ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡಾನೆಗಳ ಆತಂಕ ಮುಂದುವರಿದಿದೆ. ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಓಡಿಸುವ ಅರಣ್ಯ ಇಲಾಖೆಯ ಕಾರ್ಯಾಚರಣೆಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭಾನುವಾರ ಮಧ್ಯರಾತ್ರಿಯೇ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ಆದೇಶ ಬರುವವರೆಗೂ ಆನೆಗಳನ್ನು ಓಡಿಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ ಎಂದು ಚಿಕ್ಕಮಗಳೂರು ವಿಭಾಗದ ಡಿಎಫ್‌ಒ ಬೋರಯ್ಯ ಸ್ಪಷ್ಟಪಡಿಸಿದ್ದಾರೆ.
ಸದ್ಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 38 ಕಾಡಾನೆಗಳು ಬೀಡುಬಿಟ್ಟಿವೆ. ಈ ಆನೆಗಳು ಎರಡು ಗುಂಪುಗಳಾಗಿ ವಿಭಜನೆಯಾಗಿದ್ದು, ಒಂದು ಗುಂಪು ಬಾರದಹಳ್ಳಿ ಪ್ರದೇಶದಲ್ಲಿದ್ದರೆ, ಮತ್ತೊಂದು ಗುಂಪು ಮಾಕೋನಹಳ್ಳಿ ಸಮೀಪದಲ್ಲಿದೆ. ಎರಡೂ ಗುಂಪುಗಳ ನಡುವೆ ಸುಮಾರು 2ರಿಂದ 3 ಕಿಲೋಮೀಟರ್ ಅಂತರವಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸಂಚರಿಸುತ್ತಿದ್ದ ಆನೆಗಳು ಇದೀಗ ವಿಶ್ರಾಂತಿ ಪಡೆಯುತ್ತಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.
38 ಕಾಡಾನೆಗಳ ಮೇಲೆ ಅರಣ್ಯ ಇಲಾಖೆ ನಿಗಾ
ಆನೆಗಳನ್ನು ಓಡಿಸುವ ಕಾರ್ಯಾಚರಣೆ ಸ್ಥಗಿತಗೊಂಡಿದ್ದರೂ ಅರಣ್ಯ ಇಲಾಖೆ ಎಚ್ಚರಿಕೆ ವಹಿಸಿದೆ. ಆನೆಗಳ ಚಲನವಲನದ ಮೇಲೆ ನಿಗಾ ಇಡಲು 60ರಿಂದ 70 ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಡ್ರೋನ್‌ಗಳ ಮೂಲಕವೂ ವೈಮಾನಿಕ ಸಮೀಕ್ಷೆ ನಡೆಸಲಾಗುತ್ತಿದೆ. ಸದ್ಯ ಆನೆಗಳು ಅಶಾಂತ ಸ್ಥಿತಿಯಲ್ಲಿಲ್ಲ ಎಂದು ಡಿಎಫ್‌ಒ ತಿಳಿಸಿದ್ದಾರೆ. ನ್ನು ಆನೆಗಳಿರುವ ಪ್ರದೇಶಗಳ ಸುತ್ತಮುತ್ತ ಸಾರ್ವಜನಿಕರು ಪಟಾಕಿ ಸಿಡಿಸದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಕಾಫಿ ಬೆಳೆಗಾರರು ಹಾಗೂ ತೋಟದ ಮಾಲೀಕರು ಮುನ್ನೆಚ್ಚರಿಕೆ ಕ್ರಮವಾಗಿ ಮುಂದಿನ ಒಂದೆರಡು ದಿನಗಳ ಕಾಲ ಕೂಲಿ ಕಾರ್ಮಿಕರನ್ನು ತೋಟದ ಕೆಲಸಕ್ಕೆ ನಿಯೋಜಿಸದಂತೆ ಸೂಚಿಸಲಾಗಿದೆ. ಆನೆಗಳ ಸಂಚಾರವಿರುವ ಗ್ರಾಮಗಳ ಶಾಲೆಗಳಿಗೆ ತಾಲೂಕು ಆಡಳಿತ ರಜೆ ಘೋಷಿಸಿದೆ.
ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಉದ್ದೇಶದಿಂದ ಆನೆಗಳಿರುವ ಪ್ರದೇಶಗಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ. ಕುತೂಹಲಕ್ಕಾಗಿ ಆನೆಗಳ ಸಮೀಪಕ್ಕೆ ಹೋಗುವುದು ಜೀವಕ್ಕೆ ಅಪಾಯ ತಂದೊಡ್ಡಬಹುದು ಎಂದು ಇಲಾಖೆ ಎಚ್ಚರಿಸಿದೆ. ಮುಸ್ಸಂಜೆ ಹಾಗೂ ಮುಂಜಾನೆ ಆನೆಗಳ ಚಲನವಲನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು.ಇನ್ನೊಂದೆಡೆ ಮಲೆನಾಡಿನಲ್ಲಿ ಕಾಫಿ ಕೊಯ್ಲು ಆರಂಭವಾಗಿರುವುದರಿಂದ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ. ತೋಟಗಳಲ್ಲಿ ಕಾಡಾನೆಗಳ ಸಂಚಾರದಿಂದ ಬೆಳೆ ನಷ್ಟವಾಗುವ ಜೊತೆಗೆ ಕೊಯ್ಲು ಕಾರ್ಯಕ್ಕೂ ಅಡ್ಡಿಯಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಹಾಗೂ ಪ್ಲಾಂಟರ್‌ಗಳೊಂದಿಗೆ ಅರಣ್ಯ ಇಲಾಖೆ ಮಾತುಕತೆ ನಡೆಸಿದೆ.
ಸದ್ಯ ಆನೆಗಳನ್ನು ಓಡಿಸುವ ಯಾವುದೇ ನಿರ್ದೇಶನವಿಲ್ಲ. ಅವುಗಳ ನೈಸರ್ಗಿಕ ಚಲನವಲನವನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಫ್‌ಒ ಬೋರಯ್ಯ ತಿಳಿಸಿದ್ದಾರೆ.ಒಟ್ಟಿನಲ್ಲಿ, 38 ಕಾಡಾನೆಗಳ ಚಲನವಲನದ ಮೇಲೆ ಅರಣ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದ್ದರೂ ಮಲೆನಾಡಿನ ಜನರಲ್ಲಿ ಮಾತ್ರ ಆತಂಕ ಮುಂದುವರಿದಿದೆ.