ನಕಲಿ ಔಷಧಿ ಜಾಲದ ಜೊತೆ ಸಂಪರ್ಕದಲ್ಲಿದ್ದ ಮೂರು ಕಂಪನಿಗಳ ಮೇಲೆ ದಾಳಿ
ಆರೋಪಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನಗರದ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ..
ಬೆಂಗಳೂರು: ಕರ್ನಾಟಕದ ನಕಲಿ ಆ್ಯಂಟಿಬಯೋಟಿಕ್ ಮತ್ತು ಐಸಿಯು ಔಷಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ದಾಳಿ ಮುಂದುವರೆದಿದೆ..ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಆರೋಪಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ನಗರದ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ..
ರಾಜ್ಯದಲ್ಲಿ ನಕಲಿ ಔಷಧದ ಅಡ್ಡ ಇನ್ನಷ್ಟು ವಿಸ್ತಾರಗೊಳ್ಳುತ್ತಿದೆ. ಮಾರಾಟ ಜಾಲದ ತನಿಖೆಯನ್ನು ವಿಶೇಷ ತನಿಖಾ ತಂಡವು ನಡೆಸುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಮೂರು ಫಾರ್ಮಾ ಕಂಪನಿಗಳ ಪಾತ್ರ ಬಯಲಾಗಿದೆ. ಬೆಂಗಳೂರಿನ ಚಾಮರಾಜಪೇಟೆ ಮೆಡಿ 365, ಗುಬ್ಬಲಾಳದ ಪಟೇಲ್ ಮೆಡಿಟ್ರೇಡ್, ರಾಜರಾಜೇಶ್ವರಿನಗರದ ಆರ್.ಆರ್. ಫಾರ್ಮಾಗಳ ಮೇಲೆ ಎಸ್‌ಐಟಿ ತಂಡವು ದಾಳಿ ನಡೆಸಿದೆ.
ಮೂರು ಔಷಧ ಸರಬರಾಜು ಕಂಪನಿಗಳ ಮೇಲೆ ದಾಳಿ ನಡೆಸಿರುವ ಪ್ರತ್ಯೇಕ ತಂಡಗಳು, ನಕಲಿ ಔಷಧ ಪೂರೈಕೆಗೆ ಸಂಬಂಧಿಸಿದ ಮಹತ್ವದ ದಾಖಲೆ ಜಪ್ತಿ ಮಾಡಿದೆ. ಮೂರೂ ಕಂಪನಿಗಳು ನಕಲಿ ಔಷಧ ಜಾಲದ ಆಧಾರ ಕಂಪನಿ ಡಿಎಂ ಫಾರ್ಮಾದಿಂದ ಔಷಧ ಖರೀದಿ ಕುರಿತ ಲೆಕ್ಕಪತ್ರಗಳು ಸಿಕ್ಕಿವೆ ಎಂದು ತನಿಖಾ ಮೂಲಗಳು ತಿಳಿಸಿವೆ.ಅಕ್ರಮದಲ್ಲಿ ಭಾಗಿಯಾಗಿರುವ ಮೂರು ಕಂಪನಿಗಳ ಮಾಲೀಕರು ಹಾಗೂ ಪ್ರತಿನಿಧಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.. ವಿಚಾರಣೆಗೆ ಸಹಕರಿಸದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತನಿಖಾ ಮೂಲಗಳು ಹೇಳಿವೆ.
ಹಾಗೆ ಪ್ರಕರಣದ ಕಿಂಗ್‌ಪಿನ್ ಪ್ರಶಾಂತ್ ಹಾಗೂ ಪಾಲುದಾರ ಬಾಲಸುಬ್ರಮಣಿ ಕಸ್ಟಡಿ ವಿಚಾರಣೆ ವೇಳೆ ಹಲವು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ನಕಲಿ ಔಷಧಿಯು ರೋಗಿಯ ಪ್ರಾಣಕ್ಕೆ ಕುತ್ತು ತರಲಿದೆ ಎಂದು ಗೊತ್ತಿದ್ದರೂ ಹಣದಾಸೆಗೆ ಕೃತ್ಯ ಎಸಗಿದ್ದಾರೆ ಎಂಬುದು ತಿಳಿದು ಬಂದಿದೆ..ಆರೋಪಿಗಳಿಂದ ಮತ್ತಷ್ಟು ವಿಚಾರ ಬಾಯ್ಬಿಡಿಸಬೇಕಿದೆ. ಹೀಗಾಗಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ಪುನಃ ವಶಕ್ಕೆ ಪಡೆಯಲು ತೀರ್ಮಾನಿಸಲಾಗಿದೆ
ಇನ್ನು ಫಾರ್ಮಾಗಳು ಯಾವಾಗಿನಿಂದ ನಕಲಿ ಮಾತ್ರೆಗಳನ್ನು ಖರೀದಿಸಿ ಮಾರಾಟ ಮಾಡಲಾಗುತ್ತಿತ್ತು, ಹಾಗೂ ಯಾವೆಲ್ಲಾ ಆಸ್ಪತ್ರೆಗಳಿಗೆ ಫಾರ್ಮಾಗಳ ಮೂಲಕ ನಕಲಿ ಮಾತ್ರೆಗಳನ್ನು ಸರಬರಾಜು ಮಾಡಲಾಗಿದೆ ಎಂಬ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಫಾರ್ಮಾ ಮಾಲೀಕರಿಂದ ಮಾಹಿತಿಯನ್ನ ಪಡೆದುಕೊಳ್ತಿದ್ದಾರೆ.. ಅದೇನೆ ಇರಲಿ ಸದ್ಯ ಯಾವುದು ಅಸಲಿ, ನಕಲಿ ಅನ್ನೊ ಡೌಟಲ್ಲಿ ಜನರು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ