ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನವೆಂಬರ್ 13ರಂದು ಬೆಂಗಳೂರಿಗೆ ಆಗಮಿಸುತ್ತಿದ್ದು, ಬಹುನೀರಿಕ್ಷಿತ ಪಿಂಕ್ ಲೈನ್ ಮೆಟ್ರೋವನ್ನು ಉದ್ಘಾಟಿಸಲಿದ್ದಾರೆ. ಆದರೆ, ಪ್ರಧಾನಿಯವರ ಈ ಭೇಟಿಯ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮೆಟ್ರೋ ವಾರ್ ತಾರಕಕ್ಕೇರಿದೆ. ಮೆಟ್ರೋ ಯೋಜನೆಗಳ ಬಜೆಟ್ ಮತ್ತು ಅನುದಾನ ಹಂಚಿಕೆ ವಿಚಾರವಾಗಿ ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಾಯಕರ ನಡುವೆ ತೀವ್ರ ವಾಕ್ಸಮರ ಶುರುವಾಗಿದೆ.
ನಮ್ಮ ಮೆಟ್ರೋ ಯೋಜನೆಗಳ ಅನುಷ್ಠಾನದಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಎಂದು ಸಿಎಂ ಡಿ ಕೆ ಶಿವಕುಮಾರ್ ಹಾಗೂ ನಗರಾಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಮಾಹಿತಿ ಪ್ರಕಾರ, ಮೆಟ್ರೋ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ. 50ರಷ್ಟು ಅನುದಾನವನ್ನು ಮಾತ್ರ ನೀಡಬೇಕು. ಆದರೆ, ವಾಸ್ತವದಲ್ಲಿ ಕೇಂದ್ರ ಸರ್ಕಾರ ಕೇವಲ ಶೇ. 16ರಷ್ಟು ಅನುದಾನವನ್ನು ಮಾತ್ರ ನೀಡುತ್ತಿದ್ದು, ಉಳಿದ ಶೇ. 84ರಷ್ಟು ಹೊರೆಯನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಸರ್ಕಾರ ಅಂಕಿ- ಅಂಶಗಳ ಸಮೇತ ವಾದ ಮುಂದಿಟ್ಟಿದೆ. ಬೆಂಗಳೂರು ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರದ ಪಾಲೇ ಸಿಂಹ ಪಾಲಾಗಿದ್ದರೂ, ಕೇಂದ್ರ ಸರ್ಕಾರ ಇದರ ಶ್ರೇಯಸ್ಸು ಪಡೆಯಲು ಮುಂದಾಗಿದ್ದಾರೆ ಎಂಬುದು ಕಾಂಗ್ರೆಸ್ ನಾಯಕರ ಆಕ್ರೋಶವಾಗಿದೆ.
ಈ ಅನುದಾನದ ತಾರತಮ್ಯವನ್ನು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಗಮನಕ್ಕೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನ. 13ರಂದು ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿಯವರ ಮುಂದೆ, ಮೆಟ್ರೋ ಯೋಜನೆಗಳಿಗೆ ಕಡ್ಡಾಯವಾಗಿ 50-50 ಫಾರ್ಮುಲಾ ಅಡಿಯಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಅಧಿಕೃತವಾಗಿ ಬೇಡಿಕೆ ಇಡಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಿರ್ಧರಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದ ತೇಜಸ್ವಿ ಸೂರ್ಯ:
ಇನ್ನೂ ರಾಜ್ಯ ಸರ್ಕಾರದ ಈ ಆರೋಪಗಳಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಇಂದು ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಹಾಗೂ ನಗರಾಭಿವೃದ್ದಿ ಸಚಿವರು ಮೆಟ್ರೋ ಅನುದಾನ ಕುರಿತು ಸುಳ್ಳು ಅಂಕಿ – ಅಂಶಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
Busting Congress’ Bluffs on Namma Metro Funding | Press Conference Live https://t.co/NttSrDEVMU
— Tejasvi Surya (@Tejasvi_Surya) November 12, 2026
ಕರ್ನಾಟಕ ಜನತೆಗೆ ಅವಮಾನ ಮಾಡ್ತಿರೋದು ಯಾರು ಸ್ವಾಮಿ. ನಮ್ಮ ಆಫೀಸ್‌ಗೆ ಪಿಂಚಣಿ ಕೊಡ್ತಿಲ್ಲ ಅಂತ ಜನ ಬರ್ತಿದ್ದಾರೆ. ಇದು ಮಾಡ್ತಿರೋ ಅವಮಾನ ಅಲ್ವಾ. ಕೇಂದ್ರ ಕೊಟ್ಟಿರೋ ಹಣವನ್ನ ಖರ್ಚು ಮಾಡಲು ಆಗ್ತಿಲ್ಲ. ಅನುದಾನ ಕೊಡ್ತಿಲ್ಲ ಅಂತ ಯಾಕೇ ಸುಳ್ಳು ಹೇಳ್ತಾರೆ. ಮೆಟ್ರೋಗೆ ನೀವು ಕಾಯಕಲ್ಪ ಮಾಡಿ. ಆಗ ಜನ ನಿಮ್ಮನ್ನ ನೆನಪಿನಲ್ಲಿ ಇಟ್ಟುಕೊಳ್ತಾರೆ ಇಂದು ವಾಗ್ದಾಳಿ ನಡೆಸಿದ್ದಾರೆ.
ಒಟ್ಟಿನಲ್ಲಿ ಪಿಂಕ್ ಲೈನ್ ಮೆಟ್ರೋ ಉದ್ಘಾಟನೆಯ ಸಂಭ್ರಮದ ನಡುವೆಯೇ ಕ್ರೆಡಿಟ್ ವಾರ್ ಮತ್ತು ಬಜೆಟ್ ವಾರ್ ರಾಜಧಾನಿಯ ರಾಜಕೀಯ ಕಣವನ್ನು ಮತ್ತಷ್ಟು ಬಿಸಿ ಮಾಡಿದೆ. ಇಂದಿನ ತೇಜಸ್ವಿ ಸೂರ್ಯ ಅವರ ಸುದ್ದಿಗೋಷ್ಠಿ ಹಾಗೂ ನಾಳಿನ ಪ್ರಧಾನಿ ಮೋದಿ ಭೇಟಿಯ ವೇಳೆ ಈ ವಿಚಾರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.