PSI ಹುದ್ದೆ ಕೊಡಿಸುವುದಾಗಿ ₹60 ಲಕ್ಷ ವಂಚನೆ: ಬೆಂಗಳೂರು ಮೂಲದ 8 ಜನರ ವಿರುದ್ಧ FIR!
ಯಾದಗಿರಿಯ ಕೆಂಭಾವಿಯಲ್ಲಿ ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ವಂಚಿಸಿದ ಆರೋಪದಡಿ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದ್ದು, ಕೆಂಭಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
PSI Job Fraud: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (PSI) ಹುದ್ದೆ ಕೊಡಿಸುವುದಾಗಿ ನಂಬಿಸಿ ₹60 ಲಕ್ಷ ಹಣ ಪಡೆದು ವಂಚಿಸಿರುವ ಆರೋಪದ ಪ್ರಕರಣ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಉದ್ಯೋಗದ ಆಸೆ ತೋರಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಿ ಸುರಪುರ ತಾಲೂಕಿನ ತಳ್ಳಳ್ಳಿ (ಬಿ) ಗ್ರಾಮದ ದೇವೇಂದ್ರ ಎಂಬುವವರು ಕೆಂಭಾವಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಎಂಟು ಜನರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PSI ಹುದ್ದೆ ಕೊಡಿಸುವುದಾಗಿ ₹1 ಕೋಟಿ ಬೇಡಿಕೆ
ದೇವೇಂದ್ರ ಅವರ ಅಣ್ಣನ ಪತ್ನಿ PSI ಹುದ್ದೆಗೆ ತಯಾರಿ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಗಿರೀಶ್ ಎಂಬಾತನ ಪರಿಚಯವಾಗಿತ್ತು ಎನ್ನಲಾಗಿದೆ. ಆತ PSI ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿ, ಇದಕ್ಕಾಗಿ ₹1 ಕೋಟಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ನಂತರ ಗಿರೀಶ್ ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ ಹಾಗೂ ಆನಂದ್ ಸೇರಿದಂತೆ ಕೆಲವರ ಮೊಬೈಲ್ ಸಂಖ್ಯೆಯನ್ನ ದೇವೇಂದ್ರ ಅವರಿಗೆ ನೀಡಿದ್ದ ಎನ್ನಲಾಗಿದೆ. ಈ ಮೂಲಕ ಉದ್ಯೋಗ ಕೊಡಿಸುವ ವಿಚಾರದಲ್ಲಿ ಹಲವರು ಭಾಗಿಯಾಗಿರುವಂತೆ ನಂಬಿಕೆ ಮೂಡಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರೂಮ್‌ನಲ್ಲಿ ₹20 ಲಕ್ಷ ನಗದು ನೀಡಿದ್ದ ಆರೋಪ
ಆರೋಪಿಗಳ ಮಾತನ್ನ ನಂಬಿದ ದೇವೇಂದ್ರ ಅವರು 2026ರ ಏಪ್ರಿಲ್ 7ರಂದು ಅರಸಿನಕುಂಟೆಯಲ್ಲಿರುವ ರೂಮ್‌ವೊಂದರಲ್ಲಿ ಗಿರೀಶ್ ಹಾಗೂ ದೀಪಕ್‌ಗೆ ₹20 ಲಕ್ಷ ನಗದು ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ. ಲಕ್ಷ್ಮೀ ವೆಂಕಟೇಶ್ವರ ಎಂಟರ್‌ಪ್ರೈಸಸ್, ಉತ್ತೇಜ ಹಾಗೂ ಎಂ.ಸಿ.ರಂಗನಾಥ್ ಅವರ ಖಾತೆಗಳಿಗೆ ಒಟ್ಟು ₹40 ಲಕ್ಷ ಹಣ ವರ್ಗಾವಣೆ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ನಗದು ಮತ್ತು ಬ್ಯಾಂಕ್ ವರ್ಗಾವಣೆ ಸೇರಿದಂತೆ ಹಂತ ಹಂತವಾಗಿ ಒಟ್ಟು ₹60 ಲಕ್ಷ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಾಲ, ಜಮೀನು ಮಾರಾಟ ಮಾಡಿ ಹಣ ಹೊಂದಿಸಿದ್ದ
PSI ಹುದ್ದೆ ಸಿಗಲಿದೆ ಎಂಬ ನಿರೀಕ್ಷೆಯಲ್ಲಿ ದೇವೇಂದ್ರ ಅವರು ದೊಡ್ಡ ಮೊತ್ತದ ಹಣ ಹೊಂದಿಸಲು ಹಲವು ಮಾರ್ಗಗಳನ್ನ ಅವಲಂಬಿಸಿದ್ದರು ಎನ್ನಲಾಗಿದೆ. ಹೋಮ್ ಲೋನ್ ಮಾಡುವುದು, ಹೊಲ ಮಾರಾಟ ಮಾಡುವುದು ಹಾಗೂ ಸಂಬಂಧಿಕರಿಂದ ಸಾಲ ಪಡೆಯುವ ಮೂಲಕ ಹಣ ಸಂಗ್ರಹಿಸಿ ಆರೋಪಿಗಳಿಗೆ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ನಂತರ PSI ನೇಮಕಾತಿ ನಡೆಯದ ಹಿನ್ನೆಲೆಯಲ್ಲಿ ನೀಡಿದ್ದ ಹಣ ವಾಪಸ್ ಕೇಳಲಾಗಿದೆ. ಈ ವೇಳೆ ಆರೋಪಿಗಳು ಹಣ ಹಿಂದಿರುಗಿಸದೆ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲವೆಂದು ದೇವೇಂದ್ರ ಆರೋಪಿಸಿದ್ದಾರೆ. ಹೀಗಾಗಿ ಉದ್ಯೋಗವೂ ಸಿಗದೆ, ನೀಡಿದ್ದ ₹60 ಲಕ್ಷ ಹಣವೂ ವಾಪಸ್ ಬಾರದ ಹಿನ್ನೆಲೆಯಲ್ಲಿ ದೇವೇಂದ್ರ ಅವರು ಪೊಲೀಸರ ಮೊರೆ ಹೋಗಿದ್ದಾರೆ.
ಎಂಟು ಜನರ ವಿರುದ್ಧ ಪ್ರಕರಣ ದಾಖಲು
ದೂರಿನ ಆಧಾರದ ಮೇಲೆ ಕೆಂಭಾವಿ ಪೊಲೀಸರು ಗಿರೀಶ್, ದೀಪಕ್, ಶಶಾಂಕ್‌ಗೌಡ, ಉತ್ತೇಜ, ಶ್ರೇಯಸ್‌ಗೌಡ, ಆನಂದ್, ಎಂ.ಸಿ.ರಂಗನಾಥ್ ಹಾಗೂ ಸತ್ಯ ಅಲಿಯಾಸ್ ಸತೀಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಕಲಂ 316(2), 318(2) ಹಾಗೂ 318(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಹಣದ ವಹಿವಾಟು, ಆರೋಪಿಗಳ ಪಾತ್ರ ಹಾಗೂ ಉದ್ಯೋಗ ಕೊಡಿಸುವುದಾಗಿ ನೀಡಿದ್ದ ಭರವಸೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಯಾರಾದರೂ ಹಣ ಕೇಳಿದರೆ ಸಾರ್ವಜನಿಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ನೇಮಕಾತಿ ಪ್ರಕ್ರಿಯೆಗಳು ಅಧಿಕೃತ ಮಾರ್ಗದಲ್ಲಿ ನಡೆಯುವುದರಿಂದ, ಮಧ್ಯವರ್ತಿಗಳ ಮಾತನ್ನ ನಂಬಿ ಹಣ ನೀಡುವ ಮುನ್ನ ದಾಖಲೆಗಳು ಮತ್ತು ಅಧಿಕೃತ ಮಾಹಿತಿಯನ್ನ ಪರಿಶೀಲಿಸುವುದು ಮುಖ್ಯವಾಗಿದೆ.