SOCIAL MEDIA

Newsletter

PARTNER SITES
Select Language Select State

ಹಾವೇರಿ VAO ಪರೀಕ್ಷೆಯಲ್ಲಿ ಅಕ್ರಮ ಆರೋಪ: ಗೂಗಲ್ ಲೆನ್ಸ್ ಬಳಸಿ ಉತ್ತರ ಹುಡುಕಿದ ಅಭ್ಯರ್ಥಿ ಅರೆಸ್ಟ್!

ಹಾವೇರಿಯ ಶಿಗ್ಗಾವಿಯಲ್ಲಿ ನಡೆದ ಕೆಇಎ VAO ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಉತ್ತರ ಹುಡುಕಿದ ಆರೋಪದ ಮೇಲೆ ಶಂಕರ ಬನ್ನೂರನನ್ನು ಪೊಲೀಸರು ಬಂಧಿಸಿದ್ದಾರೆ. ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ ಈತ, 15 ದಿನಗಳ ಹಿಂದೆ ನಡೆದ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ. ಅಂಕಗಳ ವ್ಯತ್ಯಾಸದಿಂದ ಅನುಮಾನಗೊಂಡ ಕೆಇಎ ತನಿಖೆಗೆ ಸೂಚಿಸಿತ್ತು. ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಯಲ್ಲಿ ಅಕ್ರಮದ ಆರೋಪ ಬೆಳಕಿಗೆ ಬಂದಿದೆ.

Written By Puttaraj K Alur
Published: Nov 01, 2026, 01:10 PM IST | Updated: Nov 01, 2026, 01:21 PM IST
Image Credit: KEA Exam Scam
Join

KEA Exam Scam: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ್ದ ಗ್ರಾಮ ಆಡಳಿತ ಅಧಿಕಾರಿ (VAO) ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಪರೀಕ್ಷಾ ಕೇಂದ್ರದಲ್ಲೇ ಮೊಬೈಲ್ ಬಳಸಿ ಪ್ರಶ್ನೆಗಳಿಗೆ ಉತ್ತರ ಹುಡುಕಿದ ಆರೋಪದ ಮೇಲೆ ಪರೀಕ್ಷಾರ್ಥಿಯೊಬ್ಬನನ್ನ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ರಾಜ್ಯಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದ ಅಭ್ಯರ್ಥಿಯ ವಿರುದ್ಧವೇ ಪರೀಕ್ಷಾ ಅಕ್ರಮದ ಆರೋಪ ಕೇಳಿಬಂದಿರುವುದು ಪ್ರಕರಣದ ಪ್ರಮುಖ ಬೆಳವಣಿಗೆಯಾಗಿದೆ.

ಹಾವೇರಿ ಜಿಲ್ಲೆಯ ಹಾನಗಲ್ ಮೂಲದ ಶಂಕರ ಬನ್ನೂರು ಬಂಧಿತ ಪರೀಕ್ಷಾರ್ಥಿ. ಅಕ್ಟೋಬರ್ 4ರಂದು ಕೆಇಎ ವತಿಯಿಂದ VAO ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಶಂಕರ ಬನ್ನೂರು ಬರೋಬ್ಬರಿ 151.25 ಅಂಕಗಳನ್ನ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದ. ಆದರೆ ಪರೀಕ್ಷೆಯಲ್ಲಿ ಆತ ಗಳಿಸಿದ್ದ ಅಂಕಗಳ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ ಕೆಇಎ ಅಧಿಕಾರಿಗಳು ಹಾವೇರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಪರೀಕ್ಷಾ ಕೊಠಡಿಯೊಳಗೆ ಮೊಬೈಲ್ ಬಳಕೆ ಆರೋಪ

ಶಿಗ್ಗಾವಿಯ ಪರೀಕ್ಷಾ ಕೇಂದ್ರದಲ್ಲಿ ಶಂಕರ ಬನ್ನೂರು ಪರೀಕ್ಷೆ ಬರೆಯುವ ವೇಳೆ ಅಕ್ರಮ ಎಸಗಿದ್ದಾನೆಂಬ ಆರೋಪ ಕೇಳಿಬಂದಿದೆ. ಪರೀಕ್ಷಾ ಕೊಠಡಿಯ ಕೊನೆಯ ಬೆಂಚ್‌ನಲ್ಲಿ ಕುಳಿತಿದ್ದ ಶಂಕರ, ತನ್ನೊಂದಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿ ಪರೀಕ್ಷೆ ಬರೆದಿದ್ದ ಎನ್ನಲಾಗಿದೆ. ಪರೀಕ್ಷೆಯ ಸಮಯದಲ್ಲಿ ಮೊಬೈಲ್ ಬಳಸಿ ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಶ್ನೆಗಳಿಗೆ ಉತ್ತರ ಹುಡುಕಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಮಾಹಿತಿಯ ಪ್ರಕಾರ, ಶಂಕರ ಬನ್ನೂರು ಗೂಗಲ್ ಲೆನ್ಸ್ ತಂತ್ರಜ್ಞಾನವನ್ನ ಬಳಸಿಕೊಂಡು ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳನ್ನ ಸ್ಕ್ಯಾನ್ ಮಾಡಿದ್ದಾನೆ. ಬಳಿಕ ಗೂಗಲ್ ಲೆನ್ಸ್ ಮೂಲಕ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರಗಳನ್ನ ಹುಡುಕಿದ್ದಾನೆ ಎನ್ನಲಾಗಿದೆ. ಪರೀಕ್ಷಾ ಕೇಂದ್ರದೊಳಗೆ ಮೊಬೈಲ್ ತೆಗೆದುಕೊಂಡು ಹೋಗಿ ಈ ರೀತಿ ಉತ್ತರಗಳನ್ನ ಹುಡುಕಿರುವ ಆರೋಪ ಇದೀಗ ಪ್ರಕರಣದ ತನಿಖೆಗೆ ಪ್ರಮುಖ ಕಾರಣವಾಗಿದೆ.

ಕೆಇಎಗೆ ಅನುಮಾನ ಮೂಡಿಸಿದ ಅಂಕಗಳು

ಶಂಕರ ಬನ್ನೂರು VAO ಪರೀಕ್ಷೆಯಲ್ಲಿ 151.25 ಅಂಕ ಗಳಿಸಿ ರಾಜ್ಯಕ್ಕೆ ಟಾಪರ್ ಆಗಿದ್ದ. ಆದರೆ, ಇದಕ್ಕೂ ಕೇವಲ 15 ದಿನಗಳ ಹಿಂದೆ ನಡೆದಿದ್ದ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಆತ ಪಡೆದಿದ್ದ ಅಂಕಗಳು ಕೇವಲ 25. ಅಲ್ಪಾವಧಿಯ ಅಂತರದಲ್ಲಿ ನಡೆದ ಎರಡು ಪರೀಕ್ಷೆಗಳ ಫಲಿತಾಂಶದಲ್ಲಿ ಕಂಡುಬಂದಿದ್ದ ಭಾರೀ ವ್ಯತ್ಯಾಸದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿತ್ತು. ಅಲ್ಲದೆ VAO ಪರೀಕ್ಷೆಯಲ್ಲಿ ಯಾವುದೇ ಹೆಚ್ಚುವರಿ ಮಾರ್ಕಿಂಗ್ ಇಲ್ಲದಿದ್ದರೂ, ಒಂದೇ ಒಂದು ತಪ್ಪು ಉತ್ತರದೊಂದಿಗೆ ಅಷ್ಟೊಂದು ಹೆಚ್ಚಿನ ಅಂಕ ಗಳಿಸಿರುವುದು ಕೂಡ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪರೀಕ್ಷಾ ಫಲಿತಾಂಶದ ಕುರಿತು ಸಮಗ್ರ ಪರಿಶೀಲನೆ ನಡೆಸುವಂತೆ ಕೆಇಎ ಅಧಿಕಾರಿಗಳು ಹಾವೇರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಯಲ್ಲಿ ಬಯಲಾದ ಅಂಶ

ಕೆಇಎಯಿಂದ ಬಂದ ಪತ್ರದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ಕುರಿತು ತನಿಖೆ ನಡೆಸಲಾಯಿತು. ಈ ತನಿಖೆಯ ಸಂದರ್ಭದಲ್ಲಿ ಶಂಕರ ಬನ್ನೂರು ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಬಳಸಿ ಪರೀಕ್ಷೆ ಬರೆದಿರುವ ಆರೋಪಕ್ಕೆ ಸಂಬಂಧಿಸಿದ ಅಂಶಗಳು ಬೆಳಕಿಗೆ ಬಂದಿವೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಪೊಲೀಸರು ಶಂಕರ ಬನ್ನೂರನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮೊದಲಿಗೆ ಹಾನಗಲ್ ಪೊಲೀಸರು ಶಂಕರ ಬನ್ನೂರನನ್ನ ವಶಕ್ಕೆ ಪಡೆದಿದ್ದರು. ಬಳಿಕ ತಡರಾತ್ರಿ ಆತನನ್ನ ಶಿಗ್ಗಾವಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಶಿಗ್ಗಾವಿ ಪೊಲೀಸರು ಆತನನ್ನ ಬಂಧಿಸಿದ್ದು, VAO ಪರೀಕ್ಷೆಯಲ್ಲಿ ನಡೆದಿರಬಹುದಾದ ಅಕ್ರಮದ ಕುರಿತು ತನಿಖೆ ಮುಂದುವರಿದಿದೆ.

ರಾಜ್ಯಕ್ಕೆ ಟಾಪರ್ ಆಗಿದ್ದ ಅಭ್ಯರ್ಥಿಯೇ ಆರೋಪಿ!

ಒಂದೆಡೆ KSRP ಕಾನ್‌ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಗಳಿಸಿದ್ದ ಶಂಕರ ಬನ್ನೂರು, ಮತ್ತೊಂದೆಡೆ ಕೇವಲ 15 ದಿನಗಳ ಅಂತರದಲ್ಲಿ ನಡೆದ VAO ಪರೀಕ್ಷೆಯಲ್ಲಿ 151.25 ಅಂಕ ಪಡೆದು ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ್ದ. ಈ ಅಂಕಗಳ ವ್ಯತ್ಯಾಸವೇ ಕೆಇಎ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಪರೀಕ್ಷಾ ಕೇಂದ್ರದಲ್ಲೇ ಮೊಬೈಲ್ ಬಳಸಿ ಗೂಗಲ್ ಲೆನ್ಸ್ ಮೂಲಕ ಉತ್ತರ ಹುಡುಕಿದ್ದಾನೆಂಬ ಆರೋಪದ ಹಿನ್ನೆಲೆಯಲ್ಲಿ ಶಂಕರ ಬನ್ನೂರು ಪೊಲೀಸರ ವಶದಲ್ಲಿದ್ದಾನೆ.

ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ನಡೆದಿರುವ ಈ ಪ್ರಕರಣವು ಕೆಇಎ ನಡೆಸಿದ VAO ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮದ ಆರೋಪಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಯಾಗಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ತನಿಖೆಯ ನಂತರ ಅಭ್ಯರ್ಥಿಯನ್ನ ಪೊಲೀಸರು ಬಂಧಿಸಿದ್ದು, ಪ್ರಕರಣದ ಮುಂದಿನ ತನಿಖೆಯತ್ತ ಎಲ್ಲರ ಗಮನ ನೆಟ್ಟಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES