ಪಿಂಕ್ ಆಟೋ ಯೋಜನೆಗೆ ಮನಸ್ಸು ಮಾಡದ ಮಹಿಳೆಯರು: ಗಟ್ಟಿಗಿತ್ತೀಯರಾಗಾಗಿ ಖಾಲಿ ಬಿದ್ದಿದೆ ₹4 ಕೋಟಿ ಅನುದಾನ!
ಮಹಿಳೆಯರು ಸ್ವ ಉದ್ಯೋಗ ಮೂಲಕ ಸ್ವಾವಲಂಬಿ ಬದುಕು ಸಾಗಿಸಬೇಕು ಎಂಬ ಉದ್ದೇಶದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿದ್ದ ಮಹತ್ವದ ಯೋಜನೆಗೆ ಸೂಕ್ತ ಸ್ಪಂದನೆಯೇ ಸಿಗುತ್ತಿಲ್ಲ.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ 2026-27 ರ ಬಜೆಟ್‌ನಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟುವ ಉದ್ದೇಶದಿಂದ ಪಿಂಕ್ ಆಟೋಗಳನ್ನು ನೀಡುವುದಾಗಿ ಭರವಸೆ ನೀಡಿತ್ತು. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಈ ಉಪಕ್ರಮದ ಪ್ರಮುಖ ಉದ್ದೇಶವಾಗಿತ್ತು. ಈ ಯೋಜನೆಗಾಗಿ 4.10 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದರೂ ಕೂಡ ಮಹಿಳೆಯರಿಂದ ಇದಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದೆ.
ಹೌದು, ಜೀವನೋಪಾಯದ ಅವಕಾಶಗಳನ್ನು ಒದಗಿಸಲು ಮತ್ತು ಚಲನಶೀಲತೆಯನ್ನು ಹೆಚ್ಚಿಸಲು ಅರ್ಹ ಮಹಿಳಾ ಫಲಾನುಭವಿಗಳಿಗೆ ಪಿಂಕ್ ಆಟೋಗಳನ್ನು ವಿತರಿಸುವ ಉದ್ದೇಶದಿಂದ ಹು- ಧಾ ಮಹಾನಗರ ಪಾಲಿಕೆ ತನ್ನ ಬಜೆಟ್‌ನಲ್ಲಿ ಈ ಉಪಕ್ರಮವನ್ನು ಘೋಷಿಸಿತ್ತು. ಆದರೆ, ಈ ಮಹತ್ವಾಕಾಂಕ್ಷೆಯ ಪಿಂಕ್ ಅಟೋ ಯೋಜನೆ ಮೂಲಕ ಮಹಿಳೆಯರಿಗೆ ಅನುಕೂಲ ಆಗಬಹುದೆಂದು ಇದನ್ನು ಜಾರಿಗೊಳಿಸಲು ಕೋಟ್ಯಾಂತರ ರೂಪಾಯಿ ಮೀಸಲು ಇಟ್ಟರೂ ಕೂಡ ಇದರ ಸೌಲಭ್ಯ ಪಡೆಯಲು ಮಹಿಳೆಯರು, ಯುವತಿಯರು ಮುಂದೆ ಬರ್ತಾ ಇಲ್ಲ ಎಂದು ತಿಳಿದುಬಂದಿದೆ.
ಪಿಂಕ್ ಅಟೋ ಯೋಜನೆಯು ಮಹಿಳೆಯರು ಮತ್ತು ಬಾಲಕಿಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಜೊತೆಗೆ ಮಹಿಳೆಯರಿಗೆ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಸ್ವಾವಲಂಬನೆ ಒದಗಿಸುವ ಉದ್ದೇಶ ಹೊಂದಿದೆ. ಆದರೆ, ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಜಾರಿಗೆ ತಂದಿರುವ ಮಹತ್ವಾಕಾಂಕ್ಷೆಯ 'ಪಿಂಕ್ ಆಟೋ' ಯೋಜನೆಗೆ ಆರಂಭದಲ್ಲೇ ಅರ್ಜಿದಾರರ ಕೊರತೆ ಎದುರಾಗಿದೆ. ಇದರಿಂದಾಗಿ ಯೋಜನೆಯಡಿ ಮಹಾನಗರ ಪಾಲಿಕೆ ಅವಳಿ ನಗರದ 82 ವಾರ್ಡ್‌ಗಳಿಗೆ ತಲಾ ಒಂದು ಪಿಂಕ್ ಆಟೋ ವಿತರಿಸಲು ಪಾಲಿಕೆ ಮೀಸಲಿಟ್ಟಿರುವ ₹4 ಕೋಟಿ ಅನುದಾನವೂ ಕೂಡ ಖಾಲಿ ಬಿದ್ದಿದೆ.
ಪಿಂಕ್ ಅಟೋ ಯೋಜನೆ ಅನುಷ್ಠಾನಕ್ಕೆ ಹಿನ್ನಡೆ:
ನಿರೀಕ್ಷಿತ ಸಂಖ್ಯೆಯಲ್ಲಿ ಮಹಿಳೆಯರು ಅರ್ಜಿ ಸಲ್ಲಿಸದಿರುವುದು ಪಿಂಕ್ ಅಟೋ ಯೋಜನೆಯ ಅನುಷ್ಠಾನಕ್ಕೆ ಹಿನ್ನಡೆ ಆಗಿದೆ. ಪಿಂಕ್ ಯೋಜನೆಗೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಠರಾವು ಅಂಗೀಕರಿಸಲಾಗಿದೆ. ಆದರೆ ಯೋಜನೆಯ ಪ್ರಯೋಜನ ಪಡೆಯಲು ಅರ್ಹ ಮಹಿಳೆಯರು ಮುಂದೆ ಬಾರದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪಿಂಕ್ ಅಟೋ ಯೋಜನೆ ಹಿನ್ನಡೆಗೆ ಕಾರಣ:
ಸೂಕ್ತ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಇಲ್ಲದಿರುವುದು ಹಾಗೂ ಅರ್ಜಿ ಸಲ್ಲಿಸಲು ಅಧಿಕೃತ ಕಾರ್ಯವಿಧಾನ ಇಲ್ಲದಿರುವುದೇ ಪಿಂಕ್ ಅಟೋ ಯೋಜನೆ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪಿಂಕ್ ಆಟೋ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸಿದ ಬಳಿಕ ಹು-ಧಾ ಮಹಾನಗರ ಪಾಲಿಕೆಯ ಎಲ್ಲಾ 82 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕಿತ್ತು. ಈ ಕುರಿತಂತೆ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕೆಲವರು ಆರೋಪಿಸಿದ್ದರೆ, ಪಿಂಕ್ ಆಟೋ ಪ್ರಯೋಜನ ಪಡೆಯಲು ಮಹಿಳೆಯರಿಂದ ಅರ್ಜಿ ಆಹ್ವಾನ, ವಾರ್ಡ್‌ವಾರು ಸಂಪರ್ಕ ನಡೆಸುವುದು, ಅರ್ಜಿ ಪರಿಶೀಲನೆ, ಪಿಂಕ್ ಆಟೋ ಖರೀದಿಗೆ ಟೆಂಡರ್ ಕರೆಯುವಿಕೆ ಹೀಗೆ ಯೋಜನೆ ಅನುಷ್ಠಾನ ಕುರಿತಂತೆ ಜರುಗಿಸಬೇಕಾದ ಕ್ರಮಗಳ ಕ್ರಮಗಳ ಕುರಿತಾಗಿಯೂ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಮಹಿಳಾ ಮೇಯರ್ ಹೊಂದಿದ್ದರೂ ಸಹ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಸದುದ್ದೇಶದಿಂದ ಆರಂಭವಾಗಿರುವ ಮಹಿಳಾ ಕೇಂದ್ರಿತವಾದ ಈ ಯೋಜನೆಯನ್ನು ಸರಿಯಾದ ರೀತಿಯಲ್ಲಿ ಇನ್ನೂ ಅನುಷ್ಠಾನಕ್ಕೆ ತರದಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ.
ಅಟೋ ಚಾಲಕಿಯರಾದ ಮಂಜುಳಾ ಹಾಗೂ ದಾವಲಬಿ ಪ್ರತಿಕ್ರಿಯೆ ನೀಡಿ, ಮಹಿಳೆಯರೇ ಆಟೋ ಚಾಲನೆ ಮಾಡಬೇಕು. ಇದರಿಂದ ವಿದ್ಯಾರ್ಥಿನಿಯರು, ಹಿರಿಯ ಮಹಿಳೆಯರು ಸೇರಿದಂತೆ ಮಹಿಳಾ ಪ್ರಯಾಣಿಕರಲ್ಲಿ ಸುರಕ್ಷತೆಯ ಭಾವನೆ ಹೆಚ್ಚಲಿದೆ. ಆಟೋ ಚಾಲನೆಗೆ ಆಸಕ್ತಿ ಹೊಂದಿರುವ ಮಹಿಳೆಯರಿಗೆ ಸ್ವಂತ ಉದ್ಯೋಗದ ಅವಕಾಶ ಸಿಗಲಿದ್ದು, ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುವ ಉದ್ದೇಶವಿದೆ ಎಂದಿದ್ದಾರೆ.