SOCIAL MEDIA

Newsletter

PARTNER SITES
Select Language Select State

ಕಬ್ಬು ಬೆಳೆಗಾರರ ಸಭೆ: ಬೆಳಗಾವಿಯ ಸುವರ್ಣಸೌಧದಲ್ಲೇ ಹೊಡೆದಾಡಿಕೊಂಡ ರೈತರು!

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಬ್ಬು ಬೆಳೆಗಾರರ ಸಭೆಗೂ ಮುನ್ನ ಚೂನಪ್ಪ ಪೂಜೇರಿ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರ ನಡುವೆ ಹೊಡೆದಾಟ ನಡೆದಿದೆ. ಟನ್‌ಗೆ ₹4,500 ಅಥವಾ ₹5,500 ದರ ನಿಗದಿ ವಿಚಾರವಾಗಿ ವಾಗ್ವಾದ ತೀವ್ರಗೊಂಡು, ನೀರಿನ ಗ್ಲಾಸ್ ಎಸೆದು ತಳ್ಳಾಟ ನಡೆಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಇಬ್ಬರು ರೈತರನ್ನ ಹೊರಗೆ ಕರೆದೊಯ್ದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.

Written By Puttaraj K Alur
Published: Oct 26, 2026, 05:25 PM IST | Updated: Oct 26, 2026, 05:43 PM IST
Image Credit: Sugarcane Farmers
Join

Sugarcane Farmers Meeting: ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ರೈತ ಸಂಘಟನೆಗಳ ಎರಡು ಬಣಗಳ ನಡುವೆ ತೀವ್ರ ಗಲಾಟೆ ನಡೆದಿದೆ. ರಾಜ್ಯ ರೈತ ಸಂಘದ ಚೂನಪ್ಪ ಪೂಜೇರಿ ಬಣ ಹಾಗೂ ಕೋಡಿಹಳ್ಳಿ ಚಂದ್ರಶೇಖರ ಬಣದ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡಿದ್ದು, ನೀರಿನ ಗಾಜಿನ ಗ್ಲಾಸ್‌ಗಳನ್ನ ಎಸೆದು, ತಳ್ಳಾಟ-ನೂಕಾಟ ನಡೆಸಿದ್ದಾರೆ. ಘಟನೆಯಿಂದ ಸಭಾಂಗಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದಿದ್ದಾರೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಬೇಕಿದ್ದ ಕಬ್ಬು ಬೆಳೆಗಾರರ ಸಭೆಗೆ ರೈತ ಮುಖಂಡರು ಆಗಮಿಸಿದ ಬಳಿಕ ಈ ಘಟನೆ ನಡೆದಿದೆ. ಕಬ್ಬಿನ ಬೆಲೆ ನಿಗದಿ, ರೈತರ ಬೇಡಿಕೆಗಳು ಹಾಗೂ ಪ್ರತಿ ಟನ್‌ಗೆ ₹4,500 ಅಥವಾ ₹5,500 ದರದ ವಿಚಾರವಾಗಿ ಉಂಟಾದ ಭಿನ್ನಾಭಿಪ್ರಾಯ ಗಲಾಟೆಗೆ ಕಾರಣವಾಯಿತು.

ಸಭೆ ಆರಂಭಕ್ಕೂ ಮುನ್ನವೇ ಗದ್ದಲ

ಸುವರ್ಣ ವಿಧಾನಸೌಧದಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆಗಳನ್ನ ಆಯೋಜಿಸಲಾಗಿತ್ತು. ಮಧ್ಯಾಹ್ನ ಕಾರ್ಖಾನೆ ಮಾಲೀಕರೊಂದಿಗಿನ ಸಭೆ ಮುಗಿದ ಬಳಿಕ ಸಿಎಂ ಡಿ.ಕೆ.ಶಿವಕುಮಾರ್ ಯಲ್ಲಮ್ಮನಗುಡ್ಡಕ್ಕೆ ತೆರಳಿದ್ದರು. ಸಂಜೆ 4 ಗಂಟೆಗೆ ನಿಗದಿಯಾಗಿದ್ದ ರೈತರ ಸಭೆಗೆ ಮುಖಂಡರು ಸಭಾಂಗಣಕ್ಕೆ ಆಗಮಿಸಿದ್ದರು. ಸಿಎಂ ಆಗಮಿಸುವ ಮುನ್ನವೇ ರೈತ ಮುಖಂಡರ ನಡುವೆ ಮಾತುಕತೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಬಣದ ಮುಖಂಡ ಹಾಗೂ ಕಲಬುರಗಿಯ ಮಹಾಂತೇಶ ಜಮಾದಾರ ಅವರು ರೈತರ ಬೇಡಿಕೆಗಳ ಕುರಿತು ಮಾತನಾಡುತ್ತಿದ್ದರು. ಅವರ ಮಾತು ಸೂಕ್ತವಾಗಿಲ್ಲ ಎಂದು ಆಕ್ಷೇಪಿಸಿದ ಚೂನಪ್ಪ ಪೂಜೇರಿ ಬಣದ ಕೆಲವರು ಮೈಕ್ ಕಿತ್ತುಕೊಂಡರು ಎನ್ನಲಾಗಿದೆ. ಇದರಿಂದ ಎರಡು ಬಣಗಳ ನಡುವೆ ಮಾತಿನ ಚಕಮಕಿ ತೀವ್ರಗೊಂಡಿತು.

₹4,500 ದರದ ಪ್ರಸ್ತಾಪಕ್ಕೆ ವಿರೋಧ

ಗಲಾಟೆ ಹೆಚ್ಚಾಗುತ್ತಿದ್ದಂತೆ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದರು. ಹೋರಾಟ ನಡೆಸಿ ಈ ಸಭೆಯನ್ನ ಆಯೋಜಿಸಲಾಗಿದ್ದು, ರೈತ ಮುಖಂಡರೆಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಅವರು ಹೇಳಿದರು. ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ₹4,500 ದರ ನಿಗದಿಪಡಿಸುವಂತೆ ಒತ್ತಾಯಿಸಲಾಗುವುದು ಎಂದು ಚೂನಪ್ಪ ಪೂಜೇರಿ ಹೇಳಿದಾಗ ಕೋಡಿಹಳ್ಳಿ ಚಂದ್ರಶೇಖರ ಬಣದ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಈ ಹಿಂದೆ ₹5,500 ದರಕ್ಕಾಗಿ ಹೋರಾಟ ನಡೆಸುತ್ತಿದ್ದವರು ಈಗ ₹4,500 ಎಂದು ಹೇಳುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಚೂನಪ್ಪ ಪೂಜೇರಿ, ₹4,500 ಕಬ್ಬಿನ ದರವಾಗಿದ್ದು, ಉಳಿದ ₹1,000 ರಾಜ್ಯ ಸರ್ಕಾರದ ಪ್ರೋತ್ಸಾಹಧನವಾಗಿದೆ. ಎರಡನ್ನೂ ಸೇರಿಸಿದರೆ ಒಟ್ಟು ₹5,500 ಆಗುತ್ತದೆ ಎಂದು ವಿವರಿಸಲು ಪ್ರಯತ್ನಿಸಿದರು. ಆದರೆ ಸಭಾಂಗಣದಲ್ಲಿ ರೈತರ ಕೂಗಾಟ ಹೆಚ್ಚಾಗಿದ್ದರಿಂದ ಅವರ ಮಾತುಗಳು ಸರಿಯಾಗಿ ಕೇಳಿಸಲಿಲ್ಲ; ಗದ್ದಲ ಮತ್ತಷ್ಟು ಹೆಚ್ಚಾಯಿತು.

ನೀರಿನ ಗ್ಲಾಸ್ ಎಸೆದು ಹೊಡೆದಾಟ

ವಾದವಿವಾದ ತೀವ್ರಗೊಂಡ ಸಂದರ್ಭದಲ್ಲಿ ಚೂನಪ್ಪ ಪೂಜೇರಿ ಬಣದ ಕೆಲವರು ಮೇಜಿನ ಮೇಲಿದ್ದ ನೀರಿನ ಗಾಜಿನ ಗ್ಲಾಸ್‌ಗಳನ್ನ ಎದುರಾಳಿ ಬಣದತ್ತ ಎಸೆದಿದ್ದಾರೆ ಎಂದು ವರದಿಯಾಗಿದೆ. ಗ್ಲಾಸ್‌ಗಳು ಇಬ್ಬರು ರೈತರ ಎದೆಗೆ ತಗುಲಿದವು ಎನ್ನಲಾಗಿದೆ. ಇದಾದ ಬಳಿಕ ಕೋಡಿಹಳ್ಳಿ ಬಣದ ರೈತರು ತಳ್ಳಾಟ ಮತ್ತು ನೂಕಾಟದಲ್ಲಿ ತೊಡಗಿದರು. ಈ ವೇಳೆ ಕೆಲವರ ಅಂಗಿಗಳು ಹರಿದಿವೆ. ಸಭಾಂಗಣದಲ್ಲಿ ಕುಡಿಯಲು ನೀರು ಮತ್ತು ಚಹಾ ವ್ಯವಸ್ಥೆ ಇರಲಿಲ್ಲ ಎಂಬ ವಿಚಾರದಿಂದಲೂ ಆರಂಭದಲ್ಲಿ ಗಲಾಟೆ ಶುರುವಾಗಿತ್ತು ಎಂದು ವರದಿಯಾಗಿದೆ. 

ಬಳಿಕ ಕಬ್ಬಿನ ದರದ ವಿಚಾರದಲ್ಲಿ ಎರಡೂ ಬಣಗಳ ನಡುವೆ ಉಂಟಾದ ಭಿನ್ನಾಭಿಪ್ರಾಯ ಪರಿಸ್ಥಿತಿಯನ್ನ ಮತ್ತಷ್ಟು ಉದ್ವಿಗ್ನಗೊಳಿಸಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು ರೈತರನ್ನ ಸಮಾಧಾನಪಡಿಸಲು ಪ್ರಯತ್ನಿಸಿದರೂ ಗಲಾಟೆ ತಕ್ಷಣ ನಿಲ್ಲಲಿಲ್ಲ.

ಪೊಲೀಸರ ಮಧ್ಯಪ್ರವೇಶದಿಂದ ಪರಿಸ್ಥಿತಿ ನಿಯಂತ್ರಣ

ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಗಲಾಟೆಯಲ್ಲಿ ಭಾಗಿಯಾಗಿದ್ದ ಇಬ್ಬರು ರೈತರನ್ನ ಸಭಾಂಗಣದಿಂದ ಹೊರಗೆ ಕರೆದೊಯ್ದರು. ನಗರ ಪೊಲೀಸ್ ಆಯುಕ್ತ ಪ್ರಕಾಶ್ ನಿಕ್ಕಂ ಹಾಗೂ ಡಿಸಿಪಿ ನಾರಾಯಣ ಭರಮನಿ ಅವರ ಸಮ್ಮುಖದಲ್ಲೇ ಹೊಡೆದಾಟ ನಡೆದಿದೆ ಎಂದು ತಿಳಿದುಬಂದಿದೆ. ಸುಮಾರು ಅರ್ಧ ಗಂಟೆ ಕಾಲ ಗೊಂದಲ ಮುಂದುವರಿದ ಬಳಿಕ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತಂದು ಸಭಾಂಗಣವನ್ನ ಶಾಂತಗೊಳಿಸಿದರು. ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿತು ಚರ್ಚಿಸಲು ಆಯೋಜಿಸಲಾಗಿದ್ದ ಸಭೆಯಲ್ಲಿ, ಕಬ್ಬಿನ ದರದ ವಿಚಾರವೇ ಎರಡು ರೈತ ಸಂಘಟನೆಗಳ ಬಣಗಳ ನಡುವಿನ ಸಂಘರ್ಷಕ್ಕೆ ಕಾರಣವಾಯಿತು. ಪೊಲೀಸರ ಮಧ್ಯಪ್ರವೇಶದ ಬಳಿಕ ಸಭಾಂಗಣದ ವಾತಾವರಣ ತಿಳಿಯಾಯಿತು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES