Rajajinagar Seven Murder Case: ಬೆಂಗಳೂರು ರಾಜಾಜಿನಗರದ ಒಂದೇ ಕುಟುಂಬದ ಏಳು ಮಂದಿಯ ಭೀಕರ ಹ*ತ್ಯೆ ಪ್ರಕರಣದಲ್ಲಿ ಪೊಲೀಸರ ತನಿಖೆ ಮುಂದುವರಿದಂತೆ ಒಂದೊಂದೇ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಪ್ರಕರಣದ ಪ್ರಮುಖ ಆರೋಪಿ ಇಂದುಶೇಖರ್‌ಗೆ ಆತನ ಅಪ್ರಾಪ್ತ ಮಗಳೂ ಸಾಥ್ ನೀಡಿದ್ದಳು ಎಂಬ ಅನುಮಾನಕ್ಕೆ ಇದೀಗ ಮತ್ತಷ್ಟು ಬಲ ಸಿಕ್ಕಿದೆ. ತಂದೆ ಏಳು ಮಂದಿಯ ಹ*ತ್ಯೆ ನಡೆಸಿದ ಅವಧಿಯಲ್ಲಿ ಮಗಳು ಸತತ 15 ದಿನಗಳ ಕಾಲ ಕಾಲೇಜಿಗೆ ಗೈರುಹಾಜರಾಗಿದ್ದಳು ಎಂಬುದು ಕಾಲೇಜಿನ ದಾಖಲಾತಿಗಳ ಪರಿಶೀಲನೆಯಿಂದ ತಿಳಿದುಬಂದಿದೆ. ಮತ್ತೊಂದೆಡೆ ಇಂದುಶೇಖರ್‌ನ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ವಿಚಾರಣೆ ಪೂರ್ಣಗೊಳಿಸಿರುವ ಪೊಲೀಸರು ಆತನನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ.
15 ದಿನ ಕಾಲೇಜಿಗೆ ಹೋಗಿರಲಿಲ್ಲ ಮಗಳು!
ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಇಂದುಶೇಖರ್‌ನ ಮಗಳು, ಅಕ್ಟೋಬರ್ 16ರಿಂದ 31ರವರೆಗೆ ಕಾಲೇಜಿಗೆ ಹಾಜರಾಗಿರಲಿಲ್ಲ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಅವಧಿಯಲ್ಲೇ ಇಂದುಶೇಖರ್ ತನ್ನ ಪತ್ನಿ ಸೇರಿದಂತೆ ಏಳು ಮಂದಿ ಸಂಬಂಧಿಕರನ್ನ ಹ*ತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕಾಲೇಜಿನ ಹಾಜರಾತಿ ದಾಖಲಾತಿಗಳನ್ನ ಪರಿಶೀಲಿಸಿದಾಗ ಬಾಲಕಿ ಸತತ 15 ದಿನ ಗೈರುಹಾಜರಾಗಿರುವುದು ಪತ್ತೆಯಾಗಿದೆ. ಈ ಅವಧಿಯಲ್ಲಿ ಆಕೆ ಮನೆಯಲ್ಲೇ ಇದ್ದು ತಂದೆಯ ಕೃತ್ಯಕ್ಕೆ ಸಹಕರಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದ ಆಸ್ತಿಯನ್ನ ಮಗಳಿಗೆ ಕೊಡಿಸುವುದಾಗಿ ಆಮಿಷವೊಡ್ಡಿ ಇಂದುಶೇಖರ್ ಆಕೆಯನ್ನ ತನ್ನ ಕೃತ್ಯದಲ್ಲಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಹ*ತ್ಯೆಯ ಬಳಿಕ ಮನೆಯಲ್ಲಿನ ಸಾಕ್ಷ್ಯಗಳನ್ನ ಸ್ವಚ್ಛಗೊಳಿಸುವುದು, ಮೃತದೇಹಗಳನ್ನ ಪ್ಯಾಕ್ ಮಾಡುವುದು ಮತ್ತು ಅವುಗಳನ್ನ ಸಾಗಿಸುವ ಪ್ರಕ್ರಿಯೆಯಲ್ಲಿ ಮಗಳು ನೆರವಾಗಿದ್ದಾಳೆಂಬ ಶಂಕೆಯಿದೆ. ಈ ಹಿನ್ನೆಲೆಯಲ್ಲಿ ಆಕೆಯ ಪಾತ್ರದ ಕುರಿತು ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.
ಅಪ್ರಾಪ್ತ ಮಗಳ ವಿಚಾರಣೆಗೆ ಕಾನೂನು ಪ್ರಕ್ರಿಯೆ
ಪ್ರಕರಣದಲ್ಲಿ ಇಂದುಶೇಖರ್‌ನ ಮಗಳ ಹೆಸರೂ ಆರೋಪಿತೆಯಾಗಿ ಉಲ್ಲೇಖವಾಗಿದೆ. ಆಕೆಯ ವಯಸ್ಸು ಮತ್ತು ಪ್ರಕರಣದ ಗಂಭೀರತೆಯನ್ನ ಗಮನದಲ್ಲಿಟ್ಟುಕೊಂಡು ಬಾಲ ನ್ಯಾಯ ಕಾಯ್ದೆಯಡಿ ಅಗತ್ಯ ಪ್ರಕ್ರಿಯೆಗಳನ್ನ ಪೊಲೀಸರು ಅನುಸರಿಸುತ್ತಿದ್ದಾರೆಂದು ವರದಿಯಾಗಿದೆ. 16ರಿಂದ 18 ವರ್ಷದೊಳಗಿನವರು ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಂಬ ಆರೋಪ ಎದುರಿಸಿದಾಗ, ಅವರ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ, ಕೃತ್ಯದ ಪರಿಣಾಮಗಳ ಅರಿವು ಹಾಗೂ ಒತ್ತಡಕ್ಕೆ ಒಳಗಾಗಿದ್ದರೇ ಎಂಬುದನ್ನ ಬಾಲ ನ್ಯಾಯ ಮಂಡಳಿ ಪ್ರಾಥಮಿಕವಾಗಿ ಪರಿಶೀಲಿಸಬೇಕಾಗುತ್ತದೆ. ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ನಿರ್ಧಾರವಾಗಲಿದೆ.
ಆಸ್ತಿ ವಿವಾದವೇ ಹ*ತ್ಯೆಗೆ ಕಾರಣವೇ?
ಈ ಏಳು ಮಂದಿಯ ಹ*ತ್ಯೆಯ ಹಿಂದೆ ವೈಯಕ್ತಿಕ ದ್ವೇಷದ ಜೊತೆಗೆ ಆಸ್ತಿ ವಿವಾದವೂ ಪ್ರಮುಖ ಕಾರಣವಾಗಿರಬಹುದು ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಂದುಶೇಖರ್‌ನ ಅತ್ತೆ ರೂಪಾವತಿ ಅವರ ಹೆಸರಿನಲ್ಲಿದ್ದ ಶ್ರೀರಾಮಪುರದ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಮನೆಯ ಮೇಲೆ ಆರೋಪಿಗೆ ಆಸಕ್ತಿ ಇತ್ತು ಎನ್ನಲಾಗಿದೆ. ಆಸ್ತಿಯನ್ನ ತಮ್ಮ ಮೂವರು ಮಕ್ಕಳಿಗೆ ಸಮಾನವಾಗಿ ಹಂಚಬೇಕೆಂಬ ರೂಪಾವತಿ ಅವರ ನಿಲುವಿನಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಪರಿಶೀಲನೆಯಲ್ಲಿದೆ. ಈ ಆಸ್ತಿ ವಿಚಾರವೇ ಹ*ತ್ಯೆಗಳಿಗೆ ಪ್ರೇರಣೆಯಾಗಿತ್ತೇ ಎಂಬುದನ್ನ ಪೊಲೀಸರು ದೃಢಪಡಿಸಬೇಕಿದೆ.
ಏಳು ಮಂದಿ ಯಾರು?
ಈ ಪ್ರಕರಣದಲ್ಲಿ ಇಂದುಶೇಖರ್‌ನ ಪತ್ನಿ ಸುನೀತಾ, ಅತ್ತೆ ರೂಪಾವತಿ, ಪತ್ನಿಯ ಸಹೋದರರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಶಿವಕುಮಾರ್ ಅವರ ಏಳು ವರ್ಷದ ಪುತ್ರ ಪುನೀತ್ ಹ*ತ್ಯೆಯಾಗಿದ್ದಾರೆ. ಅಕ್ಟೋಬರ್ 16ರಿಂದ 31ರ ಅವಧಿಯಲ್ಲಿ ಹಂತ ಹಂತವಾಗಿ ಈ ಕೃತ್ಯಗಳು ನಡೆದಿವೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಮೃತದೇಹ ಸಾಗಿಸಲು ಬಳಸಿದ್ದ ನಾನಾ ತಂತ್ರಗಳು
ರಾಜಾಜಿನಗರದ ಬಾಷ್ಯಂ ಸರ್ಕಲ್‌ನ ಬಾಡಿಗೆ ಮನೆಯಲ್ಲಿ ಹ*ತ್ಯೆಗಳನ್ನ ನಡೆಸಿದ ಬಳಿಕ ಮೃತದೇಹಗಳನ್ನ ವಿವಿಧ ಸ್ಥಳಗಳಿಗೆ ಸಾಗಿಸಲಾಗಿದೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಮೃತದೇಹಗಳನ್ನ ಸಾಗಿಸಲು ಹಳದಿ ಬೋರ್ಡ್‌ನ ಟೊಯೊಟಾ ಎಟಿಯೋಸ್ ಕಾರನ್ನ ಬಳಸಿದ್ದಾನೆ ಎನ್ನಲಾಗಿದೆ. ಕಾರಿನ ನಂಬರ್ ಪ್ಲೇಟ್ ಕಾಣದಂತೆ ದಸರಾ-ದೀಪಾವಳಿ ಪತ್ರಕರ್ತರ ಪ್ರವಾಸದ ಬ್ಯಾನರ್ ಅಳವಡಿಸಿ, ಗಾಜಿನ ಮೇಲೆ ಪ್ರೆಸ್ ಚಿಹ್ನೆಯನ್ನೂ ಇಟ್ಟಿದ್ದ ಎಂಬ ಮಾಹಿತಿ ಈ ಹಿಂದೆ ಹೊರಬಂದಿತ್ತು. ಯಾರಾದರೂ ಪ್ರಶ್ನಿಸಿದರೆ ಠಾಣಾ ವರದಿ ಪತ್ರ ಹಾಗೂ ವಿಸಿಟಿಂಗ್ ಕಾರ್ಡ್ ತೋರಿಸುತ್ತಿದ್ದ ಎನ್ನಲಾಗಿದೆ.
ಪೊಲೀಸರು ಆರೋಪಿಯನ್ನ ಸೇಲಂ, ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲು ಹಾಗೂ ಸಕಲೇಶಪುರದ ಶಿರಾಡಿಘಾಟ್ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಮಹಜರು ನಡೆಸಿದ್ದಾರೆ. ಮೃತದೇಹಗಳು ಪತ್ತೆಯಾದ ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಿಸುವುದರ ಜೊತೆಗೆ, ಕೃತ್ಯಕ್ಕೆ ಬೇಕಾದ ವಸ್ತುಗಳನ್ನ ಖರೀದಿಸಿದ ಸ್ಥಳಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ.
ಇಂದು ಕಸ್ಟಡಿ ಅಂತ್ಯ; ನ್ಯಾಯಾಲಯಕ್ಕೆ ಹಾಜರು
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇಂದುಶೇಖರ್‌ನ ಹೇಳಿಕೆ ದಾಖಲಿಸುವ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ. ಆತನ ಪೊಲೀಸ್ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆದಿದೆ. ಈ ಪ್ರಕರಣದಲ್ಲಿ ಈಗಾಗಲೇ ಏಳು ಮೃತದೇಹಗಳನ್ನ ವಿವಿಧ ಸ್ಥಳಗಳಿಂದ ಪತ್ತೆಹಚ್ಚಲಾಗಿದೆ. ಹ*ತ್ಯೆಗಳ ಹಿಂದಿನ ಉದ್ದೇಶ, ಮಗಳ ಪಾತ್ರ ಹಾಗೂ ಸಾಕ್ಷ್ಯ ನಾಶಪಡಿಸಲು ನಡೆದ ಪ್ರಯತ್ನಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಒಟ್ನಲ್ಲಿ ರಾಜಾಜಿನಗರದ ಏಳು ಮಂದಿಯ ಹ*ತ್ಯೆ ಪ್ರಕರಣದಲ್ಲಿ ತಂದೆಯೊಂದಿಗೆ ಮಗಳೂ ಭಾಗಿಯಾಗಿದ್ದಾಳೆ ಎಂಬ ಆರೋಪ, ಆಸ್ತಿ ವಿವಾದದ ಆಯಾಮ ಮತ್ತು ಮೃತದೇಹಗಳನ್ನ ಸಾಗಿಸಲು ಬಳಸಿದ ತಂತ್ರಗಳು ತನಿಖೆಯ ಪ್ರಮುಖ ಅಂಶಗಳಾಗಿವೆ. ಇಂದು ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗಲಿರುವ ಹಿನ್ನೆಲೆಯಲ್ಲಿ ಮುಂದಿನ ತನಿಖೆಯ ಬೆಳವಣಿಗೆಗಳತ್ತ ಗಮನ ನೆಟ್ಟಿದೆ.