SOCIAL MEDIA

Newsletter

PARTNER SITES
Select Language Select State

ಹೆಂಡತಿ ಹೊಡೆದಳು ಅಂತ ಅಮ್ಮನಿಗೆ ಫೋನ್‌ ಮಾಡಿದ ಗಂಡ.. ತಾಯಿ ಬರುವಷ್ಟರಲ್ಲಿ ಮಗನ ಜೀವ ಉಳಿಯಲಿಲ್ಲ

ಎಂದಿನಂತೆ ಕುಡಿದು ಬಿಟ್ಟು ಮನೆಗೆ ಬಂದಿದ್ದ ನವೀನ್, ಬಂದ ತಕ್ಷಣವೇ ಪತ್ನಿ ಕವಿತಾ ಜೊತೆ ಗಲಾಟೆ ಮಾಡಲಾರಂಭಿಸಿದ್ದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ.

Written By Bhimappa
Published: Sep 28, 2026, 01:46 PM IST | Updated: Sep 28, 2026, 01:51 PM IST
Image Credit: Wife_beats_husband
Join

Bangalore Laggere Wife beats husband ಸಂಸಾರವೆಂಬ ರಥವು ಸಾಗಬೇಕಾದರೆ ಪತಿ- ಪತ್ನಿಯರ ನಡುವೆ ಪರಸ್ಪರ ಹೊಂದಾಣಿಕೆ, ನಂಬಿಕೆ ಹಾಗೂ ಸಹನೆ ಅತ್ಯಂತ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳು, ಅನುಮಾನ ಹಾಗೂ ಸಣ್ಣಪುಟ್ಟ ಜಗಳಗಳು ವಿಕೋಪಕ್ಕೆ ತಿರುಗಿ ಬದುಕನ್ನು ಬೀದಿಪಾಲು ಮಾಡುತ್ತಿರುವ ಘಟನೆಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಅಂಥದ್ದೇ ಒಂದು ದಾರುಣ ಹಾಗೂ ಮನಕಲಕುವ ಘಟನೆ ಬೆಂಗಳೂರಿನ ಲಗ್ಗೆರೆ ಪ್ರದೇಶದಲ್ಲಿ ನಡೆದಿದೆ. ಹೆಂಡತಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಮನನೊಂದು ವ್ಯಕ್ತಿಯೊಬ್ಬರು ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು UDR ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಮೂಲತಃ ಹಾಸನದವರಾದ ನವೀನ್ (46) ಮತ್ತು ಈತನ ಹೆಂಡತಿ ಕವಿತಾ ಸುಮಾರು 15 ವರ್ಷಗಳ ಹಿಂದೆ ವಿವಾಹವಾಗಿದ್ದರು. ಮದುವೆಯ ಆರಂಭದ ಕೆಲವು ವರ್ಷಗಳ ಕಾಲ ಇವರ ಸಂಸಾರ ಯಾವುದೇ ತೊಂದರೆ ಇಲ್ಲದೇ ಸುಖವಾಗಿ ಸಾಗುತ್ತಿತ್ತು. ಬದುಕು ಕಟ್ಟಿಕೊಳ್ಳುವ ಸಲುವಾಗಿ ಸುಮಾರು 7-8 ವರ್ಷಗಳ ಹಿಂದೆ ಈ ದಂಪತಿ ಬೆಂಗಳೂರಿಗೆ ಬಂದು ನೆಲೆಸಿದ್ದರು. ಲಗ್ಗೆರೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ನವೀನ್, ಡ್ರೈವರ್ ಕೆಲಸ ಮಾಡಿಕೊಂಡು ಕುಟುಂಬದ ಹೊಣೆ ಹೊತ್ತುಕೊಂಡಿದ್ದರು.

ಆದರೆ ದಿನಗಳು ಕಳೆದಂತೆ ದಂಪತಿ ನಡುವಿನ ಸ್ನೇಹ, ಪ್ರೀತಿ ಕಡಿಮೆ ಆಗುತ್ತ ಬರುತ್ತಿತ್ತು. ಇವರಿಗೆ ಮಗು ಜನಿಸಿದ ಬಳಿಕ ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಜಗಳ, ಗಲಾಟೆ ಶುರುವಾದವು. ದಿನದಿಂದ ದಿನಕ್ಕೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ, ನಿತ್ಯವೂ ಜಗಳಗಳು ಸಾಮಾನ್ಯವಾಗಿದ್ದವು. ಪತಿ ನವೀನ್ ಪ್ರತಿದಿನ ಕುಡಿದು ಬಂದು ತನಗೆ ಹಿಂಸೆ ನೀಡುತ್ತಿದ್ದರು ಎಂದು ಪತ್ನಿ ಕವಿತಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ನಿನಗೆ ಬೇರೆ ಯಾರ ಜೊತೆಯೋ ಸಂಬಂಧವಿದೆ ಎಂದು ಅನಗತ್ಯವಾಗಿ ಅನುಮಾನಪಟ್ಟು ಪತ್ನಿ ಜೊತೆ ನಿತ್ಯವೂ ಜಗಳವಾಡುತ್ತಿದ್ದನು. ಇದರಿಂದ ನವೀನ್ ಮತ್ತು ಕವಿತಾ ಕುಟುಂಬದ ನೆಮ್ಮದಿ ಹಾಳಾಗಿತ್ತು.

ಸೆಪ್ಟೆಂಬರ್ 26 ರಾತ್ರಿ ನಡೆದ ದುರ್ಘಟನೆ: ಸೆಪ್ಟೆಂಬರ್ 26ರ ರಾತ್ರಿ ಎಂದಿನಂತೆ ಕುಡಿದು ಬಿಟ್ಟು ಮನೆಗೆ ಬಂದಿದ್ದ ನವೀನ್, ಬಂದ ತಕ್ಷಣವೇ ಪತ್ನಿ ಕವಿತಾ ಜೊತೆ ಗಲಾಟೆ ಮಾಡಲಾರಂಭಿಸಿದ್ದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಗಲಾಟೆಯಲ್ಲಿ ಆಕ್ರೋಶಗೊಂಡ ನವೀನ್, ಪತ್ನಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ತನ್ನ ಮೇಲೆ ಹಲ್ಲೆ ನಡೆಯುತ್ತಿರುವುದರಿಂದ ಸಿಟ್ಟಿಗೆದ್ದ ಕವಿತಾ ಪ್ರತಿರೋಧ ಒಡ್ಡಿ ಗಂಡನ ಮೇಲೆಯೇ ಹಲ್ಲೆ ಮಾಡಿದ್ದಾಳೆ. ಈ ಗಲಾಟೆಯಲ್ಲಿ ಗಂಡ ನವೀನ್‌ಗೆ ಬಲವಾದ ಗಾಯವಾಗಿತ್ತು.

ಗಂಡ ತನ್ನ ಮೇಲೆ ಹಲ್ಲೆ ಮಾಡಿದ್ದರಿಂದ ತೀವ್ರ ಮನನೊಂದ ಹಾಗೂ ಕೋಪಗೊಂಡ ಕವಿತಾ, ಮನೆಯ ಬಾಗಿಲಿಗೆ ಹೊರಗಿನಿಂದ ಲಾಕ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾಳೆ. ಆ ಸಮಯಕ್ಕೆ ವಿಪರೀತ ನೊಂದಿದ್ದ ನವೀನ್, ತಕ್ಷಣವೇ ತನ್ನ ತಾಯಿಗೆ ಫೋನ್ ಮಾಡಿ ಹೆಂಡತಿ ತನ್ನ ಮೇಲೆ ಹಲ್ಲೆ ನಡೆಸಿದ ಬಗ್ಗೆ ಎಲ್ಲವನ್ನು ಹೇಳಿದ್ದಾನೆ. ಇದೆಲ್ಲ ಮುಗಿದ ಬಳಿಕ ರಾತ್ರಿ 10 ಗಂಟೆಯ ಸುಮಾರಿಗೆ ತನ್ನ ರೂಮ್‌ಗೆ ತೆರಳಿದ ನವೀನ್, ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕುಟುಂಬಸ್ಥರ ಅನುಮಾನ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ: ಸ್ವಲ್ಪ ಸಮಯದ ಬಳಿಕ ಮನೆಗೆ ವಾಪಸ್ ಬಂದ ಕವಿತಾ ಅವರಿಗೆ ಪತಿ ನೇಣು ಬಿಗಿದುಕೊಂಡಿರುವ ಭೀಕರ ದೃಶ್ಯ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಪಕ್ಕದ ಮನೆಯವರ ಸಹಾಯ ಪಡೆದುಕೊಂಡು ನವೀನ್ ಮೃತದೇಹವನ್ನು ಕೆಳಗೆ ಇಳಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ನವೀನ್ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಮನೆಯಲ್ಲಿ ನೇಣು ಬಿಗಿದುಕೊಂಡು ನವೀನ್ ಮೃತಪಟ್ಟಿದ್ದರೂ, ಆತನ ಮೃತದೇಹದ ಮೇಲಿದ್ದ ಗಾಯದ ಗುರುತುಗಳನ್ನು ಕಂಡು ನವೀನ್ ಕುಟುಂಬಸ್ಥರಿಗೆ ತೀವ್ರ ಅನುಮಾನ ಮೂಡಿದೆ. ಇದು ಆತ್ಮಹತ್ಯೆಯಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆಸಿದ ಕೊಲೆ ಎಂದು ನವೀನ್ ಕುಟುಂಬಸ್ಥರು ಆರೋಪಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಅಸಹಜ ಸಾವು ಅಥವಾ UDR ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಗೊತ್ತಾಗಲಿದೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES