ಹೃದಯಾಘಾತದ ನಾಟಕವಾಡಿ ಗಂಡನನ್ನೇ ಕೊಂದ ಕಿಲಾಡಿ ಪತ್ನಿ! ಪ್ರಿಯಕರನ ಜೊತೆ ಸೇರಿ ಮರ್ಡರ್ ಸ್ಕೆಚ್
ತಾಳಿ ಕಟ್ಟಿದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಕಿಲಾಡಿ ಪತ್ನಿಯ ಕೃತ್ಯ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ.
ಬೆಂಗಳೂರು: ಅಯ್ಯೋ ನನ್ನ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ರು ಅಂತ ಕಣ್ಣೀರು ಹಾಕಿ ಎಲ್ಲರ ಮುಂದೆ ನಾಟಕವಾಡಿದ್ದ ಪತ್ನಿಯ ಅಸಲಿ ಮುಖವಾಡ ಈಗ ಕಳಚಿಬಿದ್ದಿದೆ. ತಾಳಿ ಕಟ್ಟಿದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ ಕಿಲಾಡಿ ಪತ್ನಿಯ ಕೃತ್ಯ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಗಂಡನ ಸಾವು ಹೃದಯಾಘಾತವಲ್ಲ, ಅದೊಂದು ವ್ಯವಸ್ಥಿತ ಕೊಲೆ ಅನ್ನೋ ಸತ್ಯ ಮರಣೋತ್ತರ ಪರೀಕ್ಷೆಯ ವರದಿಯಿಂದ ಹೊರಬಂದಿದೆ. ಅಷ್ಟಕ್ಕೂ ಆ ರಾತ್ರಿ ನಡೆದಿದ್ದೇನು, ಕೊಲೆ ರಹಸ್ಯ ಬಯಲಾಗಿದ್ದು ಹೇಗೆ, ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.
ಅದು ನೋಡಲು ಸಹಜ ಸಾವು, ಪತ್ನಿಯ ಕಣ್ಣಲ್ಲಿ ದುಃಖ, ಗಂಡನನ್ನು ಕಳೆದುಕೊಂಡ ನೋವಿನ ನಾಟಕ, ಆದರೆ ಈ ಸಾವಿನ ಹಿಂದೆ ಅಡಗಿದ್ದದ್ದು ಭೀಕರ ಕೊಲೆ ರಹಸ್ಯ. ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಪತ್ನಿ, ಅದನ್ನು ಹೃದಯಾಘಾತದ ಸಾವು ಎಂದು ನಂಬಿಸಲು ಹೊರಟಿದ್ದಳು. ಅಕ್ಟೋಬರ್ 12ರಂದು ಬೆಂಗಳೂರು ಹೊರವಲಯದ ದೊಡ್ಡತೋಗೂರಿನ ಮನೆಯಲ್ಲಿ ಉಪೇಂದ್ರ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಪತ್ನಿ ಅನಿತಾ ನೀಡಿದ್ದ ಮಾಹಿತಿಯ ಆಧಾರದ ಮೇಲೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆದರೆ, ಆರಂಭದಲ್ಲಿ ಸಹಜ ಸಾವಿನಂತೆ ಕಂಡಿದ್ದ ಪ್ರಕರಣಕ್ಕೆ ಮರಣೋತ್ತರ ಪರೀಕ್ಷೆಯ ವರದಿ ಹೊಸ ತಿರುವು ನೀಡಿತ್ತು. ಉಪೇಂದ್ರ ಹೃದಯಾಘಾತದಿಂದ ಮೃತಪಟ್ಟಿಲ್ಲ, ಬದಲಿಗೆ ಉಸಿರುಗಟ್ಟಿಸಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತ್ತು.
ಇನ್ನು ಪೊಲೀಸರ ತನಿಖೆಯಲ್ಲಿ ಪತ್ನಿ ಅನಿತಾ ಹೇಳಿದ್ದ ಕಥೆಯೇ ಅನುಮಾನಕ್ಕೆ ಕಾರಣವಾಗಿತ್ತು. ಅಂದು ಮಧ್ಯರಾತ್ರಿ ಪತಿ ಉಪೇಂದ್ರ ಬಿಯರ್ ಕುಡಿದು ಕಬಾಬ್ ಮತ್ತು ಚಪಾತಿ ತಿಂದು ಜಾರಿ ಬಿದ್ದಿದ್ದರು. ಬಳಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅನಿತಾ ಹೇಳಿಕೆ ನೀಡಿದ್ದಳು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಹೊಟ್ಟೆಯಲ್ಲಿ ಯಾವುದೇ ಆಹಾರದ ಅಂಶವಾಗಲಿ, ಆಲ್ಕೋಹಾಲ್ ಕುಡಿದಿರುವ ಕುರುಹಾಗಲಿ ಪತ್ತೆಯಾಗಿರಲಿಲ್ಲ. ಹೀಗಾಗಿ ಅನಿತಾ ಹೇಳಿದ್ದ ಕಥೆಯ ಮೇಲೆ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿತ್ತು. ಇಲ್ಲಿಂದ ಶುರುವಾಯ್ತು ಪೊಲೀಸರ ಅಸಲಿ ತನಿಖೆ. ಮನೆಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಘಟನೆಯ ರಾತ್ರಿ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಆ ವ್ಯಕ್ತಿಯ ಗುರುತು ಪತ್ತೆಹಚ್ಚಿದಾಗ ಆತ ಅನಿತಾಳ ಕ್ಲಾಸ್ಮೇಟ್ ಹಾಗೂ ಪ್ರಿಯಕರ ಮಧುಸೂಧನ್ ರೆಡ್ಡಿ ಎಂಬ ವಿಚಾರ ಬಯಲಾಗಿತ್ತು. ಅಕ್ಟೋಬರ್ 11ರ ರಾತ್ರಿ ಉಪೇಂದ್ರ ಹಾಗೂ ಅನಿತಾ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಅನಿತಾ ತನ್ನ ಪ್ರಿಯಕರ ಮಧುಸೂಧನ್ ರೆಡ್ಡಿಯನ್ನು ಮನೆಗೆ ಕರೆಸಿಕೊಂಡಿದ್ದಳು. ಮಧ್ಯರಾತ್ರಿ ಬೆಡ್ರೂಮ್ಗೆ ಬಂದ ಮಧುಸೂಧನ್, ಮಲಗಿದ್ದ ಉಪೇಂದ್ರ ಮೇಲೆ ಕುಳಿತು ಹಲ್ಲೆ ನಡೆಸಿದ್ದ. ಈ ವೇಳೆ ಪತ್ನಿ ಅನಿತಾ ಗಂಡನ ಬಾಯಿ ಮತ್ತು ಮೂಗನ್ನು ಬಿಗಿಯಾಗಿ ಮುಚ್ಚಿ ಕೊಲೆಗೆ ಸಾಥ್ ನೀಡಿದ್ದಳು. ಬಳಿಕ ಮಧುಸೂಧನ್ ಉಪೇಂದ್ರನ ಕತ್ತು ಹಿಸುಕಿ ಕೊಲೆ ಮಾಡಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಇನ್ನು ಕೊಲೆ ಮಾಡಿದ ಬಳಿಕವೂ ಆರೋಪಿಗಳು ಸುಮ್ಮನೆ ಕುಳಿತಿರಲಿಲ್ಲ. ಪ್ರಕರಣದ ಮೇಲೆ ಯಾರಿಗೂ ಅನುಮಾನ ಬಾರದಂತೆ ಸಾವನ್ನು ಸಹಜ ಸಾವಿನಂತೆ ಬಿಂಬಿಸಲು ಸಂಚು ರೂಪಿಸಿದ್ದರು. ಉಪೇಂದ್ರ ಜಾರಿ ಬಿದ್ದು ಮೃತಪಟ್ಟಿದ್ದಾರೆ, ಹೃದಯಾಘಾತವಾಗಿದೆ ಎಂಬ ಸುಳ್ಳಿನ ಕಥೆ ಕಟ್ಟಿ ಪೊಲೀಸರನ್ನೇ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿ, ಸಿಸಿಟಿವಿ ದೃಶ್ಯಗಳು ಹಾಗೂ ಪೊಲೀಸರ ತಾಂತ್ರಿಕ ತನಿಖೆ ಆರೋಪಿಗಳ ಸಂಚನ್ನು ಬಯಲಿಗೆಳೆದಿದೆ. ಸದ್ಯ ಪತ್ನಿ ಅನಿತಾ ಮತ್ತು ಆಕೆಯ ಪ್ರಿಯಕರ ಮಧುಸೂಧನ್ ರೆಡ್ಡಿಯನ್ನು ಬಂಧಿಸಿರುವ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಗಂಡನ ಸಾವಿನ ಸುತ್ತ ಅನುಮಾನವೇ ಇಲ್ಲದಂತೆ ಸುಳ್ಳಿನ ಕಥೆ ಹೆಣೆದು, ಕಣ್ಣೀರು ಹಾಕಿ ನಾಟಕವಾಡಿದ್ದ ಪತ್ನಿಯ ರಹಸ್ಯ ಕೊನೆಗೂ ಬಯಲಾಗಿದೆ. ಒಂದು ಕಡೆ ಮರಣೋತ್ತರ ಪರೀಕ್ಷೆಯ ವೈಜ್ಞಾನಿಕ ವರದಿ, ಮತ್ತೊಂದೆಡೆ ಸಿಸಿಟಿವಿ ದೃಶ್ಯಗಳು ಪೊಲೀಸರ ತನಿಖೆಗೆ ಮಹತ್ವದ ಸುಳಿವು ನೀಡಿವೆ. ಸಹಜ ಸಾವು ಎಂದು ಮುಚ್ಚಿಹೋಗಬೇಕಿದ್ದ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಬಯಲಿಗೆಳೆದಿದ್ದು ಪೊಲೀಸರ ತನಿಖಾ ಚಾತುರ್ಯ. ಪ್ರೀತಿಯ ಹೆಸರಿನಲ್ಲಿ ಆರಂಭವಾದ ಸಂಬಂಧ ಕೊನೆಗೆ ಒಂದು ಜೀವವನ್ನೇ ಬಲಿಪಡೆದಿರುವುದು ದುರಂತವೇ ಸರಿ.