ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ತಲಕಾವೇರಿ ತಲುಪಿದ ದೇವ ಬಂಡಾರ... ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು ದೇವ ಬಂಡಾರ ತಲಕಾವೇರಿ ಭಾಗಮಂಡಲ ದೇವಾಲಯದಿಂದ ತಲಕಾವೇರಿಗೆ ತಲುಪಿದೆ.
ಮಡಿಕೇರಿ: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದೆ. ಅಕ್ಟೋಬರ್ 17 ರ ಈ ದಿನ ಶನಿವಾರ ರಾತ್ರಿ 7.50 ಗಂಟೆಗೆ ತುಲಾ ಸಂಕ್ರಮಣದಲ್ಲಿ ಕಾವೇರಿ ಪವಿತ್ರ ತೀರ್ಥೋದ್ಬವ ಆಗಲಿದೆ ಎನ್ನಲಾಗಿದೆ. ಕಾವೇರಿ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಇದಕ್ಕಾಗಿ ಜಿಲ್ಲಾಡಳಿತದ ವತಿಯಿಂದ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
ತಲಕಾವೇರಿ ತಲುಪಿದ ದೇವ ಬಂಡಾರ:
ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ದೇವ ಬಂಡಾರ ಭಾಗಮಂಡಲ ದೇವಾಲಯದಿಂದ ತಲಕಾವೇರಿಗೆ ತಲುಪಿದೆ. ಕೊಡಗಿನ ಸಾಂಪ್ರದಾಯಿಕ ಮತ್ತು ಧಾರ್ಮಿಕ ಇತಿಹಾಸದಲ್ಲಿ ಪ್ರಮುಖ ಸ್ಥಾನ ಹೊಂದಿರುವ ʼದೇವ ತಕ್ಕʼ ಕೋಡಿ ಕುಟುಂಬಸ್ಥರ ಮುಂದಾಳತ್ವದಲ್ಲಿ ಬಂಡಾರ ಪೆಟ್ಟಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದೆ.
ಬಂಡಾರ ಪೆಟ್ಟಿಗೆಯಲ್ಲಿ ಏನೆಲ್ಲಾ ಇರಲಿದೆ?
ಭಾಗಮಂಡದ ತಿಜೋರಿಯಿಂದ ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ ಈ ದೇವರ ಬಂಡಾರ ಪೆಟ್ಟಿಗೆಯಲ್ಲಿ ದೇವಿಯ ಆಭರಣಗಳು, ಗುಡಿಗೆ ತೊಡಿಸುವ ಬೆಳ್ಳಿಯ ಕವಚ, ಅಗತ್ಸ್ಯ ಹಾಗೂ ಗಣಪತಿ ಗುಡಿಗೆ ತೊಡಿಸುವ ಆಭರಣಗಳಿರುತ್ತವೆ.
ಮೇಷ ಲಗ್ನದಲ್ಲಿ ತುಲಾ ಸಂಕ್ರಮಣದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ:
ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಮೇಷ ಲಗ್ನದಲ್ಲಿ ಕಾವೇರಿ ತುಲಾ ಸಂಕ್ರಮಣದಲ್ಲಿ ಪವಿತ್ರ ತೀರ್ಥೋದ್ಭವ ಜರುಗಲಿದ್ದು, ಈ ಅಪೂರ್ವ ಕ್ಷಣಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಸಾಕ್ಷಿಯಾಗಲಿದ್ದು, ಈ ಸಂದರ್ಭದಲ್ಲಿ ಕಾವೇರಿ ಮಾತೆಗೆ ವಿಶೇಷ ಪೂಜೆ ನೆರವೇರಿಸಲಿದ್ದಾರೆ.
ಕಾವೇರಿ ತೀರ್ಥೋದ್ಭವಕ್ಕೆ ಜಿಲ್ಲಾಡಳಿತದಿಂದ ಸಿದ್ಧತೆ:
ತಲಕಾವೇರಿಯಲ್ಲಿ ಪವಿತ್ರ ತೀರ್ಥ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಸಾರ್ವಜನಿಕರು, ಗಣ್ಯರು ಹಾಗೂ ಪತ್ರಕರ್ತರಿಗೆ ಪ್ರತ್ಯೇಕ ಬ್ಯಾರಿಕೇಡ್ ಅಳವಡಿಸಲಾಗಿದೆ.
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಹಿನ್ನಲೆಯಲ್ಲಿ ತಲಕಾವೇರಿ ನವ ವಧುವಿನಂತೆ ಸಿಂಗಾರಗೊಂಡಿದ್ದು, ಹೂವಿನ ಅಲಂಕಾರ ಸೇರಿದಂತೆ ಹಲವು ಸಿದ್ಧತೆಗಳು ಭರದಿಂದ ಸಾಗಿವೆ. ಕೊಡಗು ಏಕೀಕರಣ ರಂಗದಿಂದ ಪ್ರಸಾದ ವಿತರಣೆ ನಡೆಯಲಿದೆ. ಭಾಗಮಂಡಲದಿಂದ-ತಲಕಾವೇರಿವರೆಗೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ.
ಕೆಎಸ್ಆರ್ಟಿಸಿಯಿಂದ ಭಕ್ತರಿಗೆ ಉಚಿತ ಪ್ರಯಾಣಕ್ಕೆ ಅವಕಾಶ:
ಕಳೆದ ಬಾರಿಯಂತೆ ಈ ಬಾರಿಯೂ ಕೆಎಸ್ಆರ್ಟಿಸಿಯಿಂದ 25 ಬಸ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಗೀತಾ ಗಾಯನ ಕಾರ್ಯಕ್ರಮವನ್ನೂ ಸಹ ಆಯೋಜಿಸಲಾಗಿದೆ.
ಭಕ್ತರ ವಾಹನಗಳ ನಿಲುಗಡೆಗೂ ಸೂಕ್ತ ವ್ಯವಸ್ಥೆ:
ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ಮಾಡಲಾಗಿದೆ. ಅಗತ್ಯ ಇರುವ ಕಡೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತರ ವಾಹನಗಳ ನಿಲುಗಡೆಗಾಗಿ ಒಟ್ಟು 4 ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ.
ತಲಕಾವೇರಿಯಲ್ಲಿ ಪಾರ್ಕಿಂಗ್ ಸ್ಥಳ ಭರ್ತಿಯಾದ ನಂತರ, ಭಾಗಮಂಡಲದ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಾಹನಗಳನ್ನು ನಿಲ್ಲಿಸಿ ಮಾರುಕಟ್ಟೆ ಜಂಕ್ಷನ್ನಿಂದ ಬಸ್ ಮೂಲಕ ತಲಕಾವೇರಿಗೆ ತೆರಳಬೇಕು.
ಭಾಗಮಂಡಲದ ಚಾಮುಂಡಿಕಳದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು, ಅಲ್ಲಿ ವಾಹನ ನಿಲ್ಲಿಸಿ ಬಸ್ಸಿನಲ್ಲಿ ತಲಕಾವೇರಿಗೆ ತೆರಳಲು ವ್ಯವಸ್ಥೆ ಮಾಡಲಾಗಿದೆ.
ಭಾಗಮಂಡಲದಲ್ಲೂ ವಾಹನ ನಿಲುಗಡೆ ಭರ್ತಿಯಾದರೆ, ತಾವೂರು ಕಾವೇರಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.