ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?
ಒಂದು ಲೀಟರ್ ಮೊಸರಿನ ಬೆಲೆಯಲ್ಲಿ 2 ರೂಪಾಯಿ ಹಾಗೂ ಅರ್ಧ ಲೀಟರ್ ಮೊಸರಿನ ಬೆಲೆಯಲ್ಲಿ 1 ರೂಪಾಯಿ ಕಡಿತ ಮಾಡಲಾಗಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಈ ನಿರ್ಧಾರ ಕೊಂಚ ಆರ್ಥಿಕ ನೆಮ್ಮದಿ ನೀಡಿದೆ.
ಬೆಂಗಳೂರು : ನಂದಿನಿ ಮೊಸರು ಖರೀದಿಸುವ ಗ್ರಾಹಕರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಬ್ರ್ಯಾಂಡ್‌ನ ಮೊಸರಿನ ಬೆಲೆಯನ್ನು ಇಳಿಕೆ ಮಾಡಿದ್ದು, ಪರಿಷ್ಕೃತ ದರಗಳು ಇಂದಿನಿಂದಲೇ (ನವೆಂಬರ್ 29) ರಾಜ್ಯಾದ್ಯಂತ ಜಾರಿಗೆ ಬಂದಿವೆ. ಒಂದು ಲೀಟರ್ ಮೊಸರಿನ ಬೆಲೆಯಲ್ಲಿ 2 ರೂಪಾಯಿ ಹಾಗೂ ಅರ್ಧ ಲೀಟರ್ ಮೊಸರಿನ ಬೆಲೆಯಲ್ಲಿ 1 ರೂಪಾಯಿ ಕಡಿತ ಮಾಡಲಾಗಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಈ ನಿರ್ಧಾರ ಕೊಂಚ ಆರ್ಥಿಕ ನೆಮ್ಮದಿ ನೀಡಿದೆ.
ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆ ವಿಚಾರ ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದರಲ್ಲೂ ಮೊಸರಿನ ಬೆಲೆಯಲ್ಲಿ ಏಕಾಏಕಿ ಭಾರಿ ಪ್ರಮಾಣದ ಏರಿಕೆ ಮಾಡಿದ್ದಕ್ಕೆ ಗ್ರಾಹಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜಕೀಯ ಪಕ್ಷಗಳು, ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದಲೂ ಬೆಲೆ ಏರಿಕೆಗೆ ವಿರೋಧ ವ್ಯಕ್ತವಾಗಿತ್ತು. ಇದೀಗ ಗ್ರಾಹಕರ ಆಕ್ರೋಶ ಮತ್ತು ಮುಖ್ಯಮಂತ್ರಿ ಸೂಚನೆಯ ಬೆನ್ನಲ್ಲೇ ಕೆಎಂಎಫ್ ಮೊಸರಿನ ದರವನ್ನು ಕಡಿತಗೊಳಿಸಿದೆ.
ನವೆಂಬರ್ 29ರಿಂದ ಜಾರಿಗೆ ಬರುವಂತೆ ಕೆಎಂಎಫ್ ಮೊಸರಿನ ಪರಿಷ್ಕೃತ ದರವನ್ನು ಪ್ರಕಟಿಸಿದೆ. ಈ ಹಿಂದೆ ಒಂದು ಲೀಟರ್ ನಂದಿನಿ ಮೊಸರಿನ ಪ್ಯಾಕ್‌ಗೆ 68 ರೂಪಾಯಿ ನಿಗದಿಪಡಿಸಲಾಗಿತ್ತು. ಇದೀಗ 2 ರೂಪಾಯಿ ಕಡಿತಗೊಳಿಸಿ 66 ರೂಪಾಯಿಗೆ ಇಳಿಸಲಾಗಿದೆ. ಅದೇ ರೀತಿ, ಅರ್ಧ ಲೀಟರ್ ಅಂದರೆ 500 ಗ್ರಾಂ ಮೊಸರಿನ ಪ್ಯಾಕ್‌ನ ಬೆಲೆಯನ್ನು 34 ರೂಪಾಯಿಯಿಂದ 33 ರೂಪಾಯಿಗೆ ಇಳಿಸಲಾಗಿದೆ. 1 ಲೀಟರ್ ಮೊಸರಿನ ಪ್ಯಾಕ್‌ನ ಬೆಲೆ ₹66 ಆಗಿದೆ.
2026ರ ನವೆಂಬರ್ 1ರಂದು ಕೆಎಂಎಫ್ ನಂದಿನಿ ಮೊಸರಿನ ಬೆಲೆಯನ್ನು ಏರಿಕೆ ಮಾಡಿತ್ತು. ಒಂದು ಲೀಟರ್ ಮೊಸರಿನ ದರವನ್ನು ಬರೋಬ್ಬರಿ 14 ರೂಪಾಯಿ ಹೆಚ್ಚಿಸಲಾಗಿತ್ತು. ಅದೇ ರೀತಿ ಅರ್ಧ ಲೀಟರ್ ಮೊಸರಿನ ಬೆಲೆಯಲ್ಲಿಯೂ 6 ರೂಪಾಯಿ ಏರಿಕೆ ಮಾಡಲಾಗಿತ್ತು. ಇದರಿಂದ ದಿನನಿತ್ಯ ಮೊಸರು ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿ ಆರ್ಥಿಕ ಹೊರೆ ಎದುರಾಗಿತ್ತು.
ಮೊಸರು ಪ್ರತಿಯೊಂದು ಮನೆಯಲ್ಲಿಯೂ ಸಾಮಾನ್ಯವಾಗಿ ಬಳಕೆಯಾಗುವ ಆಹಾರ ಪದಾರ್ಥವಾಗಿದೆ. ಹೀಗಾಗಿ ದಿಢೀರ್ ಬೆಲೆ ಏರಿಕೆಯು ಮಧ್ಯಮ ವರ್ಗದ ಕುಟುಂಬಗಳು ಸೇರಿದಂತೆ ಸಾಮಾನ್ಯ ಗ್ರಾಹಕರಲ್ಲಿ ಅಸಮಾಧಾನ ಮೂಡಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ನಂದಿನಿ ಮೊಸರಿನ ಬೆಲೆ ಏರಿಕೆ ಕುರಿತು ವ್ಯಾಪಕ ಚರ್ಚೆ ನಡೆದಿತ್ತು.
ಮೊಸರಿನ ಬೆಲೆ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ಮಟ್ಟದಲ್ಲಿ ದರ ಇಳಿಕೆ ಕುರಿತು ಕ್ರಮಕ್ಕೆ ಮುಂದಾಗಿತ್ತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊಸರಿನ ಬೆಲೆ ಇಳಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಂದು ಲೀಟರ್ ಮೊಸರಿಗೆ 14 ರೂಪಾಯಿ ಹೆಚ್ಚಳ ಮಾಡುವ ಬದಲು 12 ರೂಪಾಯಿ ಮಾತ್ರ ಹೆಚ್ಚಳ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಲೀಟರ್ ಮೊಸರಿನ ದರದಲ್ಲಿ 2 ರೂಪಾಯಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಅರ್ಧ ಲೀಟರ್ ಪ್ಯಾಕ್ ಮೇಲೆಯೂ ಒಂದು ರೂಪಾಯಿ ಕಡಿತ ಮಾಡಲಾಗಿದೆ.
ಆದರೆ ಬೆಲೆ ಇಳಿಕೆಯ ಘೋಷಣೆಯಾದ ಬಳಿಕವೂ ಪರಿಷ್ಕೃತ ದರ ಜಾರಿಗೆ ಬರಲು ವಿಳಂಬವಾಗಿದ್ದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಜನರು ಪ್ರತಿದಿನ ಹಾಲು ಮತ್ತು ಮೊಸರು ಖರೀದಿಸಲೇಬೇಕಾದ ಅನಿವಾರ್ಯತೆ ಇರುವುದರಿಂದ ಬೆಲೆ ಏರಿಕೆ ನೇರವಾಗಿ ಕುಟುಂಬಗಳ ಮಾಸಿಕ ಬಜೆಟ್ ಮೇಲೆ ಪರಿಣಾಮ ಬೀರುತ್ತದೆ ಎಂದು ಗ್ರಾಹಕರು ಅಭಿಪ್ರಾಯಪಟ್ಟಿದ್ದರು. ಇದೀಗ ಕೆಎಂಎಫ್ ಪ್ರಕಟಿಸಿರುವ ಪರಿಷ್ಕೃತ ದರಗಳು ನವೆಂಬರ್ 29ರಿಂದಲೇ ಜಾರಿಗೆ ಬಂದಿವೆ. ಹೀಗಾಗಿ ನಂದಿನಿ ಮೊಸರು ಖರೀದಿಸುವ ಗ್ರಾಹಕರು ಇಂದಿನಿಂದ ಹೊಸ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.