SOCIAL MEDIA

Newsletter

PARTNER SITES
Select Language Select State

ತುಘಲಕ್ ಸರ್ಕಾರಕ್ಕಿಂತಲೂ ಹೀನ ಕಾಂಗ್ರೆಸ್‌ ಸರ್ಕಾರ: ಬೆಲೆ ಏರಿಕೆ ವಿರುದ್ಧ ಆರ್‌.ಅಶೊಕ್‌ ಆಕ್ರೋಶ

ಹಾಲು, ಮೊಸರು ಹಾಗೂ ಲಸ್ಸಿ ಬೆಲೆ ಏರಿಕೆ ಮತ್ತು ಬಸ್ ಪ್ರಯಾಣ ದರ ಹೆಚ್ಚಳದ ವಿರುದ್ಧ ಕಾಂಗ್ರೆಸ್ ಸರ್ಕಾರಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ನಾಳೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

Written By Puttaraj K Alur
Published: Nov 04, 2026, 02:00 PM IST | Updated: Nov 04, 2026, 02:17 PM IST
Image Credit: R Ashoka
Join

R Ashoka on Milk Price Hike: ರಾಜ್ಯದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಬಸ್ ಪ್ರಯಾಣ ದರ ಹೆಚ್ಚಳದ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರದ ನಿರ್ಧಾರಗಳನ್ನ ತೀವ್ರವಾಗಿ ಟೀಕಿಸಿದ್ದು, ಬೆಲೆ ಏರಿಕೆ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.

ಹಾಲಿನ ದರ ಏರಿಕೆ ವಿಚಾರ ಪ್ರಸ್ತಾಪಿಸಿದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನ 8 ರೂಪಾಯಿ ಹೆಚ್ಚಿಸುವುದಾಗಿ ಹೇಳಿ, ಹಾಲು, ಮೊಸರು, ಲಸ್ಸಿ ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆಯನ್ನ 25 ರೂಪಾಯಿವರೆಗೆ ಏರಿಸಿದೆ ಎಂದು ಆರೋಪಿಸಿದರು. ದರ ಏರಿಕೆಯಿಂದ ರೈತರಿಗೆ ಕೇವಲ 7 ರೂಪಾಯಿ ಮಾತ್ರ ಸಿಗಲಿದ್ದು, ಉಳಿದ ಹಣ ಕಾಂಗ್ರೆಸ್ ಪಾಲಾಗುತ್ತಿದೆ ಎಂದು ಟೀಕಿಸಿದರು. ಈ ಬೆಲೆ ಏರಿಕೆಯಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಸುಮಾರು 400 ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ ಎಂದು ಹೇಳಿದರು.

ದರ ಏರಿಕೆ ವಿರುದ್ಧ ನಾಳೆಯೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಬೆಂಗಳೂರಿನಲ್ಲೂ ಹೋರಾಟ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಈ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಬಿಜೆಪಿ ಪ್ರತಿಭಟನೆ ನಡೆಸಿದರೆ ಅದನ್ನ ರಾಜಕೀಯ ಎಂದು ಕರೆಯುತ್ತಾರೆ. ಆದರೆ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನ ಪ್ರಶ್ನಿಸುವುದು ಅಗತ್ಯವೆಂದು ಹೇಳಿದರು.

ಡಿಕೆಶಿ ವಿರುದ್ಧ ಅಶೋಕ್ ವಾಗ್ದಾಳಿ

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನ ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ ಆರ್.ಅಶೋಕ್, ಡಿಕೆಶಿ ಎಂದರೆ ಭರವಸೆಗಳ ಸರದಾರ ಎಂದು ವ್ಯಂಗ್ಯವಾಡಿದರು. ಹಿಂದೆ ಮೊಯ್ಲಿ ಸುಳ್ಳಿನ ಸರದಾರರಾಗಿದ್ದರು ಎಂದು ಟೀಕಿಸಿದರು. ರಾಜ್ಯ ಸರ್ಕಾರ ಯಾವುದೇ ಹೊಸ ಘೋಷಣೆಗಳನ್ನ ಮಾಡಿದರೂ ಜನರು ನಂಬಬಾರದು. ಸರ್ಕಾರ ಖಾಲಿ ಡಬ್ಬದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧವೂ ಅಶೋಕ್ ಕಿಡಿಕಾರಿದರು. ವಿರೋಧ ಪಕ್ಷದ ನಾಯಕರನ್ನೇ ಬಂಧಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿದ ಅವರು, ಬಂಧಿಸಲು ಪೊಲೀಸರು ಬಂದರೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತೇನೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಹೇರಲು ಹೊರಟಿದ್ದೀರಾ ಎಂದು ಪ್ರಶ್ನಿಸಿದ ಅವರು, ರಾಹುಲ್ ಗಾಂಧಿ ಅವರ ಅಜ್ಜಿ ವಿರುದ್ಧವೇ ಹೋರಾಡಿ ಜೈಲಿಗೆ ಹೋಗಿದ್ದೇನೆ. ಈಗಲೂ ಜೈಲಿಗೆ ಹೋಗಲು ಸಿದ್ಧನಿದ್ದೇನೆ ಅಂತಾ ಸವಾಲು ಹಾಕಿದರು.

ಬಸ್ ಪ್ರಯಾಣ ದರ ಏರಿಕೆ ವಿರುದ್ಧವೂ ಆಕ್ರೋಶ

ರಾಜ್ಯ ಸರ್ಕಾರದ ಬಸ್ ಪ್ರಯಾಣ ದರ ಹೆಚ್ಚಳವನ್ನೂ ಆರ್.ಅಶೋಕ್ ತೀವ್ರವಾಗಿ ವಿರೋಧಿಸಿದರು. ಕಾಂಗ್ರೆಸ್ ಸರ್ಕಾರವನ್ನ ತುಘಲಕ್ ಸರ್ಕಾರಕ್ಕಿಂತಲೂ ಹೀನ ಎಂದು ಟೀಕಿಸಿದ ಅವರು, ಸಾರಿಗೆ ದರವನ್ನ ಈ ಪ್ರಮಾಣದಲ್ಲಿ ಹಿಂದೆಂದೂ ಹೆಚ್ಚಿಸಿರಲಿಲ್ಲ ಎಂದರು. ಬಸ್ ಪ್ರಯಾಣ ದರದಲ್ಲಿ ಶೇ.40ರಷ್ಟು ಏರಿಕೆಯಾಗಿದೆ ಎಂದು ಆರೋಪಿಸಿದರು.

ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಪ್ರಯಾಣಿಸುವವರಿಗೆ 6 ರೂಪಾಯಿ ಹೆಚ್ಚುವರಿ ಹೊರೆ ಬೀಳುತ್ತಿದೆ. ವೇಗದೂತ ಬಸ್‌ಗಳಲ್ಲಿ ಬೆಂಗಳೂರು-ಕೋಲಾರ ಪ್ರಯಾಣಕ್ಕೆ 19 ರೂಪಾಯಿ ಹೆಚ್ಚಳವಾಗಿದೆ. ಹಾಸನಾಂಬೆ ದರ್ಶನಕ್ಕೆ ತೆರಳುವವರು ಹೆಚ್ಚುವರಿಯಾಗಿ 51 ರೂಪಾಯಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಉದಾಹರಣೆ ನೀಡಿದರು. ದೀಪಾವಳಿ ಬೆಳಕಿನ ಹಬ್ಬವಾಗಿದ್ದರೂ ಕಾಂಗ್ರೆಸ್ ಸರ್ಕಾರ ಜನರಿಗೆ ಕತ್ತಲೆ ಹಬ್ಬ ನೀಡುತ್ತಿದೆ. ಬಸ್ ದರ ಏರಿಕೆ ಜನರ ಸುಲಿಗೆಯಾಗಿದೆ. ಗಬ್ಬರ್ ಟ್ಯಾಕ್ಸ್‌ನಂತೆ ಜನರ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಸಾರಿಗೆ ಇಲಾಖೆಯ ಬಾಕಿ ಹಣದ ಲೆಕ್ಕ ಬಿಚ್ಚಿಟ್ಟ ಅಶೋಕ್

ತಾವು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಇಲಾಖೆಯನ್ನ ಲಾಭದಾಯಕವಾಗಿ ನಿರ್ವಹಿಸಿದ್ದಾಗಿ ಹೇಳಿದ ಆರ್.ಅಶೋಕ್, ಸಾರಿಗೆ ಇಲಾಖೆಗೆ 1,100 ಎಕರೆ ಭೂಮಿಯ ಲ್ಯಾಂಡ್ ಬ್ಯಾಂಕ್ ಸೃಷ್ಟಿಸಿದ್ದೆ. ಟಿಟಿಎಂಸಿಗಳನ್ನ ನಿರ್ಮಿಸಿದ್ದು, ಅವುಗಳಿಂದ ವಾರ್ಷಿಕ 40ರಿಂದ 50 ಕೋಟಿ ರೂಪಾಯಿ ಬಾಡಿಗೆ ಆದಾಯ ಬರುತ್ತಿದೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಸಾರಿಗೆ ಇಲಾಖೆಗೆ 5,650.95 ಕೋಟಿ ರೂಪಾಯಿ ಬಾಕಿ ಪಾವತಿಸಬೇಕಿದೆ. ಈ ಹಣವನ್ನ ನೀಡಿದ್ದರೆ ಪ್ರಯಾಣ ದರ ಏರಿಸುವ ಅಗತ್ಯವೇ ಇರುತ್ತಿರಲಿಲ್ಲವೆಂದು ಆರೋಪಿಸಿದರು. ಸಾರಿಗೆ ಇಲಾಖೆಯ ಒಟ್ಟು ಬಾಕಿ 7,130.08 ಕೋಟಿ ರೂಪಾಯಿಗಳಷ್ಟಿದೆ ಎಂದರು.

ಸಾರಿಗೆ ನಿಗಮಗಳ ನೌಕರರ ಪಿಎಫ್‌ಗೆ ಸಂಬಂಧಿಸಿದಂತೆ 2,901.53 ಕೋಟಿ ರೂಪಾಯಿ ಬಾಕಿ ಉಳಿದಿದೆ. ಇಂಧನ ಬಿಲ್ ಪಾವತಿಸಬೇಕಾದ 827.37 ಕೋಟಿ ರೂಪಾಯಿಯೂ ಬಾಕಿಯಿದೆ ಎಂದು ವಿವರಿಸಿದರು. ಸಾಲ ಪಡೆಯಲು ಸರ್ಕಾರ ಸಾರಿಗೆ ಇಲಾಖೆಗೆ 2,000 ಕೋಟಿ ರೂಪಾಯಿ ಗ್ಯಾರಂಟಿ ನೀಡಿದೆ ಎಂದೂ ಹೇಳಿದರು. ಒಂದು ವರ್ಷದಿಂದ ಸಾರಿಗೆ ಇಲಾಖೆಗೆ ಅಗತ್ಯವಾದ ವಾಹನಗಳ ಬಿಡಿಭಾಗಗಳನ್ನ ಖರೀದಿಸಿಲ್ಲವೆಂದು ಆರೋಪಿಸಿದ ಅವರು, ಬಸ್‌ಗಳ ನಿರ್ವಹಣೆ ಮತ್ತು ಇಂಧನ ವೆಚ್ಚಕ್ಕೂ ಹಣದ ಕೊರತೆ ಎದುರಾಗಿದೆ ಎಂದು ಟೀಕಿಸಿದರು. ಎಲ್ಲಾ ಸಾರಿಗೆ ನಿಗಮಗಳನ್ನ ಸೇರಿಸಿದರೆ ಸುಮಾರು 12 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಹೇಳಿದರು.

ರಾಜ್ಯದಾದ್ಯಂತ ಹೋರಾಟಕ್ಕೆ ಬಿಜೆಪಿ ಸಿದ್ಧತೆ

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಹೆಸರಿನಲ್ಲಿ ಜನರ ಮೇಲೆ ತೆರಿಗೆ ಹಾಗೂ ಬೆಲೆ ಏರಿಕೆಯ ಹೊರೆ ಹಾಕಲಾಗುತ್ತಿದೆ ಎಂದು ಆರ್.ಅಶೋಕ್ ಆರೋಪಿಸಿದರು. ಸರ್ಕಾರದ ಆರ್ಥಿಕ ನಿರ್ವಹಣೆಯ ವೈಫಲ್ಯಕ್ಕೆ ಸಾರ್ವಜನಿಕರು ಬೆಲೆ ತೆರಬೇಕಾಗಿದೆ ಎಂದು ಹೇಳಿದರು. ಹಾಲು ಮತ್ತು ಬಸ್ ದರ ಏರಿಕೆ ವಿರುದ್ಧ ಬಿಜೆಪಿ ರಾಜ್ಯದಾದ್ಯಂತ ಹೋರಾಟ ನಡೆಸಲು ನಿರ್ಧರಿಸಿದೆ. ಪಕ್ಷದೊಳಗೆ ಚರ್ಚೆ ನಡೆಸಿ ಮುಂದಿನ ಪ್ರತಿಭಟನೆಯ ದಿನಾಂಕವನ್ನ ಘೋಷಿಸಲಾಗುವುದು ಎಂದು ತಿಳಿಸಿದರು. ಬೆಲೆ ಏರಿಕೆಯಿಂದ ತೊಂದರೆಗೊಳಗಾಗಿರುವ ಜನರು ಹೋರಾಟದಲ್ಲಿ ಭಾಗವಹಿಸಬೇಕೆಂದು ಕರೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES