SOCIAL MEDIA

Newsletter

PARTNER SITES
Select Language Select State

ಕಾಗದದಲ್ಲಿ ಹೆ*ಣ.. ಕಣ್ಣೆದುರು ಜೀವಂತ! ಮಂಡ್ಯ ಮಿಮ್ಸ್‌ ಆಸ್ಪತ್ರೆ, ನಗರಸಭೆಯ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲು

ರೇಷನ್‌ ಕಾರ್ಡ್‌ ಕೆವೈಸಿ ಮಾಡಲು ಹೋದ ಸಂದರ್ಭದಲ್ಲಿ ಮಂಡ್ಯದ ಮಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು ಬೆಳಕಿಗೆ ಬಂದಿದ್ದು, ಜೀವಂತ ವ್ಯಕ್ತಿಗೆ ಮಿಮ್ಸ್‌ ಆಸ್ಪತ್ರೆ ಹಾಗೂ ನಗರಸಭೆಯಿಂದ ಎರಡು ವರ್ಷಗಳ ಹಿಂದೆಯೇ ಡೆತ್‌ ಸರ್ಟಿಫಿಕೇಟ್ ನೀಡಲಾಗಿದೆ.

Written By Yashaswini V
Published: Sep 28, 2026, 09:29 AM IST | Updated: Sep 28, 2026, 09:47 AM IST
Join

ರೇಷನ್‌ ಕಾರ್ಡ್‌ ಕೆವೈಸಿ ಪೂರ್ಣಗೊಳಿಸುವ ಸಂದರ್ಭದಲ್ಲಿ ಬೆಚ್ಚಿಬೀಳುವ ಸತ್ಯವೊಂದು ಬಯಲುಗೊಂಡಿದ್ದು ಮಂಡ್ಯದ ಮಿಮ್ಸ್‌ ಆಸ್ಪತ್ರೆ ಜೀವಂತ ಇರುವ ವ್ಯಕ್ತಿಯನ್ನೇ ಸತ್ತಿದ್ದಾನೆ ಎಂದು ಬದುಕಿರುವ ವ್ಯಕ್ತಿಯ ಹೆಸರಿನಲ್ಲಿ ಡೆತ್‌ ಸರ್ಟಿಫಿಕೇಟ್‌ ನೀಡಿ ಅನಾಹುತ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ ಮಿಮ್ಸ್‌ ಆಸ್ಪತ್ರೆ ಹಾಗೂ ನಗರಸಭೆಯ ನಿರ್ಲಕ್ಷ್ಯದಿಂದಾಗಿ ಬಡ ಕುಟುಂಬವೊಂದು ಕಂಗಾಲಾಗಿದೆ. ಏನಿದು ಘಟನೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾಗದದಲ್ಲಿ ಹೆಣ ಕಣ್ಣೆದುರು ಜೀವಂತ! ಏನದು ಮಂಡ್ಯದ ಮಿಮ್ಸ್ ಆಸ್ಪತ್ರೆಯ ಮಹಾ ಎಡವಟ್ಟು?
ಕಾಗದದಲ್ಲಿ ಹೆಣವಾಗಿ ಕಣ್ಣೆದುರು ಜೀವಂತವಾಗಿರುವ ವ್ಯಕ್ತಿಯೇ ಶಫೀ ಉಲ್ಲಾ ಖಾನ್! ಮಿಮ್ಸ್‌ ಆಸ್ಪತ್ರೆ ಬದುಕಿರುವ ವ್ಯಕ್ತಿಯನ್ನ ಸಾಯಿಸಿ ಪ್ರಮಾದ ಮೆರೆದದ್ದು, ಜೀವಂತ ವ್ಯಕ್ತಿಗೆ 2 ವರ್ಷಗಳ ಹಿಂದೆಯೇ ಡೆತ್ ಸರ್ಟಿಫಿಕೇಟ್ ನೀಡಲಾಗಿದೆ. ವಿಶೇಷವೆಂದರೆ, ಕಳೆದ ವಿಧಾನಸಭೆ ಮತ್ತು ಸಂಸತ್‌ ಚುನಾವಣೆಗೆ ಮತ ಚಲಾಯಿಸಿದ್ದ ವ್ಯಕ್ತಿಯ ಹೆಸರನ್ನು ಪ್ರಸ್ತುತ ಮತದಾರರ ಪಟ್ಟಿಯಿಂದಲೇ ಡಿಲೀಟ್ ಮಾಡಲಾಗಿದೆ.

ಯಾರು ಈ ಶಫೀ ಉಲ್ಲಾ ಖಾನ್?
ಬದುಕಿದ್ದೂ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿರುವ ವ್ಯಕ್ತಿಯೇ ಶಫೀ ಉಲ್ಲಾ ಖಾನ್. ಶಫೀ ಉಲ್ಲಾ ಖಾನ್, ಮಂಡ್ಯದ ಗುತ್ತಲು ಬಡಾವಣೆಯ ಟಿಪ್ಪು ರಸ್ತೆ ನಿವಾಸಿ ಆಗಿದ್ದು,
ಪಡಿತರ ಚೀಟಿಗೆ ಕೆವೈಸಿ ಅಪ್ ಡೇಟ್ ಮಾಡಿಸಲು ಹೋದಾಗ ಮಂಡ್ಯ ನಗರಸಭೆ, ಮಿಮ್ಸ್ ಆಸ್ಪತ್ರೆ, ಆಹಾರ ಇಲಾಖೆ, ತಹಸೀಲ್ದಾರ್ ಕಚೇರಿ, ಡಿಸಿ ಕಚೇರಿ ದಾಖಲೆಗಳಲೆಲ್ಲ ಮೃತಪಟ್ಟಿರುವ ಮಾಹಿತಿ ಮುನ್ನೆಲೆಗೆ ಬಂದಿದೆ.

ಈ ಸಂಬಂಧ ನಗರಸಭೆ, ತಹಸೀಲ್ದಾರ್ ಕಚೇರಿ, ಡಿಸಿ ಕಚೇರಿಗೆ ಅಲೆದರೂ ಶಫೀ ಉಲ್ಲಾ ಖಾನ್ ಅವರಿಗೆ ನ್ಯಾಯವೇ ಸಿಗುತ್ತಿಲ್ಲ. ಪ್ರಕರಣ ದಾಖಲಿಸಿಕೊಳ್ಳದೇ ಪೊಲೀಸರಿಂದಲೂ ನಿರ್ಲಕ್ಷ್ಯ ವ್ಯಕ್ತವಾಗಿದೆ ಎಂದು ಸಂತ್ರಸ್ತರು ದೂರಿದ್ದಾರೆ.

ಬದುಕಿದ್ದರೂ ಸತ್ತಿದ್ದಾನೆ ಎಂದು ಮಂಡ್ಯ ಮಿಮ್ಸ್‌ ಆಸ್ಪತ್ರೆ ಮಹಾ ಎಡವಟ್ಟು ಮೆರೆದಿದ್ದರೂ ಈ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ಕೂಡ ಒಂದಿಲ್ಲೊಂದು ಕಾರಣ ನೀಡಿ ಕೇವಲ ಕಾಲಹರಣ ಮಾಡುತ್ತಿದ್ದಾರೆ. ಮಂಡ್ಯ ಪೂರ್ವ ಠಾಣೆಗೆ ದೂರು ಕೊಟ್ಟರೆ ಪಶ್ಚಿಮ ಠಾಣೆಗೆ ಹೋಗಿ ಎಂದು ಸಬೂಬು ಹೇಳಿದರೆ, ಪಶ್ಚಿಮ ಠಾಣೆಗೆ ಹೋದರೆ ಪೂರ್ವ ಠಾಣೆಗೆ ಹೋಗುವಂತೆ ಕಾಲಹರಣ ಮಾಡಲಾಗುತ್ತಿದೆ. ಪ್ರಕರಣ ದಾಖಲಿಸಿಕೊಳ್ಳದೇ ಬೇಜವಾಬ್ದಾರಿ ನಡೆ ಅನುಸರಿಸುತ್ತಿರುವ ಖಾಕಿ ಪಡೆ ಒಂದೆಡೆ ಆದರೆ, ಇತ್ತ ಮಿಮ್ಸ್ ಆಸ್ಪತ್ರೆಗೆ ಹೋದರೆ ಅಲ್ಲಿಯೂ ಬೇಜವಾಬ್ದಾರಿತನದ ಉತ್ತರ ಮಾತ್ರ ಸಿಗುತ್ತಿದೆ ಎಂದು ಶಫೀ ಉಲ್ಲಾ ಖಾನ್ ಅಳಲು ತೋಡಿಕೊಂಡಿದ್ದಾರೆ.

ಇಂದಿಗೂ ಜೀವಂತ ಇರುವ ವ್ಯಕ್ತಿ ಶಫೀ ಉಲ್ಲಾ ಖಾನ್ ಅವರನ್ನು 2024ರಲ್ಲೇ ಮೃತಪಟ್ಟಿದ್ದಾರೆ ಎಂದು ಮಿಮ್ಸ್‌ ಆಸ್ಪತ್ರೆ ಹೇಳುತ್ತಿದ್ದು, ಈ ಬಗ್ಗೆ ಕೇಳಲು ಹೋದರೆ ಮೃತಪಟ್ಟಿರುವ ವ್ಯಕ್ತಿ ಕರೆತನ್ನಿ. ಮೂರನೇ ವ್ಯಕ್ತಿಗೆ ಮಾಹಿತಿ ಕೊಡುವುದಿಲ್ಲ. 3 ತಿಂಗಳ ಕಾಲ ನಮ್ಮ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ನಮ್ಮ ಆಸ್ಪತ್ರೆಯಲ್ಲೇ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಶವ ಹಸ್ತಾಂತರ ಮಾಡಲಾಗಿದೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ಮಿಮ್ಸ್‌ ವಿರುದ್ಧ ಆರೋಪಿಸುತ್ತಿದ್ದಾರೆ.

ಕೆ.ಎಂ.ದೊಡ್ಡಿಯ ವರ್ಕ್ಸ್ ಶಾಪ್ ಒಂದರಲ್ಲಿ ಬೈಕ್ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ ಶಫಿ ಉಲ್ಲಾ ಖಾನ್‌ ಅವರಿಗೆ, ಐವರು ಮಕ್ಕಳಿದ್ದಾರೆ. ಈಗಾಗಲೇ ಮೂವರು ಮಕ್ಕಳ ಮದುವೆ ಮಾಡಿದ್ದು, ಮತ್ತಿಬ್ಬರ ಮದುವೆ ಮಾಡಬೇಕಿದೆ. ಒಂದೆಡೆ ಮಿಮ್ಸ್ ಆಡಳಿತ ಮಂಡಳಿ ಎಡವಟ್ಟಿನಿಂದ ಶಫಿ ಉಲ್ಲಾ ಖಾನ್‌, ಕೆಲಸಕ್ಕೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು ಕೆಲಸಕ್ಕೂ ಹೋಗಲಾಗದೆ ಮನೆಯಲ್ಲೇ ಉಳಿಯುವಂತಾದ ಪರಿಸ್ಥಿತಿ ಎದುರಾಗಿದೆ.

ಒಂದೆಡೆ ವಿವಾದಗಳಿಂದಲೇ ಪದೇ ಪದೇ ಸುದ್ದಿಯಾಗುತ್ತಿರುವ ಮಿಮ್ಸ್ ಆಸ್ಪತ್ರೆಯ ಮಹಾಎಡವಟ್ಟಿನಿಂದಾಗಿ ಜೀವಂತ ವ್ಯಕ್ತಿಗೆ ಡೆತ್‌ ಸರ್ಟಿಫಿಕೇಟ್ ನೀಡಿ ಆತನ ರೇಷನ್‌ ಕಾರ್ಡ್‌ ಕೆವೈಸಿ ಅಪ್‌ಡೇಟ್‌ ಮಾಡಲೂ ಆಗುತ್ತಿಲ್ಲ. ಇದರಿಂದಾಗಿ, ಮಿಮ್ಸ್, ನಗರಸಭೆ, ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಬಡ ಕುಟುಂಬ ಕಂಗಾಲಾಗಿದ್ದು, ಸರ್ಕಾರಿ ಸವಲತ್ತು, ಚಿಕಿತ್ಸೆಯಿಂದ ವಂಚಿತವಾಗಿ ನ್ಯಾಯಕ್ಕಾಗಿ ಅಲೆದಾಟ ನಡೆಸುತ್ತಿದ್ದಾರೆ. ದುಡಿದ ಹಣದಲ್ಲಿ ಸಂಸಾರ ನೀಗಿಸುತ್ತಿದ್ದ ಶಫೀ ಉಲ್ಲಾ ಖಾನ್‌, ಇದೀಗ ಕೆಲಸವೂ ಇಲ್ಲದೇ, ಸರ್ಕಾರದ ಸೌಲಭ್ಯ, ಸವಲತ್ತಗಳು ಸಿಗದೆ ಪರದಾಡುವಂತಾಗಿದೆ. 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES