ಮೃತದೇಹವೇ ಸಿಕ್ಕಿಲ್ಲ ಆದರೂ ಕೊ*ಲೆ ಸಾಬೀತು: ಇಬ್ಬರಿಗೆ ಜೀವಾವಧಿ ಶಿಕ್ಷೆ!
ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ 2021ರಲ್ಲಿ ನಾಪತ್ತೆಯಾಗಿದ್ದ ಸೀತಾ (47) ಕೊ*ಲೆ ಪ್ರಕರಣದಲ್ಲಿ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ಗೆ 60ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಸೈನೆಡ್ ನೀಡಿ ಕೊ*ಲೆ ಮಾಡಿ, ಮೃತದೇಹವನ್ನ ತುಂಗಭದ್ರಾ ಕಾಲುವೆಗೆ ಎಸೆದ ಆರೋಪವಿತ್ತು. ಮೃತದೇಹ ಪತ್ತೆಯಾಗದಿದ್ದರೂ ಸಿಸಿಟಿವಿ, CDR, ಆರೋಪಿಗಳ ಹೇಳಿಕೆ ಸೇರಿದಂತೆ ಹಲವು ಸಾಕ್ಷ್ಯಗಳ ಆಧಾರದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
Cyanide Murder Case: ಮೃತದೇಹ ಪತ್ತೆಯಾಗದಿದ್ದರೂ ಕೊ*ಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿರುವ ಅಪರೂಪದ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆಯನ್ನ ಸೈನೆಡ್ ಬಳಸಿ ಕೊ*ಲೆ ಮಾಡಿದ ಆರೋಪದ ಪ್ರಕರಣದಲ್ಲಿ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸರು ನಡೆಸಿದ ತನಿಖೆ ಹಾಗೂ ಸಂಗ್ರಹಿಸಿದ ಸಾಕ್ಷ್ಯಗಳ ಆಧಾರದ ಮೇಲೆ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಆರೋಪಿಗಳಾದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ಅವರಿಗೆ 60ನೇ ಸಿಸಿಎಚ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ತಲಾ ₹30 ಸಾವಿರ ದಂಡ ವಿಧಿಸಿದೆ. ಪ್ರಕರಣದಲ್ಲಿ ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆಗಳ ವಿವರ (CDR), ಆರೋಪಿಗಳ ಹೇಳಿಕೆ ಸೇರಿದಂತೆ ಹಲವು ಸಾಕ್ಷ್ಯಗಳನ್ನ ಪರಿಗಣಿಸಿ ನ್ಯಾಯಾಲಯ ತೀರ್ಪು ನೀಡಿದೆ.
2021ರಲ್ಲಿ ನಾಪತ್ತೆಯಾಗಿದ್ದ ಸೀತಾ
2021ರ ಮಾರ್ಚ್ 26ರಂದು ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಸೀತಾ (47) ಎಂಬ ಮಹಿಳೆ ನಾಪತ್ತೆಯಾಗಿರುವ ಕುರಿತು ದೂರು ದಾಖಲಾಗಿತ್ತು. ಮಂತ್ರಾಲಯ ಮೂಲದ ಸೀತಾ, ತನ್ನ ಗಂಡ ಮತ್ತು ತಾಯಿಯನ್ನ ಕಳೆದುಕೊಂಡ ಬಳಿಕ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ನಾಪತ್ತೆಯಾಗುವ ಸುಮಾರು ನಾಲ್ಕು ತಿಂಗಳ ಹಿಂದೆ ಅವರು ಬೆಂಗಳೂರಿನಲ್ಲಿದ್ದ ಅಕ್ಕನ ಮನೆಗೆ ಬಂದಿದ್ದರು. 2021ರ ಮಾರ್ಚ್ 25ರಂದು ಮನೆಯಿಂದ ಹೊರಗೆ ಹೋಗಿದ್ದ ಸೀತಾ ವಾಪಸ್ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರ ಸಹೋದರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಆಗ ಇನ್ಸ್ಪೆಕ್ಟರ್ ಆಗಿದ್ದ ಸಂಜೀವ್ ಗೌಡ ಮತ್ತು ಸಬ್ ಇನ್ಸ್ಪೆಕ್ಟರ್ ಲತಾ ನೇತೃತ್ವದಲ್ಲಿ ತನಿಖೆ ಆರಂಭವಾಗಿತ್ತು. ಆರಂಭದಲ್ಲಿ ಹಲವು ಕಡೆ ಹುಡುಕಾಟ ನಡೆಸಿದರೂ ಸೀತಾ ಪತ್ತೆಯಾಗಿರಲಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಪೊಲೀಸರಿಗೆ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು.
CDRನಿಂದ ತನಿಖೆಗೆ ಮಹತ್ವದ ಸುಳಿವು
ಪೊಲೀಸರು ಸೀತಾ ಅವರ ಮೊಬೈಲ್ ಕರೆಗಳ ವಿವರಗಳನ್ನ ಪರಿಶೀಲಿಸಿದಾಗ, ಅವರು ಕೊನೆಯದಾಗಿ ಯಾರೊಂದಿಗೆ ಮಾತನಾಡಿದ್ದರು ಎಂಬ ಮಾಹಿತಿ ಲಭ್ಯವಾಯಿತು. ಸೀತಾ ಪರಿಚಯಸ್ಥನಾಗಿದ್ದ ರಘು ಅಲಿಯಾಸ್ ‘ಮೆಂಟಲ್ ರಘು’ ಜೊತೆ ಅವರು ಮಾತನಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ನಂತರ ರಘುವನ್ನ ಮಂತ್ರಾಲಯದಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸೀತಾ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನ ಆತ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾಗಿ ತಿಳಿದುಬಂದಿದೆ.
ಜಮೀನು ವಿಚಾರವೇ ಕೊ*ಲೆಗೆ ಕಾರಣ?
ಪೊಲೀಸರ ತನಿಖೆಯ ಪ್ರಕಾರ, ಮಂತ್ರಾಲಯದ ಬಳಿಯಿದ್ದ ಸುಮಾರು ಎರಡು ಎಕರೆ ಜಮೀನಿನ ವಿಚಾರದಲ್ಲಿ ಸೀತಾ ಕುಟುಂಬಕ್ಕೆ ಹಾಗೂ ನೂರ್ ಅಹ್ಮದ್ಗೆ ಸಂಬಂಧಿಸಿದ ವ್ಯವಹಾರವಿತ್ತು. ಜಮೀನಿನ ನೋಂದಣಿಗೆ ಅಗತ್ಯವಿದ್ದ ಸಹಿ ಹಾಕಲು ಸೀತಾ ಒಪ್ಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸೀತಾಳನ್ನ ಕೊ*ಲೆ ಮಾಡಲು ನೂರ್ ಅಹ್ಮದ್ ₹2.5 ಲಕ್ಷಕ್ಕೆ ಸುಪಾರಿ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜ್ಯೂಸ್ನಲ್ಲಿ ಸೈನೆಡ್ ಹಾಕಿದ್ದ ಆರೋಪ
ಪೊಲೀಸರ ಪ್ರಕಾರ, ರಘು ಮತ್ತು ಸತ್ಯನಾರಾಯಣ್ ಇಂಡಿಕಾ ಕಾರಿನಲ್ಲಿ ಮಂತ್ರಾಲಯದಿಂದ ಬೆಂಗಳೂರಿಗೆ ಬಂದಿದ್ದರು. ಸೀತಾಳಿಗೆ ಬಂಗಾರದ ವ್ಯವಹಾರದ ಬಗ್ಗೆ ಮಾತನಾಡಬೇಕಿದೆ ಎಂದು ಕರೆ ಮಾಡಿ ಮೆಜೆಸ್ಟಿಕ್ನಿಂದ ಕಾರಿಗೆ ಹತ್ತಿಸಿಕೊಂಡು ಹಾಸನ ಮಾರ್ಗವಾಗಿ ಕರೆದೊಯ್ದಿದ್ದರು. ಹಾಸನ ಟೋಲ್ ಬಳಿಯ ಎಂಪೈರ್ ಹೋಟೆಲ್ನಲ್ಲಿ ಜ್ಯೂಸ್ಗೆ ಸೈನೆಡ್ ಬೆರೆಸಿ ಸೀತಾಳಿಗೆ ನೀಡಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ ಜ್ಯೂಸ್ನ ಬಣ್ಣ ಬದಲಾಗಿದ್ದರಿಂದ ಸೀತಾ ಅದನ್ನ ಕುಡಿಯಲು ನಿರಾಕರಿಸಿದ್ದರು.
ನಂತರ ಕುಂದೂರು ಮಠದ ರಸ್ತೆಯ ಬಳಿ ಕಾರು ನಿಲ್ಲಿಸಿ, ಸೀತಾ ಮಲಗಿದ್ದಾಗ ಕಲ್ಲಿನಿಂದ ಜಜ್ಜಿ ಹಲ್ಲೆ ಮಾಡಿದ್ದರೆಂದು ಆರೋಪಿಸಲಾಗಿದೆ. ಆದರೆ ಆ ಹಲ್ಲೆಯಿಂದ ಸೀತಾ ಮೃತಪಟ್ಟಿರಲಿಲ್ಲ. ಬಳಿಕ ಆರೋಪಿಗಳು ಬೇಲೂರು ಬಳಿಯ ಕ್ಲಿನಿಕ್ಗೆ ಕರೆದೊಯ್ದು ತಲೆಗೆ ಬ್ಯಾಂಡೇಜ್ ಹಾಕಿಸಿದ್ದರು ಎನ್ನಲಾಗಿದೆ. ಮುಂದೆ ಚಿಕ್ಕಮಗಳೂರು ಬಳಿಯ ಮಯೂರ ಹೋಟೆಲ್ನಲ್ಲಿ ಕಾರು ನಿಲ್ಲಿಸಿ, ಮಾತ್ರೆಯೊಳಗೆ ಸೈನೆಡ್ ತುಂಬಿದ್ದರು ಎಂದು ತನಿಖಾ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ನೋವಿನ ಮಾತ್ರೆ ಎಂದು ಹೇಳಿ ಆ ಮಾತ್ರೆಯನ್ನ ಸೀತಾಗೆ ನೀಡಲಾಗಿದ್ದು, ಸೈನೆಡ್ ಸೇವಿಸಿದ ಕೆಲವೇ ಸಮಯದಲ್ಲಿ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ತುಂಗಭದ್ರಾ ಕಾಲುವೆಗೆ ಮೃತದೇಹ ಎಸೆದ ಆರೋಪ
ಸೀತಾ ಮೃತಪಟ್ಟ ಬಳಿಕ ಆರೋಪಿಗಳು ಅವರ ಕೈಯಲ್ಲಿದ್ದ ಸುಮಾರು 30 ಗ್ರಾಂ ಚಿನ್ನದ ಬಳೆಯನ್ನ ತೆಗೆದುಕೊಂಡಿದ್ದರು ಎನ್ನಲಾಗಿದೆ. ಬಳಿಕ ಮೃತದೇಹವನ್ನ ಬೆಡ್ಶೀಟ್ನಲ್ಲಿ ಸುತ್ತಿ, ಕಲ್ಲು ಕಟ್ಟಿ ಹೊಸಪೇಟೆಯ ಹುಲಿಗೆಮ್ಮ ರಸ್ತೆಯ ಬಳಿಯ ತುಂಗಭದ್ರಾ ಕಾಲುವೆಗೆ ಎಸೆದಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.
ಪೊಲೀಸರು ಹಾಗೂ ಇತರ ಸಿಬ್ಬಂದಿ ಸತತವಾಗಿ ಹುಡುಕಾಟ ನಡೆಸಿದರೂ ಸೀತಾ ಅವರ ಮೃತದೇಹ ಇದುವರೆಗೂ ಪತ್ತೆಯಾಗಿಲ್ಲ. ಪ್ರಕರಣದ ಪ್ರಮುಖ ಆರೋಪಿ ರಘು ಹಾಗೂ ಮತ್ತೊಬ್ಬ ಆರೋಪಿ ಬೆಸ್ತನಾಕುಮಾರ್ ಕೊರೊನಾ ಅವಧಿಯಲ್ಲಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಉಳಿದ ಆರೋಪಿಗಳಾದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ವಿರುದ್ಧ ವಿಚಾರಣೆ ಮುಂದುವರಿದಿತ್ತು.
ಸಿಸಿಟಿವಿ ದೃಶ್ಯಗಳು, ಮೊಬೈಲ್ CDR, ಆರೋಪಿಗಳ ಹೇಳಿಕೆ ಹಾಗೂ ಇತರ ಸಾಕ್ಷ್ಯಗಳನ್ನ ಪರಿಗಣಿಸಿದ 60ನೇ ಸಿಸಿಎಚ್ ನ್ಯಾಯಾಲಯ ಇದೀಗ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ₹30 ಸಾವಿರ ದಂಡ ವಿಧಿಸಿದೆ.