‘ನಿಮ್ಮ ಬಗ್ಗೆ ಹೀಗೆ ಮಾತಾಡಿದ್ರೆ ಅಟ್ರಾಸಿಟಿ ಕೇಸ್ ಹಾಕ್ತಿದ್ರಿ!’ ಖರ್ಗೆಗೆ ಪ್ರತಾಪ್ ಸಿಂಹ ತಿರುಗೇಟು!
ತಮ್ಮ ವಿರುದ್ಧ ಯಾರಾದರೂ ಇದೇ ರೀತಿಯ ಹೇಳಿಕೆ ನೀಡಿದ್ದರೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನ ಮಲ್ಲಿಕಾರ್ಜುನ ಖರ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ.
Pratap Simha on Mallikarjun Kharge: ಪ್ರಧಾನಿ ನರೇಂದ್ರ ಮೋದಿ ಕುರಿತು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನ ಖಂಡಿಸುವುದರ ಜೊತೆಗೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯನ್ನ ಪ್ರಸ್ತಾಪಿಸಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿದ್ದಾರೆ.
ಖರ್ಗೆ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು
ಪ್ರಧಾನಿ ಮೋದಿ ಕುರಿತು ಮಲ್ಲಿಕಾರ್ಜುನ ಖರ್ಗೆ ಮಾತನಾಡಿರುವುದನ್ನ ಗಮನಿಸಿದ್ದೇನೆ. ಇಂತಹ ಮಾತುಗಳನ್ನ ಬೇರೆಯವರು ನಿಮ್ಮ ವಿರುದ್ಧ ಆಡಿದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಇದೇ ರೀತಿಯ ಮಾತುಗಳನ್ನ ಆಡಿದ್ದರೆ ಅಟ್ರಾಸಿಟಿ ಪ್ರಕರಣ ದಾಖಲಿಸುತ್ತಿದ್ದರು. ದಲಿತರಿಗೆ ಅವಮಾನ ಮಾಡಲಾಗಿದೆ ಎಂದು ಎಲ್ಲೆಡೆ ಪ್ರತಿಭಟನೆ ನಡೆಸುತ್ತಿದ್ದರು ಎಂದು ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯ ರಾಜಕಾರಣಿಯಾಗಿದ್ದು, ಸುಮಾರು 50 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಇಷ್ಟೊಂದು ವರ್ಷಗಳ ಅನುಭವವಿರುವ ನಾಯಕರು ಸಾರ್ವಜನಿಕವಾಗಿ ಮಾತನಾಡುವಾಗ ತಮ್ಮ ಮಾತುಗಳ ಬಗ್ಗೆ ಯೋಚಿಸಬೇಕು ಎಂದು ಹೇಳಿದ್ದಾರೆ.
‘ಮೊದಲು ಆತ್ಮಾವಲೋಕನ ಮಾಡಿಕೊಳ್ಳಿ’
ತಮ್ಮ ವಿರುದ್ಧ ಯಾರಾದರೂ ಇದೇ ರೀತಿಯ ಹೇಳಿಕೆ ನೀಡಿದ್ದರೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದರು ಎಂಬುದನ್ನ ಮಲ್ಲಿಕಾರ್ಜುನ ಖರ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ. ಹಿರಿಯ ರಾಜಕಾರಣಿಯಾಗಿರುವ ಖರ್ಗೆ ಅವರು ಮಾತನಾಡುವ ಮೊದಲು ತಮ್ಮ ಹೇಳಿಕೆಗಳ ಪರಿಣಾಮದ ಕುರಿತು ಯೋಚಿಸಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಕುರಿತು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸುವ ಮೂಲಕ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧವೂ ವಾಗ್ದಾಳಿ
ಇದೇ ಸಂದರ್ಭದಲ್ಲಿ ಆರ್‌ಎಸ್‌ಎಸ್ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಯನ್ನೂ ಪ್ರತಾಪ್ ಸಿಂಹ ಪ್ರಸ್ತಾಪಿಸಿದ್ದಾರೆ. ಜನರ ಬದುಕಿನ ಸಮಸ್ಯೆಗಳ ಬಗ್ಗೆ ಗಮನಹರಿಸುವ ಬದಲು ಅನಗತ್ಯ ವಿಚಾರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ದಸರಾ ಸಂದರ್ಭದಲ್ಲಿ ಹಕ್ಕಿ-ಪಿಕ್ಕಿ ಸಮುದಾಯದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನ ಉಲ್ಲೇಖಿಸಿದ ಅವರು, ಆ ಪ್ರಕರಣದಲ್ಲಿ ಪೊಲೀಸರು ಒಂದೇ ದಿನದಲ್ಲಿ ಆರೋಪಿಯನ್ನ ಪತ್ತೆಹಚ್ಚಿದ್ದರು ಎಂದು ತಿಳಿಸಿದ್ದಾರೆ. ಅಲ್ಲದೆ ಪ್ರಕರಣದ ಅಪರಾಧಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿದ್ದು, ಒಂದು ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
‘ಬಾಲಕಿಯ ಕುಟುಂಬದ ಬಗ್ಗೆ ಏಕೆ ಮಾತನಾಡಿಲ್ಲ?’
ಘಟನೆಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿಲುವನ್ನ ಪ್ರಶ್ನಿಸಿರುವ ಪ್ರತಾಪ್ ಸಿಂಹ, ಮೃತಪಟ್ಟ ಬಾಲಕಿ ಕಲಬುರಗಿಗೆ ಸೇರಿದವಳು ಎಂದು ತಿಳಿಸಿದ್ದಾರೆ. ಆ ಬಾಲಕಿ ದಲಿತ ಸಮುದಾಯಕ್ಕೆ ಸೇರಿದವಳಲ್ಲವೇ ಎಂದು ಪ್ರಶ್ನಿಸಿರುವ ಅವರು, ಈವರೆಗೆ ಬಾಲಕಿಯ ಬಗ್ಗೆ ಅಥವಾ ಪರಿಹಾರದ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲವೆಂದು ಆರೋಪಿಸಿದ್ದಾರೆ. ದಲಿತ ಸಮುದಾಯದ ಎಲ್ಲರ ಬಗ್ಗೆಯೂ ಕಾಳಜಿ ಇರಬೇಕಲ್ಲವೇ ಎಂದು ಪ್ರಶ್ನಿಸಿರುವ ಪ್ರತಾಪ್ ಸಿಂಹ, ದಲಿತರಲ್ಲಿಯೂ ನಿರ್ದಿಷ್ಟ ವರ್ಗದ ಜನರ ಬಗ್ಗೆ ಮಾತ್ರ ಕಾಳಜಿ ತೋರಿಸುತ್ತೀರಾ ಎಂದು ಪ್ರಿಯಾಂಕ್ ಖರ್ಗೆ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
‘ಜನರ ಸಮಸ್ಯೆಗಳಿಗೆ ಸ್ಪಂದಿಸಿ’
ಪ್ರಿಯಾಂಕ್ ಖರ್ಗೆ ಅವರು ಈ ಹಿಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ-ಬಿಟಿ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿರುವುದನ್ನ ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಅವರ ಆಡಳಿತಾತ್ಮಕ ಜವಾಬ್ದಾರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಜನರ ದಿನನಿತ್ಯದ ಬದುಕನ್ನ ಕಾಡುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು. ಪೊಲೀಸ್ ಇಲಾಖೆಯನ್ನ ಸದೃಢಗೊಳಿಸುವ ಕೆಲಸಗಳತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಪ್ರತಿನಿತ್ಯ ಅನಗತ್ಯ ವಿವಾದಗಳಲ್ಲಿ ತೊಡಗಿಸಿಕೊಳ್ಳುವುದನ್ನ ಬಿಟ್ಟು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕೆಂದು ಪ್ರಿಯಾಂಕ್ ಖರ್ಗೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ನೀಡಿರುವ ಈ ಹೇಳಿಕೆಗಳ ಮೂಲಕ ಪ್ರತಾಪ್ ಸಿಂಹ ಅವರು ಒಂದೆಡೆ ಪ್ರಧಾನಿ ಮೋದಿ ಕುರಿತು ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನ ಖಂಡಿಸಿದ್ದರೆ, ಮತ್ತೊಂದೆಡೆ ಆರ್‌ಎಸ್‌ಎಸ್ ವಿಚಾರವಾಗಿ ಪ್ರಿಯಾಂಕ್ ಖರ್ಗೆ ಅವರ ನಿಲುವನ್ನ ಪ್ರಶ್ನಿಸಿದ್ದಾರೆ. ಹಿರಿಯ ರಾಜಕಾರಣಿಗಳು ತಮ್ಮ ಹೇಳಿಕೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಅಂತಾ ಪ್ರತಾಪ್ ಸಿಂಹ ಹೇಳಿದ್ದಾರೆ.