ಬೆಂಗಳೂರಿನ ಮತದಾರರ ಅಂತಿಮ ಪಟ್ಟಿ ಪ್ರಕಟಗೊಂಡಿದ್ದು ರಾಜ್ಯ ರಾಜಧಾನಿಯಲ್ಲಿ ಲಕ್ಷಾಂತರ ಮಂದಿ ಮತದಾರರನ್ನು ಈ ಪಟ್ಟಿಯಿಂದ ಕೈಬಿಟ್ಟಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಏತನ್ಮಧ್ಯೆ, ಮತದಾರರ ಪರಿಷ್ಕರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದ್ದು ರಾಜ್ಯದಲ್ಲಿ ಪಾಕಿಸ್ತಾನದ ಪ್ರಜೆಯೂ ಸೇರಿದಂತೆ 716 ಮಂದಿ ವಿದೇಶಿಗರು ಪತ್ತೆ ಆಗಿದ್ದಾರೆ.
ಹೌದು, ಎಸ್‌ಐಆರ್ ಬಳಿಕ ಬೆಂಗಳೂರಿನಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ಮೊದಲು 1.03 ಕೋಟಿಯಷ್ಟಿದ್ದ ಮತದಾರ ಸಂಖ್ಯೆ ಎಸ್‌ಐಆರ್ ಬಳಿಕ 59.08 ಲಕ್ಷಕ್ಕೆ ಕುಸಿದಿದೆ. ಸರಳವಾಗಿ ಹೇಳುವುದಾದರೆ, ಬರೋಬ್ಬರಿ 43.92 ಲಕ್ಷ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
ರಾಜ್ಯದಲ್ಲಿ 716 ವಿದೇಶಿ ಪ್ರಜೆಗಳ ಪತ್ತೆ:
ಅಂತಿಮ ಮತದಾರರ ಪಟ್ಟಿಯಲ್ಲಿ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 1.03 ಕೋಟಿ ಮತದಾರರಲ್ಲಿ ಕೇವಲ 59,08,151 ಮತದಾರರು ಅಗತ್ಯ ಮಾಹಿತಿ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಳಿಸಿಕೊಂಡಿದ್ದಾರೆ. ಆದರೆ, ಈ ಮಧ್ಯೆ, ಕರ್ನಾಟಕ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವಿದೇಶಿ ಪ್ರಜೆಗಳ ಅಕ್ರಮ ಸೇರ್ಪಡೆ ಬಯಲಾಗಿದ್ದು, ರಾಜ್ಯದಲ್ಲಿ 716 ವಿದೇಶಿ ಪ್ರಜೆಗಳಿರುವ ಬಗ್ಗೆ ತಿಳಿದುಬಂದಿದೆ.
ಈ ಕುರಿತಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಬೆಂಗಳೂರು ಉತ್ತರದಲ್ಲೇ ಅತಿ ಹೆಚ್ಚು ಅಂದರೆ 545 ನೇಪಾಳಿ ಪ್ರಜೆಗಳು ವಾಸವಿದ್ದು, ಅಮೆರಿಕ, ಆಸ್ಟ್ರೇಲಿಯಾ, ಕೆನಡಾ ಪ್ರಜೆಗಳೂ ರಾಜ್ಯದಲ್ಲಿದ್ದಾರೆ ಎಂದು ವರದಿ ಆಗಿದೆ.
ಇವರಲ್ಲಿ 24 ಮಂದಿ ಅಮೇರಿಕಾ, 8 ಮಂದಿ ಆಸ್ಪ್ರೇಲಿಯಾ, ಇಬ್ಬರು ಕೆನಡಾ, ಯುಎಇ ಸೇರಿ ಇತರ ರಾಷ್ಟ್ರಗಳ 583 ವಿದೇಶಿ ಪ್ರಜೆಗಳು ರಾಜ್ಯದಲ್ಲಿ ಪತ್ತೆ ಆಗಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ವಿದೇಶಿ ಪ್ರಜೆಗಳು ಪತ್ತೆ ಆಗಿದ್ದರೆ ರಾಜ್ಯ ರಾಜಧಾನಿಯ ಹೊರತಾಗಿ ದಕ್ಷಿಣ ಕನ್ನಡ, ಬಾಗಲಕೋಟೆ, ಗದಗ, ಉಡುಪಿ, ಬೆಳಗಾವಿ, ಹಾಸನ, ಜಿಲ್ಲೆಗಳಲ್ಲಿ ವಿದೇಶಿ ಪ್ರಜೆಗಳಿರುವುದನ್ನು ಚುನಾವಣಾ ಆಯೋಗ ಪತ್ತೆ ಮಾಡಿದೆ.
ಎನ್ಯುಮೆರೇಷನ್ ಫಾರ್ಮ್ ಭರ್ತಿ ಮಾಡುವಾಗ ಮಾಹಿತಿ ನೀಡುವಲ್ಲಿ ವಿಫಲವಾಗಿರುವುದು ಏಕೆ? ವಿದೇಶಿಗರು ರಾಜ್ಯದ ಮತಪಟ್ಟಿಗೆಯಲ್ಲಿ ಸೇರ್ಪಡೆ ಆಗಿದ್ದಾದರೂ ಹೇಗೆ? ಎಂಬ ಬಗ್ಗೆ ತನಿಖೆ ನಡೆಸಿ ಚುನಾವಣಾ ಆಯೋಗ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ನಕಲಿ ಮತದಾರರನ್ನ ಪತ್ತೆ ಹಚ್ಚಲು ನಡೆಸಲಾದ ಎಸ್‌ಐಆರ್ ಪ್ರಕ್ರಿಯೆ ವೇಳೆ ರಾಜ್ಯದಲ್ಲಿ ನಕಲಿ ಮತದಾರರನ್ನ ಪತ್ತೆ ಮಾಡಿದ ಆಯೋಗ, ನಕಲಿ ಮತದಾರರಿಗೆ ಈ ರೀತಿ ಮತದಾನದ ಹಕ್ಕು ಸಿಕ್ಕಿದ್ದು ಹೇಗೆ ಎಂಬುದನ್ನೂ ಕೂಡ ಪತ್ತೆ ಹಚ್ಚಬೇಕು. ರಾಜ್ಯ ಮತದಾರರ ಪಟ್ಟಿಯಲ್ಲಿ ವಿದೇಶಿಗರ ಕರಾಮತ್ತಿನ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಲಾಗಿದೆ.