Mysuru Dasara 2026: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ನಗರಿಯಲ್ಲಿ ನಾಡಹಬ್ಬದ ಸಂಭ್ರಮ ಮನೆಮಾಡಿದ್ದು, ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ಸಿದ್ಧತೆ ಸೇರಿದಂತೆ ಮೆರವಣಿಗೆಯ ಅಂತಿಮ ಹಂತದ ತಯಾರಿಗಳು ಭರದಿಂದ ಸಾಗಿವೆ. ಈ ಬಾರಿಯ ಜಂಬೂಸವಾರಿಯಲ್ಲಿ 53 ಸ್ತಬ್ಧಚಿತ್ರಗಳು, ಕನ್ನಡ ಚಿತ್ರರಂಗದ ತಾರೆಯರ ವಿಶೇಷ ಮೆರವಣಿಗೆ ಹಾಗೂ ಬಿಗಿ ಪೊಲೀಸ್ ಭದ್ರತೆ ಪ್ರಮುಖ ಆಕರ್ಷಣೆಗಳಾಗಿವೆ.
ಅಕ್ಟೋಬರ್ 21ರಂದು ನಡೆಯಲಿರುವ ಜಂಬೂಸವಾರಿಯನ್ನ ಕಣ್ತುಂಬಿಕೊಳ್ಳಲು ಮೈಸೂರು ಮಾತ್ರವಲ್ಲದೆ ರಾಜ್ಯದ ವಿವಿಧ ಭಾಗಗಳಿಂದಲೂ ಜನರು ಕಾತರದಿಂದ ಕಾಯುತ್ತಿದ್ದಾರೆ. ಅರಮನೆಯ ರಾಜವೈಭವ, ಸಾಂಸ್ಕೃತಿಕ ಪರಂಪರೆ ಮತ್ತು ನಾಡಿನ ವೈವಿಧ್ಯತೆಯನ್ನ ಒಂದೇ ಮೆರವಣಿಗೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಈ ಮಹೋತ್ಸವದ ವಿಶೇಷವಾಗಿದೆ.
ಗಜಪಡೆಯಿಂದ ಅಂತಿಮ ಹಂತದ ತಾಲೀಮು
ಮೈಸೂರು ಅರಮನೆ ಆವರಣದಲ್ಲಿ ಗಜಪಡೆ, ಅಶ್ವಾರೋಹಿ ದಳದ ಕುದುರೆಗಳು ಮತ್ತು ಪೊಲೀಸ್ ಬ್ಯಾಂಡ್ ತಂಡಗಳು ತಾಲೀಮು ನಡೆಸುತ್ತಿವೆ. ಚಿನ್ನದ ಅಂಬಾರಿ ಹೊತ್ತು ಸಾಗುವ ಜವಾಬ್ದಾರಿ ಸೇರಿದಂತೆ ಮೆರವಣಿಗೆಯ ವಿವಿಧ ಕಾರ್ಯಗಳಿಗೆ ಆನೆಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಬಾರಿಯ ಮೆರವಣಿಗೆಯ ನಾಯಕತ್ವದ ಜವಾಬ್ದಾರಿ ವಹಿಸಲಿರುವ ಆನೆ ಪ್ರಶಾಂತ್‌ಗೆ ಅರಣ್ಯಾಧಿಕಾರಿಗಳು ಪುಷ್ಪಾರ್ಚನೆ ಸಲ್ಲಿಸಿ ಗೌರವಿಸಿದ್ದಾರೆ. ಜಂಬೂಸವಾರಿಯ ಸಂದರ್ಭದಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಅರಮನೆ ಆವರಣದಲ್ಲಿ ಸಿದ್ಧತೆಗಳನ್ನ ಪರಿಶೀಲಿಸಲಾಗುತ್ತಿದೆ. ಗಜಪಡೆಯ ಹೆಜ್ಜೆ, ವಾದ್ಯಗಳ ನಾದ ಮತ್ತು ರಾಜಮಾರ್ಗದ ವೈಭವ ದಸರಾ ಮೆರವಣಿಗೆಯ ಪ್ರಮುಖ ಆಕರ್ಷಣೆಗಳಾಗಲಿವೆ.
53 ಸ್ತಬ್ಧಚಿತ್ರಗಳಲ್ಲಿ ನಾಡಿನ ವೈವಿಧ್ಯತೆಯ ಅನಾವರಣ
ಈ ಬಾರಿಯ ಜಂಬೂಸವಾರಿಯಲ್ಲಿ ಒಟ್ಟು 53 ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಮೈಸೂರಿನ ಬಂಡಿಪಾಳ್ಯ ಆರ್‌ಎಂಸಿ ವಾರ್ಡ್‌ನಲ್ಲಿ ಸ್ತಬ್ಧಚಿತ್ರಗಳ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಹಗಲು-ರಾತ್ರಿ ಶ್ರಮಿಸಿ ಸ್ತಬ್ಧಚಿತ್ರಗಳಿಗೆ ಅಂತಿಮ ರೂಪ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳನ್ನ ಬಿಂಬಿಸುವ 11 ಸ್ತಬ್ಧಚಿತ್ರಗಳು, ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಯೋಜನೆಗಳನ್ನ ಪರಿಚಯಿಸುವ 18 ಸ್ತಬ್ಧಚಿತ್ರಗಳು ಹಾಗೂ ಹೊರರಾಜ್ಯಗಳ ಸಂಸ್ಕೃತಿ ಮತ್ತು ಪರಂಪರೆಯನ್ನ ಪ್ರತಿಬಿಂಬಿಸುವ ಏಳು ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.
ಇದರ ಜೊತೆಗೆ ಕರ್ನಾಟಕದ 16 ಜಿಲ್ಲೆಗಳ ಐತಿಹಾಸಿಕ ತಾಣಗಳು, ಸಂಸ್ಕೃತಿ, ಜೀವನಶೈಲಿ ಮತ್ತು ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ಸ್ತಬ್ಧಚಿತ್ರಗಳು ಜನರ ಗಮನ ಸೆಳೆಯಲಿವೆ. ಅರಮನೆ ಆವರಣದಿಂದ ಆರಂಭವಾಗಿ ಬನ್ನಿಮಂಟಪದವರೆಗೆ ಸಾಗುವ ಈ ಮೆರವಣಿಗೆ, ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕರ್ನಾಟಕದ ಪರಂಪರೆಯನ್ನು ಸಾರುವ ವೇದಿಕೆಯಾಗಲಿದೆ.
ಸ್ಯಾಂಡಲ್‌ವುಡ್ ತಾರೆಯರಿಗೂ ವಿಶೇಷ ವೇದಿಕೆ
ಈ ಬಾರಿಯ ಜಂಬೂಸವಾರಿಯಲ್ಲಿ ಕನ್ನಡ ಚಿತ್ರರಂಗದ ತಾರೆಯರು ಭಾಗವಹಿಸುವ ನಿರೀಕ್ಷೆಯೂ ಇದೆ. ಇದಕ್ಕಾಗಿ ಎರಡು ವಿಶೇಷ ಅಂಬಾರಿ ಬಸ್‌ಗಳನ್ನ ಸಿದ್ಧಪಡಿಸಲಾಗುತ್ತಿದೆ. ಕನ್ನಡ ಚಿತ್ರರಂಗದ ಇತಿಹಾಸ ಮತ್ತು ಸಾಧನೆಗಳನ್ನ ಪ್ರತಿಬಿಂಬಿಸುವ ರೀತಿಯಲ್ಲಿ ಬಸ್‌ಗಳನ್ನ ಅಲಂಕರಿಸಲಾಗುತ್ತಿದೆ. ವರನಟ ಡಾ. ರಾಜ್‌ಕುಮಾರ್, ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಪುನೀತ್ ರಾಜ್‌ಕುಮಾರ್ ಮತ್ತು ಪ್ರಭಾಕರ್ ಅವರ ಭಾವಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತಿವೆ.
ರಾಕಿಂಗ್ ಸ್ಟಾರ್ ಯಶ್, ಶಿವರಾಜ್‌ಕುಮಾರ್, ಸುದೀಪ್, ರಿಷಬ್ ಶೆಟ್ಟಿ, ದುನಿಯಾ ವಿಜಯ್, ರಚಿತಾ ರಾಮ್ ಮತ್ತು ಸಪ್ತಮಿ ಗೌಡ ಸೇರಿದಂತೆ ಹಲವು ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಮೂಲಕ ನಾಡಹಬ್ಬದ ಸಂಭ್ರಮಕ್ಕೆ ಚಿತ್ರರಂಗದ ಮೆರುಗು ಕೂಡ ಸೇರುವ ಸಾಧ್ಯತೆಯಿದೆ.
ಭದ್ರತೆಗೆ ಸಾವಿರಾರು ಪೊಲೀಸರ ನಿಯೋಜನೆ
ದಸರಾ ಮಹೋತ್ಸವದ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುವ ಹಿನ್ನೆಲೆಯಲ್ಲಿ ಭದ್ರತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಸುಮಾರು 9 ಸಾವಿರ ಪೊಲೀಸ್ ಸಿಬ್ಬಂದಿಯನ್ನ ಭದ್ರತಾ ಕಾರ್ಯಕ್ಕೆ ನಿಯೋಜಿಸಲು ಸಿದ್ಧತೆ ಮಾಡಲಾಗಿದೆ. ಕೆಎಸ್‌ಆರ್‌ಪಿ, ಸಿಎಆರ್, ಬಾಂಬ್ ಪತ್ತೆ ದಳ, ಗರುಡ ಪಡೆ, ಬಾಂಬ್ ನಿಷ್ಕ್ರಿಯ ದಳ ಮತ್ತು ಹೋಂಗಾರ್ಡ್‌ಗಳು ಸೇರಿದಂತೆ ವಿವಿಧ ಭದ್ರತಾ ತಂಡಗಳು ಕಾರ್ಯನಿರ್ವಹಿಸಲಿವೆ. ದೊಡ್ಡ ಜನಸಂದಣಿಯನ್ನ ನಿಯಂತ್ರಿಸುವುದು, ಸಾರ್ವಜನಿಕರ ಸುರಕ್ಷತೆಯನ್ನ ಖಚಿತಪಡಿಸುವುದು ಮತ್ತು ಮೆರವಣಿಗೆ ಸುಗಮವಾಗಿ ಸಾಗುವಂತೆ ನೋಡಿಕೊಳ್ಳುವುದು ಭದ್ರತಾ ಸಿಬ್ಬಂದಿಯ ಪ್ರಮುಖ ಜವಾಬ್ದಾರಿಯಾಗಿದೆ.
ಪೊಲೀಸರಿಗೆ ಊಟದ ವ್ಯವಸ್ಥೆಗೂ ವಿಶೇಷ ಸಿದ್ಧತೆ
ದಸರಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಪೊಲೀಸ್ ಸಿಬ್ಬಂದಿಗೆ ಆಹಾರ ಒದಗಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸುಮಾರು 10 ಸಾವಿರ ಸಿಬ್ಬಂದಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟ ಸಿದ್ಧಪಡಿಸಲಾಗುತ್ತಿದೆ. ಸುಮಾರು 100 ಬಾಣಸಿಗರು ಮತ್ತು 100 ಅಡುಗೆ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿದ್ದಾರೆ. ಇಡ್ಲಿ, ವಡೆ, ಪೊಂಗಲ್, ಟೊಮೆಟೊ ಬಾತ್, ಅವಲಕ್ಕಿ ಸೇರಿದಂತೆ ವಿವಿಧ ಉಪಾಹಾರಗಳು ಹಾಗೂ ಊಟಕ್ಕೆ ಚಪಾತಿ, ಪಲ್ಯ, ಅನ್ನ, ಸಾಂಬಾರ್, ಮಜ್ಜಿಗೆ, ಸಿಹಿ ಮತ್ತು ಹಣ್ಣುಗಳನ್ನ ನೀಡುವ ವ್ಯವಸ್ಥೆ ಇದೆ. ನಗರದ ಸುಮಾರು 15 ಸ್ಥಳಗಳಲ್ಲಿ ಊಟ ವಿತರಣೆ ನಡೆಯಲಿದ್ದು, ರಾತ್ರಿ ಪಾಳಿಯ ಸಿಬ್ಬಂದಿಗೆ ಪಾರ್ಸೆಲ್ ಮೂಲಕ ಆಹಾರ ತಲುಪಿಸಲಾಗುತ್ತದೆ.
ಏರ್ ಶೋ, ಗೊಂಬೆಗಳ ಪ್ರದರ್ಶನವೂ ದಸರಾ ಮೆರುಗು
ಬನ್ನಿಮಂಟಪದಲ್ಲಿ ನಡೆದ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ವೈಮಾನಿಕ ಪ್ರದರ್ಶನವೂ ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ವಿಮಾನಗಳ ಸಾಹಸಮಯ ಹಾರಾಟ ಮತ್ತು ವೈಮಾನಿಕ ಕಸರತ್ತುಗಳನ್ನ ವೀಕ್ಷಿಸಿ ಜನರು ರೋಮಾಂಚನಗೊಂಡಿದ್ದಾರೆ. ಇನ್ನೊಂದೆಡೆ ಮೈಸೂರಿನ ಮನೆಗಳಲ್ಲಿ ಗೊಂಬೆ ಕೂರಿಸುವ ಸಂಪ್ರದಾಯವೂ ಮುಂದುವರಿದಿದೆ. ಗಿರಿದರ್ಶಿನಿ ಲೇಔಟ್‌ನ ಗೀತಾ ಶ್ರೀಹರಿ ಅವರ ಮನೆಯಲ್ಲಿ ಸುಮಾರು ಐದು ಸಾವಿರ ಗೊಂಬೆಗಳ ಪ್ರದರ್ಶನ ಗಮನ ಸೆಳೆದಿದೆ. ಕಳೆದ 19 ವರ್ಷಗಳಿಂದ ಅವರು ಈ ಸಂಪ್ರದಾಯವನ್ನ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಒಟ್ನಲ್ಲಿ ಗಜಪಡೆಯ ವೈಭವ, 53 ಸ್ತಬ್ಧಚಿತ್ರಗಳು, ಚಿತ್ರರಂಗದ ತಾರೆಯರ ಭಾಗವಹಿಸುವ ನಿರೀಕ್ಷೆ, ವೈಮಾನಿಕ ಪ್ರದರ್ಶನ ಮತ್ತು ಬಿಗಿ ಭದ್ರತೆಯೊಂದಿಗೆ ಮೈಸೂರು ದಸರಾ 2026ರ ಜಂಬೂಸವಾರಿ ನಾಡಿನ ಸಾಂಸ್ಕೃತಿಕ ಹೆಮ್ಮೆಯನ್ನ ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಲು ಸಜ್ಜಾಗಿದೆ.