ಬೆಂಗಳೂರಿನಲ್ಲಿ ಡಿಆರ್‌ಡಿಒ ಹಿರಿಯ ವಿಜ್ಞಾನಿ ಆತ್ಮಹ*ತ್ಯೆ: ಸೀಗೇಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ದುರಂತ!
ಬೆಂಗಳೂರಿನ ಸೀಗೇಹಳ್ಳಿಯಲ್ಲಿ ಎಡಿಎ ಸಂಸ್ಥೆಯ ಹಿರಿಯ ವಿಜ್ಞಾನಿ ಶರದ್ ಕಟಿಯಾರ್ (47) ಅವರು ಅಪಾರ್ಟ್‌ಮೆಂಟ್‌ನ ನಾಲ್ಕನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು, ಘಟನೆ ನಡೆದ ದಿನವೂ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು ಎನ್ನಲಾಗಿದೆ. ತಂದೆಯ ಕಣ್ಣೆದುರೇ ಈ ದುರಂತ ಸಂಭವಿಸಿದ್ದು, ವೈಟ್‌ಫೀಲ್ಡ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಕೆ.ಆರ್.ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Senior DRDO Scientist Dies in Bengaluru: ಬೆಂಗಳೂರು ನಗರದ ಸೀಗೇಹಳ್ಳಿಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಗೆ ಸಂಬಂಧಿಸಿದ ಹಿರಿಯ ವಿಜ್ಞಾನಿಯೊಬ್ಬರು ಆತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA)ಯ ಗ್ರೇಡ್ ಎಫ್ ವಿಜ್ಞಾನಿ ಶರದ್ ಕಟಿಯಾರ್ (47) ಮೃತಪಟ್ಟವರು. ಅಪಾರ್ಟ್‌ಮೆಂಟ್‌ನ ನಾಲ್ಕನೇ ಅಂತಸ್ತಿನಿಂದ ಬಿದ್ದು ಅವರು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಈ ಸಂಬಂಧ ಪೊಲೀಸರು ಅಸಹಜ ಸಾ*ವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿಯ ಪ್ರಕಾರ, ಅಕ್ಟೋಬರ್ 21ರಂದು ಸಂಜೆ ಸುಮಾರು 7.30ರ ವೇಳೆಗೆ ಘಟನೆ ಸಂಭವಿಸಿದೆ. ಸೀಗೇಹಳ್ಳಿಯಲ್ಲಿರುವ ತಾವು ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ನ ಮೆಟ್ಟಿಲುಗಳ ಮೂಲಕ ನಾಲ್ಕನೇ ಅಂತಸ್ತಿಗೆ ತೆರಳಿದ್ದ ಶರದ್ ಕಟಿಯಾರ್, ಅಲ್ಲಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬದವರು ಮುಂದಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಎಡಿಎ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜ್ಞಾನಿ
ಶರದ್ ಕಟಿಯಾರ್ ಅವರು ಎಡಿಎಯ ಪ್ರೋಗ್ರಾಮಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಒಂದು ತಿಂಗಳಿನಿಂದ ಅವರು ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು. ಮಾನಸಿಕ ಒತ್ತಡದ ಕಾರಣದಿಂದ ಮಾತ್ರೆಗಳನ್ನ ಸೇವಿಸುತ್ತಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.
ಶರದ್ ಅವರು ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಅವರು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ನಿಮ್ಹಾನ್ಸ್‌ನಲ್ಲಿಯೂ ವೈದ್ಯಕೀಯ ನೆರವು ಪಡೆದಿದ್ದರು. ಘಟನೆ ನಡೆದ ದಿನವೂ ಅವರು ನಿಮ್ಹಾನ್ಸ್‌ಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು ಎಂದು ವರದಿಯಾಗಿದೆ.
ತಂದೆಯ ಕಣ್ಣೆದುರೇ ನಡೆದ ದುರಂತ
ಘಟನೆ ನಡೆದ ಸಂದರ್ಭದಲ್ಲಿ ಶರದ್ ಕಟಿಯಾರ್ ಅವರ ತಂದೆಯೂ ಅಪಾರ್ಟ್‌ಮೆಂಟ್‌ನಲ್ಲಿದ್ದರು. ಮಗನ ಚಲನವಲನವನ್ನ ಗಮನಿಸುತ್ತಿದ್ದ ತಂದೆ, ಶರದ್ ಅವರ ಹಿಂದೆಯೇ ಸಾಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಶರದ್ ಏಕಾಏಕಿ ಮೆಟ್ಟಿಲುಗಳನ್ನ ಹತ್ತಿ ಅಪಾರ್ಟ್‌ಮೆಂಟ್‌ನ ನಾಲ್ಕನೇ ಅಂತಸ್ತಿಗೆ ತೆರಳಿದ್ದಾರೆ.
ಮಗನ ವರ್ತನೆಯಿಂದ ಅನುಮಾನಗೊಂಡ ತಂದೆ, ಅವರನ್ನ ತಡೆಯುವ ಉದ್ದೇಶದಿಂದ ಹಿಂದೆಯೇ ಹೋಗಿದ್ದಾರೆ. ಆದರೆ ವಯಸ್ಸಾದ ಕಾರಣ ಮೆಟ್ಟಿಲುಗಳನ್ನ ಹತ್ತಲು ಅವರಿಗೆ ಆಯಾಸವಾಗಿತ್ತು ಎಂದು ತಿಳಿದುಬಂದಿದೆ. ತಂದೆ ಮೇಲಂತಸ್ತಿಗೆ ತಲುಪುವಷ್ಟರಲ್ಲಿ ಶರದ್ ಕಟ್ಟಡದಿಂದ ಕೆಳಗೆ ಬಿದ್ದಿದ್ದರು ಎನ್ನಲಾಗಿದೆ. ಅವರ ಕಣ್ಣೆದುರೇ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ವೈಟ್‌ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲು
ಘಟನೆಗೆ ಸಂಬಂಧಿಸಿದಂತೆ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾ*ವು ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆಯನ್ನ ಕೆ.ಆರ್.ಪುರಂ ಪೊಲೀಸರು ಕೈಗೊಂಡಿದ್ದಾರೆಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದ ಪರಿಸ್ಥಿತಿಗಳು ಹಾಗೂ ಇತರ ವಿವರಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಡಿಆರ್‌ಡಿಒಗೆ ಸಂಬಂಧಿಸಿದ ಸಂಸ್ಥೆಯಲ್ಲಿ ಹಿರಿಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 47 ವರ್ಷದ ವಿಜ್ಞಾನಿಯ ಸಾ*ವು ಸೀಗೇಹಳ್ಳಿ ಪ್ರದೇಶದಲ್ಲಿ ದುರಂತದ ಘಟನೆ ಎನಿಸಿದೆ. ಸದ್ಯ ಪೊಲೀಸರು ಪ್ರಕರಣದ ವಿವಿಧ ಆಯಾಮಗಳ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.