ ಕಳೆದುಕೊಂಡ ಮೇಲೆ ದಲಿತರು, ಸಂವಿಧಾನ ನೆನಪಾಗಿದೆ : ಪ್ರತಾಪ್‌ ಸಿಂಹ

ಸಂವಿಧಾನ ದಿನಾಚರಣೆಯ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ಕಾಂಗ್ರೆಸ್ ಆಡಳಿತಾವಧಿ, ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 27, 2026, 21:22 IST | Updated: Nov 27, 2026, 21:24 IST
Image Credit: Prathap Simha
Join

ಮೈಸೂರು: ಕಾಂಗ್ರೆಸ್ ಪಕ್ಷದ ಆಡಳಿತಾವಧಿ, ಸಂವಿಧಾನ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಇತ್ತೀಚೆಗೆ ಕೊಡಗಿನಲ್ಲಿ ತಾವು ನೀಡಿದ್ದ ಹೇಳಿಕೆಗೂ ಸ್ಪಷ್ಟನೆ ನೀಡಿದರು.. ಅಲ್ಲದೆ, ಕಾಂಗ್ರೆಸ್ ವಿರುದ್ಧ ಸರಣಿ ಆರೋಪಗಳನ್ನು ಮಾಡಿದರು.

ಕಾಂಗ್ರೆಸ್, ಸಂವಿಧಾನ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, "ಈ ದೇಶವನ್ನು ಕಾಂಗ್ರೆಸ್ 54 ವರ್ಷ 4 ತಿಂಗಳು ಆಡಳಿತ ಮಾಡಿದೆ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡ ಮೇಲೆ ಈಗ ದಲಿತರು, ಸಂವಿಧಾನ ನೆನಪಾಗಿದೆ" ಎಂದು ಟೀಕಿಸಿದರು. 1955ರಲ್ಲಿ ನೆಹರು ಮತ್ತು 1976ರಲ್ಲಿ ಇಂದಿರಾ ಗಾಂಧಿ ತಮಗೆ ತಾವೇ 'ಭಾರತ ರತ್ನ' ಕೊಟ್ಟುಕೊಂಡರು, ಆದರೆ ಡಾ. ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡಲಿಲ್ಲ. ಅಂಬೇಡ್ಕರ್ ಅವರ ಅಂತ್ಯಕ್ರಿಯೆಗೆ ಒಂದು ಎಕರೆ ಜಾಗವನ್ನೂ ನೀಡದ ಕಾಂಗ್ರೆಸ್, ನೆಹರು, ಇಂದಿರಾ ಗಾಂಧಿ ಮತ್ತು ಸಂಜಯ್ ಗಾಂಧಿ ಸ್ಮಾರಕಗಳಿಗೆ ನೂರಾರು ಎಕರೆ ಜಾಗ ನೀಡಿದೆ. ಅವರ ಮೃತದೇಹ ತರಲು ವಿಮಾನ ನೀಡಲೂ ಹಣವಿರಲಿಲ್ಲ ಎಂದು ಆರೋಪಿಸಿದರು.

ಕಾರ್ಯಕ್ರಮದ ಕುರಿತು ವ್ಯಂಗ್ಯವಾಡಿದ ಅವರು, ಸರ್ಕಾರದ ಹಣದಲ್ಲಿ ಕಾರ್ಯಕ್ರಮ ಆಯೋಜಿಸಿ, ಜನರನ್ನು ಕರೆತರಲು ಹಣ ಹಂಚಿ ಬಸ್ ಕಳುಹಿಸಲಾಗಿದೆ, ಆದರೆ ಶಾಲಾ ಮಕ್ಕಳಿಗೆ ಬಸ್ ಇಲ್ಲದ ಪರಿಸ್ಥಿತಿ ಇದೆ ಎಂದರು. ಚುನಾವಣಾ ಮತಗಳಿಗಾಗಿ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು. ಸಿದ್ದರಾಮಯ್ಯ ಅವರನ್ನು ವ್ಯಂಗ್ಯ ಮಾಡಿದ ಪ್ರತಾಪ್ ಸಿಂಹ, "ಸಿದ್ದರಾಮಯ್ಯ ಅವರು ಮನಮೋಹನ್ ಸಿಂಗ್ ಮತ್ತು ಅಮರ್ತ್ಯ ಸೇನ್ ಅವರಿಗಿಂತಲೂ ದೊಡ್ಡ ಅರ್ಥಶಾಸ್ತ್ರಜ್ಞರು" ಎಂದು ಕುಹುಕವಾಡಿದರು.

ಸಂವಿಧಾನದ ಪೀಠಿಕೆ ಮತ್ತು ತುರ್ತು ಪರಿಸ್ಥಿತಿಯ ವಿಚಾರ ಪ್ರಸ್ತಾಪಿಸಿದ ಅವರು, "ಸಂವಿಧಾನಕ್ಕೆ ಅಂಬೇಡ್ಕರ್ ಬರೆದಿದ್ದ ಪೀಠಿಕೆ ಈಗ ಇಲ್ಲ, ಇಂದಿರಾ ಗಾಂಧಿ ಬರೆಸಿದ ಪೀಠಿಕೆ ಇದೆ. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನೇ ಅಲುಗಾಡಿಸಲು ಹೊರಟವರು ಈಗ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ" ಎಂದು ಕಿಡಿಕಾರಿದರು. ಸಿದ್ದರಾಮಯ್ಯ ಅವರು ಎರಡು ಬಾರಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ, ಈಗಲಾದರೂ ನೀಡಬಹುದಿತ್ತು. ದಲಿತರ ಬಗ್ಗೆ ನಿಜವಾದ ಕಾಳಜಿ ಇರುವುದು ಬಿಜೆಪಿಗೆ ಮಾತ್ರ. ಮಾಯಾವತಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ಬಿಜೆಪಿ. ನಿಮ್ಮ ಮತ ಬ್ಯಾಂಕ್ ಪ್ರೇಮ ನಮಗೆ ಗೊತ್ತಿದೆ, ಸತ್ಯ ಮಾತನಾಡಿ ಸಿದ್ದರಾಮಯ್ಯನವರೇ ಎಂದು ಸವಾಲು ಹಾಕಿದರು.

ಕೊಡಗಿನ ಹೇಳಿಕೆಗೆ ಸ್ಪಷ್ಟನೆ
ಇತ್ತೀಚೆಗೆ ಕೊಡಗಿನ ಗೋಣಿಕೊಪ್ಪದಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಪ್ರತಾಪ್ ಸಿಂಹ, "ಕೊಡಗಿನ ಪ್ರತಿನಿಧಿಯಾಗಿ 10 ವರ್ಷ ಕೆಲಸ ಮಾಡಿದ್ದೇನೆ. ಕೊಡವರು ಮತ್ತು ಕೊಡಗಿನ ಸಂಸ್ಕೃತಿ ಎಂದರೆ ಕೇವಲ ಪುತ್ತರಿ, ಕಾವೇರಮ್ಮ ಅಷ್ಟೇ ಅಲ್ಲ. ನಮ್ಮ ಕಾಫಿ ತೋಟಗಳು, ಭತ್ತದ ಗದ್ದೆಗಳು ಹಾಳಾಗುತ್ತಿವೆ, ಕೇರಳದವರಿಗೆ ಮಾರಾಟವಾಗುತ್ತಿವೆ. ಯಾವುದೇ ಕಾರಣಕ್ಕೂ ಭೂಮಿ ಮಾರಾಟ ಮಾಡಬೇಡಿ ಎಂದು ನಾನು ಹೇಳಿದ್ದೆ" ಎಂದರು.

ಕೊಡಗಿನ ಮಲಯಾಳಿ ಹಿಂದೂಗಳು ನೀಡಿರುವ ದೂರಿನ ಕುರಿತು ಪ್ರತಿಕ್ರಿಯಿಸಿದ ಅವರು, "ಅವರು ಕೂಡ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು. ಕೇರಳದಲ್ಲಿ ನಮ್ಮ ಸಂಸ್ಕೃತಿ ಉಳಿಯುತ್ತಿಲ್ಲ. ನಾನು ಕೇರಳದಿಂದ ಬರುತ್ತಿರುವ ಹಿಂದೂ ವಿರೋಧಿಗಳಿಗೆ ಹೇಳಿದ್ದೇನೆ. ಸೋಮವಾರಪೇಟೆಯಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದು ಯಾರು? ಟಿಪ್ಪು ಜಯಂತಿ ಆಚರಿಸಲು ಸಿದ್ದರಾಮಯ್ಯ ಹೋದಾಗ ಅದನ್ನು ವಿರೋಧಿಸಿದ ಕುಟ್ಟಪ್ಪನನ್ನು ಕೊಂದವರು ಯಾರು? ಪ್ರವೀಣ್ ಪೂಜಾರಿ ಹತ್ಯೆ ಮಾಡಿದವರು ಯಾರು? ಗಣೇಶನ ಕುತ್ತಿಗೆ ಸೀಳಿದವರು ಯಾರು? ಮಡಿಕೇರಿ ನಗರಸಭೆಯಲ್ಲಿ ಬೀಫ್ ಮಾರಾಟ ಮಾಡುತ್ತೇವೆ ಎಂದು ಹೇಳಿದವರು ಯಾರು? ಇಂತಹ ಕೇರಳದವರು ಬಂದರೆ ನಮ್ಮ ಸಂಸ್ಕೃತಿ ಉಳಿಯುವುದಿಲ್ಲ ಎಂದು ಹೇಳಿದ್ದೇನೆ. ಕೊಡಗಿನಲ್ಲಿ ನೆಲೆಸಿರುವ ಸ್ಥಳೀಯರಿಗೆ ಇದಕ್ಕೂ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು.

ಗುಂಡ್ಲುಪೇಟೆಯ ಸುಲ್ತಾನ್ ಬತೇರಿ, ಹೆಚ್.ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ಭಾಗಗಳಲ್ಲಿ ಕೇರಳಿಗರು ತೋಟಗಳನ್ನು ಖರೀದಿಸಿ ನೆಲೆಸುತ್ತಿದ್ದಾರೆ. ಹಿಂದೂ ಹೆಸರುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, "ದೇಶ ಎಂದಾಗ ಭಾರತ, ರಾಜ್ಯ ಎಂದಾಗ ಕರ್ನಾಟಕ ಎಂಬುದು ನನ್ನ ಬದ್ಧತೆ. ಕೇರಳದ ಹಿಂದೂಗಳು ಕೂಡ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಎಚ್ಚರಿಕೆಯಿಂದ ಇರಬೇಕು, ಒಗ್ಗಟ್ಟಾಗಬೇಕು" ಎಂದು ಕರೆ ನೀಡಿದರು. ತಮಿಳುನಾಡಿನ ಕಾರ್ತಿಕ ಬೆಟ್ಟದಲ್ಲಿ ದೀಪ ಹಚ್ಚಲು ಉಂಟಾದ ಅಡ್ಡಿಯನ್ನು ಉಲ್ಲೇಖಿಸಿದ ಅವರು, ಅಂತಹ ಪರಿಸ್ಥಿತಿ ಕರ್ನಾಟಕದಲ್ಲಿ ಬರಬಾರದು; ಕನ್ನಡಿಗರ ನೆಲ-ಜಲದ ಆಕ್ರಮಣ ಹಾಗೂ ಕೊಡವರಿಗೆ ಎದುರಾಗುವ ಅಪಾಯವನ್ನು ತಾವು ವಿರೋಧಿಸುವುದಾಗಿ ಹೇಳಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES