Raichur Sindhanur taluk Sneha Love case; ಒಬ್ಬರನ್ನ ಮದುವೆಯಾಗಿ ಅವರನ್ನ ಬಿಟ್ಟು ಮೊತ್ತಬ್ಬರನ್ನು ಮಹಿಳೆ ಮದುವೆಯಾಗಿದ್ದಳು. ಇನ್ನೊಬ್ಬನನ್ನು ಮದುವೆಯಾದ ಮೇಲೆ ನಟ್ಟಗೆ ಸಂಸಾರ ಮಾಡಿಕೊಂಡಿ ಇರುವುದನ್ನು ಬಿಟ್ಟು ಪರ ಪುರುಷನ ತೋಳ ತೆಕ್ಕೆಯಲ್ಲಿ ಬಂಧಿಯಾಗಲು ಹೋದ ಮಹಿಳೆಯನ್ನು ಪ್ರಿಯಕರನೇ ಕೊಲೆಗೈದ ದಾರುಣ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಮ್ ಕಡೆ ಗಾದೆ ಮಾತೊಂದಿದೆ. ಕಟ್ಟಿ ಕೊಂಡವನು ಕಡೆ ತನಕ, ಇಟ್ಟುಕೊಂಡವನು ಇರೋ ತನಕ ಅಂತ. ಈ ಗಾದೆ ಈ ಸ್ಟೋರಿಯಲ್ಲಿ ಬರೋ ಈ ಮಹಿಳೆಗೆ ಅಕ್ಷರಶಃ ಅನ್ವಯಿಸುತ್ತದೆ. ಒಬ್ಬರಲ್ಲ ಇಬ್ಬಿಬ್ಬಿರನ್ನ ಕಟ್ಟಿಕೊಂಡಿದ್ದರೂ ಈಕೆಗೆ ಮತ್ತೊಬ್ಬರ ಸಂಗ ಬೇಕಿತ್ತು. ಇವತ್ತು ಈಕೆಯ ಈ ದುರಾಲೋಚನೆಯೇ ಪ್ರಾಣಕ್ಕೆ ಕುತ್ತು ತಂದೊಡ್ಡಿದೆ. ನೋಡೋಕೆ ಸ್ಪುರದೃಪಿಯಂತಿರುವ ಮಹಿಳೆಯ ಹೆಸರು ಸ್ನೇಹಾ. ಎಲ್ಲೋ ಒಂದ್ ಕಡೆ ಈಕೆಯ ಸೌಂದರ್ಯವೇ ಈಕೆಗೆ ಮುಳುವಾಯ್ತೋ ಏನೋ.. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ RH ಕ್ಯಾಂಪ್- 5 ನ ನಿವಾಸಿ ಆಗಿದ್ದ ಸ್ನೇಹಾ 9ನೇ ತರಗತಿ ಓದಿಕೊಂಡಿರುವ ಈಕೆಗೆ ಈಗಾಗಲೇ ಮದುವೆಯಾಗಿತ್ತು.
ಆದರೆ ಮೊದಲ ಗಂಡನ ಜೊತೆ ಸಂಸಾರ ಮಾಡಲಾಗದೇ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಳು. ಸಣ್ಣ ವಯಸ್ಸಲ್ಲಿ ಸಂಸಾರ ಹೀಗಾಯಿತಲ್ಲ ಅಂತ ಮನೆಯವರು ಸ್ನೇಹಾಗೆ ಮತ್ತೊಂದು ಮದುವೆ ಮಾಡಿದ್ದಾರೆ. ಈಗ ಇರುವ ಗಂಡ ಮತ್ತು ಸ್ನೇಹಾ ಸಂಸಾರಕ್ಕೆ ಪ್ರತಿಯಾಗಿ ಒಂದೂವರೆ ವರ್ಷದ ಒಂದು ಹೆಣ್ಣು ಮಗು ಇದೆ. ಅದಾಗಿಯೂ ಈಕೆಗೆ ಪರಪುರುಷನ ಸಂಗ ಮಾಡಿಕೊಂಡಿದ್ದಳು ಎನ್ನುವುದು ಇದೆ. ಹೀಗಾಗಿ ಅದೇ ಗ್ರಾಮದ ಶುಭಂ ಎಂಬಾತನ ಜೊತೆ ಪ್ರೀತಿ ಪ್ರೇಮ ಅಂತ ಶುರುವಿಟ್ಟುಕೊಂಡಿದ್ದಾಳೆ.
ಅದೇ ವಿಚಾರಕ್ಕೆ ಇದೀಗ ಹೆಣವಾಗಿ ಹೋಗಿದಾಳೆ. ಘಟನೆ ನಡೆದ ಮೇಲೆ ಮೃತ ತಾಯಿಯ ಮೇಲೆ ಬಿದ್ದು ಮಗು ಅಳುವುದು ಕಣ್ಣೀರು ತರಿಸುತ್ತದೆ. ಆದರೆ ಆಕೆ ಮಾಡಿದ್ದು ಮಾತ್ರ ಯಾರು ಕ್ಷಮಿಸಲಾಗದಂತಹದ್ದು. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪತಿ ಹಾಗೂ ಪ್ರಿಯಕರನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸ್ತಾರೆ. ಆಗಲೇ ನೋಡಿ ಅಸಲಿ ಕೊಲೆಯ ರಹಸ್ಯ ಬಿಚ್ಚಿಕೊಳ್ಳೋದು.
ಹೌದು.. ಸ್ನೇಹಾಳ ಶವ ಇಂದು RH ಕ್ಯಾಂಪ್ 5 ನ ಹೊರವಲಯದ ಜಮೀನೊಂದರಲ್ಲಿ ಪತ್ತೆಯಾಗಿದೆ. ತಾಯಿಯ ಪರಿಸ್ಥಿತಿ ಕಂಡು ಒಂದೂವರೆ ವರ್ಷದ ಮಗು ನಾಲ್ಕೈದು ಗಂಟೆಗಳ ಕಾಲ ತಾಯಿಯ ದೇಹದ ಮೇಲೆ ಬಿದ್ದು ಅತ್ತಿದೆ. ಸೋತು ಸೊರಗಿ ಕಣ್ಣೀರೆಲ್ಲ ಬತ್ತಿ ಹೋಗಿ ತಾಯಿಯ ಎದೆಯ ಮೇಲೆ ಒರಗಿ ಮಲಗಿದೆ. ಈ ದೃಶ್ಯ ಎಂಥವರ ಎದೆಯನ್ನೂನೊಂದು ಬಾರಿ ಝಲ್ಲೆನ್ನುವಂತೆ ಮಾಡುತ್ತೆ. ಪ್ರಿಯಕರನೇ ನಂಬಿಸಿ ಕರೆದೊಯ್ದು ಹತ್ಯೆಗೈದಿದಾನೆ.
ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಪ್ರಿಯಕರ ಶುಭಂ ಅಜ್ಜಿ ಜೊತೆ ಕ್ಯಾಂಪ್‌ನ ಮನೆಯಲ್ಲಿದ್ದ ಸ್ನೇಹಾಳನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದಾನೆ. ಮನೆಯಲ್ಲಿ ಅಜ್ಜಿನ ಬಿಟ್ಟು ಸ್ನೇಹಾ ತಾನೊಬ್ಬಳೇ ಹೋಗಿದ್ದಾಳೆ. ಮಗುವನ್ನ ಬಿಟ್ಟು ಹೋಗೋದು ಬೇಡ ಅಂತ ತನ್ನೊಡನೆ ಕರೆದೊಯ್ದಿದಾಳೆ. ಹೀಗೆ ಕರೆದೊಯ್ದ ಪ್ರಿಯಕರ ಶುಭಂ ಆಕೆಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಕುವಿನಿಂದ ಬೆನ್ನಿಗೆ ಇರಿದು, ಕಲ್ಲಿನಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಈಗಾಗಲೇ ಶುಭಂಗೂ ಕೂಡ ಮದುವೆಯಾಗಿತ್ತು.
ಶುಭಂನ ಪತ್ನಿಗೆ ಇವರಿಬ್ಬರ ಲವ್ವೀ ಡವ್ವೀ ವಿಚಾರ ಗೊತ್ತಾಗಿ ಹೋಗಿತ್ತು. ಇದೇ ಕಾರಣಕ್ಕೆ ಸ್ನೇಹಾಳನ್ನ ಬಿಡದೇ ಹೋದರೆ ನಾನೇ ನಿನಗೆ ಡೈವೋರ್ಸ್ ಕೊಡ್ತೇನೆ ಅಂತ ಕಿರಿ ಕಿರಿ ಶುರು ಮಾಡುತ್ತಿದ್ದಳು. ಇತ್ತ ಶುಭಂ ಸ್ನೇಹಾಳಿಗೆ ಹೇಳಿದ್ರೆ ಗಂಡನನ್ನ ಬೇಕಾದರೆ ಬಿಡುತ್ತೇನೆ ನಿನ್ನನ್ನ ಬಿಡೋ ಮಾತೇ ಇಲ್ಲ ಅಂತ ಹಠ ಹಿಡಿದಿದ್ದಳು. ಇದರ ಮಧ್ಯೆ ಸ್ನೇಹಾಳಿಗೆ ಬೇರೆ ಬೇರೆ ಜನರ ಜೊತೆ ಸಂಪರ್ಕ ಬೇರೆ ಇತ್ತು ಎನ್ನಲಾಗ್ತಿದೆ. ಹೀಗಾಗಿ ಇವಳನ್ನ ಇಲ್ಲ ಅನ್ನಿಸಿಬಿಟ್ಟರೆ ನಾನು ನನ್ನ ಹೆಂಡತಿ ಜೊತೆ ನೆಮ್ಮದಿಯಿಂದ ಇರಬಹುದು ಅಂತ ಭಾವಿಸಿ ಶುಭಂ ಸ್ನೇಹಾಳನ್ನ ಕರೆದೊಯ್ದು ಹತ್ಯೆಗೈದಿದ್ದಾನೆ. ಘಟನೆ ನಡೆದು ಕೆಲವೇ ಘಂಟೆಗಳಲ್ಲಿ ಹಂತಕನ ಎಡೆಮುರಿ ಕಟ್ಟಿದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಈ ಕುರಿತು ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.