ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶವೊಂದು ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಇಂದು (ನವೆಂಬರ್ 09) ಬೆಳಿಗ್ಗೆ 11:35ರ ಸುಮಾರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಬಾಂಬ್ ಸ್ಫೋಟದ ಬಗ್ಗೆ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ರವಾನೆಯಾಗಿದೆ. 'ವೆಯಿಟ್ ಸ್ಮಿತ್' (Weit Smith) ಎಂಬ ಹೆಸರಿನಲ್ಲಿ weismith3727@gmail.com ವಿಳಾಸದಿಂದ ಈ ಮೇಲ್ ಬಂದಿರುವುದಾಗಿ ತಿಳಿದುಬಂದಿದೆ.
ಮೇಲ್ನಲ್ಲಿ ಖಲಿಸ್ತಾನ್ ಪರ ಘೋಷಣೆ:
ಮೇಲ್ನಲ್ಲಿ ಖಲಿಸ್ತಾನ್ ಪರ ಘೋಷಣೆಗಳ ಜೊತೆಗೆ 1984ರ ಸಿಖ್ ನರಮೇಧದ ಉಲ್ಲೇಖ ಮಾಡಲಾಗಿದೆ. ಅಲ್ಲದೆ, ನವೆಂಬರ್ 29ರಂದು ಬೆಂಗಳೂರಿನ NICE ಸೆಂಟರ್ ಸ್ಟೇಜ್ನಲ್ಲಿ ನಡೆಯಲಿರುವ ಗಾಯಕ ದಲ್ಜಿತ್ ದೋಸಾಂಜ್ ಅವರ ಕಾರ್ಯಕ್ರಮದ ಸ್ಥಳದಲ್ಲಿ ಐಇಡಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿದೆ.
ನ. 27ರಂದು ಬಾಲಿವುಡ್ ನಟನ ಮನೆ ಸಮೀಪ ಸ್ಫೋಟದ ಬಗ್ಗೆ ಎಚ್ಚರಿಕೆ:
ನವೆಂಬರ್ 27ರಂದು ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ ಅವರ ಮನೆ ಸಮೀಪ ಸ್ಫೋಟ ಸಂಭವಿಸಲಿದೆ ಎಂಬ ಎಚ್ಚರಿಕೆಯನ್ನೂ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಐಇಡಿ ಬಾಂಬ್ ಇರಿಸಿರುವುದಾಗಿ ಬೆದರಿಕೆ:
ಇಷ್ಟಕ್ಕೇ ನಿಲ್ಲದ ಬೆದರಿಕೆ ಸಂದೇಶದಲ್ಲಿ ಬೆಂಗಳೂರಿನ ಮೆಟ್ರೋ ನಿಲ್ದಾಣಗಳಲ್ಲಿ ಐಇಡಿ ಬಾಂಬ್ ಇರಿಸಿರುವುದಾಗಿ ಹೇಳಲಾಗಿದ್ದು, ನವೆಂಬರ್ 29ರಂದು ಮೆಟ್ರೋದಲ್ಲಿ ಪ್ರಯಾಣಿಸದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಮಧ್ಯಾಹ್ನ 3:11ರಿಂದ ರಾತ್ರಿ 11:11ರವರೆಗಿನ ಸಮಯವನ್ನೂ ಉಲ್ಲೇಖಿಸಲಾಗಿದೆ. NICE ಮೈದಾನಕ್ಕೆ ತೆರಳದಂತೆ ಹಾಗೂ ಎಲ್ಲಿಯಾದರೂ ಐಫೋನ್ ಬಿದ್ದಿರುವುದು ಕಂಡುಬಂದರೆ ಅದನ್ನು ಮುಟ್ಟದಂತೆ ಸಂದೇಶದಲ್ಲಿ ಸೂಚಿಸಲಾಗಿದೆ.
ಇದಲ್ಲದೆ, ಖಲಿಸತಾನ ನ್ಯಾಷನಲ್ ಆರ್ಮಿ (Khalistan National Army) ಮತ್ತು Babbar Khalsa (Parmar-Canada) ಸಂಘಟನೆಗಳ ಹೆಸರುಗಳನ್ನೂ ಮೇಲ್ನಲ್ಲಿ ಉಲ್ಲೇಖಿಸಲಾಗಿದೆ. ಹಲವು ವ್ಯಕ್ತಿಗಳ ಹೆಸರುಗಳನ್ನು ಪ್ರಸ್ತಾಪಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ದೀಪಾವಳಿ ಹಬ್ಬದ ದಿನವೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬಂದಿರುವ ಈ ಬೆದರಿಕೆ ಸಂದೇಶ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಪೊಲೀಸರು ಹಾಗೂ ಭದ್ರತಾ ಸಂಸ್ಥೆಗಳು ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವ ಅಗತ್ಯವಿದೆ. ಇ-ಮೇಲ್ನ ಮೂಲ, ಬೆದರಿಕೆಯ ವಿಶ್ವಾಸಾರ್ಹತೆ ಮತ್ತು ಇದರ ಹಿಂದಿರುವ ವ್ಯಕ್ತಿಗಳ ಬಗ್ಗೆ ತನಿಖೆಯಿಂದಷ್ಟೇ ಸ್ಪಷ್ಟ ಮಾಹಿತಿ ಹೊರಬರಬೇಕಿದೆ.