SOCIAL MEDIA

Newsletter

PARTNER SITES
Select Language Select State

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮಧ್ಯರಾತ್ರಿ ಕಳ್ಳನ ವಿಕೃತಿ : ಮಲಗಿದ್ದ ಮಹಿಳೆಯ ಜೊತೆ ಅಸಭ್ಯ ವರ್ತನೆ

ಜಿಲ್ಲಾಸ್ಪತ್ರೆಯಲ್ಲೇ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಕೃತಿ ಮೆರೆದಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ನವೆಂಬರ್ 15 ರ ಮಧ್ಯರಾತ್ರಿ ಕಾಲು ಮುರಿತದ ಚಿಕಿತ್ಸೆಯ ವಾರ್ಡ್‌ನಲ್ಲಿ ಮಲಗಿದ್ದ ಮಹಿಳೆಯ ಪಕ್ಕದಲ್ಲೇ ನುಸುಳಿ ಮೊಬೈಲ್ ಮತ್ತು ಪರ್ಸ್ ಕದಿಯಲು ಯತ್ನಿಸಿದ ಖದೀಮನಿಗೆ, ಸಂತ್ರಸ್ತ ಮಹಿಳೆ ತಕ್ಷಣವೇ ಕೆನ್ನೆಗೆ ಬಾರಿಸಿ ತಕ್ಕ ಪಾಠ ಕಲಿಸಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Written By Krishna NK
Published: Nov 21, 2026, 12:06 IST | Updated: Nov 21, 2026, 12:10 IST
Image Credit: Haveri News
Join

ಹಾವೇರಿ: ರೋಗಿಗಳಿಗೆ ಚಿಕಿತ್ಸೆ ನೀಡಿ ಜೀವ ಉಳಿಸಬೇಕಾದ ಜಿಲ್ಲಾಸ್ಪತ್ರೆಯಲ್ಲೇ ಮಧ್ಯರಾತ್ರಿ ಕಳ್ಳನೊಬ್ಬ ವಿಚಿತ್ರ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ವಿಕೃತಿ ಮೆರೆದಿರುವ ಘಟನೆ ಹಾವೇರಿಯಲ್ಲಿ ಬೆಳಕಿಗೆ ಬಂದಿದೆ. ಕಳ್ಳನ ಕೈಚಳಕ ಕಂಡು ಬೆಚ್ಚಿಬಿದ್ದ ಮಹಿಳೆ ತಕ್ಷಣವೇ ಪ್ರತಿರೋಧ ತೋರಿ ಕೆನ್ನೆಗೆ ಬಾರಿಸಿದ ಪರಿಣಾಮ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಈ ಘಟನೆ ನವೆಂಬರ್ 15 ರಂದು ಮಧ್ಯರಾತ್ರಿ ಹಾವೇರಿ ಜಿಲ್ಲಾಸ್ಪತ್ರೆಯ ಆರ್ಥೋ (ಕಾಲು ಮುರಿತದ ಚಿಕಿತ್ಸೆಯ) ವಾರ್ಡ್ ನಂಬರ್ 109 ರಲ್ಲಿ ನಡೆದಿದೆ. ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳೆಯೊಬ್ಬರು ಮಧ್ಯರಾತ್ರಿ ಗಾಢ ನಿದ್ದೆಯಲ್ಲಿದ್ದಾಗ ಈ ದುಷ್ಕೃತ್ಯ ನಡೆದಿದೆ.

ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ ಖದೀಮ ಮೊದಲು ಮಹಿಳೆ ಮಲಗಿದ್ದ ಬೆಡ್‌ನ ಕೆಳಗೆ ಯಾರಿಗೂ ಕಾಣದಂತೆ ಅವಿತು ಕುಳಿತಿದ್ದಾನೆ. ವಾರ್ಡ್‌ನಲ್ಲಿ ಜನರೆಲ್ಲ ನಿದ್ದೆಗೆ ಜಾರಿದ ಬಳಿಕ, ಮೆಲ್ಲನೆ ಹಾಸಿಗೆಯೊಳಗೆ ನುಸುಳಿದ್ದಾನೆ. ಮಹಿಳೆಯ ಮೈಮೇಲಿದ್ದ ಹಾಸಿಗೆಯನ್ನೇ ಮರೆಯಾಗಿಸಿಕೊಂಡು, ಆಕೆ ತನ್ನ ಬ್ಲೌಸ್ ಒಳಗೆ ಸುರಕ್ಷಿತವಾಗಿ ಇಟ್ಟುಕೊಂಡಿದ್ದ ಮೊಬೈಲ್ ಫೋನ್ ಮತ್ತು ಪರ್ಸ್ ಕದಿಯಲು ಕೈಹಾಕಿದ್ದಾನೆ.

ಮಧ್ಯರಾತ್ರಿ ಏಕಾಏಕಿ ಬ್ಲೌಸ್ ಒಳಗೆ ಕೈಹಾಕಿದ ಸ್ಪರ್ಶದಿಂದ ಸಂತ್ರಸ್ತ ಮಹಿಳೆಗೆ ತಕ್ಷಣವೇ ಎಚ್ಚರವಾಗಿದೆ. ಕತ್ತಲಲ್ಲಿ ಪಕ್ಕದಲ್ಲೇ ಯಾರೋ ಇರುವುದನ್ನು ಗಮನಿಸಿ, ಕಳ್ಳತನಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಕಂಡು ಮಹಿಳೆ ಕ್ಷಣಾರ್ಧದಲ್ಲಿ ಬೆಚ್ಚಿಬಿದ್ದಿದ್ದಾರೆ. ಆದರೆ ಗಾಬರಿಯಾಗದ ಮಹಿಳೆ, ಧೈರ್ಯದಿಂದ ತಕ್ಷಣವೇ ಖದೀಮನ ಕೆನ್ನೆಗೆ ಮನಬಂದಂತೆ ಬಾರಿಸಿ ತಮ್ಮ ಪ್ರತಿರೋಧ ತೋರಿಸಿದ್ದಾರೆ.

ಮಹಿಳೆಯ ಏಟಿನಿಂದ ಕಕ್ಕಾಬಿಕ್ಕಿಯಾದ ಅನಾಮಧೇಯ ವ್ಯಕ್ತಿ, ಅಲ್ಲದೆ ಸದ್ದು ಗದ್ದಲಕ್ಕೆ ಇತರ ರೋಗಿಗಳೂ ಎಚ್ಚರಗೊಳ್ಳುತ್ತಿರುವುದನ್ನು ಕಂಡು ತಕ್ಷಣವೇ ಸ್ಥಳದಿಂದ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಮಹಿಳೆಯ ಸಮಯಪ್ರಜ್ಞೆಯಿಂದಾಗಿ ಆಕೆಯ ಮೊಬೈಲ್ ಮತ್ತು ಪರ್ಸ್ ಕಳ್ಳನ ಪಾಲಾಗುವುದು ತಪ್ಪಿದೆ.

ಆಸ್ಪತ್ರೆಯ ವಾರ್ಡ್‌ನೊಳಗೆ ನುಗ್ಗಿ ಈ ರೀತಿ ಕಳ್ಳತನಕ್ಕೆ ಯತ್ನಿಸಿರುವುದು ಇತರ ರೋಗಿಗಳು ಮತ್ತು ಅವರ ಕುಟುಂಬಸ್ಥರಲ್ಲಿ ತೀವ್ರ ಆತಂಕ ಮೂಡಿಸಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಭದ್ರತಾ ವ್ಯವಸ್ಥೆಯ ವಿರುದ್ಧ ರೋಗಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಕಳ್ಳನ ಕೈಚಳಕದ ದೃಶ್ಯಗಳು ಆಸ್ಪತ್ರೆಯ ಸಿಸಿಟಿವಿ (CCTV) ಕ್ಯಾಮರಾದಲ್ಲಿ ಸೆರೆಯಾಗಿವೆ ಎನ್ನಲಾಗಿದೆ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಆಸ್ಪತ್ರೆಯೊಳಗೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಭದ್ರತೆ ಒದಗಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES